ಅರವಿಂದ್ ಕೇಜ್ರಿವಾಲ್ ಮೇಲೆ ದಾಳಿಗೆ ಖಲಿಸ್ತಾನಿ ಉಗ್ರರ ಸಂಚು ! ಗುಪ್ತಚರ ಸಂಸ್ತೆಯಿಂದ ಹೊರಬಿತ್ತು ಆಘಾತಕಾರಿ ಸಂಗತಿ
ದೆಹಲಿಯ ಮಾಜಿ ಸಿಎಂ ಹಾಗೂ ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಮೇಲೆ ದಾಳಿ ನಡೆಯಬಹುದು ಎಂದು ಹೇಳಲಾಗಿದೆ. ಈ ದಾಳಿಯನ್ನು ಪಂಜಾಬ್ ಮೂಲದ ಖಲಿಸ್ತಾನಿ ಭಯೋತ್ಪಾದಕರು ನಡೆಸಬಹುದು ಎಂದು ಗುಪ್ತಚರ ಮೂಲಗಳು ಎಚ್ಚರಿಕೆಯನ್ನು ನೀಡಿದೆ.
ನವದೆಹಲಿ : ದೆಹಲಿಯಲ್ಲಿ ವಿಧಾನ ಸಭಾ ಚುನಾವಣೆ (Delhi Assembly Election) ಕಾವು ಜೋರಾಗಿದೆ. ಸರ್ವ ಪಕ್ಷಗಳು ಭರ್ಜರಿ ಪ್ರಚರವನ್ನು ಕೈಗೊಳ್ಳುತ್ತಿವೆ. ಈ ನಡುವೆ ಆಮ್ ಆದ್ಮಿ ಪಕ್ಷದ ಸಂಚಾಲಕ ಅರವಿಂದ್ ಕೇಜ್ರಿವಾಲ್ (Arvind Kejriwal) ಅವರಿಗೆ ಜೀವ ಬೆದರಿಕೆ ಇದೆ ಎಂದು ಮೂಲಗಳು ತಿಳಿಸಿವೆ. ಗುಪ್ತಚರ ಸಂಸ್ಥೆ ನೀಡಿದ ಮಾಹಿತಿ ಪ್ರಕಾರ ಕೇಜ್ರಿವಾಲ್ ಸೇರಿದಂತೆ ಹಲವು ನಾಯಕರ ಮೇಲೆ ದಾಳಿ ನಡೆಯುವ ಸಾಧ್ಯತೆ ಇದೆ ಇದೆ ಎನ್ನುವ ಎಚ್ಚರಿಕೆಗಳು ದೊರೆತಿವೆ. ಈ ಹಿನ್ನೆಲೆಯಲ್ಲಿ ಕೇಜ್ರಿವಾಲ್ ಅವರ ಭದ್ರತಾ ವ್ಯವಸ್ಥೆಗಳನ್ನು ಹೆಚ್ಚಿಸಲಾಗಿದೆ.
ಖಲಿಸ್ತಾನಿ ಭಯೋತ್ಪಾದಕರು (Khalistani Terrorists) ದೆಹಲಿಯ ವಾತಾವರಣವನ್ನು ಹಾಳು ಮಾಡಲು ನಾಯಕರ ಮೇಲೆ ದಾಳಿ ಮಾಡಬಹುದು ಎಂದು ಹೇಳಲಾಗಿದೆ. ಈ ಬಗ್ಗೆ ಗುಪ್ತಚರ ಸಂಸ್ಥೆಗಳು ದೆಹಲಿ ಪೊಲೀಸರೊಂದಿಗೆ ಮಾಹಿತಿಯನ್ನು ಹಂಚಿಕೊಂಡಿವೆ. ಅರವಿಂದ್ ಕೇಜ್ರಿವಾಲ್ ಅವರಿಗೆ ಝಡ್ ಕೆಟಗರಿ ಭದ್ರತೆಯನ್ನು ಒದಗಿಸಲಾಗಿದೆ.
ರ್ಯಾಲಿ ಹಾಗೂ ಸಾರ್ವಜನಿಕ ಸಭೆಗಳಲ್ಲಿ ನಾಯಕರ ಭದ್ರತೆಗೆ ವಿಶೇಷ ವ್ಯವಸ್ಥೆ ಕಲ್ಪಿಸಲಾಗಿದ್ದು, ಎಚ್ಚರಿಕೆಯಂತೆ ಕಾಲಕಾಲಕ್ಕೆ ಭದ್ರತಾ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ಈ ಬಗ್ಗೆ ಅರವಿಂದ್ ಕೇಜ್ರಿವಾಲ್ ಆಗಲಿ ಇಲ್ಲ ಆಮ್ ಆದ್ಮಿ ಪಕ್ಷದಿಂದಾಗಲೀ ಇನ್ನು ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲ.
ಈ ಹಿಂದೆಯೂ ನಡೆದಿತ್ತು ಕೇಜ್ರಿವಾಲ್ ಮೇಲೆ ದಾಳಿ
2014ರ ಲೋಕಸಭೆ ಚುನಾವಣೆ ವೇಳೆ ಕೇಜ್ರಿವಾಲ್ ಗುಜರಾತ್‌ನಲ್ಲಿದ್ದಾಗ, ಅವರ ಬೆಂಗಾವಲು ವಾಹನದ ಮೇಲೆ ದಾಳಿ ನಡೆದಿತ್ತು. ಈ ದಾಳಿಯಲ್ಲಿ ಕೇಜ್ರಿವಾಲ್ ಪ್ರಯಾಣಿಸುತ್ತಿದ್ದ ಕಾರಿನ ಗಾಜು ಒಡೆದಿತ್ತು. ನಂತರ ಅದೇ ವರ್ಷ ಕೇಜ್ರಿವಾಲ್ ಮತ್ತು ಆಮ್ ಆದ್ಮಿ ಪಕ್ಷದ ಕೆಲ ನಾಯಕರ ಮೇಲೆ ಮೊಟ್ಟೆ ಮತ್ತು ಶಾಯಿ ಎಸೆದಿದ್ದರು. ಘಟನೆಯ ಕೇವಲ 4 ದಿನಗಳ ನಂತರ, 8 ಏಪ್ರಿಲ್ 2014 ರಂದು, ದೆಹಲಿಯಲ್ಲಿ ರೋಡ್ ಶೋ ವೇಳೆ ವ್ಯಕ್ತಿಯೊಬ್ಬ ಅರವಿಂದ್ ಕೇಜ್ರಿವಾಲ್‌ಗೆ ಕಪಾಳಮೋಕ್ಷ ಮಾಡಲು ಪ್ರಯತ್ನಿಸಿದ್ದ. ನವೆಂಬರ್ 2018 ರಲ್ಲಿ, ಅನಿಲ್ ಶರ್ಮಾ ಎಂಬ ವ್ಯಕ್ತಿ ಅರವಿಂದ್ ಕೇಜ್ರಿವಾಲ್ ಮೇಲೆ ಮೆಣಸಿನ ಪುಡಿ ಎರಚಿದ್ದ. 2019 ರಲ್ಲಿ, ಕೇಜ್ರಿವಾಲ್ ಸುಲ್ತಾನ್‌ಪುರಿಯಲ್ಲಿ ರೋಡ್ ಶೋ ಮಾಡುತ್ತಿದ್ದಾಗ ವ್ಯಕ್ತಿಯೊಬ್ಬರು ಅವರ ಕಾರಿನ ಮುಂದೆ ಬಂದು ಕಪಾಳಮೋಕ್ಷ ಮಾಡಿದ್ದ. ಇತ್ತೀಚೆಗೂ ಕೇಜ್ರಿವಾಲ್ ಮೇಲೆ ದಾಳಿಗೆ ಪ್ರಯತ್ನಿಸಲಾಗಿತ್ತು.
ದೆಹಲಿಯಲ್ಲಿ ಫೆ. 5 ರಂದು ವಿಧಾನ ಸಭೆ ಚುನಾವಣೆ ನಡೆಯಲಿದೆ. ಫೆಬ್ರವರಿ 8 ರಂದು ಫಲಿತಾಂಶ ಹೊರ ಬೀಳಲಿದೆ.