Saturday, 23rd November 2024

ಈ ಪರಿಸ್ಥಿತಿಗೆ ಹೊಣೆ ಯಾರು ?

ಅಶ್ವತ್ಥಕಟ್ಟೆ

ranjith.hoskere@gmail.com

ಚೆನ್ನೈ, ಹೈದರಾಬಾದ್‌ನಲ್ಲಿ ಬೆಂಗಳೂರಿನಲ್ಲಿರುವಷ್ಟು ‘ಖಾಸಗಿ ಕಂಪನಿ ಸ್ನೇಹಿ’ ವಾತಾವರಣವಿಲ್ಲ. ಅದರಲ್ಲಿ ವೈಟ್ ಕಾಲರ್ ಜಾಬ್‌ಗಳಿಗೆ ಅಗತ್ಯ ನೆರವಿಲ್ಲ. ಇನ್ನು ಮುಂಬೈನಲ್ಲಿ ಭಾರಿ ಪ್ರಮಾಣದಲ್ಲಿ ಕೈಗಾರಿಕೆಗಳು ಇರುವ ಕಾರಣಕ್ಕೆ, ಕಂಪನಿಗಳು ಪುನಃ ಅಲ್ಲಿಗೆ ಹೋಗಲು ಸಾಧ್ಯವಿಲ್ಲ.

ರಾಜ್ಯದಲ್ಲಿ ಕಳೆದೊಂದು ತಿಂಗಳಿನಿಂದ ಮಳೆರಾಯನ ಆಟ ನಿಂತಿಲ್ಲ. ಹಲವು ಭಾಗದಲ್ಲಿ ಭಾರಿ ಪ್ರಮಾಣದ ಹಾನಿ
ಯಾಗಿರುವ ವರದಿಯಾಗಿದೆ. ಆದರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿದ್ದು ಮಾತ್ರ, ರಾಜಧಾನಿ ಬೆಂಗಳೂರಿನ ಮಳೆ. ಅದರಲ್ಲಿಯೂ ಕೈಗಾರಿಕೋದ್ಯಮಿಗಳ ಸಂಘಟನೆಗಳಿಂದ ಹೊರಬಿದ್ದ ಒಂದು ಪತ್ರ ಭಾರಿ ಸಂಚಲನವನ್ನೇ ಸೃಷ್ಟಿಸಿತ್ತು.

ದು, ಬೆಂಗಳೂರಿನ ಔಟರ್ ರಿಂಗ್ ರೋಡ್ ಭಾಗದಲ್ಲಿರುವ ಹಲವು ಖಾಸಗಿ ಕಂಪನಿಗಳು ಮಾಡಿಕೊಂಡಿರುವ ಸಂಘಟನೆಯ ವತಿಯಿಂದ, ‘ಬೆಂಗಳೂರ ಮಳೆಯ ಅವಾಂತರವನ್ನು ಸರಿಪಡಿಸಿ. ಇಲ್ಲವೇ, ನಾವೆಲ್ಲ ಬೆಂಗಳೂರು ಬಿಟ್ಟು ಹೋಗಬೇಕಾ ಗುತ್ತದೆ’ ಎನ್ನುವ ಮನವಿ ಪೂರ್ವಕ ಬೆದರಿಕೆ ಪತ್ರ. ಈ ಪತ್ರದಲ್ಲಿ ಈ ಪ್ರವಾಹ ಪರಿಸ್ಥಿತಿಯಿಂದ ಹೇಗೆ ರಕ್ಷಣೆ ಮಾಡಿಕೊಳ್ಳ ಬಹುದು ? ತಮ್ಮಿಂದ ನೀಡಬಹುದಾದ ಸಲಹೆಗಳೇನು ಎನ್ನುವ ಬಗ್ಗೆ ವಿವರವಾಗಿ ಹೇಳಿದ್ದರೂ, ಪತ್ರದ ಕೊನೆಯಲ್ಲಿರುವ ‘ಬೆಂಗಳೂರು ಬಿಟ್ಟು ಹೋಗಬೇಕಾಗುತ್ತದೆ’ ಎನ್ನುವ ಮಾತು ಭಾರಿ ಸಂಚಲನವನ್ನೇ ಸೃಷ್ಟಿಸಿದೆ.

ಖಾಸಗಿ ಕಂಪನಿಗಳ ಈ ಬೆದರಿಕೆ ಸ್ವರೂಪದ ಪತ್ರ ಬರೆಯುತ್ತಿದ್ದಂತೆ ಪರ-ವಿರೋಧ ಚರ್ಚೆಗಳು ಆರಂಭವಾಗುವುದಷ್ಟೇ
ಅಲ್ಲದೇ, ಸ್ವತಃ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ‘ಐಟಿ ಕಂಪನಿಗಳೊಂದಿಗೆ ಚರ್ಚಿಸುತ್ತೇವೆ’ ಎನ್ನುವ
ಮಾತನ್ನು ಹೇಳಿದ್ದಾರೆ. ಆದರೆ ಸಿಲಿಕಾನ್ ಸಿಟಿಯಾಗಿ ಬೆಂಗಳೂರಿಗೆ ಆಗುತ್ತಿರುವ ಅನಾಹುತಕ್ಕೆ ಮೊದಲು, ಬೆಂಗಳೂರು ಕೆರೆಗಳ ನಾಡಾಗಿತ್ತು.

ಉದ್ಯಾನ ನಗರಿಯಾಗಿತ್ತು. ಈಗಿನ ಮಳೆಗಿಂತ ಹೆಚ್ಚು ಪ್ರಮಾಣದ ಮಳೆ ಕಳೆದ 25 ವರ್ಷದ ಹಿಂದೆ ಸುರಿಯುತ್ತಿತ್ತು. ಆದರೆ ಇಂದಿನ ರೀತಿ ರಸ್ತೆಗಳಿಗೆ, ಮನೆಗಳಿಗೆ ಅಂದು ನೀರು ನುಗ್ಗತ್ತಿರಲಿಲ್ಲ. ಆದರಿಂದು ಸ್ವಲ್ಪ ಪ್ರಮಾಣದಲ್ಲಿ ಮಳೆಯಾದರೂ, ಭಾರಿ ಪ್ರಮಾಣದ ನೀರು ನುಗ್ಗುವುದಕ್ಕೆ ಕಾರಣವೇನು ಎನ್ನುವುದನ್ನು ಮೊದಲು ಅರಿತರೇ, ಇಂದಿನ ಸಮಸ್ಯೆಗೆ ಪರಿಹಾರ ಸಿಗಲು ಸಾಧ್ಯ. ಇತಿಹಾಸಕಾರರ ಪ್ರಕಾರ ಬೆಂಗಳೂರಿನ ಸುತ್ತಮುತ್ತ ಸಾವಿರಕ್ಕೂ ಹೆಚ್ಚು ಕೆರೆಗಳಿದ್ದವು. ಆದರೆ 1960ರ ವೇಳೆಗೆ
ಇದು 250ಕ್ಕೆ ಇಳಿದು, ಈಗ 80 ಕೆರೆಗಳಿಗೆ ಮಾತ್ರ ಬೆಂಗಳೂರು ಸೀಮಿತವಾಗಿದೆ. ಅನೇಕ ಕರೆಗಳು ಈಗ ಪ್ರತಿಷ್ಠಿತ ಲೇಔಟ್‌ಗಳಾಗಿ ಅಥವಾ ಟೆಕ್ ಪಾರ್ಕ್‌ಗಳಾಗಿ ಮಾರ್ಪಟ್ಟಿವೆ.

ಇನ್ನುಳಿದ ಕೆರೆಗಳು ಒತ್ತುವರಿ ಮಾಡಿಕೊಂಡು ನೀರು ಬರುವ ತಗ್ಗು ಪ್ರದೇಶದಲ್ಲಿಯೇ ಮನೆ ಕಟ್ಟುವ ಮೂಲಕ ಪ್ರವಾಹಕ್ಕೆ ಆಹ್ವಾನವನ್ನು ನೀಡಲಾಗಿದೆ. ಈ ಪ್ರಮಾದವಾಗಿರುವುದು ಈಗಿನ ಸರಕಾರದಿಂದಲ್ಲ ವಾದರೂ, ಈ ಪ್ರಮಾದವನ್ನು ಸರಿಪಡಿ ಸಲೇಬೇಕು. ಇಲ್ಲದಿದ್ದರೆ, ಬೆಂಗಳೂರಿಗೆ ಇರುವ ‘ಖ್ಯಾತಿ’ ಪ್ರವಾಹದ ಕಾರಣಕ್ಕೆ ‘ಕುಖ್ಯಾತಿ’ಯಾಗಿ ಮಾರ್ಪಡುವುದು ನಿಶ್ಚಿತ.

ಹಾಗೇ ನೋಡಿದರೆ ಬೆಂಗಳೂರು ಉದ್ಯಾನನಗರಿಯಿಂದ ಕಾಂಕ್ರಿಟ್ ಕಾಡು ಅಥವಾ ಸಿಲಿಕಾನ್ ಸಿಟಿಯಾಗಿ ಮಾರ್ಪಟ್ಟಿದ್ದು, ಇದೇ ಐಟಿ ಕಂಪನಿಗಳಿಂದ. ಗ್ಲೋಬಲ್ ಇನ್ವೆಸ್ಟ್ ಮೂಲಕ ವಿಶ್ವದ ವಿವಿಧ ಭಾಗದಿಂದ ಸಾವಿರಾರು ಐಟಿ-ಬಿಟಿ ಸೇರಿದಂತೆ ವಿವಿಧ ಕ್ಷೇತ್ರದ ಕಂಪನಿಗಳನ್ನು ಬೆಂಗಳೂರಿಗೆ ಕರೆತಂದ ಸರಕಾರ, ಅವುಗಳನ್ನು ಬರಮಾಡಿಕೊಳ್ಳುವ ಭರದಲ್ಲಿ, ಇಲ್ಲಿನ ‘ಇಕೋ- ಸಿಸ್ಟಂ’ ಅನ್ನೇ ಮರೆತು, ಅಭಿವೃದ್ಧಿ ಮಾಡಿದ್ದೇ ಈ ಸಮಸ್ಯೆಗೆ ಮೂಲ ಕಾರಣ.

ಈಗಿರುವ ಹಲವು ಟೆಕ್ ಪಾರ್ಕ್ ಒಂದಾನೊಂದು ಕಾಲದಲ್ಲಿ, ಸುತ್ತಮುತ್ತಲಿನ ಮಂದಿಗೆ ನೀರು ಉಣಿಸುತ್ತಿದ್ದ ಕೆರೆಗಳು
ಇಲ್ಲವೇ ಕೆರೆಗಳನ್ನು ಸಂಪರ್ಕಿಸುವ ರಾಜಕಾಲುವೆಗಳು. ಆದರೆ ಹೂಡಿಕೆದಾರರನ್ನು ಆಕರ್ಷಿಸುವ ಸಲುವಾಗಿ, ಸರಕಾರ ಗಳು ಕೈಗೊಂಡ ನಿರ್ಧಾರದ ಸಮಯದಲ್ಲಿ ನೀರು ಹಾಗೂ ಮಳೆ ನೀರು ಹರಿಯುವ ವ್ಯವಸ್ಥೆಯ ಬಗ್ಗೆ ಗಮನ ಕೊಡಲಿಲ್ಲ.

ಇದರೊಂದಿಗೆ ರಾಜಧಾನಿಗೆ ಕಾಲಿಟ್ಟ ಧೈತ್ಯ ಕಂಪನಿಗಳು, ತಮಗೆ ನೀಡಿದ್ದ ಜಾಗದೊಂದಿಗೆ ಆಚೀಚೆ ಕೊಂಚ ಪ್ರದೇಶವನ್ನು ‘ಒತ್ತುವರಿ’ ಮಾಡಿಕೊಳ್ಳುವ ಘಟನೆಗಳೂ ನಡೆದಿವೆ. ಒತ್ತುವರಿಯಾಗಿರುವ ಪ್ರದೇಶವನ್ನು ಬಿಟ್ಟುಕೊಡಿ ಎನ್ನುವ ಸೂಚನೆ ಯನ್ನು ಪ್ರಶ್ನಿಸಿ, ಹೈಕೋರ್ಟ್-ಸುಪ್ರೀಂ ಕೋರ್ಟ್ ಮೆಟ್ಟಿರುವ ಉದಾಹರಣೆಗಳು ನಮ್ಮ ಮುಂದಿವೆ. ಈ ಒತ್ತುವರಿಯೊಂದಿಗೆ, ಲಕ್ಷಾಂತರ ಮಂದಿಯ ಓಡಾಟಕ್ಕೆಂದು ಸೃಷ್ಟಿಸಿರುವ – ಒವರ್‌ಗಳು, ರಸ್ತೆಗಳು ಹಾಗೂ ಕಾಂಕ್ರಿಟ್ ರಸ್ತೆಗಳನ್ನು ನಿರ್ಮಿಸ ಲಾಯಿತು.

ಇದರ ಪರಿಣಾಮ ಮಳೆಯಾದರೆ, ಮಳೆಯ ನೀರು ಭೂಮಿಯಲ್ಲಿ ಇಂಗದೇ ರಸ್ತೆ ಮೇಲೆ ನಿಂತು ಅವಾಂತರ ಸೃಷ್ಟಿಸುತ್ತಿದೆ.
ಇನ್ನು ಸಣ್ಣ, ಪುಟ್ಟ ಮಳೆಗೂ ಭಾರಿ ಅವಾಂತರ ಸೃಷ್ಟಿಯಾಗುತ್ತಿರುವ ಪ್ರದೇಶಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ, ಬಹುತೇಕ ಪ್ರದೇಶಗಳು ಈ ಹಿಂದೆ ಕೆರೆಗಳಾಗಿದ್ದವು. ಇನ್ನು ಕೆಲವು ತಗ್ಗು ಪ್ರದೇಶದಲ್ಲಿದ್ದು, ಈ ಪ್ರದೇಶ ಸುರಕ್ಷಿತವಲ್ಲ ಎನ್ನುವ ಸ್ಪಷ್ಟ ಮಾತನ್ನು ಬಿಬಿಎಂಪಿ ಹೇಳಿದ್ದರೂ, ಐಟಿ ಕಂಪನಿಗಳಿಗೆ ಹತ್ತಿರವಾಗಲೆಂದು ಆ ಭಾಗದಲ್ಲಿಯೇ ಮನೆಗಳನ್ನು ನಿರ್ಮಿಸಿಕೊಂಡಿ ದ್ದಾರೆ.

ಕೆಲವು ಲೇಔಟ್‌ಗಳು ಅಕ್ರಮವಾಗಿದೆ ಎಂದು ಆದೇಶ ಬಂದಿದ್ದರೂ, ಅಲ್ಲಿಯೇ ಮುಂದುವರಿದಿರುವ ನಿದರ್ಶನಗಳು ನಮ್ಮ
ಮುಂದಿದೆ. ಐಟಿ ಸಂಸ್ಥೆಗಳು ಹೆಚ್ಚೆಚ್ಚು ಬಂದ ಕಾರಣಕ್ಕೆ ನಗರ ಬೆಳೆದಿದೆ. ಆದ್ದರಿಂದಲೇ ಇಡೀ ವಿಶ್ವವೇ ಬೆಂಗಳೂರಿನತ್ತ ನೋಡುವಂತಾಗಿದೆ. ಆದ್ದರಿಂದ ಕೈಗಾರಿಕೋದ್ಯಮಿಗಳ ಸಂಕಷ್ಟಕ್ಕೂ ಸರಕಾರ ಕಿವಿಯಾಗಬೇಕಾಗಿದೆ. ಕೋಟ್ಯಂತರ
ರುಪಾಯಿ ಬಂಡವಾಳ ಹೂಡಿಕೆ ಮಾಡಿರುವ ಸಂಸ್ಥೆಗಳು, ಮಳೆ ಅವಾಂತರವನ್ನು ಮುಂದಿಟ್ಟುಕೊಂಡು ಬೇರೆಡೆ ಸ್ಥಳಾಂತರ ಮಾಡುತ್ತೇವೆ ಎಂದು ಹೇಳಿದ ಮಾತ್ರಕ್ಕೆ, ಸ್ಥಳಾಂತರ ಮಾಡುವುದು ಸುಲಭವಾಗಿಲ್ಲ.

ಏಕೆಂದರೆ, ಈಗಾಗಲೇ ಬೆಂಗಳೂರಿನಲ್ಲಿ ಈ ಸಂಸ್ಥೆಗಳು ಸಾವಿರಾರು ಕೋಟಿ ರು. ಹೂಡಿಕೆ ಮಾಡಿ, ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸಿಕೊಂಡಿರುತ್ತವೆ. ಇದರೊಂದಿಗೆ ‘ಬೆಂಗಳೂರು ಬೇಸ್’ ಉದ್ಯೋಗಿಗಳನ್ನು ತೆಗೆದುಕೊಂಡಿರುತ್ತಾರೆ. ಏಕಾಏಕಿ
ಮಳೆಯೊಂದನ್ನು ನೆಪವಾಗಿಟ್ಟುಕೊಂಡು ಸ್ಥಳಾಂತರ ಮಾಡಿದರೆ, ಅವರಿಗೂ ಸಮಸ್ಯೆಯಾಗುತ್ತದೆ. ಆದರೆ ಈ ರೀತಿಯ ಅಪಖ್ಯಾತಿಯಿಂದಾಗಿ ಭವಿಷ್ಯದ ದೃಷ್ಟಿಯಿಂದ ಬೆಂಗಳೂರಿಗೆ ಹೂಡಿಕೆದಾರರ ಕೊರತೆ ಎದುರಾದರೂ ಅನುಮಾನವಿಲ್ಲ.

ರಾಜ್ಯ ಸರಕಾರ ಒಂದೆಡೆ ಕೋಟಿ ಕೋಟಿ ಖರ್ಚು ಮಾಡಿ, ಹೂಡಿಕೆದಾರರ ಸಮಾವೇಶವನ್ನು ಹಮ್ಮಿಕೊಳ್ಳುತ್ತಾರೆ. ಆದರೆ ಈ ರೀತಿ ಮಳೆ ಹಾನಿಯಿಂದ ಕೆಲಸಕ್ಕೆ ಸಮಸ್ಯೆಯಾಗುತ್ತದೆ ಎನ್ನುವ ಸಂದೇಶ ರವಾನೆಯಾದರೆ, ಯಾರೊಬ್ಬರೂ ಮುಂದೆ ಹೂಡಿಕೆ ಮಾಡಲು ಬಾರದೇ ಹೋಗುವ ಸಾಧ್ಯತೆಯಿರುತ್ತದೆ. ಈಗಾಗಲೇ ರಾಜಧಾನಿಯಲ್ಲಿರುವ ಖಾಸಗಿ ಕಂಪನಿಗಳಿಗೆ,
ಇಲ್ಲಿಗಿಂತ ಉತ್ತಮ ಸ್ಥಳ ಸಿಗದೇ ಇರಬಹುದು. ಏಕೆಂದೆರೆ ನೆರೆಯ ಚೆನ್ನೈ, ಹೈದರಾಬಾದ್ ನಗರದಲ್ಲಿ ಬೆಂಗಳೂರಿನಲ್ಲಿ ರುವಷ್ಟು ‘ಖಾಸಗಿ ಕಂಪನಿ ಸ್ನೇಹಿ’ ವಾತಾವರಣವಿಲ್ಲ.

ಅದರಲ್ಲಿ ವೈಟ್ ಕಾಲರ್ ಜಾಬ್‌ಗಳಿಗೆ ಈ ಭಾಗದಲ್ಲಿ ಅಗತ್ಯ ನೆರವಿಲ್ಲ. ಇನ್ನು ಮುಂಬೈನಲ್ಲಿ ಈಗಾಗಲೇ ಭಾರಿ
ಪ್ರಮಾಣದಲ್ಲಿ ಕೈಗಾರಿಕೆಗಳು ಇರುವ ಕಾರಣಕ್ಕೆ, ಅಲ್ಲಿಂದ ಈ ಕಡೆ ಮುಖ ಮಾಡಿರುವ ಕಂಪನಿಗಳು ಪುನಃ ಅಲ್ಲಿಗೆ
ಹೋಗಲು ಸಾಧ್ಯವಿಲ್ಲ. ಈ ಎಲ್ಲ ಕಾರಣಗಳಿಂದ ಖಾಸಗಿ ಕಂಪನಿಗಳು ಬೆಂಗಳೂರು ಬಿಟ್ಟು ಹೋಗದೇ ಇರಬಹುದು. ಆದರೆ ಅವರು ಕೇಳುತ್ತಿರುವ ಕೆಲವು ಬೇಡಿಕೆಗಳು ಸರಿಯಾಗಿವೆ. ರಾಜ್ಯ ಸರಕಾರ, ಖಾಸಗಿ ಕಂಪನಿಗಳು ಇರುವ ಬೆಂಗಳೂರಿನ
ಹೊರಭಾಗದಲ್ಲಿ ಆಗುತ್ತಿರುವ ಪ್ರವಾಹ ಪರಿಸ್ಥಿತಿಯನ್ನು ನಿಯಂತ್ರಿಸುವ ಕೆಲಸವನ್ನು ಮಾಡಬೇಕಿದೆ.

ಇದಕ್ಕೆ ಆಗಿರುವ ಒತ್ತುವರಿವನ್ನು ತೆರವುಗೊಳಿಸುವ ಕಾರ್ಯ, ಒಳಚರಂಡಿ ವ್ಯವಸ್ಥೆಯನ್ನು ಇನ್ನಷ್ಟು ವೃದ್ಧಿಸುವ ಕೆಲಸ
ಹಾಗೂ ರಾಜಕಾಲುವೆಗಳ ಅಭಿವೃದ್ಧಿಗೆ ಇನ್ನಷ್ಟು ಒತ್ತು ನೀಡಲೇಬೇಕು. ಕೋಟಿ ಕೋಟಿ ರುಪಾಯಿ ಬಂಡವಾಳ ಹೂಡುವ ಖಾಸಗಿ ಕಂಪನಿಗಳು, ರಾಜ್ಯ ಸರಕಾರದಿಂದ ಈ ರೀತಿಯ ಮೂಲಸೌಲಭ್ಯವನ್ನು ಕೇಳುವುದರಲ್ಲಿ ತಪ್ಪಿಲ್ಲ. ನೈಸರ್ಗಿಕ ವಿಕೋಪ ಎನ್ನುವುದು ಕೇವಲ ಬೆಂಗಳೂರಿಗೆ ಮಾತ್ರ ಸೀಮಿತವಾಗಿಲ್ಲ.

ಬೆಂಗಳೂರಿನಿಂದ ಹೈದರಬಾದ್, ಚೆನ್ನೈ, ಮುಂಬೈಗೆ ಹೋದರೆ ಅತಿವೃಷ್ಟಿಯಿಂದ ಪ್ರವಾಹಕ್ಕೆ ತಮ್ಮ ಕಂಪನಿ ನಲಗುವುದಿಲ್ಲ ಎನ್ನುವುದಕ್ಕೆ ಸಾಧ್ಯವೇ? ಭಾರಿ ಪ್ರಮಾಣದಲ್ಲಿ ಮಳೆಯಾದ ಸಮಯದಲ್ಲಿ ಇಂತಹ ಸಮಸ್ಯೆ ಎದುರಾಗುವುದು ಸಾಮಾನ್ಯ. ಅದು ಬೆಂಗಳೂರಿನಲ್ಲಿಯೂ ಆಗಿದೆ. ಆದರೆ ರಾಜ್ಯ ಸರಕಾರ, ಇಂತಹ ವಿಷಯದಲ್ಲಿ ಇನ್ನಷ್ಟು ಎಚ್ಚರವಹಿಸಬೇಕು. ಅತಿವೃಷ್ಟಿ
ಸಮಯದಲ್ಲಿ ನಿರ್ವಹಣೆಯ ಬಗ್ಗೆ, ರಾಜಕಾಲುವೆ, ಕೆರೆಗಳ ಒತ್ತುವರಿ, ಕಾಂಕ್ರಿಟ್ ಕಾಡಿನ ನಿರ್ಮಾಣದಿಂದಾಗಿ ಮಳೆ
ನೀರು ಹೋಗಲು ಸಾಧ್ಯವಾಗದೇ ರಸ್ತೆಯಲ್ಲಿ ಅಥವಾ ಮನೆಗಳಿಗೆ ನುಗ್ಗುವ ಪರಿಸ್ಥಿತಿಯನ್ನು ತಡೆಯುವುದಕ್ಕೆ ಬೇಕಿರುವ ಕ್ರಮವನ್ನು ವಹಿಸಲೇಬೇಕು.

ಐಟಿ-ಬಿಟಿ ಕಂಪನಿಗಳು ರಾಜಧಾನಿ ಬೆಂಗಳೂರು ಬಿಟ್ಟು ಹೋಗುತ್ತವೆ ಎನ್ನುವ ಆತಂಕಕ್ಕಿಂತ, ಬೆಂಗಳೂರಿನಲ್ಲಿ ವಾಸಿಸು ವವರಿಗೆ ಈ ಪ್ರವಾಹಗಳಿಂದ ಉಂಟಾಗುವ ಅನಾಹುತವನ್ನು ತಪ್ಪಿಸುವುದಕ್ಕಾದರೂ ಸಮರೋಪಾದಿಯಲ್ಲಿ ಕೆಲಸ ಮಾಡುವುದು ಅನಿವಾರ್ಯ ಎಂದರೆ ತಪ್ಪಾಗುವುದಿಲ್ಲ.