ವೃದ್ದರ ಸಹಾಯಕ್ಕೆ ಈ App ಗುಡ್ ಫೆಲೋಸ್ !
ವೃದ್ದರ ಸಹಾಯಕ್ಕೆ ಈ App ಗುಡ್ ಫೆಲೋಸ್ !
Vishwavani News
September 6, 2022
ಟೆಕ್ ಟಾಕ್
ವಿಕ್ರಮ ಜೋಶಿ
ಏಕಾಂಗಿ ವೃದ್ಧರಿಗೆ ಮೊಮ್ಮಕ್ಕಳ ರೀತಿ ಸಹಾಯ ಮಾಡಲು ಅಭಿವೃದ್ಧಿಗೊಂಡಿರುವ ಈ ಆಪ್, ನಮ್ಮ ದೇಶದಲ್ಲೇ ಜನಿಸಿದ್ದು!
ಕೃತಕ ಬುದ್ಧಿಮತ್ತೆಯ ಬೆಳವಣಿಗೆಯ ಪ್ರಯೋಗವೊಂದರಲ್ಲಿ ಈ ಘಟನೆ ನಡೆಯಿತು. ಅಮೆರಿಕದಲ್ಲಿ ಹಿರಿಯ ನಾಗರಿಕರಿಗಾಗಿ ಒಂದು ಕಾಲ್ ಸೆಂಟರ್ ತೆರೆಯಲಾಯಿತು. ಅಲ್ಲಿ ಮನುಷ್ಯರಿಲ್ಲ, ಕೇವಲ ಸಾಫ್ಟ್ ವೇರ್ ಮಾತ್ರ. ಯಾವಾಗ ಬೇಕಾದರೂ ಕರೆ ಮಾಡಿ ಏನು ಬೇಕಾದರೂ ಕೇಳಬಹುದು, ಸಾಫ್ಟ್ ವೇರ್ ಕೃತಕ ಬುದ್ಧಿಮತ್ತೆ ಬಳಸಿ ಉತ್ತರಿಸುತ್ತಿತ್ತು.
ಅದನ್ನು ತಯಾರಿಸುವವರು, ಈ ವಯೋವೃದ್ಧರು ದಿನಸಿ ಸಾಮಾನು ಬೇಕು, ಅಲ್ಲಿಗೆ -ಇಲ್ಲಿಗೆ ಹೋಗಬೇಕು, ಔಷಧಿಯ ಬಗ್ಗೆ ಮಾಹಿತಿ ಕೇಳಬಹುದು ಎನ್ನುವ ಅಂದಾಜು ಮಾಡಿದ್ದರು. ಆದರೆ ಆಗಿದ್ದೇ ಬೇರೆ - ತೊಂಬತ್ತು ಶೇಕಡಾಕ್ಕೂ ಹೆಚ್ಚು ಜನರು ಕೇವಲ ತಮ್ಮ ಮನಸ್ಸಿನಲ್ಲಿರುವ ಮಾತುಗಳನ್ನು ತೋಡಿ ಕೊಳ್ಳಲು ಉಪಯೋಗಿಸುತ್ತಿದ್ದರಂತೆ! ಇವತ್ತು ನಮ್ಮ ಸಮಾಜ ಇಲ್ಲಿಗೆ ಬಂದು ನಿಂತಿದೆ ನೋಡಿ.
ವಿದೇಶ ಬಿಡಿ, ನಮ್ಮೂರಿಗೆ ಹೋದರೆ ನಮ್ಮ ಕೇರಿ ಅದು ವೃದ್ಧಾಶ್ರಮ. ಆ ಮುದುಕರ ಮಕ್ಕಳು, ಮೊಮ್ಮಕ್ಕಳು ಯಾರೂ ಊರಲ್ಲಿ ಇಲ್ಲ. ಪರವೂರು ಅಥವಾ ಪರದೇಶ. ಏಕಾಂಗಿಯಾಗಿಯೇ ಇರಬೇಕು, ಅಂತವರಿಗೇ ಸಹಾಯ ಮಾಡಬೇಕು ಅಂತಲ್ಲ. ಗಂಡ ಹೆಂಡತಿ ಒಟ್ಟಿಗೆ ಇದ್ದರೂ ಅವರ ದೇಖರೇಕೆ ಮಾಡುವವರು ಯಾರು? ಶಹರಕ್ಕೆ ಬಂದರೆ ಪರಿಸ್ಥಿತಿ ಇನ್ನೂ ಗಂಭೀರ. ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆಯ ಲೆಕ್ಕಾಚಾರದ ಪ್ರಕಾರ ನಮ್ಮ ದೇಶದಲ್ಲಿ ಸರಿಸುಮಾರು ೧೪ ಕೋಟಿ ಹಿರಿಯ ನಾಗರಿಕರಿದ್ದು, ಅವರಲ್ಲಿ ಹತ್ತು ಶೇಕಡಾ ವೃದ್ಧರು ಏಕಾಂಗಿಯಂತೆ. ಈ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ.
ಬಾಂಧವ್ಯವೇ ಬುನಾದಿ
ವ್ಯಾಪಾರ, ಲಾಭ, ನಷ್ಟಕ್ಕಿಂತಲೂ ಹೆಚ್ಚಾಗಿ ಬಾಂಧ್ಯವ್ಯದ ಯಶಸ್ಸಿನ ಮೇಲೆಯೇ ಇದರ ನೈತಿಕ ಮೌಲ್ಯ ನಿಂತಿದೆ. ಗೂಗಲ್ ಪ್ಲೇ
ಅಥವಾ ಆಪಲ್ ಸ್ಟೋರ್ ನಲ್ಲಿ ಇದು ಲಭ್ಯವಿಲ್ಲ. +91 8779524307 ಈ ನಂಬರಿಗೆ ಮಿಸ್ ಕಾಲ್ ಕೊಟ್ಟು ಅಥವಾ thegoodfellows.in ವೆಬ್ ಸೈಟ್‌ಗೆ ಲಾಗಿನ್ ಆಗಿ ಚಂದಾದಾರ ರಾಗಬಹುದು. ಒಮ್ಮೆ ರಿಜಿಸ್ಟರ್ ಆದ ತಕ್ಷಣ ಗುಡ್ ಫೆಲೋಸ್ ಜೊತೆ ಯಾಗುತ್ತಾರೆ. ಇದರ ಬಗ್ಗೆ ಮನೆಯವರಿಗೆ ಮಾಹಿತಿಯೂ ಹೋಗುತ್ತದೆ. ಈ ಆಪ್ ಮೊದಲ ತಿಂಗಳು ಉಚಿತ, ನಂತರ ತಿಂಗಳಿಗೆ ಐದು ಸಾವಿರ. ವಾರಕ್ಕೆ ಮೂರು ದಿನ, ದಿನಕ್ಕೆ ನಾಲ್ಕು ತಾಸು ಸೇವೆ.
ಚಂದಾದಾರರನ್ನು ‘ಗ್ರಾಂಡ್ ಪಲ್’ ಎನ್ನುತ್ತಾರೆ, ಸೇವೆಯನ್ನು ಕೊಡುವವರಿಗೆ ‘ಗುಡ್ ಫೆಲೋ’. ಮೊದಲ ಹಂತದ ಪ್ರಯತ್ನದಲ್ಲಿ ಯಶಸ್ಸು ಪಡೆದಿದೆ. ಆರು ತಿಂಗಳೊಳಗೆ ಇಬ್ಬರ ನಡುವೆ ಅನ್ಯೋನ್ಯತೆ ಬೆಳೆಯುವುದು ಕಂಡುಬಂದಿದೆ. ಜೊತೆಗಾರಿಕೆಯನ್ನು ಬದಲಿಸದೆ ಅವರನ್ನೇ ಬಹುಕಾಲ ಮುಂದುವರಿಸುವುದು ಮ್ಯಾನೆಜ್ಮೆಂಟ್ ಉದ್ದೇಶ. ಗುಡ್ ಫೆಲೋಸ್ ಸ್ಟಾರ್ಟ್‌ಅಪ್ ಬೆಳವಣಿಗೆಗೆ ಕಳೆದ ಆರು ತಿಂಗಳಲ್ಲಿ ಎಂಟು ನೂರು ಜನರ ಸಂದರ್ಶನ ಮಾಡಿ ಅದರಲ್ಲಿ ಕೇವಲ ಇಪ್ಪತ್ತು ಜನರ ಆಯ್ಕೆ ಆಗಿದೆ.
ಗುಡ್ ಫೆಲೋಸ್ ಸಿಗುವುದು ಅಷ್ಟು ಸುಲಭವಲ್ಲ. ಮಾನವಶಾಸ್ತ್ರಜ್ಞರ ಸಹಾಯದ ಮೇಲೆ ಪರೀಕ್ಷೆಯ ಮಾದರಿಯನ್ನು ವಿನ್ಯಾಸಗೊಳಿಸಲಾಗಿದೆ. ಅದರಲ್ಲಿ ಕರುಣೆ ಹಾಗೂ ಸಂಯಮದ ಮೌಲ್ಯಮಾಪನ ನಡೆಯುತ್ತದೆ. ಮೊದಲ ಪ್ರಯೋಗ ಮುಂಬಯಿಯಲ್ಲಿ ನಡೆದಿದ್ದು, ಇನ್ನು ಮುಂದೆ ಚೆನ್ನೈ, ಬೆಂಗಳೂರು ಹಾಗೂ ಪುಣೆಗೆ ಸೇವೆ ವಿಸ್ತಾರ ಗೊಳ್ಳಲಿದೆಯಂತೆ.
ಟಾಟಾ ಸ್ಫೂರ್ತಿ
ಮೂವತ್ತು ವಯಸ್ಸಿನ ತರುಣ ಶಾಂತನು ನಾಯ್ಡು ಈ ಸ್ಟಾರ್ಟ್ ಅಪ್‌ನ ಜನ್ಮದಾತ. ರತನ್ ಟಾಟಾರವರ ಕಛೇರಿಯಲ್ಲಿ ಜನರಲ್ ಮ್ಯಾನೇಜರ್. ಟಾಟಾರವರ ವೈಯಕ್ತಿಕ ಸಹಾಯಕ. ಈ ವ್ಯವಸ್ಥೆ ತರುವಲ್ಲಿ ನಾಯ್ಡುರವರಿಗೆ ಟಾಟಾರವರ ಬದುಕೇ ಸ್ಪೂರ್ತಿ. ನಮ್ಮ ದೇಶದಲ್ಲಿ ಎಷ್ಟೊಂದು ಹಿರಿಯ ನಾಗರಿಕರು ಒಬ್ಬಂಟಿಗರಾಗಿದ್ದಾರೆ, ಅವರಿಗೆ ಏನಾದರೂ ಮಾಡಬೇಕು ಎನ್ನುವ ಅಭಿಲಾಷೆಯು ಈ ಕಂಪನಿಯ ರೂಪದಲ್ಲಿ ಹೊರಬಂದಿದೆ. ಇದರಲ್ಲಿ ರತನ್ ಟಾಟಾ ಖುದ್ದಾಗಿ ಹೂಡಿಕೆ ಮಾಡಿದ್ದಾರೆ.
ಆಪ್ ಉದ್ಘಾಟನೆ ಮಾಡಲು ಬಂದಾಗ ಟಾಟಾರವರು ಹೇಳಿದ್ದು :You do not know what it is like to be lonely until you spend time alone wishing for companionship.
ನಾವೇ ಮೊದಲು
ಮಾನವೀಯ ಮೌಲ್ಯಗಳು ಕಡಿಮೆ ಆಗುತ್ತಿರುವ ಕಾಲದಲ್ಲಿ ಇಂತಹ ಒಂದು ಹೊಸ ಹೆಜ್ಜೆ ಸ್ವಾಗತಾರ್ಹ. ತಂತ್ರeನದ
ಉಪಯೋಗ ಸಮಾಜದ ಎಲ್ಲರ ಒಡಲನ್ನೂ ಸೇರಬೇಕು. ದೇಶದಲ್ಲಿ ಉದ್ಯೋಗ ಅವಕಾಶಕ್ಕೆ ಒಂದು ಹೊಸ ಅಧ್ಯಾಯ ಶುರುವಾಗಿದೆ. ಇತರೆ ದೇಶಗಳಲ್ಲಿ ಇಂತಹ ಆಪ್ ಇದೆಯಾ ಅಂತ ಹುಡುಕಿದೆ ನನಗಂತೂ ಸಿಗಲಿಲ್ಲ. ನಾವೇ ಮೊದಲಿಗರೆನ್ನುವ ಹೆಮ್ಮೆ! ಮನುಷ್ಯನಿಗೆ ಮನುಷ್ಯ ಭರವಸೆಯ ಸೆಲೆಯಾದರೆ ಅದಕ್ಕಿಂತ ಹೆಚ್ಚು ಖುಷಿಯೇನು? ಯುವ ಜನರು ವೃದ್ಧರ
ಸೇವೆ ಮಾಡಲು ಸಿದ್ಧರಿದ್ದಾರೆ ಎನ್ನುವ ಸುದ್ದಿಯೇ ಶುಭ ವಿಚಾರ.
ಎಲ್ಲಿ ನಾವು ರೊಬೋಟ್‌ಗಳಾಗಿ ನಮ್ಮಲ್ಲಿಯ ಭಾವನೆಗಳನ್ನು ಸುಟ್ಟು ಭಸ್ಮಮಾಡಿ ಬಿಟ್ಟೆವೋ ಅಂತ ಅನಿಸಿತ್ತು. ನಾಯ್ಡು ಅವರ ಈ ಹೊಸ ಹೆಜ್ಜೆ ಸಾವಿರ ಮೈಲು ದೂರ ಸಾಗಲಿ. ಲಕ್ಷಾಂತರ ಹಿರಿಯ ನಾಗರಿಕರ ಜೀವನಕ್ಕೆ ಬೆಳಕು ಚೆಲ್ಲಲಿ ಹಾಗೆಯೇ ಸೇವೆ ಮಾಡುವ ತವಕದಲ್ಲಿರುವ ಯುವ ಮೊಗ್ಗುಗಳು ಅರಳಿ ಹೂವಾಗಲಿ!
ಮೊಮ್ಮಕ್ಕಳ ಜಾಗ ತುಂಬುವ ಆಪ್
ಪ್ರತಿ ಹಿರಿಯ ನಾಗರಿಕರಿಗೂ ಎಲ್ಲರಂತೆ ಬದುಕುವಾಸೆ, ಅವರ ಹಕ್ಕು ಕೂಡ. ವಯಸ್ಸಾದ ಮೇಲೆ ಕೆಲಸಕ್ಕೆ ಬಾರದವರು
ಎಂದು ಮೂಲೆಯಲ್ಲಿ ಇರಬೇಕಾ? ಕೆಲವರಿಗೆ ಮೊಮ್ಮಕ್ಕಳ ತುಂಟಾಟ ನೋಡುವಾಸೆ. ಇನ್ನೊಬ್ಬರಿಗೆ ಪ್ರವಾಸಕ್ಕೆ ಹೋಗಬೇಕು ;
ಜೊತೆಗಾರ ಇಲ್ಲವೇ. ಅಜ್ಜಿಗೆ ಔಷಧಿಯನ್ನು ಹೊತ್ತಿಗೆ ಸರಿಯಾಗಿ ತಗೆದುಕೊಳ್ಳಬೇಕು; ನೆನಪಿಸಲು ಒಬ್ಬ ಮಗನಿದ್ದರೆ? ಅಜ್ಜನಿಗೆ ಏನೂ ಬೇಡ ಯಾರಾದರೂ ಆತನ ಜೊತೆ ಕೂತು ಮಾತನಾಡಿದರೆ ಸಾಕು; ಮೊಮ್ಮಗನೋ ಅಥವಾ ಮೊಮ್ಮಗಳೋ ಹತ್ತಿರವೇ ಇದ್ದಿದ್ದರೆ ಎನ್ನುವ ಕೊರಗು. ತಮ್ಮ ಜೀವನವನ್ನೇ ಮಕ್ಕಳಿಗೆ ಅಂತ ತ್ಯಾಗ ಮಾಡಿ ಇಂದು ಏಕಾಂಗಿಯಾಗಿರುವವರಿಗೆ ಏನಾದರೂ
ಮಾಡಬೇಕಲ್ಲವೇ? ಇದಕ್ಕಾಗಿಯೇ ಹುಟ್ಟಿಕೊಂಡಿದೆ ಹೊಸ ಕಂಪನಿ - ‘ಗುಡ್ ಫೆಲೋಸ್’. Everything grand
kids do ಎನ್ನುವುದು ಇದರ ಟ್ಯಾಗ್ ಲೈನ್.