ದುಬೈ: ಸನ್ ರೈಸರ್ಸ್ ಹೈದರಾಬಾದ್ ತಂಡ ಗುರುವಾರ ನಡೆದ ಐಪಿಎಲ್ ಟೂರ್ನಿಯ 22ನೇ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ 69 ರನ್ ಗಳ ಅಂತರದಿಂದ ಸುಲಭ ಜಯ ದಾಖಲಿಸಿದೆ.
ಟಾಸ್ ಜಯಿಸಿದ ಹೈದರಾಬಾದ್ ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು. ನಿಗದಿತ 20 ಓವರ್ ಗಳಲ್ಲಿ 6 ವಿಕೆಟ್ ಗಳ ನಷ್ಟಕ್ಕೆ 201 ರನ್ ಕಲೆ ಹಾಕಿತು. ಗೆಲ್ಲಲು ಕಠಿಣ ಸವಾಲು ಬೆನ್ನಟ್ಟಿದ ಪಂಜಾಬ್ ಯಾವ ಹಂತದಲ್ಲೂ ದಿಟ್ಟ ಹೋರಾಟ ನೀಡದೇ 16.5 ಓವರ್ ಗಳಲ್ಲಿ 132 ರನ್ ಗಳಿಗೆ ಆಲೌಟಾಗಿದೆ. ಪಂಜಾಬ್ ಪರವಾಗಿ ಪೂರನ್ 77 ರನ್ ಗಳಿಸಿ ಅಗ್ರ ಸ್ಕೋರರ್ ಎನಿಸಿಕೊಂಡರು. ನಾಯಕ ಕೆ.ಎಲ್. ರಾಹುಲ್ ಕೇವಲ 11 ರನ್ ಗಳಿಸಿದರು.
ಪಂಜಾಬ್ ತಂಡ ರಶೀದ್ ಖಾನ್ ಸ್ಪಿನ್ ಮೋಡಿಗೆ ತತ್ತರಿಸಿದರು. ರಶೀದ್ 12 ರನ್ ಗೆ 3 ವಿಕೆಟ್ ಗಳನ್ನು ಪಡೆದಿದ್ದರೆ. ಖಲೀಲ್ ಅಹ್ಮದ್ (2-24) ಹಾಗೂ ನಟರಾಜನ್ (2-24) ತಲಾ ಎರಡು ವಿಕೆಟ್ ಗಳನ್ನು ಪಡೆದರು.
ಇದಕ್ಕೂಮೊದಲು ಬ್ಯಾಟಿಂಗ್ ಮಾಡಿದ ಹೈದರಾಬಾದ್ ಪರ ಇನಿಂಗ್ಸ್ ಆರಂಭಿಸಿದ ಜಾನಿ ಬೈರ್ ಸ್ಟೋವ್ ಹಾಗೂ ಡೇವಿಡ್ ವಾರ್ನರ್ ಮೊದಲ ವಿಕೆಟ್ ಜೊತೆಯಾಟದಲ್ಲಿ 15.1 ಓವರ್ ಗಳಲ್ಲಿ 160 ರನ್ ಸೇರಿಸಿ ಭದ್ರ ಬುನಾದಿ ಹಾಕಿಕೊಟ್ಟರು,
ಇಂಗ್ಲೆಂಡ್ ಬ್ಯಾಟ್ಸ್ ಮನ್ ಬೈರ್ ಸ್ಟೋವ್ 55 ಎಸೆತಗಳಲ್ಲಿ 7 ಬೌಂಡರಿ, 6 ಸಿಕ್ಸರ್ ಸಿಡಿಸಿದರು. ಡೇವಿಡ್ ವಾರ್ನರ್ 40 ಎಸೆತ ಗಳಲ್ಲಿ 5 ಬೌಂಡರಿ ಹಾಗೂ 1 ಸಿಕ್ಸರ್ ಸಿಡಿಸಿದರು. ಕೇನ್ ವಿಲಿಯಮ್ಸನ್ ಔಟಾಗದೆ 20 ರನ್ ಗಳಿಸಿದರು.
ಜಾನಿ ಬೇರ್‌ಸ್ಟೋ ಪಂದ್ಯಶ್ರೇಷ್ಠ ಪ್ರಶಸ್ತಿ ಗೌರವಕ್ಕೆ ಪಾತ್ರರಾದರು.
ಸನ್‌ರೈಸರ್ಸ್ ಹೈದರಾಬಾದ್: 6 ವಿಕೆಟ್‌ಗೆ 201
(ಡೇವಿಡ್ ವಾರ್ನರ್ 52, ಬೇರ್‌ಸ್ಟೋ 97, ವಿಲಿಯಮ್ಸನ್ 20*, ರವಿ ಬಿಷ್ಣೋಯಿ 29ಕ್ಕೆ 3, ಅರ್ಷದೀಪ್ ಸಿಂಗ್ 33ಕ್ಕೆ 2).
ಕಿಂಗ್ಸ್ ಇಲೆವೆನ್ ಪಂಜಾಬ್: 16.5 ಓವರ್‌ಗಳಲ್ಲಿ 132
(ರಾಹುಲ್ 11, ಮಯಾಂಕ್ ಅಗರ್ವಾಲ್ 9, ಪೂರನ್ 77, ಖಲೀಲ್ ಅಹಮದ್ 24ಕ್ಕೆ 2, ಟಿ.ನಟರಾಜನ್ 24ಕ್ಕೆ 2, ರಶೀದ್ ಖಾನ್ 12ಕ್ಕೆ 3).