Friday, 18th October 2024

Roopa Gururaj Column: ನಿಜವಾದ ಆತ್ಮಜ್ಞಾನ

ಒಂದೊಳ್ಳೆ ಮಾತು

ರೂಪಾ ಗುರುರಾಜ್

ಒಂದು ಸಲ ಜನಕ ಮಹಾರಾಜನು ಒಂದು ದೊಡ್ಡ ಸಭೆಯನ್ನು ಏರ್ಪಡಿಸಿ, ಆ ಸಭೆಗೆ, ಎಲ್ಲಾ ದೊಡ್ಡ, ದೊಡ್ಡ ಆತ್ಮಾಜ್ಞಾನಿಗಳಿಗೂ ಆಮಂತ್ರಣವಿತ್ತನು. ಪರಮ ಸತ್ಯದ ಉದ್ಘಾಟನೆಯಾಗಬೇಕೆಂದು ಅವನ ಇಚ್ಛೆಯಾಗಿತ್ತು. ಪರಮ ಸತ್ಯವನ್ನು ತೋರಿಸಿಕೊಟ್ಟ ಜ್ಞಾನಿಗೆ ಬೇಕಾದಷ್ಟು ಧನ ಧಾನ್ಯಗಳನ್ನು ಉಡುಗೊರೆಯಾಗಿ ಕೊಟ್ಟು, ಗೌರವಿಸುವೆನೆಂದು ತಿಳಿಸಿದ್ದನು.

ಯಾರು ತತ್ವಶಾಸ್ತ್ರದಲ್ಲಿ ಪ್ರವೀಣರೋ, ಯಾರು ಜನಸಾಮಾನ್ಯರಿಗೆ ಚಿರಪರಿಚಿತರೊ, ಯಾರು ಹೆಚ್ಚು ವಿದ್ಯಾಶಾಸ್ತ್ರ ಸಂಪನ್ನರೋ, ಮೇಧಾವಿ ಪಂಡಿತರುಗಳೊ, ಇವರಿಗೆಲ್ಲಾ ಆಹ್ವಾನವನ್ನು ಕಳಿಸಿದ್ದನು. ಆದರೆ ಒಬ್ಬ ಮೇಧಾವಿಗೆ ಮಾತ್ರ ಆತ ಆಹ್ವಾನವನ್ನು ಕಳಿಸಿರಲಿಲ್ಲ. ಅವನೇ ಅಷ್ಟಾವಕ್ರ. ಅವನ ಮೈ ಎಂಟು ಕಡೆಗಳಲ್ಲಿ ಊನವಾಗಿತ್ತು. ಅವನನ್ನು ನೋಡಿದ ತಕ್ಷಣ ಯಾರಿಗಾದರೂ ಮನಸ್ಸಿನಲ್ಲಿ ಅಸಹ್ಯ ಮೂಡುವಂತಿತ್ತು. ಅಂತಹ ಶರೀರದಲ್ಲಿ ಆತ್ಮಜ್ಞಾನವಿರಲು ಹೇಗೆ ಸಾಧ್ಯ? ಹಾಗಾಗಿ ಅವನಿಗೆ ಆಹ್ವಾನ ಕಳಿಸಿರಲಿಲ್ಲ. ಆದರೆ ಅವನ ತಂದೆಗೆ ಆಹ್ವಾನ ಕಳಿಸಲಾಗಿತ್ತು.

ಆದರೆ ಅಷ್ಟಾವಕ್ರ, ಏನೋ ತುರ್ತು ಕೆಲಸದ ಕಾರಣದಿಂದ ತಂದೆಯನ್ನು ನೋಡಲಿಕ್ಕಾಗಿ, ಜನಕನ
ಆಸ್ಥಾನಕ್ಕೆ ಬರಬೇಕಾದಂತ ಸಂದರ್ಭ ಬಂದಿತು. ಅವನು ಆಸ್ಥಾನದೊಳಗೆ ಬಂದೊಡನೆ ಅವನನ್ನು ನೋಡಿ ಅಲ್ಲಿದ್ದವರೆಲ್ಲರೂ ಜೋರಾಗಿ ನಗತೊಡಗಿದರು. ನಿಜವಾಗಿಯೂ ಯಾರಾದರೂ ಅವನನ್ನು ನೋಡಿದರೆ ನಗು ಬರುವ ಹಾಗೆಯೇ ಇದ್ದ. ಅವನ ಕುರೂಪ ಮೈ, ಭಗ್ನವಾದ ಸೊಟ್ಟ ಸೊಟ್ಟ ವಾದ ದೇಹ, ಅವನು ನಡೆದಾಡಿದಾಗ ಯಾರಿಗೆ ಆದರೂ ನಗುಬರಿಸುವಂತಿತ್ತು. ಎಲ್ಲರೂ ಅವನನ್ನು ನೋಡಿ, ಹಾಸ್ಯ ಮಾಡುತ್ತಾ ಜೋರಾಗಿ ನಕ್ಕಾಗ ಅಷ್ಟಾವಕ್ರ ತಾನು ಕೂಡ ಅವರೆಲ್ಲರಿಗಿಂತ ಜೋರಾಗಿ ನಗತೊಡಗಿದ. ಅವನೂ, ನಗುವುದನ್ನು ನೋಡಿ ಎಲ್ಲರೂ ಸ್ಥಬ್ದರಾಗಿ ಸುಮ್ಮನಾಗಿ ಬಿಟ್ಟರು.

ಎಲ್ಲರಿಗೂ ಅವನು, ತಾನೇ ಏಕೆ ನಗುತ್ತಿದ್ದಾನೆ? ಎಂದು ಆಶ್ಚರ್ಯವಾಯಿತು. ಆಗ ಜನಕ ಮಹಾರಾಜ, ‘ಉಳಿದವ ರೆಲ್ಲರೂ ಏಕೆ ನಗುತ್ತಿದ್ದಾರೆಂದು ನನಗೆ ಅರ್ಥವಾಯಿತು, ಆದರೆ ನೀನು ಕೂಡಾ ಗಹಗಹಿಸಿ ನಕ್ಕಿದ್ದೇಕೆ? ಎಂದು ನನಗೆ ಅರ್ಥವಾಗಲಿಲ್ಲ’ ಎಂದ. ಆಗ ಅಷ್ಟಾವಕ್ರ, ‘ಈ ಚಮ್ಮಾರರ ಸಭೆಯನ್ನು ನೀನು ಪಂಡಿತರ ಸಭೆ ಎಂದು ತಿಳಿದು ಕೊಂಡಿರುವೆಯಲ್ಲಾ, ಅದನ್ನು ನೋಡಿ ನನಗೆ ನಗು ಬಂತು. ಇವರೆಲ್ಲರೂ ಕೂಡ ಚಮ್ಮಾರರೆ! ಇವರಿಗೆ ಕಾಣುವುದು ಶರೀರ, ಅದರ ಚರ್ಮ ಮಾತ್ರ. ಒಳಗಿರುವ ಜ್ಞಾನ ಯಾರಿಗೂ ಕಾಣುತ್ತಲೇ ಇಲ್ಲ. ನಾನು ಇಲ್ಲಿ ರುವ ಎಲ್ಲರಿಗಿಂತ ನೇರವಾಗಿರುವವನು.

ಇವರೆಲ್ಲರಿಗೂ ನಾನು ಅಷ್ಟಾವಕ್ರನಾಗಿ, ಕುರೂಪಿಯಾಗಿ ಕಾಣುತ್ತಿರುವೆ. ನನ್ನೊಳಗಿರುವ ಜ್ಞಾನ ಮಾತ್ರ
ಇವರ್ಯಾರಿಗೂ ಕಾಣುತ್ತಿಲ್ಲ. ಇಂಥವರಿಂದ ನೀನು ಜ್ಞಾನ ಪಡೆಯಬೇಕೆಂಬಾಸೆಯನ್ನು ಇಟ್ಟುಕೊಂಡಿರು
ವೆಯಲ್ಲಾ, ಇದು ಮರಳನ್ನು ಹಿಂಡಿ, ಎಣ್ಣೆ ತೆಗೆಯುವ ಪ್ರಯತ್ನದಂತೆ ಕಾಣುತ್ತಿದೆ. ನಿನಗೆ ನಿಜವಾಗಿಯೂ ಜ್ಞಾನಪಡೆಯಬೇಕೆಂಬ ಆಸೆ ಇದ್ದರೆ ನೀನು ನನ್ನ ಬಳಿಗೆ ಮಾತಾಡು ’ ಎಂದು ಹೇಳಿದ. ಅಷ್ಟಾವಕ್ರರ ಮಾತು ಸರಿಯಾಗಿಯೇ ಇತ್ತು. ಹೊರಗಿನ ಕಣ್ಣುಗಳು ಬಹಿರಂಗವನ್ನು ಮಾತ್ರ ನೋಡಬಲ್ಲವು. ಅವುಗಳಿಗೆ, ಒಳಗಿರುವ ಜ್ಞಾನ ಕಾಣಿಸುವುದಿಲ್ಲ.

ನಾವು ಕೂಡ ಜೀವನದಲ್ಲಿ ಇಂತಹ ಅನೇಕ ತಪ್ಪುಗಳನ್ನು ಮಾಡುತ್ತೇವೆ. ಯಾವುದೇ ಪುಸ್ತಕವನ್ನು ಅದರ ಮುಖಪುಟದಿಂದ ಅಳೆಯಬಾರದು ಎಂದು ಹೇಳುತ್ತಾರೆ. ಆದರೆ ವ್ಯಕ್ತಿಗಳನ್ನು ಅವರ ಹಣ, ಪೋಷಕು ಅಧಿಕಾರ ದಿಂದ ಅನೇಕ ಬಾರಿ ನಾವು ಅಳೆದುಬಿಡುತ್ತೇವೆ. ಸ್ಥಿತಿವಂತರು ಏನೇ ಮಾಡಿದರು ಕೂಡ ಅದನ್ನು ಸಹನೀಯ ವಾಗಿಸಿಕೊಂಡು ಬಿಡುತ್ತೇವೆ. ಅದೇ ತಪ್ಪನ್ನು ಸಾಮಾನ್ಯರು ಮಾಡಿದಾಗ ಅದನ್ನೇ ದೊಡ್ಡ ವಿಷಯವನ್ನಾಗಿಸಿ ಅವರು ಮತ್ತೆ ತಲೆಯೆತ್ತದಂತೆ ನಡೆಸಿಕೊಳ್ಳುತ್ತೇವೆ. ಕ್ಷಮೆಗೂ ಈ ರೀತಿಯ ಮಲತಾಯಿ ಧೋರಣೆ ಬೇಕೆ.

ಒಬ್ಬರ ಬಣ್ಣ, ಲಕ್ಷಣ, ಹಣ, ಅಂತಸ್ತು, ಅಧಿಕಾರ ಎಂದಿಗೂ ಕೂಡ ಅವರನ್ನು ತೂಗುವ ಅವರ ಗುಣಗಳನ್ನು
ಪರಿಚಯಿಸುವ ವಿಷಯಗಳಾಗಬಾರದು. ವಿದ್ಯಾವಂತರಾದ ನಾವು ಇನ್ನಾದರೂ ಆಂತರ್ಯದ ಜ್ಞಾನಕ್ಕೆ, ಸೌಂದರ್ಯಕ್ಕೆ ಬೆಲೆ ನೀಡಿದಾಗ ನಮ್ಮ ಮುಂದಿನ ಜನಾಂಗಕ್ಕೆ ಒಳ್ಳೆಯ ಬದುಕನ್ನ ಕಟ್ಟಿ ಕೊಡುತ್ತೇವೆ.

ಇದನ್ನೂ ಓದಿ: ‌Roopa Gururaj Column: ಸಿಟ್ಟು ಎರಡು ಬದಿಯ ಗರಗಸದಂತೆ