ದುಬೈ: ಮುಂದಿನ ತಿಂಗಳು ಯುಎಇಯಲ್ಲಿ ಆರಂಭಗೊಳ್ಳಲಿರುವ ಮಹಿಳಾ ಟಿ20 ವಿಶ್ವಕಪ್ ಟೂರ್ನಿ(Women’s T20 WC) ಆರಂಭಕ್ಕೂ ಮುನ್ನವೇ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ICC) ಮಹತ್ವದ ನಿರ್ಧಾರವೊಂದನ್ನು ಪ್ರಕಟಿಸಿದೆ. ಟಿ20 ವಿಶ್ವಕಪ್ ಚಾಂಪಿಯನ್ ಪಟ್ಟವನ್ನು ಅಲಂಕರಿಸುವ ಮಹಿಳಾ ತಂಡಕ್ಕೆ ದಾಖಲೆಯ ಬಹುಮಾನ ಮೊತ್ತವನ್ನು ಘೋಷಣೆ ಮಾಡಿದೆ. ಪುರುಷರ ತಂಡಕ್ಕೆ ನೀಡಿದಷ್ಟೇ ಬಹುಮಾನ ನೀಡುವುದಾಗಿ ಘೋಷಿಸಲಾಗಿದೆ. ಈ ಮೂಲಕ ಲಿಂಗ ಸಮಾನತೆ ಕಡೆಗೆ ಒಂದು ಪ್ರಮುಖ ಹೆಜ್ಜೆಯನ್ನಿಟ್ಟಿದೆ.
ಕಳೆದ ವರ್ಷವೇ ಐಸಿಸಿ, ಪುರುಷ ಮತ್ತು ಮಹಿಳಾ ತಂಡಗಳಿಗೆ ಸಮಾನ ಬಹುಮಾನವನ್ನು(equal prize money) ನೀಡುವುದಾಗಿ ಘೋಷಿಸಿತ್ತು. ದಕ್ಷಿಣ ಆಫ್ರಿಕಾದ ಡರ್ಬನ್‌ನಲ್ಲಿ ನಡೆದ ಐಸಿಸಿ ವಾರ್ಷಿಕ ಸಮ್ಮೇಳನದಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿತ್ತು. ಇದೀಗ ಟಿ20 ವಿಶ್ವಕಪ್ ಟೂರ್ನಿಯ ಮೂಲಕ ಈ ನಿಯಮ ಜಾರಿಗೆ ಬರಲಿದೆ. ಇನ್ನು ಮುಂದೆ ನಡೆಯುವ ಎಲ್ಲ ಐಸಿಸಿ ಮಹಿಳಾ ಈವೆಂಟ್‌ನಲ್ಲಿಯೂ ಪುರುಷರ ತಂಡಕ್ಕೆ ನೀಡುವ ಬಹುಮಾನದಷ್ಟೇ ಮಹಿಳಾ ತಂಡಕ್ಕೂ ಸಿಗಲಿದೆ.
“ಸಮಾನತೆ ಮತ್ತು ಸಬಲೀಕರಣದ ಹೊಸ ಯುಗ ಆರಂಭವಾಗಿದೆ. ಲಿಂಗ ಸಮಾನತೆ ಕಡೆಗೆ ಒಂದು ಪ್ರಮುಖ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಘೋಷಿಸಲು ನಾನು ರೋಮಾಂಚನಗೊಂಡಿದ್ದೇನೆ. ಐಸಿಸಿಯ ಎಲ್ಲ ಟೂರ್ನಿಗಳಲ್ಲಿ ಬಹುಮಾನದ ಹಣ ಪುರುಷರು ಮತ್ತು ಮಹಿಳೆಯರಿಗೆ ಒಂದೇ ಆಗಿರುತ್ತವೆ” ಎಂದು ಐಸಿಸಿ ಟ್ವೀಟ್ ಮೂಲಕ ತಿಳಿಸಿದೆ.
ಇದನ್ನೂ ಓದಿ IND vs BAN: ಮೊದಲ ಟೆಸ್ಟ್‌ಗೆ ಭಾರತದ ತ್ರಿವಳಿ ಸ್ಪಿನ್ ಅಸ್ತ್ರ
ಪುರುಷರ ಟಿ20 ವಿಶ್ವಕಪ್ ವಿಜೇತರಿಗೆ 20 ಕೋಟಿ ರೂ., ರನ್ನರ್ ಅಪ್ ತಂಡಕ್ಕೆ ತಂಡಕ್ಕೆ10.64 ಕೋಟಿ ರೂ. ಬಹುಮಾನ ನೀಡಲಾಗಿತ್ತು. ಆದರೆ ಮಹಿಳಾ ಟಿ20 ವಿಶ್ವಕಪ್‌ನಲ್ಲಿ ತಂಡಗಳ ಸಂಖ್ಯೆ ಕಡಿಮೆ ಇರುವ ಕಾರಣ ಬುಮಾತನ ಮೊತ್ತ ಕೊಂಚ ಕಡಿಮೆಯಾಗಿದೆ. ಒಟ್ಟಾರೆ USD 7.95 ಮಿಲಿಯನ್ ಬಹುಮಾನವು 2023 ರಲ್ಲಿ USD 2.45 ಮಿಲಿಯನ್‌ಗಿಂತ 225% ಹೆಚ್ಚಾಗಿದೆ ಎಂದು ICC ಮಂಗಳವಾರ ಪ್ರಕಟಿಸಿದೆ. ವಿಜೇತರು USD 2.34 ಮಿಲಿಯನ್ ಬಹುಮಾನವನ್ನು ಪಡೆಯಲಿದ್ದಾರೆ. ಇದು ಮಹಿಳಾ ಕ್ರಿಕೆಟ್ ಇತಿಹಾಸದಲ್ಲೇ ಗರಿಷ್ಠ ಮೊತ್ತದ ಬಹುಮಾನವಾಗಿದೆ.
ಕಳೆದ ವರ್ಷ ದಕ್ಷಿಣ ಆಫ್ರಿಕಾದಲ್ಲಿ ನಡೆದಿದ್ದ ವಿಶ್ವಕಪ್‌ನಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದ್ದ ಆಸ್ಟ್ರೇಲಿಯಾದ ಮಹಿಳೆಯರಿಗೆ ನೀಡಲಾದ ಬಹುಮಾನಕ್ಕಿಂತ ಶೇಕಡಾ 134ರಷ್ಟು ಈ ಬಾರಿ ಬಹುಮಾನ ಮೊತ್ತ ಹೆಚ್ಚಳವಾಗಿದೆ ಎಂದು ಐಸಿಸಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.