Retiring out: ರಿಟೈರ್ಡ್ ಔಟ್ ನಿಯಮದ ಬಗ್ಗೆ ಕಳವಳ ವ್ಯಕ್ತಪಡಿಸಿದ ಕೈಫ್
ಟಿ20 ಕ್ರಿಕೆಟ್ನಲ್ಲಿ ರಿಟೈರ್ಡ್ ಔಟ್ ನಿಯಮ ಹೆಚ್ಚು ಚಾಲ್ತಿಯಲ್ಲಿದೆ. ಬ್ಯಾಟಿಂಗ್ ಮಾಡುತ್ತಿರುವ ಆಟಗಾರನ ಮುಂದಿನ ಆಟಗಾರ ಉತ್ತಮವಾಗಿ ಆಡುತ್ತಾನೆ ಎಂಬ ನಂಬಿಕೆ ಇದ್ದಲ್ಲಿ, ಸ್ವತಃ ಸ್ಟ್ರೈಕ್ ನಲ್ಲಿ ಇರುವ ಆಟಗಾರ ರಿಟೈಡ್ ಔಟ್ ಆಗಬಹುದು. ಆದರೆ ಇದರಲ್ಲಿ ಒಮ್ಮೆ ನಿವೃತ್ತಿ ತೆಗೆದುಕೊಂಡಲ್ಲಿ ಮತ್ತೆ ಆ ಪಂದ್ಯದಲ್ಲಿ ಆ ಆಟಗಾರ ಬ್ಯಾಟಿಂಗ್ ಮಾಡುವಂತಿಲ್ಲ.


ಮುಂಬಯಿ: ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ 'ರಿಟೈರ್ಡ್ ಔಟ್’ ತಂತ್ರಗಾರಿಕೆಯನ್ನು ಪದೇಪದೆ ಬಳಸುತ್ತಿರುವ ಬಗ್ಗೆ ಮಾಜಿ ಕ್ರಿಕೆಟಿಗ ಮೊಹಮ್ಮದ್ ಕೈಫ್ ಕಳವಳ ವ್ಯಕ್ತಪಡಿಸಿದ್ದಾರೆ. ಇದು ತಂತ್ರಗಾರಿಕೆಗಿಂತಲೂ ಹೆಚ್ಚಾಗಿ ಹತಾಶೆಯ ಕೃತ್ಯವಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಈ ಬಾರಿಯ ಐಪಿಎಲ್‌ನಲ್ಲಿ ಎರಡು ಬಾರಿ ರಿಟೈರ್ಡ್ ಔಟ್ ಘಟನೆ ಸಂಭವಿಸಿದೆ.
ಲಕ್ನೋ ಸೂಪರ್ ಜಯಂಟ್ಸ್ ವಿರುದ್ಧದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತನ್ನ ಆಟಗಾರ ತಿಲಕ್ ವರ್ಮಾರನ್ನು ರಿಟೈರ್ಡ್ ಔಟ್ ಮಾಡಿಸಿ ಪೆವಿಲಿಯನ್‌ಗೆ ಕರೆದಿತ್ತು. ಇದಾಗ ಬಳಿಕ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತನ್ನ ಆರಂಭಿಕ ಆಟಗಾರ ಡೆವೋನ್ ಕಾನ್ವೇಯವರನ್ನು ರಿಟೈರ್ಡ್ ಔಟ್ ಮಾಡಿತ್ತು.
49 ಎಸೆತಗಳಲ್ಲಿ 69 ರನ್‌ಗಳನ್ನು ಗಳಿಸಿ ಸುಲಲಿತವಾಗಿ ಬ್ಯಾಟಿಂಗ್ ಮಾಡುತ್ತಿದ್ದ ಕಾನ್ವೇ 18ನೇ ಓವರ್‌ನಲ್ಲಿ ಪೆವಿಲಿಯನ್‌ಗೆ ನಡೆದಿದ್ದರು. ಆಗ ಚೆನ್ನೈ ಗೆಲುವಿಗೆ 13 ಎಸೆತಗಳಲ್ಲಿ 49 ರನ್‌ಗಳ ಅಗತ್ಯವಿತ್ತು. ಅವರ ಸ್ಥಳಕ್ಕೆ ರವೀಂದ್ರ ಜಡೇಜರನ್ನು ತರಲಾಯಿತು. ಆದಾಗ್ಯೂ, ಅಂತಿಮವಾಗಿ ಚೆನ್ನೈ 18 ರನ್‌ಗಳ ಸೋಲನುಭವಿಸಿತು.
'ತಂಡಗಳು ರಿಟೈರ್ಡ್ ಔಟ್ ಆಯ್ಕೆಯನ್ನು ಹತಾಶೆಯಿಂದ ಬಳಸಿಕೊಳ್ಳುತ್ತಿವೆ. ಇದು ಯಶಸ್ಸು ನೀಡದ ತಂತ್ರಗಾರಿಕೆಯಾಗಿದೆ. ಯಾಕೆಂದರೆ, ತಾವು ಎದುರಿಸುವ ಮೊದಲ ಎಸೆತವನ್ನೇ ಸಿಕ್ಸರ್‌ಗೆ ಅಟ್ಟಬಲ್ಲ ಆಟಗಾರರು ಹೆಚ್ಚಿಲ್ಲ. ಹೆಚ್ಚಿನ ಸಂದರ್ಭಗಳಲ್ಲಿ, ಕ್ರೀಸ್‌ನಲ್ಲಿ ಮೊದಲು ಪರದಾಡುತ್ತಿದ್ದ ಬ್ಯಾಟರ್‌ಗಳೇ ಪಂದ್ಯವನ್ನು ಗೆಲ್ಲಿಸಿದ ನಿದರ್ಶನಗಳಿವೆ. ತೆವಾಟಿಯ 5 ಎಸೆತಗಳಲ್ಲಿ 5 ಸಿಕ್ಸರ್‌ಗಳನ್ನು ಸಿಡಿಸಿರುವುದನ್ನು ನೆನಪಿಸಿಕೊಳ್ಳಿ. ಅದಕ್ಕಿಂತಲೂ ಮೊದಲು ಅವರು 19 ಎಸೆತಗಳಲ್ಲಿ ಕೇವಲ 8 ರನ್‌ಗಳನ್ನು ಗಳಿಸಿದ್ದರು. ಈ ನಿಯಮದಿಂದ ಆಟಗಾರನ ಸಾಮರ್ಥವೊಂದನ್ನು ಅವಗಣಿಸಿದಂತಾಗುತ್ತದೆ' ಎಂದು ಪೋಸ್ಟ್ ಮಾಡಿದ್ದಾರೆ.
ಏನಿದು ರಿಟೈರ್ಡ್ ಔಟ್?
ಟಿ20 ಕ್ರಿಕೆಟ್ನಲ್ಲಿ ಈ ನಿಯಮ ಹೆಚ್ಚು ಚಾಲ್ತಿಯಲ್ಲಿದೆ. ಬ್ಯಾಟಿಂಗ್ ಮಾಡುತ್ತಿರುವ ಆಟಗಾರನ ಮುಂದಿನ ಆಟಗಾರ ಉತ್ತಮವಾಗಿ ಆಡುತ್ತಾನೆ ಎಂಬ ನಂಬಿಕೆ ಇದ್ದಲ್ಲಿ, ಸ್ವತಃ ಸ್ಟ್ರೈಕ್ ನಲ್ಲಿ ಇರುವ ಆಟಗಾರ ರಿಟೈಡ್ ಔಟ್ ಆಗಬಹುದು. ಆದರೆ ಇದರಲ್ಲಿ ಒಮ್ಮೆ ನಿವೃತ್ತಿ ತೆಗೆದುಕೊಂಡಲ್ಲಿ ಮತ್ತೆ ಆ ಪಂದ್ಯದಲ್ಲಿ ಆ ಆಟಗಾರ ಬ್ಯಾಟಿಂಗ್ ಮಾಡುವಂತಿಲ್ಲ.
Teams using retired out option more out of frustration. it is a tactic that rarely works as there are very few batters who can hit a 6 on first ball they face. Most times it is the struggling batsman on crease who has a better chance of winning the game. Remember Tewatia, he hit…
— Mohammad Kaif (@MohammadKaif) April 9, 2025
ರಿಟೈರ್ಡ್ ಹರ್ಟ್ ಇದಕ್ಕಿಂತ ಸ್ವಲ್ಪ ಭಿನ್ನವಾಗಿದೆ. ಕ್ರಿಕೆಟ್ ನಿಯಮಗಳ ಪ್ರಕಾರ, ಬ್ಯಾಟ್ಸ್‌ಮನ್ ಅನಾರೋಗ್ಯ, ಗಾಯ ಅಥವಾ ಇತರ ಯಾವುದೇ ಅನಿವಾರ್ಯ ಕಾರಣದಿಂದ ಮುಂದುವರಿಯಲು ಸಾಧ್ಯವಾಗದಿದ್ದರೆ ಆಟದಿಂದ ಆ ಕ್ಷಣಕ್ಕೆ ನಿವೃತ್ತಿ ಪಡೆದುಕೊಳ್ಳಬಹುದು. ಆದರೆ ರಿಟೈರ್ಡ್ ಹರ್ಟ್ ಆದಲ್ಲಿ ಆಟಗಾರ ಮತ್ತೆ ಪಂದ್ಯದಲ್ಲಿ ಸೇರಕೊಳ್ಳಬಹುದು.