Friday, 20th September 2024

Conservation Award : ಕ್ರಿಕೆಟರ್ಸ್‌ ಫಾರ್‌ ಕನ್ಸರ್ವೇಶನ್ ಸಂಸ್ಥೆಯಿಂದ ನಾಳೆ ವನ್ಯಜೀವಿ ಸೇವಾ ಪ್ರಶಸ್ತಿಗಳ ವಿತರಣೆ

Conservation Award

ಬೆಂಗಳೂರು: ಕ್ರಿಕೆಟರ್ಸ್ ಫಾರ್ ಕನ್ಸರ್ವೇಶನ್ (ಸಿಎಫ್‌ಸಿ) ಸಂಸ್ಥೆಯು ಸೆಪ್ಟೆಂಬರ್ 21ರಂದು 12ನೇ ವರ್ಷದ ವನ್ಯಜೀವಿ ಸೇವಾ ಪ್ರಶಸ್ತಿಗಳ (Conservation Award) ವಿತರಣಾ ಸಮಾರಂಭ ಆಯೋಜಿಸಿದೆ. ಈ ಕಾರ್ಯಕ್ರಮವು ವನ್ಯಜೀವಿ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸಲು ಆಯೋಜಿಸಲಾಗುತ್ತಿರುವ ‘ಟೈಗರ್ ಕಪ್ 2024’ ರ ಗ್ರಾಂಡ್ ಫಿನಾಲೆಯ ಭಾಗವಾಗಿದೆ. ಪ್ರಶಸ್ತಿ ಪ್ರದಾನ ಸಮಾರಂಭವು ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದ ಜೆ.ಕಾರ್ಪೊರೇಟ್ ಹಾಲ್‌ನಲ್ಲಿ ನಡೆಯಲಿದೆ. ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಜಿ.ಆರ್.ವಿಶ್ವನಾಥ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.

ನೈಸರ್ಗಿಕ ಸಂಪತ್ತನ್ನು ರಕ್ಷಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸುವ ಅರಣ್ಯ ವೀಕ್ಷಕರು, ಕಾವಲುಗಾರರು ಮತ್ತು ಮುಂಚೂಣಿ ಸೇವಕರಿಗೆ ವನ್ಯಜೀವಿ ಸೇವಾ ಪ್ರಶಸ್ತಿಗಳನ್ನು ನೀಡಲಾಗುತ್ತದೆ. ಭಾರತದ ತಂಡದ ಮಾಜಿ ಕ್ರಿಕೆಟಿಗರಾದ ಸಂದೀಪ್ ಪಾಟೀಲ್, ಯೂಸುಫ್ ಪಠಾಣ್ ಮತ್ತು ಹರ್ಭಜನ್ ಸಿಂಗ್ ಕ್ರಿಕೆಟರ್ಸ್ ಫಾರ್ ಕನ್ಸರ್ವೇಶನ್ ಸಂಸ್ಥೆ ಸ್ಥಾಪಿಸಿದ್ದು, ನಿರಂತರ ಬೆಂಬಲದೊಂದಿಗೆ ಅದರ ಯೋಜನೆಗಳು ಮುಂದುವರಿಯುತ್ತಿವೆ.

ಭದ್ರಾ ಹುಲಿ ಮೀಸಲು ಮತ್ತು ಕಾಳಿ ಹುಲಿ ಮೀಸಲು (ಕರ್ನಾಟಕ), ಪೆರಿಯಾರ್ ಹುಲಿ ಮೀಸಲು (ಕೇರಳ) ಮತ್ತು ಕೊಯಮತ್ತೂರು ವನ್ಯಜೀವಿ ವಿಭಾಗದ (ತಮಿಳುನಾಡು) ಅರಣ್ಯ ವೀಕ್ಷಕರು ಮತ್ತು ಕಾವಲುಗಾರರು ಸೇರಿದಂತೆ ಅರ್ಹ ಸಾಧಕರು ಈ ಪ್ರಶಸ್ತಿ ಗೆಲ್ಲಲಿದ್ದಾರೆ.

ಪ್ರಶಸ್ತಿ ಪುರಸ್ಕೃತರು

  • ವೆಂಕಟೇಶ್, ಅರಣ್ಯ ವೀಕ್ಷಕರು, ಭದ್ರಾ ಹುಲಿ ಸಂರಕ್ಷಿತ ಪ್ರದೇಶ, ಕರ್ನಾಟಕ
  • ರಾಘವೇಂದ್ರ ಗೌಡ, ಅರಣ್ಯ ರಕ್ಷಕ, ಕಾಳಿ ಹುಲಿ ಸಂರಕ್ಷಿತ ಪ್ರದೇಶ, ಕರ್ನಾಟಕ
  • ಶ್ರೀ. ಎ. ಅರುಣ್ ಕುಮಾರ್, ಗಾರ್ಡ್, ಕೊಯಮತ್ತೂರು ವನ್ಯಜೀವಿ ವಿಭಾಗ, ತಮಿಳುನಾಡು
  • ಶ್ರೀ. ಸಾಬು ಜಾರ್ಜ್, ಅರಣ್ಯ ವೀಕ್ಷಕ, ಪೆರಿಯಾರ್ ಹುಲಿ ಮೀಸಲು, ಕೇರಳ
  • ಎಂ.ಎನ್.ಜಯಚಂದ್ರನ್ (ಕೇರಳ) ಮತ್ತು ಸುಧೀರ್ ಶೆಟ್ಟಿ (ಕರ್ನಾಟಕ) ಅವರನ್ನು ದಕ್ಷಿಣ ಭಾರತದ ಅರಣ್ಯ ಪ್ರದೇಶಗಳಲ್ಲಿ ಆನೆಗಳನ್ನು ಉಳಿಸುವ ಪ್ರಯತ್ನಕ್ಕಾಗಿ ಗೌರವಿಸಲಾಗುತ್ತದೆ.

ಟೈಗರ್ ಕಪ್ ವಿಜೇತರಿಗೆ ಬಹುಮಾನ

12 ವರ್ಷದೊಳಗಿನ, 14 ವರ್ಷದೊಳಗಿನವರ ಮತ್ತು 16 ವರ್ಷದೊಳಗಿನವರ ಕ್ರಿಕೆಟ್‌ ಪಂದ್ಯಾವಳಿಯಾದ ಟೈಗರ್ ಕಪ್ ವಿಜೇತರಿಗೆ ಪ್ರಶಸ್ತಿ ವಿತರಣೆಯಾಗಲಿದೆ. ಈ ವರ್ಷದ ಟೈಗರ್ ಕಪ್ ಕ್ರಿಕೆಟ್ ಪಂದ್ಯಾವಳಿ ಏಪ್ರಿಲ್ 22 ರಿಂದ ಮೇ 13ರವರೆಗೆ ಬೆಂಗಳೂರಿನಲ್ಲಿ ನಾಲ್ಕು ಸ್ಥಳಗಳಲ್ಲಿ ನಡೆಯಿತು. ಇದರಲ್ಲಿ ಭಾರತದಾದ್ಯಂತದ 56 ಪ್ರತಿಭಾವಂತ ತಂಡಗಳು ಮತ್ತು 900 ಆಟಗಾರರು ಟೂರ್ನಿಯಲ್ಲಿ ಭಾಗವಹಿಸಿದ್ದರು.

ಇದನ್ನೂ ಓದಿ: ‌IND vs BAN: ಅಜ್ಜಿಯ ಕ್ರಿಕೆಟ್‌ ಪ್ರೀತಿಗೆ ನೆಟ್ಟಿಗರು ಕ್ಲೀನ್‌ ಬೌಲ್ಡ್‌; ವಿಡಿಯೊ ವೈರಲ್

ಟೈಗರ್ ಕಪ್‌ನಲ್ಲಿ ಭಾಗವಹಿಸಿದ ಅನೇಕ ಯುವ ಕ್ರಿಕೆಟಿಗರು ಅಂಡರ್ -14, ಅಂಡರ್ -16 ಮತ್ತು ಅಂಡರ್ -19 ಪಂದ್ಯಾವಳಿಗಳಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ್ದಾರೆ.