Thursday, 14th November 2024

Viral Video: ಅಪ್ಪನ ಜತೆ ನಡ್ಕೊಂಡು ಹೋಗ್ತಿದ್ದ ಬಾಲಕನ ಕಿಡ್ನಾಪ್‌ಗೆ ಯತ್ನ; ಭೀಕರ ದೃಶ್ಯ ಕ್ಯಾಮರಾದಲ್ಲಿ ಸೆರೆ-ವಿಡಿಯೊ ಇದೆ

Viral Video

ನ್ಯೂಯಾರ್ಕ್: ಇತ್ತೀಚಿನ ದಿನಗಳಲ್ಲಿ ಚಿಕ್ಕಮಕ್ಕಳನ್ನು ಅಪಹರಣ ಮಾಡುವ ಪ್ರಕರಣಗಳು ಹೆಚ್ಚಾಗಿ ಕೇಳಿಬರುತ್ತಿದ್ದು, ಇತ್ತೀಚೆಗೆ ನ್ಯೂಯಾರ್ಕ್‌ನ ನಗರವೊಂದರಲ್ಲಿ ಮಕ್ಕಳನ್ನು ಹಿಡಿದುಕೊಂಡು ರಸ್ತೆ ದಾಟುತ್ತಿದ್ದ ತಂದೆಯ ಬಳಿ ಬಂದ ವ್ಯಕ್ತಿಯೊಬ್ಬ ಮಗುವನ್ನು ಕಸಿದುಕೊ‍ಳ್ಳಲು ಯತ್ನಿಸಿದ ಘಟನೆ ನಡೆದಿದೆ.  ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾಗಳಲ್ಲಿ ಹರಿದಾಡಿದ್ದು, ಸಿಕ್ಕಾಪಟ್ಟೆ ವೈರಲ್(Viral Video) ಆಗಿದೆ.

ನ್ಯೂಯಾರ್ಕ್ ಪೋಸ್ಟ್ ಪ್ರಕಾರ, ಮುಖಕ್ಕೆ ಮಾಸ್ಕ್ ಹಾಕಿದ್ದ ವ್ಯಕ್ತಿಯೊಬ್ಬ ಇಬ್ಬರು ಮಕ್ಕಳ ಕೈ ಹಿಡಿದುಕೊಂಡು ರಸ್ತೆ ದಾಟುತ್ತಿರುವ ತಂದೆಯ ಬಳಿ ಬಂದು ಇದ್ದಕ್ಕಿದ್ದಂತೆ ಇಬ್ಬರು ಮಕ್ಕಳಲ್ಲಿ 6ವರ್ಷದ ಒಬ್ಬ ಬಾಲಕನನ್ನು ಎಳೆದುಕೊಳ್ಳಲು ಪ್ರಯತ್ನಿಸಿದ್ದಾನಂತೆ. ಆಗ ತಂದೆ ಮಗುವಿನ ಕೈ ಗಟ್ಟಿಯಾಗಿ ಹಿಡಿದುಕೊಂಡು ಅಪಹರಣಕಾರರನ್ನು ದೂರ ತಳ್ಳಿ ಮಗುವನ್ನು ಅವನಿಂದ ಕಾಪಾಡಿದ್ದಾರೆ.

ಈ ಘಟನೆ ಅಲ್ಲಿದ್ದ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಘಟನೆಯ ನಂತರ, ಪೊಲೀಸರು ಅಪಹರಣ ಮಾಡಲು ಯತ್ನಿಸಿದ ವ್ಯಕ್ತಿಯನ್ನು ಪತ್ತೆ ಮಾಡಿ ಆತನನ್ನು ಬಂಧಿಸಿದ್ದಾರೆ. ಆತ 28 ವರ್ಷದ ಸ್ಟೀಫನ್ ಸ್ಟೋವ್ ಎಂಬುದಾಗಿ ತಿಳಿದುಬಂದಿದೆ. ಮತ್ತು ಆತನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಈ ಬಗ್ಗೆ ಮಗುವಿನ ತಾಯಿಯ ಬಳಿ ವಿಚಾರಿಸಿದಾಗ, ಸ್ಟೀಫನ್ ಸ್ಟೋವ್ ತಮ್ಮ ನೆರೆಹೊರೆಯವರು ಎಂದು ತಿಳಿಸಿದ್ದಾರೆ.  ಅಲ್ಲದೇ ಮಗುವನ್ನು ಅಪಹರಣ ಮಾಡಲು ಯತ್ನಿಸಿದಾಗಿನಿಂದ ತಮ್ಮ ಕುಟುಂಬದವರಿಗೆ ತುಂಬಾ ಭಯವಾಗಿದೆ. ಈ ಭಯದಿಂದ ರಾತ್ರಿ ಸರಿಯಾಗಿ ನಿದ್ರೆ ಮಾಡಲು ಸಾಧ್ಯವಾಗಿಲ್ಲ ಎಂದು ಹೇಳಿಕೊಂಡಿದ್ದಾರೆ. ಈ ನಡುವೆ  ಆರೋಪಿ ಸ್ಟೋವ್ ಅವರ ಆಪ್ತ ಸ್ನೇಹಿತರೊಬ್ಬರು ಮಾಧ್ಯಮಗಳೊಂದಿಗೆ ಮಾತನಾಡಿ, ಆತ ಮಾನಸಿಕ ಕಾಯಿಲೆಗಳಿಂದ ಬಳಲುತ್ತಿರುವುದಾಗಿ ಮತ್ತು ಈಗಾಗಲೇ ಆತ ಇದಕ್ಕೆ ಚಿಕಿತ್ಸೆ ಪಡೆಯುತ್ತಿರುವುದಾಗಿ ತಿಳಿಸಿದ್ದಾರೆ.

ಇದನ್ನೂ ಓದಿ:ಬೆಂಗಳೂರಿನ ಲಾಲ್‌ ಬಾಗ್‌ ಅನ್ನು ಹಾಡಿಹೊಗಳಿದ ಡೊನಾಲ್ಡ್‌ ಟ್ರಂಪ್‌; ಹಾಸ್ಯನಟನ ಮಿಮಿಕ್ರಿಗೆ ಭೇಷ್‌ ಎಂದ ನೆಟ್ಟಿಗರು!

ಈ ವಿಡಿಯೊಗೆ ಅನೇಕರು ಕಮೆಂಟ್ ಮಾಡಿದ್ದಾರೆ. ಹಾಡುಹಗಲಲ್ಲಿ ಅದು ಪೋಷಕರ ಎದುರೇ ಬಾಲಕನನ್ನು ಅಪಹರಣ ಮಾಡಲು ಮುಂದಾಗಿದ್ದನ್ನು ಕಂಡು ಅನೇಕರು ಭಯಗೊಂಡಿದ್ದಾರೆ. ಅಲ್ಲದೇ ತಂದೆ ತ್ವರಿತ ಕ್ರಮದಿಂದ ಮಗು ಅಪಹರಣವಾಗುವುದು ತಪ್ಪಿದೆ. ಹಾಗಾಗಿ ಅನೇಕರು ತಂದೆಗೆ ಅಭಿನಂದನೆ ಸಲ್ಲಿಸಿದ್ದಾರೆ. ಹಾಗೇ ಈ ಘಟನೆಯಲ್ಲಿ ಯಾರಿಗೂ ಪ್ರಾಣಹಾನಿ ಸಂಭವಿಸಿಲ್ಲ ಎನ್ನಲಾಗಿದೆ.