ಸಂಬಂಧಗಳ ಸಂಘರ್ಷಕ್ಕೆ ಕಾರಣವೇನು ?
ಸಂಬಂಧಗಳ ಸಂಘರ್ಷಕ್ಕೆ ಕಾರಣವೇನು ?


ಅಭಿವ್ಯಕ್ತಿ
ಶಶಿಕುಮಾರ್ ಉಪಾಧ್ಯಾಯ
ನಾವು ಯಾವಾಗ ಉದ್ದೇಶ ಇರಿಸಿಕೊಂಡು ಒಂದು ಸಂಬಂಧ ಬೆಳೆಸಿಕೊಳ್ಳುತ್ತೇವೋ ಆ ಉದ್ದೇಶಗಳು ಈಡೇರದಿದ್ದಾಗ ಸಂಬಂಧ ಗಳಲ್ಲಿ ಘರ್ಷಣೆ ಆರಂಭವಾಗುತ್ತದೆ. ಇದು ಮದುವೆ, ಗೆಳೆತನ, ವ್ಯಾಪಾರ ಎಲ್ಲಾ ವಿಷಯಗಳಿಗೂ ಅನ್ವಯವಾಗುತ್ತದೆ.
ಹೆಂಡತಿಯ ದುಡಿಮೆಯ ಮೇಲಿನ ಆಸೆಯಿಂದ ಮದುವೆಯಾದ ಪುರುಷ ಯಾವಾಗ ಹೆಂಡತಿ ತನ್ನ ದುಡಿಮೆಯ ಮೇಲಿನ ಸ್ವಾಮ್ಯವನ್ನು ಟ್ಟುಕೊಡುವುದಿಲ್ಲವೋ ಆಗ ಬೇರೆ ಬೇರೆ ಕಾರಣಗಳನ್ನು ಹುಡುಕಿಕೊಂಡು ಅವಳೊಂದಿಗೆ ಘರ್ಷಣೆಗೆ ಇಳಿಯು ತ್ತಾನೆ. ಹಾಗೆಯೇ ಗಂಡನ ದುಡಿಮೆಯ ಮೇಲಿನ ಆಸೆಯಿಂದ ಮದುವೆಯಾದ ಸೀ ಅದು ತನಗೆ ದಕ್ಕದಿದ್ದಾಗ ಘರ್ಷಣೆ ಆರಂಭಿಸುತ್ತಾಳೆ.
ದುಡಿಯುವ ಹೆಣ್ಣು ಅವಳ ಬ್ಯಾಂಕ್ ಪಾಸ್ ಬುಕ್, ಎಟಿಎಂ ಕಾರ್ಡನ್ನು ಗಂಡನಿಗೆ ಸಮರ್ಪಿಸಿ ನನ್ನ ಡುಡಿಮೆ ನಿಮ್ಮ ದುಡಿಮೆ ಬೇರೆ ಬೇರೆಯೇನ್ರಿ...? ನಾನೂ ದುಡಿಯೋದು ನಮ್ಮ ಸಂಸಾರಕ್ಕೇ ತಾನೆ ಎಂದು ಸಮರ್ಪಣಾ ಭಾವ ವ್ಯಕ್ತಪಡಿಸುತ್ತಾಳೋ ಆಗ ಗಂಡನಿಗೆ ಘರ್ಷಣೆಗೆ ಸಾವಿರ ಕಾರಣಗಳಿದ್ದರೂ ಹೆಂಡತಿಯ ಎಟಿಎಂ ಕಾರ್ಡ್ ಅದಕ್ಕೆ ಅವಕಾಶ ಕೊಡುವುದಿಲ್ಲ.
ಹಾಗೆಯೇ ದುಡಿಯುವ ಗಂಡಸು ತನ್ನ ದುಡಿಮೆಯಿಂದ ಖರೀದಿಸಿದ ಸೈಟು, ಮನೆಯನ್ನು ಹೆಂಡತಿಯ ಹೆಸರಿಗೆ ರಿಜಿಸ್ಟರ್ ಮಾಡಿಸಿ ದರೆ ಆ ಮನೆಯಲ್ಲಿ ಹೆಂಡತಿ ಶಾಂತಮೂರ್ತಿ. ಮಾನವನ ಈ ಸಂತೃಪ್ತಿಯ ಹಂಬಲ ಕೇವಲ ಹಣದ್ದಲ್ಲ, ಕೇವಲ ಅಂತಸ್ತಿನದ್ದಲ್ಲ. ಅದೊಂದು ಮನೋಭಾವ. ಮನುಷ್ಯ ತನ್ನ ಮಾನಸಿಕ ಸಂತೃಪ್ತಿಗಾಗಿಯೂ ಹಂಬಲಿಸುತ್ತಾ ಇರುತ್ತಾನೆ. ಈ ಮದುವೆ - ದಾಂಪತ್ಯ ಅನ್ನೋದು ಒಂದು ರೀತಿಯ ಒಪ್ಪಂದ, ಇಲ್ಲಿ ಇಬ್ಬರೂ ನಿರೀಕ್ಷೆಗಳನ್ನು ಇರಿಸಿಕೊಂಡೇ ಈ ಒಪ್ಪಂದಕ್ಕೆ ತಲೆಬಾಗಿರುತ್ತಾರೆ.
ಪುರುಷ ತಾನು ಮದುವೆಯಾದವಳು ತನ್ನ ಮನೆ, ತಂದೆ ತಾಯಿ, ಬಂಧುಗಳು, ಮಕ್ಕಳು... ಹೀಗೆ ಎಲ್ಲವನ್ನೂ ಅವಳು ಜವಾಬ್ದಾರಿ ಯಿಂದ, ಪ್ರೀತಿಯಿಂದ ನೋಡಿಕೊಳ್ಳ ಬೇಕು ಅನ್ನುವ ನಿರೀಕ್ಷೆ ಇಟ್ಟುಕೊಂಡಿರುತ್ತಾನೆ. ಅವಳು ಈ ಎಲ್ಲಾ ನಿರೀಕ್ಷೆ ಗಳನ್ನು ಪೂರೈಸಿದರೆ ಸಂಸಾರ ಸರಾಗ, ಇಲ್ಲದಿದ್ದರೆ ಸಂಘರ್ಷ. ಸೀಯೂ ಹಾಗೆಯೇ, ತನ್ನ ಪತಿ ತನ್ನನ್ನು ಅಗಾಧವಾಗಿ ಪ್ರೀತಿಸ ಬೇಕು, ತನ್ನನ್ನು ಸದಾ ಜತನದಿಂದ ಆರೈಕೆ ಮಾಡಬೇಕು, ತನ್ನ ಮನೆಯವರನ್ನೂ ಗೌರವದಿಂದ ಕಾಣಬೇಕು... ಹೀಗೆ ಅವಳದ್ದೂ ಹಲವು ನಿರೀಕ್ಷೆಗಳು. ಯಾವಾಗ ಅವನು ಇವೆಲ್ಲವನ್ನೂ ಈಡೇರಿಸುವಲ್ಲಿ ವಿಫಲನಾಗುತ್ತಾನೋ ಆಗ ಮತ್ತೆ ಸಂಘರ್ಷ.
ಕೆಲವೊಮ್ಮೆ ಕೆಲವೊಂದು ದಂಪತಿಗಳ ಸಂಘರ್ಷದ ಕಾರಣಗಳನ್ನು ಹುಡುಕಿ ಹೆಕ್ಕಿ ನೋಡಿದರೆ ಹೊರಗಿನವರಿಗೆ ಅವೂ ತೀರಾ ಕ್ಷುಲ್ಲಕ ಅನಿಸುತ್ತವೆ. ಗಂಡನಿಂದ ಹೊಗಳಿಸಿಕೊಳ್ಳಬೇಕು ಎನ್ನುವ ಉದ್ದೇಶ ಇರಿಸಿಕೊಂಡ ಹೆಂಡತಿ ಏನೇನೋ ಪ್ರಯತ್ನ
ಮಾಡಿ ಚೆಂದದ ಅಡುಗೆ ಮಾಡಿರುತ್ತಾಳೆ. ತಿಂದ ನಂತರ ಗಂಡ ಮಾಡುವ ಪ್ರಶಂಸೆಗಾಗಿ ಕಾಯುತ್ತಿರುತ್ತಾಳೆ. ಗಂಡನೂ ಅಷ್ಟೇ, ಹೆಂಡತಿಯಾದವಳೂ ನಾನು ಕೇಳದೇ ಇದ್ದರೂ ಅವಳೇ ಅರ್ಥ ಮಾಡಿಕೊಂಡು ನಾನು ಕಾಫಿ ಕುಡಿಯಬೇಕು ಅನಿಸಿದಾಗ ಮಾಡಿಕೊಡಬೇಕು. ತಾನು ಮನೆಯಿಂದ ಹೊರಡುವಾಗ ತನಗೆ ಬೇಕಾದ ಸಕಲ ಸೌಲಭ್ಯಗಳನ್ನೂ ಒದಗಿಸಿಕೊಡಬೇಕು.
ತಾನು ಬೈಕ್ ಹತ್ತಿ ಗುಡುಗುಡು ಅನ್ನಿಸುವಷ್ಟರಲ್ಲಿ ಅವಳು ಬಾಗಿಲಲ್ಲಿ ಮುಖದ ಮೇಲೆ ಮುಗುಳುನಗೆಯ ಬಣ್ಣ ಲೇಪಿಸಿಕೊಂಡು, ಕಣ್ಣುಗಳಲ್ಲಿ ಸಂಜೆ ಬೇಗ ಬನ್ನಿ ಎನ್ನುವ ಸಂದೇಶ ತುಂಬಿಕೊಂಡು ನಿಂತುಕೊಳ್ಳಬೇಕು. ಇದರಲ್ಲಿ ವ್ಯತ್ಯಯವಾದರೆ ಗಂಡನ ಮನದಲ್ಲಿ ಸಂಘರ್ಷದ ಅಲೆಗಳು.ಬಹುತೇಕ ದಂಪತಿಗಳು ತಮ್ಮ ಉದ್ದೇಶ ಈಡೇರಿಕೆಗಾಗಿ ಸಂಘರ್ಷದ ಹಾದಿ ಹಿಡಿದರೆ ಕೆಲವರು ಮಾತ್ರ ಸುಲಭದ ಹಾದಿ ಎಂದು ಭಾವಿಸಿ ನಟಿಸುವ ಹಾದಿ ಹಿಡಿಯುತ್ತಾರೆ.
ಹೀಗೆ ಪ್ರೀತಿಯನ್ನು ನಟಿಸುವವರಿಗೆ ಸಂಘರ್ಷದ ಹಾದಿ ಕಠಿಣ ಎನಿಸಿದರೆ, ಸಂಘರ್ಷ ಆಯ್ದುಕೊಂಡವರಿಗೆ ನಟನೆ ನಿಕೃಷ್ಟ ವೆನಿಸುತ್ತದೆ. ಯೋಚಿಸಿ ನೋಡಿದರೆ ನಟಿಸುವುದೂ ಒಂದು ರೀತಿಯ ಸಂಘರ್ಷವೇ. ಸಂಘರ್ಷವಿಲ್ಲದ ಬದುಕು ಯಾರಿಗೂ ಸಾಧ್ಯವಿಲ್ಲ. ಕೆಲವರ ಜೀವನದಲ್ಲಿ ಹೆಚ್ಚು ಸಂಘರ್ಷವಿರಬಹುದು, ಕೆಲವರ ಜೀವನದಲ್ಲಿ ಕಡಿಮೆ ಸಂಘರ್ಷವಿರಬಹುದು. ಹೆಚ್ಚು ಅಥವಾ ಕಡಿಮೆ ಸಂಘರ್ಷ ಅವರವರ ಆಯ್ಕೆ.