CET 2025: ಸಿಇಟಿ-2025 ಪರಿಷ್ಕೃತ ಕೀ ಉತ್ತರ ಪ್ರಕಟ; ಭೌತಶಾಸ್ತ್ರಕ್ಕೆ ಒಂದು ಕೃಪಾಂಕ
CET 2025: ಯುಜಿಸಿಇಟಿ 2025ರ ಪರೀಕ್ಷೆಯ ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತಶಾಸ್ತ್ರ ಮತ್ತು ಜೀವಶಾಸ್ತ್ರ ವಿಷಯಗಳಿಗೆ ಸಂಬಂಧಿಸಿದಂತೆ ಏ.16 ಮತ್ತು ಏ.17ರಂದು ಪರೀಕ್ಷೆಗಳನ್ನು ನಡೆಸಲಾಗಿತ್ತು. ಏ.18ರಂದು ಪ್ರಾಧಿಕಾರದ ವೆಬ್‌ಸೈಟ್‌ನಲ್ಲಿ ಕೀ ಉತ್ತರ ಪ್ರಕಟಿಸಲಾಗಿತ್ತು. ಇದೀಗ ಪರಿಷ್ಕೃತ ಕೀ ಉತ್ತರ ಪ್ರಕಟವಾಗಿದೆ.


ಬೆಂಗಳೂರು: ಸಿಇಟಿ-2025ರ (CET 2025) ಪರಿಷ್ಕೃತ ಕೀ ಉತ್ತರಗಳನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಪ್ರಕಟಿಸಿದೆ. ಭೌತಶಾಸ್ತ್ರದಲ್ಲಿ ಒಂದು ಪ್ರಶ್ನೆಗೆ ಕೃಪಾಂಕ ನೀಡಲಾಗಿದ್ದು, ರಸಾಯನಶಾಸ್ತ್ರ ಮತ್ತು ಜೀವಶಾಸ್ತ್ರದಲ್ಲಿ ಕೆಲವು ಉತ್ತರಗಳನ್ನು ಪರಿಷ್ಕರಿಸಲಾಗಿದೆ. ಇದರೊಂದಿಗೆ ಹೊರನಾಡು ಮತ್ತು ಗಡಿನಾಡು ವಿದ್ಯಾರ್ಥಿಗಳಿಗೆ ನಡೆಸಿದ್ದ ಕನ್ನಡ ಭಾಷಾ ಪರೀಕ್ಷೆಯ ಅಂಕಪಟ್ಟಿಯನ್ನೂ ಕೆಇಎ ಪ್ರಕಟಿಸಿದೆ.
ಯುಜಿಸಿಇಟಿ 2025ರ ಪರೀಕ್ಷೆಯ ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತಶಾಸ್ತ್ರ ಮತ್ತು ಜೀವಶಾಸ್ತ್ರ ವಿಷಯಗಳಿಗೆ ಸಂಬಂಧಿಸಿದಂತೆ ಏ.16 ಮತ್ತು ಏ.17ರಂದು ಪರೀಕ್ಷೆಗಳನ್ನು ನಡೆಸಲಾಗಿತ್ತು. ಈ ಪರೀಕ್ಷೆಗಳ 16 ವರ್ಷನ್‌ಗಳ ಕೀ ಉತ್ತರಗಳನ್ನು ಏ.18ರಂದು ಪ್ರಾಧಿಕಾರದ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿತ್ತು. ಜತೆಗೆ, ಕೀ-ಉತ್ತರಗಳಿಗೆ ಆಕ್ಷೇಪಣೆಗಳಿದ್ದಲ್ಲಿ ಏ.22ರ ಒಳಗಾಗಿ ಸಲ್ಲಿಕೆ ಮಾಡುವುದಕ್ಕೆ ಕಾಲಾವಕಾಶ ನೀಡಲಾಗಿತ್ತು.
ಈ ಸುದ್ದಿಯನ್ನೂ ಓದಿ | BPNL Recruitment 2025: 10ನೇ ತರಗತಿ ಪಾಸಾದವರಿಗೆ ಬಂಪರ್ ಚಾನ್ಸ್; ಭಾರತೀಯ ಪಶುಪಾಲನ್ ನಿಗಮ್ ಲಿಮಿಟೆಡ್‌ನಲ್ಲಿದೆ ಬರೋಬ್ಬರಿ 12,981 ಹುದ್ದೆ
ಅದರಂತೆ ಇದೀಗ ವಿಷಯ ತಜ್ಞರ ಸಮಿತಿಗಳ ಪರಿಶೀಲನೆ ನಂತರ ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರದ ವಿಷಯಗಳಲ್ಲಿ ಬದಲಾದ ಪ್ರಶ್ನೆಗಳ ಪರಿಷ್ಕೃತ ಕೀ ಉತ್ತರ ಪ್ರಕಟಿಸಲಾಗಿದೆ. ಸ್ವೀಕೃತವಾದ ಆಕ್ಷೇಪಣೆಗಳನ್ನು ತಜ್ಞರ ಸಮಿತಿ ಪರಿಶೀಲಿಸಿ ಇದೀಗ ಕೀ ಉತ್ತರಗಳನ್ನು ಪ್ರಕಟಿಸಿದೆ. ಗಣಿತ ಶಾಸ್ತ್ರದ ಕೀ ಉತ್ತರಗಳಲ್ಲಿ ಯಾವುದೇ ಪರಿಷ್ಕರಣೆ ಮಾಡಿಲ್ಲ ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ತಿಳಿಸಿದ್ದಾರೆ.
ಸಿಇಟಿ ಕೀ ಉತ್ತರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಕನ್ನಡ ಭಾಷಾ ಪರೀಕ್ಷೆಯ ಅಂಕಪಟ್ಟಿ ಪ್ರಕಟ
ಯುಜಿಸಿಇಟಿ-2025 ಕನ್ನಡ ಭಾಷಾ ಪರೀಕ್ಷೆಯ ಅಂಕಪಟ್ಟಿಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪ್ರಕಟಿಸಿದೆ. ಯುಜಿಸಿಇಟಿ-2025 ನೇ ಸಾಲಿನ ಹೊರನಾಡು ಮತ್ತು ಗಡಿನಾಡು ಅಭ್ಯರ್ಥಿಗಳಿಗೆ ಏ.15ರಂದು ಕನ್ನಡ ಭಾಷಾ ಪರೀಕ್ಷೆಯನ್ನು ನಡೆಸಲಾಗಿತ್ತು. ಸದರಿ ಪರೀಕ್ಷೆಯ ಅಂಕಪಟ್ಟಿಯನ್ನು ಅಭ್ಯರ್ಥಿಗಳ ಮಾಹಿತಿಗಾಗಿ ಕೆಇಎ ವೆಬ್‌ಸೈಟ್ ಪ್ರಕಟಿಸಲಾಗಿದೆ. ಕನ್ನಡ ಭಾಷಾ ಪರೀಕ್ಷೆಯಲ್ಲಿ ಅರ್ಹರಾಗಲು ಕನಿಷ್ಠ 12 ಅಂಕಗಳನ್ನು ಗಳಿಸಬೇಕಾಗಿರುತ್ತದೆ.
ಸಿಇಟಿ ಕನ್ನಡ ಭಾಷಾ ಪರೀಕ್ಷೆ ಅಂಕಪಟ್ಟಿಗಾಗಿ ಇಲ್ಲಿ ಕ್ಲಿಕ್ ಮಾಡಿ