ಬೆಂಗಳೂರು: ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಗಳಲ್ಲಿ ಇಂದು ಉಪಚುನಾವಣೆಯ (Karnataka Bypoll) ಅಂಗವಾಗಿ ಮತದಾನ ಆರಂಭವಾಗಿದ್ದು, ಚನ್ನಪಟ್ಟಣ (Channapatna by Election 2024), ಶಿಗ್ಗಾವಿ, ಸಂಡೂರು ಕ್ಷೇತ್ರಗಳಲ್ಲಿ ಬೆಳಗ್ಗೆ 7 ಗಂಟೆಯಿಂದ ಮತದಾನ ಬಿರುಸಿನಿಂದ ಸಾಗಿದೆ.
ಬೆಳಿಗ್ಗೆ 7 ಗಂಟೆಯಿಂದ ಮತದಾನ ಪ್ರಕ್ರಿಯೆ ಆರಂಭಗೊಂಡು ಸಂಜೆ 6 ಗಂಟೆಯವರೆಗೆ ನಡೆಯಲಿದೆ. ಬೆಳಗ್ಗೆ 9 ಗಂಟೆಯವರೆಗಿನ ಮತದಾನದ ಶೇಕಡವಾರು ವಿವರ:
ಚನ್ನಪಟ್ಟಣ : 10.34
ಶಿಗ್ಗಾವಿ 10:08
ಸಂಡೂರು 9.99
ಚನ್ನಪಟ್ಟಣ ಉಪ ಚುನಾವಣೆ
ಮೂರು ಉಪಚುನಾವಣೆಗಳಲ್ಲಿ ಹೈವೋಲ್ಟೇಜ್ ಕ್ಷೇತ್ರವಾಗಿರುವ ಚನ್ನಪಟ್ಟಣದಲ್ಲಿ ಬಿರುಸಿನ ಮತದಾನ ಆರಂಭವಾಗಿದ್ದು, ಚಕ್ಕೆರೆ ಗ್ರಾಮದಲ್ಲಿ ಸಿ.ಪಿ.ಯೋಗೇಶ್ವರ್ ತಮ್ಮ ಸಿ.ಪಿ.ರಾಜೇಶ್ ಅವರು 168 ನೇ ಮತಗಟ್ಟೆಯಲ್ಲಿ ರಾಜೇಶ್ ಮತದಾನ ಮಾಡಿದರು.
ಮತದಾನದ ಬಳಿಕ ಮಾತನಾಡಿದ ಅವರು, ದೇಶದ ಸಂವಿಧಾನ ಉಳಿಸಲು ಪ್ರತಿಯೊಬ್ಬರು ಮತದಾನ ಮಾಡಬೇಕು. ಎಲ್ಲರೂ ಸಹ ತಮ್ಮ ಹಕ್ಕನ್ನ ಚಲಾಯಿಸಬೇಕು, ನಮ್ಮ ಸಹೋದರನ ಅಭಿವೃದ್ಧಿಗೆ ಜನರು ಆಶೀರ್ವಾದ ಮಾಡ್ತಾರೆ ಎಂದು ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದರು.
ಶಿಗ್ಗಾಂವಿ
ಶಿಗ್ಗಾಂವಿ ಕ್ಷೇತ್ರದಲ್ಲೂ ಬೆಳಿಗ್ಗೆಯಿಂದಲೇ ಮತದಾನ ಪ್ರಕ್ರಿಯೆ ಬಿರುಸಿನಿಂದಲೇ ಆರಂಭವಾಗಿದೆ. ಮತಗಟ್ಟೆ ಕೇಂದ್ರಗಳತ್ತ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ. ಸರತಿ ಸಾಲಿನಲ್ಲಿ ನಿಂತು ಮತದಾರರು ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ. ಬೆಳಿಗ್ಗೆಯಿಂದಲೇ ಮತದಾರಲ್ಲಿ ಉತ್ಸಾಹ ಮನೆಮಾಡಿದೆ.
ಹುಬ್ಬಳ್ಳಿಯ ಅಶೋಕ ನಗರದ ಮಾರುತಿ ದೇವಸ್ಥಾನದಲ್ಲಿ ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿ ವಿಶೇಷ ಪೂಜೆ ಸಲ್ಲಿಸಿದರು. ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಹಾಗೂ ಭರತ್, ದೇವಸ್ಥಾನದಲ್ಲಿ ಐದು ಸುತ್ತು ಪ್ರದಕ್ಷಿಣೆ ಸುತ್ತಿ ದೇವರ ಆಶೀರ್ವಾದ ಪಡೆದರು.
ಆನಂತರ ಶಿಗ್ಗಾಂವ ಕಡೆ ಮುಖ ಮಾಡಿದ ಮುಖಂಡರು, ಮಾರ್ಗ ಮಧ್ಯೆ ತಡಸದ ಗಾಯತ್ರಿ ತಪೋವನಕ್ಕೆ ಭೇಟಿ ನೀಡಿ, ಶಿಗ್ಗಾಂವದಲ್ಲಿ ಬಸವರಾಜ ಬೊಮ್ಮಾಯಿ ಮತ್ತು ಭರತ್ ಬೊಮ್ಮಾಯಿ ಮತ ಚಲಾಯಿಸಲಿದ್ದಾರೆ.
ಸಂಡೂರು
ಸಂಡೂರು ವಿಧಾನಸಭಾ ಕ್ಷೇತ್ರ ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ತುಕಾರಾಂ ಅವರು ಸಂಡೂರಿನ ಮತಗಟ್ಟೆ ಸಂಖ್ಯೆ 67 ರಲ್ಲಿ ಮತದಾನ ಮಾಡಿದರು. ಸಂಸದ ಈ ತುಕಾರಾಂ ಪುತ್ರಿ ಚೈತನ್ಯ, ಪುತ್ರ ರಘುನಂದನ ಕೂಡ ಮತದಾನ ಮಾಡಿದರು.