ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Waqf Amendment Act 2025: ಜಾರಿ ಆಯ್ತು ವಕ್ಫ್‌ ತಿದ್ದುಪಡಿ ಕಾಯ್ದೆ; ಅಧಿಸೂಚನೆ ಪ್ರಕಟ

ಸುದೀರ್ಘ ಚರ್ಚೆಯ ಬಳಿಕ ಕಳೆದ ವಾರ ಸಂಸತ್‌ನಲ್ಲಿ ಅಂಗೀಕಾರವಾದ ಬಹು ಚರ್ಚಿತ ವಕ್ಫ್‌ ತಿದ್ದುಪಡಿ ಮಸೂದೆ 2025ಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅಂಕಿತ ಹಾಕುವುದರೊಂದಿಗೆ ಕಾನೂನಾಗಿ ಮಾರ್ಪಟ್ಟಿದೆ. ಮಂಗಳವಾರ (ಏ. 8) ಕಾಯ್ದೆ ದೇಶಾದ್ಯಂತ ಜಾರಿಗೆ ಬಂದಿದೆ.

ಜಾರಿ ಆಯ್ತು ವಕ್ಫ್‌ ತಿದ್ದುಪಡಿ ಕಾಯ್ದೆ

ಅಧಿಸೂಚನೆ ಮತ್ತು ರಾಷ್ಟ್ರಪತಿ ದ್ರೌಪದಿ ಮುರ್ಮು

Profile Ramesh B Apr 8, 2025 8:08 PM

ಹೊಸದಿಲ್ಲಿ: ಸುದೀರ್ಘ ಚರ್ಚೆಯ ಬಳಿಕ ಕಳೆದ ವಾರ ಸಂಸತ್‌ನಲ್ಲಿ ಅಂಗೀಕಾರವಾದ ಬಹು ಚರ್ಚಿತ ವಕ್ಫ್‌ ತಿದ್ದುಪಡಿ ಮಸೂದೆ 2025 (Waqf (Amendment) Act)ಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಅಂಕಿತ ಹಾಕುವುದರೊಂದಿಗೆ ಕಾನೂನಾಗಿ ಮಾರ್ಪಟ್ಟಿದೆ. ಮಂಗಳವಾರ (ಏ. 8) ಕಾಯ್ದೆ ದೇಶಾದ್ಯಂತ ಜಾರಿಗೆ ಬಂದಿದ್ದು, ಈ ಬಗ್ಗೆ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಆ ಮೂಲಕ ಕಾನೂನು ಅಧಿಕೃತವಾಗಿ ಜಾರಿಯಾಗಿದೆ. ಲೋಕಸಭೆ ಮತ್ತು ರಾಜ್ಯಸಭೆ ಕ್ರಮವಾಗಿ ಏ. 3 ಮತ್ತು ಏ. 4ರಂದು ಮಧ್ಯರಾತ್ರಿಯ ನಂತರ ಮಸೂದೆಯನ್ನು ಅಂಗೀಕರಿಸಿದವು. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರಸ್ತಾವಿತ ಕಾನೂನಿಗೆ ಏ. 5ರಂದು ಅಂಕಿತ ಹಾಕಿದರು.

ಬಿಜೆಪಿ ನೇತೃತ್ವದ ಎನ್‌ಡಿಎ ಮಸೂದೆಯನ್ನು ಬೆಂಬಲಿಸಿದರೆ, ವಿಪಕ್ಷಗಳ ಇಂಡಿಯಾ ಒಕ್ಕೂಟ ಅದನ್ನು ವಿರೋಧಿಸಿದೆ. ಹಿಂದುಳಿದ ಮುಸ್ಲಿಮರು ಮತ್ತು ಸಮುದಾಯದ ಮಹಿಳೆಯರ ಸಬಲೀಕರಣದ ಉದ್ದೇಶದಿಂದ ಕಾನೂನು ಜಾರಿಗೊಳಿಸಲಾಗಿದೆ ಎಂದು ಆಡಳಿತರೂಢ ಎನ್‌ಡಿಎ ಬಣ್ಣಿಸಿದರೆ, ಇದರ ವಿರುದ್ಧ ಹಲವು ಮುಸ್ಲಿಂ ಸಂಘಟನೆಗಳು ಮತ್ತು ವಿಪಕ್ಷದ ಸಂಸದರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ. ವಿಪಕ್ಷಗಳು ಇದನ್ನು ಅಸಾಂವಿಧಾನಿಕ ಎಂದು ಟೀಕಿಸಿದ್ದಲ್ಲದೆ ಇದು ಮುಸ್ಲಿಮರ ಹಕ್ಕುಗಳನ್ನು ಉಲ್ಲಂಘಿಸುತ್ತದೆ ಎಂದು ಹೇಳಿಕೊಂಡಿದೆ.

ಕೇಂದ್ರ ಸರ್ಕಾರದ ಅಧಿಸೂಚನೆ ಇಲ್ಲಿದೆ:



ಈ ಸುದ್ದಿಯನ್ನೂ ಓದಿ: Droupadi Murmu: ವಕ್ಫ್​ ಮಸೂದೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅಂಕಿತ

ಪಶ್ಚಿಮ ಬಂಗಾಳದಲ್ಲಿ ಭುಗಿಲೆದ್ದ ಹಿಂಸಾಚಾರ

ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯಲ್ಲಿ ಮಂಗಳವಾರ ವಕ್ಫ್ ಕಾಯ್ದೆಯ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಹಿಂಸಾಚಾರ ಭುಗಿಲೆದ್ದಿದೆ. ಪ್ರತಿಭಟನಾಕಾರರು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದಲ್ಲದೆ ಅವರ ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ. ಜಂಗಿಪುರದಲ್ಲಿ ಈ ಘಟನೆ ನಡೆದಿದ್ದು, ಕಾಯ್ದೆಯನ್ನು ಹಿಂತೆಗೆದುಕೊಳ್ಳುವಂತೆ ಆಗ್ರಹಿಸಿ ಗುಂಪುಗೂಡಿದ ಜನರು ಹಿಂಚಾರದಲ್ಲಿ ತೊಡಗಿಸಿಕೊಂಡರು ಎಂದು ಅಧಿಕಾರಿಗಳು ವಿವರಿಸಿದ್ದಾರೆ. "ಪ್ರತಿಭಟನಾಕಾರರು ಈ ಪ್ರದೇಶದಲ್ಲಿ ನಿಯೋಜಿಸಲಾಗಿದ್ದ ಪೊಲೀಸರ ಮೇಲೆ ಕಲ್ಲುಗಳನ್ನು ತೂರಿದರು. ನಂತರ ಕೆಲವು ಪೊಲೀಸ್ ವಾಹನಗಳಿಗೆ ಬೆಂಕಿ ಹಚ್ಚಲಾಯಿತು" ಎಂದು ಹಿರಿಯ ಜಿಲ್ಲಾ ಪೊಲೀಸ್ ಅಧಿಕಾರಿಯೊಬ್ಬರು ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.

ಕಾಯ್ದೆ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ

ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ (AIMPLB) ಮತ್ತು ಜಮಿಯತ್ ಉಲೇಮಾ-ಎ-ಹಿಂದ್ (Jamiat Ulama-e-Hind) ಸೇರಿದಂತೆ ಹಲವು ಮುಸ್ಲಿಂ ಸಂಘಟನೆಗಳು ಮತ್ತು ಕಾಂಗ್ರೆಸ್‌ನ ಮೊಹಮ್ಮದ್ ಜಾವೇದ್ ಮತ್ತು ಎಐಎಂಐಎಂನ ಅಸಾದುದ್ದೀನ್ ಓವೈಸಿ ಸೇರಿದಂತೆ ವಿಪಕ್ಷದ ಸಂಸದರು ವಕ್ಫ್ ಕಾಯ್ದೆಯನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಈ ಕಾಯ್ದೆಯು ಮುಸ್ಲಿಂ ಸಮುದಾಯದ ಬಗ್ಗೆ ತಾರತಮ್ಯ ಧೋರಣೆ ಹೊಂದಿದೆ ಮತ್ತು ಅವರ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುತ್ತದೆ ಎನ್ನುವುದು ಅವರ ವಾದ.

ವಕ್ಫ್‌ ಕಾಯ್ದೆಯ ವಿರುದ್ಧದ ಅರ್ಜಿಗಳನ್ನು ಏ. 16ರಿಂದ ವಿಚಾರಣೆಗೆ ಕೈಗೆತ್ತಿಕೊಳ್ಳಲಾಗುವುದು ಎಂದು ಸುಪ್ರೀಂ ಕೋರ್ಟ್‌ ತಿಳಿಸಿದೆ. ಇದರೊಂದಿಗೆ ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್‌ನಲ್ಲಿ ಕೇವಿಯಟ್ ಸಹ ಸಲ್ಲಿಸಿದೆ. ಸರ್ಕಾರದ ವಾದವನ್ನು ಮೊದಲು ಕೇಳದೆ ನ್ಯಾಯಾಲಯವು ಯಾವುದೇ ಆದೇಶಗಳನ್ನು ಹೊರಡಿಸಬಾರದು ಅಥವಾ ನಿರ್ಧಾರಗಳನ್ನು ತೆಗೆದುಕೊಳ್ಳಬಾರದು ಎಂದು ಕೇವಿಯಟ್ ಅರ್ಜಿಯಲ್ಲಿ ಕೋರಲಾಗಿದೆ.