ವಿದೇಶ ಫ್ಯಾಷನ್‌ ಲೋಕ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್‌ ಹೌಸ್‌ ಸಂಪಾದಕೀಯ

Shashank Mudoori Column: ದ್ವಾದಶ ಜ್ಯೋತಿರ್ಲಿಂಗ ದರ್ಶನ !

ದೇಶದ ವಿವಿಧ ಧಾರ್ಮಿಕ ಸ್ಥಳಗಳಿಗೆ ಯಾತ್ರ ಕೈಗೊಳ್ಳುವುದು, ಯಾತ್ರೆಗೆ ಹೋದವರು ಯಾತ್ರಾ ಸ್ಥಳಗಳಲ್ಲಿ ಹಲವು ದಿನ ತಂಗುವುದು, ಯಾತ್ರಾ ದಾರಿಯುದ್ದಕ್ಕೂ ಅಗತ್ಯ ವಸ್ತುಗಳನ್ನು ಖರೀದಿಸುವುದು, ವಸತಿಗೃಹಗಳಲ್ಲಿ, ಛತ್ರಗಳಲ್ಲಿ ತಂಗುವುದು, ಸ್ಮರಣಿಕೆಗಳನ್ನು ಖರೀದಿಸಿವುದು - ಇವೆಲ್ಲವೂ ಧಾರ್ಮಿಕ ಪ್ರವಾಸೋದ್ಯಮದ ಭಾಗಗಳು, ಅಂಗಗಳು. ಬೇರೆ ಬೇರೆ ದೇಗುಲಗಳಲ್ಲಿ ಪೂಜೆ ಮಾಡಿಸುವುದು, ಪೂಜಾ ಸಾಮಗ್ರಿ ಖರೀದಿಸುವುದು, ಹುಂಡಿಗೆ ಕಾಣಿಕೆ ಹಾಕುವುದು, ದಾನ ಮಾಡುವುದು - ಇವುಗಳನ್ನೂ ಸಹ ಧಾರ್ಮಿಕ ಪ್ರವಾಸೋ ದ್ಯಮದ ಭಾಗಗಳೆಂದೇ ಪರಿಗಣಿಸಬಹುದು

ಧಾರ್ಮಿಕ ಪ್ರವಾಸೋದ್ಯಮದಲ್ಲಿ ಮುಂದೇನು ?

Profile Ashok Nayak Mar 2, 2025 11:37 AM

ಶಶಾಂಕ್ ಮುದೂರಿ

ಪ್ರಯಾಗ್‌ರಾಜ್‌ನಲ್ಲಿ ಮಹಾಕುಂಭಮೇಳವು ಸಂಪನ್ನಗೊಂಡಿದೆ; ಈ ಮೇಳದ ಯಶಸ್ಸು, ಇಪ್ಪತ್ತೊಂದನೆಯ ಶತಮಾನದ ಭಾರತದಲ್ಲಿ ಒಂದು ಹೊಸ ದಾಖಲೆಯನ್ನೇ ಬರೆದಿದೆ, ಮಾತ್ರವಲ್ಲ ಜನಮಾನಸದಲ್ಲಿ ಒಂದು ಹೊಸ ಸಂಚಲನವನ್ನೇ ಸೃಷ್ಟಿಸಿದೆ. ಭಾರತೀಯರ ಹೃದಯದಾಳದಲ್ಲಿ ಸುಶುಪ್ತಿಗೆ ಸರಿದಿದ್ದ ಕೆಲವು ಭಾವನಾತ್ಮಕ ಮತ್ತು ಆಧ್ಯಾತ್ಮಿಕ ವಿಚಾರಗಳು ಮತ್ತೆ ಪ್ರಕಟವಾಗುವಂತೆ ಮಾಡಿದೆ. ಹಳ್ಳಿ ಹಳ್ಳಿಗಳಿಂದ ಜನರು ಸಾವಿರಾರು ಕಿ.ಮೀ. ಪಯಣಿಸಿ, ಪ್ರಯಾಗ್‌ರಾಜ್‌ಗೆ ಹೋಗುವುದೆಂದರೇನು, ಅಲ್ಲಿ ನದಿಯ ತಟದಲ್ಲಿ ಹಲವು ದಿನ ತಂಗುವುದೆಂದರೇನು, ತ್ರಿವೇಣಿ ಸಂಗಮದಲ್ಲಿ ಅಥವಾ ಸನಿಹದಲ್ಲಿ ಮುಳುಗು ಹಾಕಿ, ಧನ್ಯರಾದೆವೆಂದು ಕೃತಾರ್ಥ ಭಾವದಿಂದ ಸಂತೃಪ್ತರಾಗುದೆಂದರೇನು? ಮತ್ತು, ಈ ಸಲದ ಮಹಾ ಕುಂಭಮೇಳವು ಧಾರ್ಮಿಕವಾಗಿ, ಆಧ್ಯಾತ್ಮಿಕವಾಗಿ ಮತ್ತು ಆರ್ಥಿಕ ಚಟುವಟಿಕೆಯಾಗಿ ಪಡೆದ ಪ್ರಚಾರವೂ ಅದ್ಭುತ ಎನಿಸುವಂತಿದೆ; ಹಿಂದೆಲ್ಲಾ ಮಾಧ್ಯಮ ಗಳು ಕುಂಭ ಮೇಳವನ್ನು ‘ನಾಗಾ ಸಾಧುಗಳ’ನ್ನು ಕೇಂದ್ರೀಕರಿಸಿ ವರದಿ ಮಾಡುತ್ತಿದ್ದವು; ಈ ಬಾರಿ ಮಾತ್ರ, ಜನರ ಧಾರ್ಮಿಕ ನಂಬಿಕೆ ಮತ್ತು ಕುಂಭಮೇಳಕ್ಕಾಗಿ ಅವರು ವೆಚ್ಚ ಮಾಡಿದ ಹಣ ಮತ್ತು ಅದರಿಂದ ಸ್ಥಳೀಯ ಆರ್ಥಿಕತೆಗೆ ಆದ ಲಾಭವನ್ನೂ ಸೇರಿಸಿ ವರದಿ ಮಾಡಿವೆ. ಇದೂ ಸಹ ಹೊಸ ಬೆಳವಣಿಗೆ.

ಇದನ್ನೂ ಓದಿ: Kumbhamela Stampede: ಮಹಾಕುಂಭ ಮೇಳದಲ್ಲಿ ಕಾಲ್ತುಳಿತ-ಸಿಎಂ ಯೋಗಿ ಫಸ್ಟ್‌ ರಿಯಾಕ್ಷನ್‌

ಕುಂಭಮೇಳದ ನೆಪದಲ್ಲಿ, ನಮ್ಮ ದೇಶದ ಹಲವು ಭಾಗಗಳಲ್ಲಿ ಕಂಡು ಬಂದ ಒಂದು ‘ನವ ಜಾಗೃತಿ’ಗೆ ಹಲವು ಆಯಾಮಗಳಿವೆ. ಅವುಗಳಲ್ಲಿ ಒಂದೆಂದರೆ ‘ಧಾರ್ಮಿಕ ಪ್ರವಾಸೋ ದ್ಯಮ’ (ರಿಲೀಜಿಯಸ್ ಟೂರಿಸಂ). ‘ಧಾರ್ಮಿಕ ಪ್ರವಾಸೋದ್ಯಮ’ ಎಂಬ ಪರಿಕಲ್ಪನೆ ಹೊಸದೇನಲ್ಲ.

ದೇಶದ ವಿವಿಧ ಧಾರ್ಮಿಕ ಸ್ಥಳಗಳಿಗೆ ಯಾತ್ರ ಕೈಗೊಳ್ಳುವುದು, ಯಾತ್ರೆಗೆ ಹೋದವರು ಯಾತ್ರಾಸ್ಥಳಗಳಲ್ಲಿ ಹಲವು ದಿನ ತಂಗುವುದು, ಯಾತ್ರಾ ದಾರಿಯುದ್ದಕ್ಕೂ ಅಗತ್ಯ ವಸ್ತು ಗಳನ್ನು ಖರೀದಿಸುವುದು, ವಸತಿಗೃಹಗಳಲ್ಲಿ, ಛತ್ರಗಳಲ್ಲಿ ತಂಗುವುದು, ಸ್ಮರಣಿಕೆಗಳನ್ನು ಖರೀದಿಸಿವುದು - ಇವೆಲ್ಲವೂ ಧಾರ್ಮಿಕ ಪ್ರವಾಸೋದ್ಯಮದ ಭಾಗಗಳು, ಅಂಗಗಳು. ಬೇರೆ ಬೇರೆ ದೇಗುಲಗಳಲ್ಲಿ ಪೂಜೆ ಮಾಡಿಸುವುದು, ಪೂಜಾ ಸಾಮಗ್ರಿ ಖರೀದಿಸುವುದು, ಹುಂಡಿಗೆ ಕಾಣಿಕೆ ಹಾಕುವುದು, ದಾನ ಮಾಡುವುದು - ಇವುಗಳನ್ನೂ ಸಹ ಧಾರ್ಮಿಕ ಪ್ರವಾಸೋ ದ್ಯಮದ ಭಾಗಗಳೆಂದೇ ಪರಿಗಣಿಸಬಹುದು.

ಆಯಾ ಊರುಗಳ ಆರ್ಥಿಕತೆಗೆ ಇಂಬುಕೊಟ್ಟು, ಸ್ಥಳೀಯರಿಗೆ ಉದ್ಯೋಗ ದೊರಕಿಸಿ ಕೊಡುವುದು ಧಾರ್ಮಿಕ ಪ್ರವಾಸೋದ್ಯಮದಿಂದ ಸಾಧ್ಯ. ದೇಗುಲ ನೋಡಲು ಬಂದವರು, ಸನಿಹದ ಕೆಲವು ಪ್ರವಾಸಿ ತಾಣಗಳಿಗೂ ಭೇಟಿ ನೀಡುವುದರಿಂದಾಗಿ, ಆಯಾ ಪ್ರವೇಶದ ಪ್ರವಾಸೋದ್ಯಮಕ್ಕೂ ಇದರಿಂದ ಬೆಂಬಲ ದೊರಕೀತು. 2025ರ ಮಹಾಕುಂಭ ಮೇಳಕ್ಕೆ ಹರಿದುಬಂದ ಜನ ಸಾಗರದಿಂದಾಗಿ, ನಮ್ಮ ದೇಶದ ಧಾರ್ಮಿಕ ಪ್ರವಾಸೋದ್ಯಮವು ಹೊಸತೇ ಆದ ಒಂದು ಮಹಾನ್ ‘ಬೂಸ್ಟ್’ ಅಥವಾ ಬೆಂಬಲ ಪಡೆದಿದೆ ಎಂಬುದರಲ್ಲಿ ಅನುಮಾನವೇ ಇಲ್ಲ.

ಬೇರೆ ದೇಶಗಳಲ್ಲಿ

ಜಗತ್ತಿನ ಕೆಲವು ದೇಶಗಳಲ್ಲಿ ಧಾರ್ಮಿಕ ಪ್ರವಾಸೋದ್ಯಮವು ದೊಡ್ಡ ಪ್ರಮಾಣದಲ್ಲಿ ಸ್ಥಳೀಯರಿಗೆ, ಆಯಾ ದೇಶಗಳಿಗೆ ಆರ್ಥಿಕ ಬೆಂಬಲ ನೀಡಿರುವುದನ್ನು ಗುರುತಿಸಬಹುದು. ಮೆಕ್ಕಾ ಯಾತ್ರೆ, ವ್ಯಾಟಿಕನ್ ಸಿಟಿಯ ಭೇಟಿ ಮೊದಲಾದ ಚಟುವಟಿಕೆಗಳಿಂದ ಅಪಾರ ಪ್ರಮಾಣದ ಮನಿ ಟರ್ನ್ ಓವರ್ (ಹಣ ಚಲಾವಣೆ) ನಡೆಯುತ್ತಿದೆ, ಲಕ್ಷಾಂತರ ಜನರಿಗೆ, ಸಾವಿರಾರು ಉದ್ಯಮಗಳಿಗೆ ಬೆಂಬಲ ನೀಡಿದೆ. ಇಂಥಹ ಜಾಗತಿಕ ಮಟ್ಟದ ಧಾರ್ಮಿಕ ಪ್ರವಾಸೋದ್ಯಮದಿಂದ ಕೆಲವು ವಿಮಾನ ಕಂಪೆನಿಗಳೂ ಲಾಭಗಳಿಸುತ್ತಿವೆ!

ನಮ್ಮ ದೇಶದಲ್ಲೂ ಈ ಹಿಂದೆಯೂ ಧಾರ್ಮಿಕ ಪ್ರವಾಸೋದ್ಯಮ ಚಟುವಟಿಕೆ ಸಾಕಷ್ಟು ನಡೆದಿದೆ, ಈಗಲೂ ನಡೆಯುತ್ತಿದೆ. ಆದರೆ ಕೆಲವು ಪ್ರದೇಶಗಳಲ್ಲಿ, ರಾಜ್ಯಗಳಲ್ಲಿ ಹಿಂದೆ ಇದ್ದ ಮೂಲಭೂತ ಸೌಕರ್ಯದ ಕೊರತೆಯಿಂದಾಗಿ, ಇದು ಉದ್ಯಮದ ರೂಪದಲ್ಲಿ ಬಹು ಬೇಗನೆ ವೃದ್ಧಿ ಕಾಣಲಿಲ್ಲ ಎನ್ನಬಹುದು. ತಿರುಪತಿ, ಪುರಿ ಮೊದಲಾದ ದೇಗುಲಗಳು ಸ್ಥಳೀಯರಿಗೆ ಅದಾವ ಮಟ್ಟದಲ್ಲಿ ಉದ್ಯೋಗ ದೊರಕಿಸಿ ಕೊಟ್ಟಿವೆ ಎಂಬುದನ್ನು ಗಮನಿಸಿದರೆ, ಈ ಚಟುವಟಿಕೆಯಲ್ಲಿ ಅಡಗಿರುವ ‘ಪೊಟೆನ್ಶಿಯ’ನ್ನು ಅರಿಯಬಹುದು.

ವಿಶ್ವದಾಖಲೆ

ಈಗ ತಾನೆ ಸಂಪನ್ನಗೊಂಡ ಕುಂಭಮೇಳದಲ್ಲಿ 65 ಕೋಟಿ ಜನರು ಭಾಗವಹಿಸಿದರು ಎಂಬ ಮಾಹಿತಿ ಪ್ರಚಾರ ಪಡೆದಿದೆ. ಸರಕಾರವೇ ಬಿಡುಗಡೆ ಮಾಡಿರುವ ಈ ಅಂಕಿ ಅಂಶವನ್ನು ಕೆಲವರು ಪ್ರಶ್ನಿಸಿದ್ದರೂ, ಅದು ಅಧಿಕೃತ ಮಾಹಿತಿಯೆಂಬುದು ಒಂದು ವಾಸ್ತವ.

ಸರಕಾರಗಳು ಕಾಲದಿಂದ ಕಾಲಕ್ಕೆ ಬಿಡುಗಡೆಮಾಡುವ ಇತರ ಅಂಕಿ ಅಂಶಗಳನ್ನು ಹೇಗೆ ಒಪ್ಪಿಕೊಳ್ಳುತ್ತೇವೆಯೋ, ಅದೇ ರೀತಿ ಈ ಅಂಕಿ ಅಂಶವನ್ನೂ ಸ್ವೀಕರಿಸಬಹುದು. 65 ಕೋಟಿ ಎಂಬುದು ಬಹುದೊಡ್ಡ ಸಂಖ್ಯೆ ಎಂದು ಅನಿಸಿದರೆ, ಅದರ ಅರ್ಧ ಭಾಗದಷ್ಟು ಜನರು ಪ್ರಯಾಗ್‌ರಾಜ್‌ಗೆ ಬಂದರು ಎಂದು ಒಪ್ಪಿಕೊಂಡರೂ, ಅದೂ ಸಹ ದಾಖಲೆಯೇ ಸರಿ!

ಕೇವಲ ದಾಖಲೆಯಲ್ಲ, ವಿಶ್ವದಾಖಲೆ. ಕುಂಭಮೇಳಕ್ಕೆಂದು ಪ್ರಯಾಗ್‌ರಾಜ್‌ಗೆ ಬಂದವರು, ಕಾಶಿ ಮತ್ತು ಅಯೋಧ್ಯೆಗೆ ಭೇಟಿಕೊಟ್ಟು, ಅಲ್ಲೂ ಒಟ್ಟಾಗಿ ಕೋಟಿ ಕೋಟಿ ಹಣ ಖರ್ಚು ಮಾಡಿದ್ದಾರಂತೆ! ಪ್ರಯಾಗ್‌ರಾಜ್‌ಗೆ ರಸ್ತೆಯ ಮೂಲಕ, ವಾಹನಗಳ ಮೂಲಕ ಸಾಗಿದ ಭಕ್ತರೂ, ದಾರಿಯುದ್ದಕ್ಕೂ ದೊರಕುವ ಮಧ್ಯಪ್ರದೇಶ, ಮಹಾರಾಷ್ಟ್ರ ಮೊದಲದ ರಾಜ್ಯಗಳಲ್ಲೂ ಸಾಕಷ್ಟು ಹಣವನ್ನು ಖರ್ಚುಮಾಡಿದ್ದಾರೆ. ವಸತಿಗೃಹ, ರೆಸ್ಟಾರೆಂಟ್, ಪೆಟ್ರೋಲ್ ಬಂಕ್ - ಈ ರೀತಿ ಕುಂಭಮೇಳದಿಂದಾಗಿ ದೇಶದಾದ್ಯಂತ ನಡೆದಿರುವ ವ್ಯಾಪಾರ, ವಹಿವಾಟಿನ ಅಂಕಿಸಂಕಿಗಳು, ಮೊತ್ತವು ಜನಸಾಮಾನ್ಯರ ಊಹೆಗೂ ನಿಲುಕದ್ದು.

ವಾಹನಗಳಲ್ಲಿ ಪ್ರಯಾಗ್‌ರಾಜ್‌ಗೆ ಸಾಗಿದವರು ಟೋಲ್‌ಗಳಲ್ಲಿ ಪಾವತಿಸಿರುವ ಶುಲ್ಕವು ಅದೆಷ್ಟೋ ಕೋಟಿ! (ಉದಾ: ಬೆಂಗಳೂರಿನಿಂದ ಪ್ರಯಾಗ್‌ರಾಜ್‌ಗೆ ಒಂದು ಕಾರಿನಲ್ಲಿ ಹೋಗಿ, ಬರಲು ಪಾವತಿಸಬೇಕಾದ ಟೋಲ್ ಸುಮಾರು ರು.5800/-) ಉತ್ತರಪ್ರದೇಶ ಮತ್ತು ಸುತ್ತಮುತ್ತಲಿನ ರಾಜ್ಯಗಳಿಗೆ ಕುಂಭಮೇಳದಿಂದಾಗಿ ಸಾವಿರಾರು ಕೋಟಿ ರುಪಾಯಿಗಳ ವ್ಯಾಪಾರ, ವ್ಯವಹಾರ ದೊರಕಿದೆ, ಅದರಿಂದಾಗಿ ಸಾಕಷ್ಟು ಜನಸಾಮಾನ್ಯರಿಗೆ ಮತ್ತು ಉದ್ದಿಮೆಗಳಿಗೆ ಕೆಲಸ ದೊರಕಿದೆ.

ಸರಕಾರಗಳಿಗೂ ಲಾಭವಿದೆ !

ಕುಂಭಮೇಳ ಮುಗಿಯಿತು; ಧಾರ್ಮಿಕ ಪ್ರವಾಸೋದ್ಯಮದಲ್ಲಿ ಮುಂದೇನು ಎಂಬ ಪ್ರಶ್ನೆಗೆ ಒಂದು ಉತ್ತರವಿದೆ. ಅದೇ, ‘ದ್ವಾದಶ ಜ್ಯೋತಿರ್ಲಿಂಗ ದರ್ಶನ’. ನಿಜ, ದೇಶದ ಹಲವು ರಾಜ್ಯಗಳಲ್ಲಿ ಉತ್ತಮ ರಸ್ತೆಗಳು ಲಭ್ಯವಿರುವ ಈ ಇಪ್ಪತ್ತೊಂದನೇ ಶತಮಾನದಲ್ಲಿ, ಹನ್ನೆರಡು ಜ್ಯೋತಿರ್ಲಿಂಗಗಳಿರುವ ದೇಗುಲಗಳಿಗೆ ರಸ್ತೆ ಪ್ರಯಾಣದ ಮೂಲಕ ತಲುಪಲು ಸಾಧ್ಯವಿದೆ! ಕಾರು ಅಥವಾ ಸ್ಲೀಪರ್ ಬಸ್‌ಗಳ ಪಯಣವು ಇಂದು ಸಾಮಾನ್ಯ ಎನಿಸಿದೆ.

ಹೆಚ್ಚಿನ ಕಡೆ ಗುಣ ಮಟ್ಟದ ರಸ್ತೆಗಳಿರುವುದರಿಂದಾಗಿ ಮತ್ತು ದಾರಿಯುದ್ದಕ್ಕೂ ಹಲವು ಕಡೆ ವಸತಿ ಗೃಹ ಮೊದಲಾದ ಮೂಲಭೂತ ಸೌಕರ್ಯಗಳು ಅಭಿವೃದ್ಧಿ ಗೊಂಡಿರುವುದರಿಂದ, ಇಂದು ರಸ್ತೆಯ ಪಯಣ ಹಿಂದಿನಷ್ಟು ಕಷ್ಟ ಎನಿಸುತ್ತಿಲ್ಲ. ಈ ನಿಟ್ಟಿನಲ್ಲಿ ಯೋಚಿಸಿದರೆ, ಮುಂದಿನ ದಿನಗಳಲ್ಲಿ ರಸ್ತೆ ಮೂಲಕ, ಒಂದೇ ಯಾತ್ರೆಯಲ್ಲಿ ‘ದ್ವಾದಶ ಜ್ಯೋತಿರ್ಲಿಂಗ ದರ್ಶನ’ ಅಭಿಯಾನವು ಚಾಲ್ತಿಗೆ, ಪ್ರಚಾರಕ್ಕೆ ಬರಬಹುದು; ಮತ್ತು ಇದರಿಂದ ಸರಕಾರಗಳಿಗೂ ಸಾಕಷ್ಟು ಲಾಭವಿರುವುದರಿಂದಾಗಿ, ಅದಕ್ಕೆ ಸರಕಾರ ಗಳಿಂದ ಪ್ರಚಾರವೂ ದೊರಕುವ ಸಾಧ್ಯತೆ ಇದೆ.

ಮಹಾರಾಷ್ಟ್ರ ಗುಜರಾತ್‌ನಲ್ಲಿ

ಹಾಗೆ ನೋಡಿದರೆ, ಕೆಲವು ಆಯ್ದ ರಾಜ್ಯಗಳಲ್ಲಿ ಜ್ಯೋತಿರ್ಲಿಂಗ ದರ್ಶನದ ಯಾತ್ರೆಯು ಈಗ ಚಾಲ್ತಿಯಲ್ಲಿದೆ. ಮುಖ್ಯವಾಗಿ ಮಹಾರಾಷ್ಟ್ರ ಮತ್ತು ಗುಜರಾತ್ ನಲ್ಲಿ ಜ್ಯೋತಿರ್ಲಿಂಗ ದರ್ಶನದ ಪ್ರವಾಸ ಹೆಚ್ಚು ಪ್ರಚಾರದಲ್ಲಿದೆ. ಅದಕ್ಕೆ ಮುಖ್ಯ ಕಾರಣವೆಂದರೆ, ಹೆಚ್ಚಿನ ಜ್ಯೋತಿರ್ಲಿಂಗಗಳು ಮಹಾರಾಷ್ಟ್ರ ಮತ್ತು ಗುಜರಾತ್ ರಾಜ್ಯಗಳಲ್ಲಿವೆ. ಆದರೆ, ದೂರದ ಕೇದಾರನಾಥ ಮತ್ತು ದಕ್ಷಿಣ ತುದಿಯ ರಾಮೇಶ್ವರಂ ಸೇರಿದಂತೆ, ಎಲ್ಲಾ ಹನ್ನೆರಡೂ ಜ್ಯೋತಿರ್ಲಿಂಗಗಳನ್ನೂ ಒಂದೇ ಯಾತ್ರೆಯಲ್ಲಿ ನೋಡುವ, ಸಂದರ್ಶಿಸುವ ‘ಧಾರ್ಮಿಕ ಪ್ರವಾಸೋದ್ಯಮ’ಕ್ಕೆ ಇನ್ನೂ ಅಷ್ಟೊಂದು ಪ್ರಚಾರ ದೊರಕಿಲ್ಲ.

ಬೇರೆ ಬೇರೆ ರಾಜ್ಯಗಳಲ್ಲಿ, ಭಾರತದಾದ್ಯಂತ ಹರಡಿಹೋಗಿರುವ ಈ ಜ್ಯೋತಿರ್ಲಿಂಗ ಗಳಿರುವ ದೇಗುಲಗಳನ್ನು ಸಂದರ್ಶಿಸಲು ಸುಮಾರು ಎರಡರಿಂದ ನಾಲ್ಕು ವಾರಗಳ ಕಾಲಾವಕಾಶ ಅಗತ್ಯ. ಕೇದಾರನಾಥದ ಜ್ಯೋತಿರ್ಲಿಂಗದ ದರ್ಶನ ಮಾಡಲು ಹವಾ ಮಾನದ ಕೃಪೆ ಬೇಕು ಮತ್ತು ವರ್ಷದ ಆರು ತಿಂಗಳು ಮಾತ್ರ ಅಲ್ಲಿಗೆ ಹೋಗಲು ಯಾತ್ರಿಕ ರಿಗೆ ಸರಕಾರ ಪರವಾನಗಿ ನೀಡುತ್ತದೆ. ಪ್ರಸಿದ್ಧ ಕ್ಷೇತ್ರವಾಗಿರುವ ಕಾಶಿಯನ್ನೂ ಒಳಗೊಂಡಂತೆ, ಎಲ್ಲಾ ಜ್ಯೋತಿರ್ಲಿಂಗಳನ್ನು ಒಂದೇ ಯಾತ್ರೆಯಲ್ಲಿ ದರ್ಶನ ಮಾಡ ಬಹುದು ಎಂಬ ವಿಚಾರವು, ಈಚಿನ ವರ್ಷಗಳಲ್ಲಿ ಅರಿವಾಗುತ್ತಿದೆ. (ಇದಕ್ಕೆ ಮುಖ್ಯ ಕಾರಣ, ಕಳೆದ ಒಂದೆರಡು ದಶಕಗಳಲ್ಲಿ ದೇಶದಾದ್ಯಂತ ಅಭಿವೃದ್ಧಿಗೊಂಡ ಗುಣಮಟ್ಟದ ಹೆದ್ದಾರಿಗಳು ಮತ್ತು ಎಕ್ಸ್‌ಪ್ರೆಸ್ ಹೈವೇಗಳು.) ಈಗ ಪ್ರಯಾಗ್‌ರಾಜ್‌ದಲ್ಲಿ ನಡೆದಿರುವ ಮಹಾ ಕುಂಭಮೇಳಕ್ಕೆ ಬಹುದೂರದಿಂದ ಬಂದು ಭಾಗವಹಿಸಿದ ಜನಸಾಗರದ ಉತ್ಸಾಹವು, ‘ದ್ವಾದಶ ಜ್ಯೋತಿರ್ಲಿಂಗ ದರ್ಶನ’ದಂತಹ ಯಾತ್ರೆಯ ಸಾಧ್ಯತೆಗೆ ಹೆಚ್ಚಿನ ಚೇತನ, ಪ್ರಚಾರ ನೀಡಿದೆ.

ಪ್ರಯಾಗ್‌ರಾಜ್‌ಗೆ ಕರ್ನಾಟಕದಂತಹ ದೂರದ ರಾಜ್ಯಗಳಿಂದ ಸುಮಾರು ೨,೦೦೦ ಕಿ.ಮೀ. ಸಂಚರಿಸಿ, ಬಸ್ಸುಗಳಲ್ಲಿ, ಕಾರುಗಳಲ್ಲಿ ಸಾವಿರಾರು ಜನರು ಪ್ರಯಾಣ ಮಾಡಿದರು. ಹಲವು ಕಡೆ ಗುಣಮಟ್ಟದ ರಸ್ತೆಯಿರುವುದರಿಂದಾಗಿ, ಇಂತಹ ಪ್ರವಾಸ, ಯಾತ್ರೆ ಸುಲಭಸಾಧ್ಯ ಎಂಬ ಅಭಿಪ್ರಾಯ ಈಗ ಸಾರ್ವತ್ರಿಕವಾಗಿ ರೂಪುಗೊಳ್ಳುತ್ತಿದೆ.

ಇದೇ ರೀತಿಯ ಧಾರ್ಮಿಕ ಪ್ರವಾಸವನ್ನು ಎಲ್ಲಾ ದ್ವಾದಶ ಜ್ಯೋತಿರ್ಲಿಂಗಗಳಿಗೆ ಯಾಕೆ ಮಾಡಬಾರದು ಎಂಬ ಯೋಚನೆಯು ಹಲವು ಉತ್ಸಾಹಿಗಳಲ್ಲಿ ಮೂಡಿದರೆ ಅಚ್ಚರಿ ಯಿಲ್ಲ. ಪ್ರಯಾಗ್‌ರಾಜ್‌ನ ಮಹಾಕುಂಭಮೇಳದಲ್ಲಿ ಭಾಗವಹಿಸಿದ ಕೋಟಿ ಕೋಟಿ ಜನ ರನ್ನು ಕಂಡು, ಸರಕಾರಗಳೂ ಮುಂದಿನ ದಿನಗಳಲ್ಲಿ ಧಾರ್ಮಿಕ ಪ್ರವಾಸೋದ್ಯಮಕ್ಕೆ ಇನ್ನಷ್ಟು ಪ್ರೋತ್ಸಾಹ, ಪ್ರಚಾರ ನೀಡುವುದರಲ್ಲಿ ಅನುಮಾನವೇ ಇಲ್ಲ. ಇದರಿಂದ ಸರಕಾರಗಳಿಗೂ ಲಾಭವಿದೆ; ಜನರು ಹೆಚ್ಚು ಹಣ ವೆಚ್ಚ ಮಾಡಿದಷ್ಟೂ ತೆರಿಗೆಯ ಸಂಗ್ರ ಹದ ಪ್ರಮಾಣವೂ ವೃದ್ಧಿಯಾಗುತ್ತದೆ; ಇತರ ವಿಧಾನಗಳಿಂದಲೂ ಸರಕಾರಕ್ಕೆ ವರಮಾನ ದೊರಕೀತು.

ಆದ್ದರಿಂದಲೇ, ಇಂತಹ ಪ್ರವಾಸಕ್ಕೆ ಹೆಚ್ಚಿನ ಪ್ರಚಾರವನ್ನು ಸರಕಾರಗಳೇ ನೀಡುತ್ತವೆ. ಕೇದಾರನಾಥ ದೇಗುಲ ತೆರೆಯುವ ಸಮಯಕ್ಕೆ (ಅಕ್ಷಯ ತೃತೀಯ) ಸರಿಯಾಗಿ, ಅಲ್ಲಿಗೆ ತಲುಪುವಂತೆ ‘ದ್ವಾದಶ ಜ್ಯೋತಿರ್ಲಿಂಗ ಯಾತ್ರೆ’ಯನ್ನು ಯಾವುದಾದರೂ ಟೂರಿಸ್ಟ್ ಸಂಸ್ಥೆಗಳು ಸದ್ಯದಲ್ಲೇ ಆರಂಭಿಸಬಹುದು! ಇದೊಂದು ಉತ್ತಮ ಪ್ರವಾಸಿ ಮತ್ತು ಆರ್ಥಿಕ ಚಟುವಟಿಕೆಯನ್ನು ಒಳಗೊಂಡ ಯಾತ್ರೆಯಾಗಿ ರೂಪುಗೊಳ್ಳಬಲ್ಲದು.

ನಮ್ಮ ದೇಶದಲ್ಲಿರುವ ‘ಧಾರ್ಮಿಕ ಪ್ರವಾಸೋದ್ಯಮ’ದ ಪೊಟೆನ್ಶಿಯಲ್ ಇನ್ನೂ ಪೂರ್ಣ ಪ್ರಮಾಣದಲ್ಲಿ ಪ್ರಕಟಗೊಂಡಿಲ್ಲ; ’ದ್ವಾದಶ ಜ್ಯೋತಿರ್ಲಿಂಗ ದರ್ಶನ’ದಂತಹ ಚಟುವಟಿಕೆ ಗಳಿಂದ, ಆ ವಲಯದಲ್ಲಿ ಹೊಸರೀತಿಯ ಒಂದು ಅಭಿಯಾನ ಆರಂಭವಾಗಬಹುದು. ಉತ್ತಮ ರಸ್ತೆ ಗಳು ಮತ್ತು ಒಟ್ಟಾರೆ ಸುರಕ್ಷತೆ ಇರುವ ಇಂದಿನ ದಿನಗಳೇ ಅದಕ್ಕೆ ಪ್ರಶಸ್ತ. ಕುಂಭಮೇಳದ ಯಶಸ್ಸನ್ನು, ಅದು ಸೃಷ್ಟಿಸಿದ ಉದ್ಯೋಗಾವಕಾಶಗಳನ್ನು ಗಮನಿಸಿದರೆ, ಒಂದೇ ಯಾತ್ರೆ ಯಲ್ಲಿ ‘ದ್ವಾದಶ ಜ್ಯೋತಿರ್ಲಿಂಗ ದರ್ಶನ’ವು ಸಾಧ್ಯ ಎಂದೇ ಅನಿಸುತ್ತದೆ.

ಜ್ಯೋತಿರ್ಲಿಂಗಗಳು

ನಮ್ಮ ದೇಶದಲ್ಲಿ ಹಲವು ಪುರಾಣಗಳಲ್ಲಿ ಜ್ಯೋತಿರ್ಲಿಂಗಗಳ ವಿಚಾರವಿದ್ದು, ಇವೆಲ್ಲವೂ ಬಹು ಪುರಾತನ ಕಾಲದಿಂದ ಪ್ರಸಿದ್ಧವಾಗಿವೆ. ಒಟ್ಟು 64 ಜ್ಯೋತಿರ್ಲಿಂಗಗಳು ಇವೆ ಎಂಬ ನಂಬಿಕೆ ಇದ್ದು, ಇವುಗಳಲ್ಲಿ ಪ್ರಮುಖವಾಗಿರುವುದು 12 ಜ್ಯೋತಿರ್ಲಿಂಗಗಳು. ದೇಶದಾ ದ್ಯಂತ ಹರಡಿರುವ ಜ್ಯೋತಿರ್ಲಿಂಗಗಳು, ಪುರಾತನ ಕಾಲದಲ್ಲಿ ನಮ್ಮ ದೇಶದಲ್ಲಿ ನಡೆದಿದ್ದ ಅಧ್ಯಾತ್ಮಿಕ ಮತ್ತು ಧಾರ್ಮಿಕ ಚಟುವಟಿಕೆಗಳಿಗೆ ಸಾಕ್ಷಿಯಾಗಿವೆ. ಇವುಗಳ ಸ್ಥಾಪನೆ, ಭೌಗೋಳಿಕ ಸ್ಥಾನ, ಅಕ್ಷಾಂಶ ರೇಖಾಂಶಗಳ ಸ್ಥಿತಿ ಮೊದಲಾದವುಗಳ ಕುರಿತು ಹಲವು ಕಥನಗಳು, ಲೆಕ್ಕಾಚಾರಗಳು ಮತ್ತು ನಂಬಿಕೆಗಳಿವೆ.

ಪ್ರತಿಕ್ರಿಯಿಸಿ: viramapost@gmail.com