Chief Minister Siddaramaiah: ಪ್ರಯೋಗಶೀಲತೆಯೇ ವಿಶ್ವವಾಣಿಯ ವೈಶಿಷ್ಟ್ಯ
ಎಲೆಕ್ಟ್ರಾನಿಕ್ ಮತ್ತು ಡಿಜಿಟಲ್ ಮಾಧ್ಯಮಗಳ ರಭಸದಲ್ಲಿ ವಿಶ್ವವಾಣಿ ಪತ್ರಿಕೆ ತನ್ನ ಚೈತನ್ಯ ವನ್ನು, ಓದುಗರನ್ನು ಕಾಪಾಡಿಕೊಂಡು ಬೆಳೆಸಿಕೊಂಡು ಹೋಗುತ್ತಿರುವುದು ಪತ್ರಿಕೆಯ ಸಂಪಾದಕರು ಮತ್ತು ಇಡೀ ತಂಡದ ಕ್ರಿಯಾಶೀಲತೆಗೆ ಸಾಕ್ಷಿ.
Source : Vishwavani Daily News Paper
ವೈಯುಕ್ತಿಕವಾಗಿ ನಮ್ಮಿಬ್ಬರ ರಾಜಕೀಯ ನಿಲುವುಗಳು, ಸೈದ್ಧಾಂತಿಕ ಬದ್ಧತೆಗಳು ಸಂಪೂರ್ಣ ಭಿನ್ನ ಎನ್ನುವುದು ನಮ್ಮಿಬ್ಬರಿಗೂ ಗೊತ್ತಿದೆ. ಈ ಬಗ್ಗೆ ಇಬ್ಬರಲ್ಲೂ ಸ್ಪಷ್ಟತೆಯಿದೆ.
ಹೊಸ ಹೊಸ ಪ್ರಯೋಗಶೀಲತೆಯನ್ನು ಮೈಗೂಡಿಸಿಕೊಂಡು ನಿರಂತರತೆ ಕಾಪಾಡಿ ಕೊಂಡಿರುವ ವಿಶ್ವವಾಣಿ ಪತ್ರಿಕೆ ಹತ್ತನೇ ವರ್ಷಕ್ಕೆ ಕಾಲಿಡುತ್ತಿರುವುದು ಬಹಳ ಸಂತೋಷದ ಸಂಗತಿ. ಒಂದು ಪತ್ರಿಕೆ ನಿರಂತರತೆ ಕಾಪಾಡಿಕೊಂಡು ದಶಕದ ಹೊಸ್ತಿಲಿಗೆ ತಲುಪುವುದು ಬಹಳ ದೊಡ್ಡ ಸಂಗತಿ. ಅದರಲ್ಲೂ ಎಲೆಕ್ಟ್ರಾನಿಕ್ ಮತ್ತು ಡಿಜಿಟಲ್ ಮಾಧ್ಯಮಗಳ ರಭಸದಲ್ಲಿ ವಿಶ್ವವಾಣಿ ಪತ್ರಿಕೆ ತನ್ನ ಚೈತನ್ಯವನ್ನು, ಓದುಗರನ್ನು ಕಾಪಾಡಿಕೊಂಡು ಬೆಳೆಸಿಕೊಂಡು ಹೋಗುತ್ತಿರುವುದು ಪತ್ರಿಕೆಯ ಸಂಪಾದಕರು ಮತ್ತು ಇಡೀ ತಂಡದ ಕ್ರಿಯಾಶೀಲತೆಗೆ ಸಾಕ್ಷಿ.
ಕೋವಿಡ್ ಸಂದರ್ಭದಲ್ಲಿ ಇಡೀ ಮುದ್ರಣ ಮಾಧ್ಯಮವೇ ವಿಪರೀತ ಸಂಕಷ್ಟವನ್ನು ಎದುರಿಸಿತ್ತು. ಮುದ್ರಣ ಮಾಧ್ಯಮದ ಯುಗವೇ ಕೊನೆ ಆಯಿತು ಎನ್ನುವ ಮಟ್ಟದ ಆತಂಕ ಸೃಷ್ಟಿಯಾಗಿತ್ತು. ಆದರೆ, ಮೊನ್ನೆ ಎಫ್ಕೆಸಿಸಿಐನವರು ಬಿಡುಗಡೆ ಮಾಡಿದ್ದ 2023ನೇ ಸಾಲಿನ ಮುದ್ರಣ ಮಾಧ್ಯಮದ ಸ್ಥಿತಿ ಗತಿ ಕುರಿತಾದ ವರದಿಯನ್ನು ಗಮನಿಸಿದೆ.
ಕೋವಿಡ್ ಸಂದರ್ಭದ ಸವಾಲುಗಳನ್ನೆ ಯಶಸ್ವಿಯಾಗಿ ಎದುರಿಸಿ ಮತ್ತೆ ಮೊದಲಿನ ಹಾಗೆ ಬೆಳವಣಿಗೆ ಕಂಡಿದೆ. ಮುದ್ರಣ ಮಾಧ್ಯಮಗಳ ಆದಾಯ ಶೇ.4ರಷ್ಟು ಹೆಚ್ಚಾಗಿದೆ. ಇದರೊಂದಿಗೆ ಪ್ರಸರಣದ ಆದಾಯವೂ ಶೇ.೩ರಷ್ಟು ಹೆಚ್ಚಾಗಿದೆ. ಇಂದಿನ ಡಿಜಿಟಲ್ ಯುಗದಲ್ಲಿಯೂ 150000 ಜಾಹೀರಾತುದಾರರು ಮತ್ತು 180000 ಬ್ರಾಂಡ್ ಗಳು ಮುದ್ರಣ ಮಾಧ್ಯಮಗಳ ಮೇಲೆ ಭರವಸೆ ವ್ಯಕ್ತಪಡಿಸಿವೆ.
ಇವೆಲ್ಲವೂ ಮುದ್ರಣ ಮಾಧ್ಯಮ ಇನ್ನೂ ಓದುಗರ ನಡುವೆ ವಿಶ್ವಾಸಾರ್ಹತೆ ಕಾಪಾಡಿ ಕೊಂಡಿರುವು ದರ ಸಂಕೇತ. ಈ ಸಾಲಿನಲ್ಲಿ ವಿಶ್ವವಾಣಿ ಕೂಡ ಒಂದಾಗಲಿ, ಹಲವು ದಶಕಗಳನ್ನು ಪೂರೈಸಲಿ ಎನ್ನುವುದು ನನ್ನ ಹಾರೈಕೆ. ಮೊನ್ನೆ ಪ್ರೆಸ್ ಕ್ಲಬ್ ಆಫ್ ಬೆಂಗಳೂರು ಆಯೋಜಿಸಿದ್ದ ಕಾರ್ಯಕ್ರಮ ದಲ್ಲಿ ಭಾಷಣ ಮಾಡುತ್ತಾ ನಾನು ಒಂದು ಮಾತು ಹೇಳಿದ್ದೆ.
‘ಇವತ್ತು ಊಹಾ ಪತ್ರಿಕೋದ್ಯಮ ಎನ್ನುವ ಶಾಪ ಇಡೀ ಮಾಧ್ಯಮ ವೃತ್ತಿಯನ್ನು ಆವರಿಸಿಕೊಂಡಿದೆ. ನಾವು ಕಲ್ಪಿಸಿಕೊಂಡೂ ಇರದ ಸಂಗತಿಗಳನ್ನು ನಮ್ಮ ಹೆಸರ ಸುದ್ದಿ ಮಾಡಿ ಪ್ರಸಾರ ಮಾಡುತ್ತಾರೆ. ಈ ಅಸಹ್ಯಗಳಿಗೆ ಏನು ಹೇಳಬೇಕೋ ಗೊತ್ತಾಗಲ್ಲ. ನಾನು ನನ್ನ ರಾಜಕೀಯ ಜೀವನದಲ್ಲಿ ಯಾವುದೇ ಮಾಧ್ಯಮದವರಿಗೂ ಏಕೆ ಹೀಗೆ ಬರೆದಿದ್ದೀರಿ,
ಏನು ಹೀಗೆ ತೋರಿಸಿದ್ದೀರಿ ಎಂದು ನೆಪಕ್ಕೂ ಕೇಳಿಲ್ಲ. ಕೇಳುವುದೂ ಇಲ್ಲ. ಆದರೆ ಮಾಧ್ಯಮ ಗಳು ಸತ್ಯ ಬರೆಯಲು ಯತ್ನಿಸಬೇಕು’ ಎಂದು ನನ್ನ ಭಾಷಣದಲ್ಲಿ ಹೇಳಿದ್ದೆ. ಈ ಮಾತಿಗೆ ಮಾಧ್ಯಮ ದವರಿಂದಲೇ ಅಪಾರ ಮೆಚ್ಚುಗೆ ವ್ಯಕ್ತವಾಯಿತು. ಅಂದರೆ ಊಹಾ ಪತ್ರಿಕೋದ್ಯಮದ ಶಾಪ ವೃತ್ತಿಪರ ಪತ್ರಕರ್ತರನ್ನೂ ಕಾಡುತ್ತಿದೆ ಎನ್ನುವಂತಾಯಿತು.
ನಡೆದ ಘಟನೆಗಳನ್ನು ಅಪಾರ್ಥ ಮತ್ತು ಅಪವ್ಯಾಖ್ಯಾನ ಮಾಡುವುದು ಇಷ್ಟು ದಿನ ನಡೆಯು ತ್ತಿತ್ತು. ಈಗ ಮಾಧ್ಯಮಗಳು ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಗಿ ನಡೆಯದ ಘಟನೆಗಳನ್ನೂ ನಡೆದಿವೆ ಎಂದು ಬಿಂಬಿಸಿ ಅಪಾರ್ಥ ಸೃಷ್ಟಿಸುತ್ತಿವೆ. ಆದರೆ, ವಿಶ್ವವಾಣಿ ಪತ್ರಿಕೆ ಇಂತಹ ಅನಾಹುತಕಾರಿ ಪತ್ರಿಕೋದ್ಯಮದ ಭಾಗ ಆಗಿಲ್ಲ ಎನ್ನುವುದು ಸಮಾಧಾನದ ಮತ್ತು ಸಂತೋಷದ ಸಂಗತಿ.
ಹೀಗಾಗಿಯೇ ಅತ್ಯಂತ ಕಡಿಮೆ ಅವಧಿಯಲ್ಲಿ ತನ್ನ ಕ್ರಿಯಾಶೀಲತೆ ಮತ್ತು ಪ್ರಯೋಗಶೀಲತೆಯಿಂದ ಓದುಗರ ನಡುವೆ ವಿಶ್ವವಾಣಿ ಪತ್ರಿಕೆ ತನ್ನ ಸ್ಥಾನ ರೂಪಿಸಿಕೊಂಡು, ಭದ್ರ ಪಡಿಸಿಕೊಂಡಿದೆ. ವಿಶ್ವವಾಣಿ ಸಂಪಾದಕ ವಿಶ್ವೇಶ್ವರ ಭಟ್ ಮತ್ತು ನನ್ನ ಒಡನಾಟ ವಿಶ್ವವಾಣಿ ಪತ್ರಿಕೆಗಿಂತ ಹಳೆಯದ್ದು. ಆದರೆ ಆಗ್ಗಾಗೆ ನಮ್ಮ ಭೇಟಿ ಆಗುತ್ತಿರುತ್ತದೆ. ನಮ್ಮ ನಡುವಿನ ಗೆಳೆತನ ಅವರ ಪತ್ರಿಕಾ ಸ್ವಾತಂತ್ರ್ಯಕ್ಕೆ ಯಾವತ್ತೂ ಅಡ್ಡಿಪಡಿಸಿಲ್ಲ.
ಹಲವು ಬಾರಿ ನನ್ನ ಬಗ್ಗೆ ಟೀಕಿಸಿ ಬರೆದಿರುವುದನ್ನು ನಾನು ಅವರಿವರ ಬಾಯಲ್ಲಿ ಕೇಳಿ ತಿಳಿದಿದ್ದೇನೆ. ಈ ಟೀಕೆಗಳು ನಮ್ಮ ನಡುವಿನ ಒಡನಾಟಕ್ಕೆ ಯಾವತ್ತೂ ಧಕ್ಕೆಯಾಗಿಲ್ಲ. ವೈಯಕ್ತಿಕ ವಾಗಿ ನಮ್ಮಿಬ್ಬರ ರಾಜಕೀಯ ನಿಲುವುಗಳು, ಸೈದ್ದಾಂತಿಕ ಬದ್ಧತೆಗಳು ಸಂಪೂರ್ಣ ಭಿನ್ನ ಎನ್ನುವುದು ನಮ್ಮಿಬ್ಬರಿಗೂ ಗೊತ್ತಿದೆ. ಈ ಬಗ್ಗೆ ಇಬ್ಬರಲ್ಲೂ ಸ್ಪಷ್ಟತೆ ಯಿದೆ. ರಾಜಕಾರಣಿಗಳ ಮತ್ತು ರಾಜಕಾರಣದ ಜತೆ 30 ವರ್ಷಗಳಿಂದ ಸನಿಹ ಹೊಂದಿದ್ದರೂ ಸಂಪಾದಕ ವಿಶ್ವೇಶ್ವರ ಭಟ್ಟರು ರಾಜಕಾರಣದ ಅಂಗಳಕ್ಕೆ ಕಾಲಿಡದೆ ವೃತ್ತಿಪರ ಅಂತರವನ್ನು ಉಳಿಸಿಕೊಂಡಿದ್ದಾರೆ.
‘ವಿಶ್ವವಾಣಿ’ ಪತ್ರಿಕೆ ಆರಂಭವಾದ ನಂತರ ನಿರಂತರ ನಿತ್ಯ ಸವಾಲುಗಳ ನಡುವೆಯೂ ತನ್ನ ವೃತ್ತಿಪರತೆಯನ್ನು ಕಳೆದುಕೊಳ್ಳದೆ ಮುನ್ನುಗ್ಗುತ್ತಿದೆ. ಪತ್ರಿಕೆ ತನ್ನ ನಿರಂತರತೆಯನ್ನು ಕಾಪಾಡಿ ಕೊಂಡಿದೆ. ಇವತ್ತಿನ ಅಪಾರ ಸವಾಲುಗಳ ನಡುವೆಯೇ, ತನ್ನ ಮಿತಿ ಮತ್ತು ವ್ಯಾಪ್ತಿಯ ‘ವಿಶ್ವವಾಣಿ’ ನಾನಾ ರೀತಿಯ ಪ್ರಯೋಗಗಳನ್ನು ಮಾಡುತ್ತಿದೆ. ಇತ್ತೀಚೆಗೆ ನಮ್ಮ ಸರಕಾರದ ಸಚಿವರುಗಳ ಸರಣಿ ಸಂದರ್ಶನವನ್ನು ‘ವಿಶ್ವವಾಣಿ’ ಮಾಡುತ್ತಿದೆ. ಇದನ್ನು ಒಂದೆರಡು ಬಾರಿ ಗಮನಿಸಿದ್ದೆ.
ಇಂಥಾ ಕ್ರಿಯಾಶೀಲತೆಯೇ ‘ವಿಶ್ವವಾಣಿ’ಯ ಜೀವಾಳ ಎಂದು ನನಗೆ ಅನ್ನಿಸುತ್ತದೆ. ದೇಶದ ಸಂವಿಧಾನ ಮತ್ತು ಪ್ರಜಾಪ್ರಭುತ್ವಕ್ಕೆ ಅಪಾಯ ಬಂದೊದಗಿದೆ ಎಂದು ನಾನು ಪದೇ ಪದೆ ನನ್ನ ಭಾಷಣಗಳಲ್ಲಿ ಸಾರ್ವಜನಿಕವಾಗಿ ಹೇಳಿದ್ದೇನೆ. ಈ ಹೊತ್ತಿನಲ್ಲಿ ಪತ್ರಿಕೆಗಳ ಜವಾಬ್ದಾರಿ ದೊಡ್ಡದು.
ಮತ್ತೆ ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ‘ವಿಶ್ವವಾಣಿ’ ಹೆಚ್ಚೆಚ್ಚು ಕೆಲಸ ಮಾಡಲಿ, ಈ ಜವಾಬ್ದಾರಿಯನ್ನು ಸಂಪಾದಕರಾದ ವಿಶ್ವೇಶ್ವರ ಭಟ್ಟರು ನಿರ್ವಹಿಸಬೇಕು ಎನ್ನುವುದು ನನ್ನ ನಿರೀಕ್ಷೆ. ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿ ಹಿಡಿಯುವ ಮೂಲಕ ‘ವಿಶ್ವವಾಣಿ’ ತನ್ನದೇ ಆದ ವ್ಯಕ್ತಿತ್ವವನ್ನು ರೂಪುಗೊಳಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ. ಇವತ್ತಿನ ಈ ಪೈಪೋಟಿಯ ಕಾಲಘಟ್ಟದಲ್ಲಿ ವಿಶ್ವೇಶ್ವರ ಭಟ್ ಅವರಲ್ಲದೆ ಬೇರೆ ಯಾರಾದರೂ ಪತ್ರಿಕೆ ಆರಂಭಿಸಿದ್ದರೆ ಇಷ್ಟು ಯಶಸ್ವಿಯಾಗಿ ಪತ್ರಿಕೆಯನ್ನು ಕಟ್ಟಿ ನಿಲ್ಲಿಸುವುದಕ್ಕೆ ಸಾಧ್ಯವಿತ್ತೇ ಎಂದೂ ನನಗೆ ಹಲವು ಸಾರಿ ಅನ್ನಿಸಿದ್ದಿದೆ. ಒಟ್ಟಿನಲ್ಲಿ ದಶಕ ಪೂರೈಸಲು ತುದಿಗಾಲಲ್ಲಿ ನಿಂತಿರುವ ವಿಶ್ವವಾಣಿಗೆ ಮತ್ತು ಪತ್ರಿಕಾ ತಂಡಕ್ಕೆ ಮತ್ತೊಮ್ಮೆ ಶುಭ ಹಾರೈಸುತ್ತೇನೆ.
ಇದನ್ನೂ ಓದಿ: ನಮಗೆ ಬೇಕಿದೆ ಇಂದು ಸ್ಮಾರ್ಟ್ ಹಳ್ಳಿಗಳು