Thursday, 14th November 2024

Waqf Board: ವಕ್ಫ್‌ ಸಂತ್ರಸ್ತರನ್ನು ಭೇಟಿ ಮಾಡಿದ ಕೇಂದ್ರ ಜಂಟಿ ಸಂಸದೀಯ ಸಮಿತಿ; ʼವ್ಯವಸ್ಥಿತ ಹುನ್ನಾರʼ ಎಂದ ಪಾಲ್

waqf

ವಿಜಯಪುರ: ವಕ್ಪ್‌ ಗೊಂದಲದ (Waqf Board)‌ ಬಗ್ಗೆ ಅಗತ್ಯಬಿದ್ದರೆ ಉನ್ನತ ಮಟ್ಟದ ತನಿಖೆಗೆ ಶಿಫಾರಸ್ಸು ಮಾಡಲಾಗುವುದು ಎಂದು ವಕ್ಪ್ (ತಿದ್ದುಪಡಿ) ವಿಧೇಯಕದ ಕುರಿತ ಜಂಟಿ ಸಂಸದೀಯ ಸಮಿತಿ (ಜೆಪಿಸಿ) ಅಧ್ಯಕ್ಷ ಜಗದಂಬಿಕಾ ಪಾಲ್ಭ (Jagadambika Pal) ಭರವಸೆ ನೀಡಿದ್ದಾರೆ. ಗುರುವಾರ ವಿಜಯಪುರ (Vijayapura news) ಮತ್ತು ಹುಬ್ಬಳ್ಳಿಯಲ್ಲಿ ವಕ್ಪ್ ಸಂತ್ರಸ್ತರ ಅಹವಾಲುಗಳನ್ನು ಅವರು ಸ್ವೀಕರಿಸಿದ ಬಳಿಕ ಬೆಳಗಾವಿಯ (Belagavi news) ವಿಮಾನ ನಿಲ್ದಾಣದಲ್ಲಿ ಸುದ್ದಿಗೋಷ್ಠಿ ನಡೆಸಿದರು

ಸಾವಿರಾರು ವರ್ಷಗಳಷ್ಟು ಹಳೆಯ ದಾಖಲೆ ಇರುವ ಮಠಗಳು, ದೇವಾಲಯಗಳು, ರೈತರ ಜಮೀನುಗಳು. ಐತಿಹಾಸಿಕ ಸ್ಮಾರಕಗಳ ಪಹಣಿಯಲ್ಲಿ ಸರ್ಕಾರದ ಸಹಕಾರವಿಲ್ಲದೆ ವಕ್ಪ್ ಆಸ್ತಿಯಾಗಿ ಬದಲಿಸಲು ಹೇಗೆ ಸಾಧ್ಯ? ಇದೊಂದು ಗಂಭೀರ ವಿಷಯ. ಕರ್ನಾಟಕದಲ್ಲಿ ಏಕಾಏಕಿ ಕಂದಾಯ ದಾಖಲೆಗಳ ತಿದ್ದುಪಡಿಯಾಗುತ್ತಿರುವ ವಿಷಯವನ್ನು ಜೆಪಿಸಿ ಗಂಭೀರವಾಗಿ ಪರಿಗಣಿಸಿದೆ. ಸಾವಿರಾರು ವರ್ಷಗಳಷ್ಟು ಹಳೆಯ ದಾಖಲೆ ಇರುವ ಜಮೀನನ್ನು ವಕ್ಪ್ ಆಸ್ತಿ ಎಂದು ಘೊಷಿಸುತ್ತಿದ್ದಾರೆ. ಆಸ್ತಿ ಹಕ್ಕಿನಲ್ಲೂ ಬದಲಾವಣೆ ಮಾಡಲಾಗುತ್ತಿದೆ. ಸರ್ಕಾರ, ಅಧಿಕಾರಿಗಳ ಸಹಕಾರದಿಂದಲೇ ಕರ್ನಾಟಕದಲ್ಲಿ ವಕ್ಪ್ ಮಂಡಳಿ ವ್ಯವಸ್ಥಿತವಾಗಿ ಜಮೀನು ಕಬಳಿಸುವ ಹುನ್ನಾರ ನಡೆಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈಗಾಗಲೇ ಕರ್ನಾಟಕ ಸರ್ಕಾರವು ರೈತರಿಗೆ ನೀಡಿರುವ ನೋಟೀಸ್ ವಾಪಸ್ ಪಡೆಯುವುದಾಗಿ, ರೈತರನ್ನು ಒಕ್ಕಲೆಬ್ಬಿಸುವುದಿಲ್ಲ ಎಂದು ಹೇಳುತ್ತಿದೆ. ಆದರೆ, ಸಮಸ್ಯೆ ಪರಿಹಾರ ಆಗಿಲ್ಲ. ದಾಖಲೆಗಳಲ್ಲಿ ಅಕ್ರಮವಾಗಿ ಸೇರ್ಪಡೆ ಮಾಡಿರುವ ವಕ್ಪ್ ಹೆಸರು ತೆಗೆದು ಹಾಕುವ ಕೆಲಸ ಮಾಡುತ್ತಿಲ್ಲ. ಇದು ಹೇಗೆ ಸಾಧ್ಯ. ರೈತರು, ಶಾಸಕರು, ಸಂಸದರು ಮನವಿ ಕೊಟ್ಟಿದ್ದಾರೆ. ಕಳೆದ ಮೂರು ತಿಂಗಳ ಅವಧಿಯಲ್ಲಿ ಶೇ.38ರಷ್ಟು ಆಸ್ತಿಗಳಿಗೆ ವಕ್ಪ್ ಬೋರ್ಡ್ ನೋಟೀಸ್ ನೀಡಿದೆ. ಈ ಎಲ್ಲ ಸಮಗ್ರ ಮಾಹಿತಿಯನ್ನು ವರದಿಯಲ್ಲಿ ಸೇರಿಸುತ್ತೇವೆ ಎಂದು ಹೇಳಿದರು.

ಇದಕ್ಕೆ ಮುನ್ನ ‘ವಕ್ಪ್ ಹಟಾವೋ-ದೇಶ ಬಚಾವೋ’ ಘೊಷ ವಾಕ್ಯದಡಿ ವಿಜಯಪುರ ಜಿಲ್ಲಾಡಳಿತ ಕಚೇರಿ ಎದುರು ಮೂರು ದಿನಗಳಿಂದ ನಡೆಯುತ್ತಿರುವ ಅಹೋರಾತ್ರಿ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹದ ಸ್ಥಳಕ್ಕೂ ಭೇಟಿ ನೀಡಿದ ಪಾಲ್, ಪ್ರತಿಭಟನಾ ನಿರತ ಮುಖಂಡರು, ರೈತರು, ಮಠಾಧೀಶರಿಂದ ಮನವಿ ಸ್ವೀಕರಿಸಿದರು. ವಕ್ಪ್ ಕಾಯ್ದೆಯನ್ನೇ ತೆಗೆದು ಹಾಕಿ ಅದರ ಆಸ್ತಿಗಳನ್ನು ರಾಷ್ಟ್ರೀಕರಣಗೊಳಿಸಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು. ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹಾಗೂ ಶಾಸಕ ಬಸನಗೌಡ ಪಾಟೀಲ ಯತ್ನಾಳ ಸಹಿತ ನೂರಾರು ರೈತರು ಮತ್ತು ಮಠಾಧೀಶರು ಧರಣಿಯಲ್ಲಿ ಪಾಲ್ಗೊಂಡಿದ್ದರು. ಜಗದಂಬಿಕಾ ಪಾಲ್ ಭರವಸೆ ಹಿನ್ನೆಲೆಯಲ್ಲಿ ಧರಣಿಯನ್ನು ಕೊನೆಗೊಳಿಸಲಾಯಿತು.

ಪಾರದರ್ಶಕ ಕಾಯ್ದೆ: ಪಾರದರ್ಶಕ ರೀತಿಯಲ್ಲಿ ಕಾಯ್ದೆ ರೂಪಿಸಲು ಸಂಸದೀಯ ಸಮಿತಿ ರಚನೆಯಾಗಿದೆ. ಯಾರು ಜಮೀನು ಕಬಳಿಕೆ ಮಾಡಿದ್ದಾರೆ ಅಥವಾ ದುರುಪಯೋಗ ಮಾಡಿದ್ದಾರೆ ಎಂಬ ಅಂಶವನ್ನೂ ಪರಿಶೀಲನೆ ಮಾಡುತ್ತೇವೆ. ಭವಿಷ್ಯದಲ್ಲಿ ವಕ್ಪ್ ಆಸ್ತಿ ಮಾರಾಟವಾಗದಂತೆ ಅದನ್ನು ರಕ್ಷಣೆ ಮಾಡುವ ನಿಟ್ಟಿನಲ್ಲಿ ಈ ಹೆಜ್ಜೆ ಇರಿಸಲಾಗಿದೆ. ಸಂಸದ ಅಸಾದುದ್ದೀನ್ ಓವೈಸಿ ಸೇರಿ ಎಲ್ಲರೂ ಈ ಸಮಿತಿಯಲ್ಲಿ ಇದ್ದಾರೆ. ದಿನವೂ ಚರ್ಚೆ, ಅಭಿಪ್ರಾಯ ಆಧರಿಸಿ ಸಮಿತಿ ಅಧ್ಯಯನ ನಡೆಸುತ್ತಿದೆ. ಪರಿಸ್ಥಿತಿ ಹೀಗಿರುವಾಗ ಕರ್ನಾಟಕದಲ್ಲಿ ಈ ವಿದ್ಯಮಾನದ ಅಗತ್ಯವೇನಿತ್ತು? ಎಂದು ಅವರು ಪ್ರಶ್ನಿಸಿದ್ದಾರೆ/

ಈ ವೇಳೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಸಂಸದ ತೇಜಸ್ವಿ ಸೂರ್ಯ, ರಮೇಶ ಜಿಗಜಿಣಗಿ, ಮಾಜಿ ಕೇಂದ್ರ ಸಚಿವ, ಶಾಸಕ ಬಸನಗೌಡಪಾಟೀಲ ಯತ್ನಾಳ, ಕೂಡಲಸಂಗಮ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ, ಕನ್ಹೇರಿ ಮಠದ ಅದೃಷ್ಯ ಕಾಡಸಿದ್ಧೇಶ್ವರ ಮಹಾಸ್ವಾಮೀಜಿ, ಅಣ್ಣಾಸಾಹೇಬ ಜೊಲ್ಲೆ, ಶಶಿಕಲಾ ಜೊಲ್ಲೆ, ಮಾಜಿ ಸಚಿವರಾದ ಎಸ್.ಕೆ. ಬೆಳ್ಳುಬ್ಬಿ ಇತರ ಹಲವಾರು ಮುಖಂಡರಿದ್ದರು.

ಇದನ್ನೂ ಓದಿ: DK Shivakumar: ವಕ್ಫ್ ಹೆಸರಲ್ಲಿ ಯಾವುದೇ ರೈತರನ್ನು ಒಕ್ಕಲೆಬ್ಬಿಸುವುದಿಲ್ಲ; ಡಿ.ಕೆ. ಶಿವಕುಮಾರ್‌