MP Dr K Sudhakar(bagepalli News): ಭೂ ದಾಖಲೆ ಇಲಾಖೆಯಲ್ಲಿ ಕಡತಗಳ ನಾಪತ್ತೆ ಪ್ರಕರಣ; ಉನ್ನತ ತನಿಖೆ ಮಾಡಿಸಿ ಎಂದು ಸಂಸದರಿಗ ರೈತಸಂಘ ಮನವಿ
ಬಾಗೇಪಲ್ಲಿ ತಾಲೂಕಿನ ವಿವಿಧ ಗ್ರಾಮ ಪಂಚಾಯತಿಗಳಲ್ಲಿ ಜ.17ರಂದು ಹಮ್ಮಿ ಕೊಂಡಿದ್ದ ಹಳ್ಳಿಯ ಕಡೆ ಸಂಸದರ ನಡೆ ಪ್ರವಾಸ ಕಾರ್ಯಕ್ರಮಕ್ಕೆ ಆಗಮಿಸಿದ ಸಂಸದ ಡಾ.ಕೆ.ಸುಧಾಕರ್ ರನ್ನು ಪಟ್ಟಣದ ಪ್ರವಾಸಿ ಮಂದಿರದಲ್ಲಿ ರೈತ ಸಂಘದ ಮುಖಂಡರು ಬೇಟಿ ನೀಡಿ ಮನವಿಪತ್ರ ಸಲ್ಲಿಸಿರುತ್ತಾರೆ
Source : Chikkaballapur Reporter
ಬಾಗೇಪಲ್ಲಿ: ಕ್ಷೇತ್ರದ ರಾಜಕೀಯ ಬಲಾಢ್ಯರ ಮನೆ ಸೇರಿರುವ ಕೋಟ್ಯಾಂತರ ರೂ ಮೌಲ್ಯದ ಸರ್ಕಾರಿ ಜಮೀನುಗಳ ಮೂಲ ದಾಖಲೆಗಳನ್ನು ಕಂದಾಯ ಇಲಾಖೆಗೆ ಒಪ್ಪಿಸಿ, ಭೂ ದಾಖಲೆ ಇಲಾಖೆಯ ಕಡತಗಳ ನಾಪತ್ತೆ ಪ್ರಕರಣವನ್ನು ಉನ್ನತ ಶ್ರೇಣಿಯ ಅಧಿಕಾರಿ ಗಳ ತಂಡದಿಂದ ತನಿಖೆ ಮಾಡಿಸಿ ಕಾನೂನು ಬಾಹಿರವಾಗಿ ಸರ್ಕಾರಿ ಜಮೀನಿನ ಕಡತ ಗಳನ್ನು ನಾಪತ್ತೆ ಮಾಡಿರುವ ಕಂದಾಯ ಇಲಾಖೆ ಅಧಿಕಾರಿಗಳ ವಿರುದ್ದ ಕಾನೂನು ಜರುಗಿಸಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ತಾಲೂಕು ಸಮಿತಿವತಿಯಿಂದ ಸಂಸದ ಡಾ.ಕೆ.ಸುಧಾಕರ್‌ಗೆ ಮನವಿಪತ್ರ ಸಲ್ಲಿಸಿ ಆಕ್ರೋಶ ವ್ಯಕ್ತಪಡಿಸಿದರು.
ಬಾಗೇಪಲ್ಲಿ ತಾಲೂಕಿನ ವಿವಿಧ ಗ್ರಾಮ ಪಂಚಾಯತಿಗಳಲ್ಲಿ ಜ.17ರಂದು ಹಮ್ಮಿ ಕೊಂಡಿದ್ದ ಹಳ್ಳಿಯ ಕಡೆ ಸಂಸದರ ನಡೆ ಪ್ರವಾಸ ಕಾರ್ಯಕ್ರಮಕ್ಕೆ ಆಗಮಿಸಿದ ಸಂಸದ ಡಾ.ಕೆ.ಸುಧಾಕರ್‌ರನ್ನು ಪಟ್ಟಣದ ಪ್ರವಾಸಿ ಮಂದಿರದಲ್ಲಿ ರೈತ ಸಂಘದ ಮುಖಂಡರು ಬೇಟಿ ನೀಡಿ ಮನವಿಪತ್ರ ಸಲ್ಲಿಸಿರುತ್ತಾರೆ.
ರೈತ ಸಂಘದ ಜಿಲ್ಲಾಧ್ಯಕ್ಷ ಹೆಚ್.ಎನ್.ಗೋವಿಂದರೆಡ್ಡಿ ಮಾತನಾಡಿ, ಬಾಗೇಪಲ್ಲಿ ಮತ್ತು ಚೇಳೂರು ತಾಲೂಕು ವ್ಯಾಪ್ತಿಯಲ್ಲಿರುವ ಸರ್ಕಾರಿ ಜಮೀನಿನ ಮೇಲೆ ರಾಜಕೀಯ ಕುಳಗಳ ಕಣ್ಣು ಬಿದ್ದಿದ್ದು, ನಮೂನೆ ೫೩ ಹಾಗೂ ೫೭ ನಲ್ಲಿ ಅರ್ಜಿ ಸಲ್ಲಿಸಿಕೊಂಡಿರುವ ರೈತರಿಗೆ ಮಂಜೂರಾಗಿರುವ ದರಖಾಸ್ತು ಜಮೀನುಗಳನ್ನು ಲಪಾಟಿಸುವ ದಂಧೆ ತಾಲೂಕಿನಲ್ಲಿ ಎಗ್ಗಿಲ್ಲದೆ ನಡೆಯುತ್ತಿದೆ. ೨೦ ವರ್ಷಗಳ ಹಿಂದೆ ಸರ್ಕಾರವೇ ನೀಡಿರುವ ಸಾಗುವಳಿ ಚೀಟಿ ಇದ್ದರೂ ಸಹ ಕಂದಾಯ ಅಧಿಕಾರಿಗಳು ರೈತರ ಹೆಸರಿಗೆ ಜಮೀನು ಖಾತೆ ಮಾಡಿ ಕೊಡುತ್ತಿಲ್ಲ.
ಖಾತೆ ಮಾಡಿಕೊಡದ ಬಗ್ಗೆ ಕಾರಣ ಕೇಳಿದರೆ ಭೂ ಧಾಖಲೆ ಇಲಾಖೆಯಲ್ಲಿ ಮೂಲ ಕಡತಗಳು ಇಲ್ಲವೆಂದು ಹಿಂಬರಹ ನೀಡಿ ಕೈ ತೊಳೆದುಕೊಳ್ಳುತ್ತಿದ್ದಾರೆ. ಸರ್ಕಾರಿ ಜಮೀನಿ ನ ಕಡತಗಳ ನಾಪತ್ತೆ ಕುರಿತು ಮಾನ್ಯ ಕಂದಾಯ ಸಚಿವರಾದ ಕೃಷ್ಣ ಬೈರೇಗೌಡರಿಗೆ ರೈತ ಸಂಘದ ವತಿಯಿಂದ ಪತ್ರ ಬರೆದು ನ್ಯಾಯ ಒದಗಿಸಿಕೊಡುವಂತೆ ಮನವಿ ಸಲ್ಲಿಸಿದರೂ ರೈತರಿಗೆ ನ್ಯಾಯ ಸಿಗುತ್ತಿಲ್ಲ, ತಾಲೂಕು ಕಚೇರಿಯಲ್ಲಿ ಸರ್ಕಾರಿ ಕೆಲಸ ನಿರ್ವಹಿಸುತ್ತಿರುವ ಅಧಿಕಾರಿಗಳು ಭೂ ಮಾಫಿಯ ಹಾಗೂ ಜನಪ್ರತಿನಿದಿಗಳೊಂದಿಗೆ ಶಾಮೀಲಾಗಿ ರೈತರಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ದೂರಿದರು.
ತಾಲೂಕಿನ ಕೊಂಡಿರೆಡ್ಡಿಪಲ್ಲಿ ಹಾಗೂ ಹೊಸಹುಡ್ಯ ಗ್ರಾಮಗಳ ರೈತರಿಗೆ ಭೂ ಸ್ವಾಧೀನದ ಬಗ್ಗೆ ಮಾಹಿತಿ ನೀಡದೆ, ಪರಿಹಾರ ಹಣವೂ ಸಲ್ಲಿಸದೆ ಏಕಾಎಕಿ ರೈತರ ಜಮೀನನ್ನು ಸ್ವಾಧೀನಪಡಿಸಿಕೊಂಡು ಪಹಣಿಗಳಲ್ಲಿ ರೈತರ ಹೆಸರುಗಳನ್ನು ತೆಗೆದು ಕೆಐಎಡಿಬಿ ಎಂದು ನಮೂದಿಸಿರುತ್ತಾರೆ, ಈ ಬಗ್ಗೆ ತಹಶೀಲ್ದಾರ್‌ರನ್ನು ರೈತ ಸಂಘ ಪ್ರಶ್ನಿಸಿದರೆ ಒಂದು ವಾರ ದೊಳಗೆ ರೈತರ ಹೆಸರಿಗೆ ಪಹಣಿ ಮಾಡಿಕೊಡುವ ಭರವಸೆ ನೀಡಿದ್ದರು.
ಆದರೆ ೧ ತಿಂಗಳಾದರೂ ಪಹಣಿಯಲ್ಲಿ ರೈತರ ಹೆಸರು ನಮೂದಿಸಿಲ್ಲ. ಅಭಿವೃದ್ದಿ ಹೆಸರಿ ನಲ್ಲಿ ರೈತರ ಜಮೀನನ್ನು ಭೂ ಸ್ವಾಧೀನ ಮಾಡಿಕೊಳ್ಳುತ್ತಿರುವ ಕೆಐಎಡಿಬಿ ಮಂಡಳಿ 50-50 ಅನುಪಾತದಲ್ಲಿ ಜಮೀನು ಕಳೆದುಕೊಳ್ಳುವ ರೈತರಿಗೆ ಉದ್ಯಮಿ ಪಾಲುದಾರಿಕೆ ನೀಡ ಬೇಕೆಂದು ಸರ್ಕಾರದ ಮೇಲೆ ಒತ್ತಡ ಹಾಕಿ ರೈತರಿಗೆ ನ್ಯಾಯ ಒದಗಿಸಿ ಕೊಡಬೇಕೆಂದು ಒತ್ತಾಯಿಸಿದರು.
ರೈತ ಸಂಘದಿಂದ ಮನವಿ ಸ್ವೀಕರಿಸಿದ ಸಂಸದ ಡಾ.ಕೆ.ಸುಧಾಕರ್ ಉಪ ವಿಭಾಗೀಯ ಅಧಿಕಾರಿ ಅಶ್ವಿನ್‌ರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಸರ್ಕಾರಿ ಜಮೀನು ಕಡತಗಳ ನಾಪತ್ತೆ ಪ್ರಕರಣ ಹಾಗೂ ಕೆಐಎಡಿಬಿ ಮಂಡಳಿ ಸಮಸ್ಯೆ ಕುರಿತು ಚರ್ಚಿಸಿ ಮಾತನಾಡಿ ದರು.
ಬಾಗೇಪಲ್ಲಿ ತಾಲೂಕು ಕಚೇರಿಯಲ್ಲಿ ಸರ್ಕಾರಿ ಜಮೀನಿನ ಕಡತಗಳು ನಾಪತ್ತೆ ಆಗಿದ್ದರೂ ಸರ್ಕಾರ ಕ್ರಮ ಕೈಗೊಂಡಿಲ್ಲ ಎಂದರೆ, ರೈತರ ವಿಚಾರದಲ್ಲಿ ರಾಜ್ಯ ಸರ್ಕಾರ ಯಾವ ರೀತಿ ವರ್ತನೆ ಮಾಡುತ್ತಿದೆ ಎಂಬುದೆ ಅಚ್ಚರಿ ಉಂಟು ಮಾಡುತ್ತಿದೆ ಎಂದು ಬೇಸರಿಸಿದರು.
ಸರ್ಕಾರಿ ಜಮೀನು ಕಡತಗಳ ನಾಪತ್ತೆ ಆಗಿರುವ ಬಗ್ಗೆ ಸಚಿವರಿಗೆ ದೂರು ಸಲ್ಲಿಸಿದರೂ ಜಿಲ್ಲಾಧಿಕಾರಿಗಳು ಕ್ರಮ ಕೈಗೊಂಡಿಲ್ಲ ಎಂದರೆ ಸರ್ಕಾರಿ ಕಚೇರಿಗಳಲ್ಲಿ ಭ್ರಷ್ಟಾಚಾರದ ಮಿತಿ ಮೀರಿದೆ ಎಂಬುದು ಅರ್ಥವಾಗುತ್ತಿದೆ. ಕೊಂಡರೆಡ್ಡಿಪಲ್ಲಿ, ಹೊಸಹುಡ್ಯ ಗ್ರಾಮದ ರೈತರ ಜಮೀನು ಕೆಐಎಡಿಬಿ ಮಂಡಳಿ ಹೆಸರಿಗೆ ವರ್ಗಾವಣೆ ಆಗಿರುವ ಬಗ್ಗೆ ಈಗಾಗಲೇ ಉಪವಿಭಾಗೀಯ ಅಧಿಕಾರಿಗಳೊಂದಿಗೆ ಚರ್ಚಿಸಿದ್ದು ರೈತರ ಹೆಸರುಗಳನ್ನು ನಮೂದಿಸು ವಂತೆ ಸೂಚಿಸಲಾಗಿದೆ ಅಧಿಕಾರಿಗಳು ತಮ್ಮ ತಪ್ಪುಗಳನ್ನು ಸರಿಪಡಿಸಿಕೊಂಡು ರೈತರ ಕೆಲಸ ಮಾಡಿಕೊಡದಿದ್ದರೆ ಬಾಗೇಪಲ್ಲಿ ತಹಶೀಲ್ದಾರ್ ಕಚೇರಿ ಮುಂಭಾಗದಲ್ಲಿ ದೊಡ್ಡ ಮಟ್ಟದ ಹೋರಾಟವನ್ನು ಹಮ್ಮಿಕೊಳ್ಳೋಣ ಎಂದು ರೈತ ಸಂಘದವರಿಗೆ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಹರಿನಾಥರೆಡ್ಡಿ, ಪಿಎಲ್‌ಡಿ ಬ್ಯಾಂಕ್ ಮಾಜಿ ನಿರ್ದೇಶಕ ನಾಗರಾಜುರೆಡ್ಡಿ, ಸೊಸೈಟಿ ಅಧ್ಯಕ್ಷ ಜೆಪಿರೆಡ್ಡಿ, ರೈತ ಸಂಘದ ತಾಲೂಕು ವಿ.ವೆಂಕಟಶಿವಾರೆಡ್ಡಿ, ಸದಸ್ಯರಾದ ಲಕ್ಷ್ಮೀನರಸಪ್ಪ, ಈಶ್ವರಪ್ಪ, ಚೌಡರೆಡ್ಡಿ, ವೆಂಕಟರಾಮರೆಡ್ಡಿ, ವೆಂಕಟೇಶ್, ನಾರಾಯಣಸ್ವಾಮಿ, ಎಲ್.ಜಿ.ಶ್ರೀಕಾಂತ್ ಮತ್ತಿತರರು ಇದ್ದರು.
ಇದನ್ನೂ ಓದಿ: MP Dr K Sudhakar: ತಾಲ್ಲೂಕಿನ ಐತಿಹಾಸಿಕ ಸ್ಥಳಗಳನ್ನು ಅಭಿವೃದ್ಧಿಪಡಿಸಲು ಸಂಸದ ಡಾ. ಕೆ.ಸುಧಾಕರ್‌ಗೆ ಕೃಷ್ಣ ಮನವಿ