Thursday, 19th September 2024

ಕಿವೀಸ್‌ಗೆ ರಿಲೀಫ್‌ ನೀಡಿದ ಡೇವಾನ್ ಕಾನ್ವೆ

Devon Conway

ಮೌಂಟ್ ಮಾಂಗನೂಯಿ: ಆರಂಭದಲ್ಲೇ ವಿಕೆಟ್‌ ಕಳೆದುಕೊಂಡು ಸಂಷ್ಟಕ್ಕೆ ಸಿಲುಕಿದ್ದ ನ್ಯೂಜಿ ಲೆಂಡ್ ಇನಿಂಗ್ಸ್‌ಗೆ ಡೇವಾನ್ ಕಾನ್ವೆ ತಾಳ್ಮೆಯ ಆಟದ ಮೂಲಕ ಬಲ ತುಂಬಿದರು.

ಕಾನ್ವೆ (122) ಅವರ ತಾಳ್ಮೆಯ ಶತಕದ ಬಲದಿಂದ ಆತಿಥೇಯ ತಂಡ ಬಾಂಗ್ಲಾದೇಶ ಎದುರಿನ ಮೊದಲ ಟೆಸ್ಟ್ ಪಂದ್ಯದ ಮೊದಲ ದಿನ 5 ವಿಕೆಟ್‌ಗಳಿಗೆ 258 ರನ್‌ ಗಳಿಸಿ ಸುಸ್ಥಿತಿಯಲ್ಲಿದೆ. ಟಾಸ್ ಗೆದ್ದ ಬಾಂಗ್ಲಾದೇಶ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ತಂಡದ ಮೊತ್ತ ಒಂದು ರನ್ ಆಗಿದ್ದಾಗ ನ್ಯೂಜಿ ಲೆಂಡ್ ಆರಂಭಿಕ ಬ್ಯಾಟರ್ ಟಾಮ್ ಲಥಾಮ್ ಅವರ ವಿಕೆಟ್ ಕಳೆದುಕೊಂಡಿತು.

ವಿಲ್ ಯಂಗ್ ಅವರ ಜೊತೆಗೂಡಿದ ಡೇವಾನ್ ಕಾನ್ವೆ ಇನಿಂಗ್ಸ್‌ ಕಟ್ಟಿದರು. ಕೈಗೆ ಗಾಯಗೊಂಡು ವಿಶ್ರಾಂತಿ ಪಡೆದ ನಂತರ ಮೊದಲ ಬಾರಿ ಕ್ರೀಸ್‌ಗೆ ಇಳಿದ ಅವರು ಮೋಹಕ ಬ್ಯಾಟಿಂಗ್ ಮೂಲಕ ಮಿಂಚಿದರು. ತವರಿನಲ್ಲಿ ಕಾನ್ವೆ ಅವರ ಮೊದಲ ಟೆಸ್ಟ್ ಪಂದ್ಯವಾಗಿದೆ. ಈ ಶತಕದೊಂದಿಗೆ ಆಡಿರುವ ಏಳು ಇನಿಂಗ್ಸ್‌ಗಳ ಪೈಕಿ ನಾಲ್ಕರಲ್ಲಿ 50ಕ್ಕೂ ಹೆಚ್ಚು ರನ್ ಗಳಿಸಿದ ಸಾಧನೆ ಮಾಡಿದರು.

ಟಾಮ್ ಲಥಾಮ್ ವಿಕೆಟ್ ಉರುಳಿದಾಗ ಬಾಂಗ್ಲಾ ಪಾಳಯದಲ್ಲಿ ಸಂಭ್ರಮ ಮೂಡಿತು. ಯಂಗ್ ಮತ್ತು ಕಾನ್ವೆ 138 ರನ್‌ಗಳ ಜೊತೆಯಾಟವಾಡಿ ಆ ಸಂತಸಕ್ಕೆ ತಣ್ಣೀರು ಸುರಿದರು. ನಿವೃತ್ತಿಯ ಅಂಚಿನಲ್ಲಿರುವ ಅನುಭವಿ ರಾಸ್ ಟೇಲರ್ ಕ್ರೀಸ್‌ಗೆ ಬಂದ ನಂತರ ಬಾಂಗ್ಲಾ ಬೌಲರ್‌ಗಳು ಮತ್ತೆ ನಿರಾಸೆಗೆ ಒಳಗಾದರು. ಇಬ್ಬರೂ 50 ರನ್‌ಗಳ ಜೊತೆಯಾಟವಾಡಿದರು.

ಟೇಲರ್ ಔಟಾದ ನಂತರ ಹೆನ್ರಿ ನಿಕೊಲ್ಸ್‌ ಉತ್ತಮ ಬ್ಯಾಟಿಂಗ್ ಮಾಡಿದರು. ನಿಕೊಲ್ಸ್‌ ಜೊತೆ 31 ರನ್‌ಗಳನ್ನು ಸೇರಿಸಿದ ಟಾಮ್ ಬ್ಲಂಡೆಲ್ 88ನೇ ಓವರ್‌ನಲ್ಲಿ ವಿಕೆಟ್ ಒಪ್ಪಿಸಿದರು.