ಆಂಧ್ರ ಸಿಎಂ ಚಂದ್ರಬಾಬು ನಾಯ್ಡುರನ್ನು ಭೇಟಿಯಾದ ಕ್ರಿಕೆಟರ್ ನಿತೀಶ್ ರೆಡ್ಡಿ!
ಆಸ್ಟ್ರೇಲಿಯಾ ವಿರುದ್ಧ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯಲ್ಲಿ ಮಿಂಚಿನ ಬ್ಯಾಟಿಂಗ್ ಪ್ರದರ್ಶನ ತೋರಿದ್ದ ಯುವ ಆಲ್‌ರೌಂಡರ್ ನಿತೀಶ್ ಕುಮಾರ್ ರೆಡ್ಡಿಗೆ 25 ಲಕ್ಷ ರೂ. ಚೆಕ್ ನೀಡಿದ ಆಂಧ್ರ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ಮನೆ ನೀಡುವ ಭರವಸೆಯನ್ನು ನೀಡಿದ್ದಾರೆ.
ನವದೆಹಲಿ: ಭಾರತ ಕ್ರಿಕೆಟ್ ತಂಡದ ಯುವ ಆಲ್‌ರೌಂಡರ್ ನಿತೀಶ್ ಕುಮಾರ್ ರೆಡ್ಡಿ ಅವರು ತಮ್ಮ ತಂದೆಯೊಂದಿಗೆ ಗುರುವಾರ ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರನ್ನು ಭೇಟಿಯಾಗಿದ್ದಾರೆ. ಆಸ್ಟ್ರೇಲಿಯಾ ಪ್ರವಾಸದ ಬಾರ್ಡರ್-ಗವಾಸ್ಕರ್ ಟ್ರೋಫಿ ಸರಣಿಯಲ್ಲಿ ನಿತೀಶ್ ರೆಡ್ಡಿ ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ನಿತೀಶ್ ರೆಡ್ಡಿಯನ್ನು ಆಂಧ್ರ ಸಿಎಂ ಅಭಿನಂದಿಸಿದ್ದಾರೆ.
2024ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಯಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡದ ಪರ ತಮ್ಮ ಆಲ್‌ರೌಂಡರ್ ಪ್ರದರ್ಶನದ ಮೂಲಕ ಎಲ್ಲರ ಗಮನವನ್ನು ಸೆಳೆದಿದ್ದ ನಿತೀಶ್ ಕುಮಾರ್ ರೆಡ್ಡಿ ಬಿಸಿಸಿಐ ಆಯ್ಕೆದಾರರ ಗಮನವನ್ನು ಸೆಳೆದಿದ್ದರು. ಅದರಂತೆ ಅವರನ್ನು ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ಭಾರತ ತಂಡಕ್ಕೆ ಆಯ್ಕೆ ಮಾಡಲಾಗಿತ್ತು.
ಅದರಂತೆ ಈ ಟೆಸ್ಟ್ ಸರಣಿಯಲ್ಲಿ ಯುವ ಆಲ್‌ರೌಂಡರ್ ತಮ್ಮ ಬ್ಯಾಟಿಂಗ್ ಮೂಲಕ ಎಲ್ಲರ ಗಮನವನ್ನು ಸೆಳೆದಿದ್ದರು. ಅವರು ಆಡಿದ್ದ 5 ಪಂದ್ಯಗಳ 9 ಇನಿಂಗ್ಸ್‌ಗಳಿಂದ 37.25ರ ಸರಾಸರಿಯಲ್ಲಿ 298 ರನ್‌ಗಳನ್ನು ಕಲೆ ಹಾಕಿದ್ದರು. ಆ ಮೂಲಕ ಈ ಟೆಸ್ಟ್ ಸರಣಿಯಲ್ಲಿ ಅತಿ ಹೆಚ್ಚು ರನ್ ಸಿಡಿಸಿದ ಬ್ಯಾಟ್ಸ್‌ಮನ್‌ಗಳ ಸಾಲಿನಲ್ಲಿ ನಾಲ್ಕನೇ ಸ್ಥಾನವನ್ನು ಪಡೆದಿದ್ದರು. ಇದರಲ್ಲಿ ಅವರು ಚೊಚ್ಚಲ ಶತಕವನ್ನೂ ಬಾರಿಸಿದ್ದರು.
IND vs ENG: ಭಾರತ ತಂಡಕ್ಕೆ ಬ್ಯಾಟಿಂಗ್ ಕೋಚ್ ಆಗಿ ಸಿತಾಂಶು ಕೊಟಕ್ ನೇಮಕ!
ಗುರುವಾರ ತಮ್ಮ ತಂದೆ ಹಾಗೂ ಆಂಧ್ರ ಕ್ರಿಕೆಟ್ ಅಸೋಸಿಯೇಷನ್ ಸದಸ್ಯರು ಆಂಧ್ರ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರನ್ನು ಭೀಟಿಯಾಗಿದ್ದರು. ಈ ವೇಳೆ ಯುವ ಬ್ಯಾಟ್ಸ್‌ಮನ್ ಅನ್ನು ಅವರು ಅಭಿನಂದಿಸಿದ್ದಾರೆ. ಈ ವೇಳೆ ಮಾತನಾಡಿದ ಅವರು, "ಕ್ರಿಕೆಟ್ ಸಾಂಘಿಕ ಆಟವಾಗಿದ್ದು, ಎಲ್ಲರೂ ಉತ್ತಮ ಸಾಧನೆ ಮಾಡಿದರೆ ಮಾತ್ರ ಯಶಸ್ಸು ಸಾಧ್ಯ," ಎಂದು ಹೇಳಿದ್ದಾರೆ.
ನಿತೀಶ್ ಕುಮಾರ್ ರೆಡ್ಡಿ ಅವರಿಗೆ ಅತೀ ಶೀಘ್ರದಲ್ಲಿ ಮನೆ ಮಂಜೂರು ಮಾಡಲಾಗುವುದು. ರಾಜ್ಯದ ಅಂತಾರಾಷ್ಟ್ರೀಯ ಕ್ರೀಡಾ ಪಟುಗಳ ಬೆಂಬಲಕ್ಕೆ ನಿಂತು ಎಲ್ಲ ರೀತಿಯಲ್ಲೂ ಪ್ರೋತ್ಸಾಹಿಸುತ್ತೇನೆ. ನಿತೀಶ್ ರೆಡ್ಡಿ ಭವಿಷ್ಯದಲ್ಲಿ ಇನ್ನಷ್ಟು ಯಶಸ್ಸು ಸಾಧಿಸಲು ಬಯಸುತ್ತೇನೆ ಎಂದು ಆಂಧ್ರ ಮುಖ್ಯಮಂತ್ತಿ ಹೇಳಿದ್ದಾರೆ.
ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ ಚಂದ್ರಬಾಬು ನಾಯ್ಡು
ಚಂದ್ರಬಾಬು ನಾಯ್ಡು ಅವರು ನಿತೀಶ್‌ಮಕುಮಾರ್ ರೆಡ್ಡಿ ಅವರನ್ನು ಭೇಟಿಯಾದ ವಿಷಯವನ್ನು ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. "ವಿಶ್ವದ ದೊಡ್ಡ ವೇದಿಕೆಯಲ್ಲಿ ಭಾರತವೇ ಹೆಮ್ಮೆ ಪಡುವಂತೆ ಮಾಡಿರುವ ನಿತೀಶ್, ತೆಲುಗು ರಾಷ್ಟ್ರದ ಮಿನುಗು ತಾರೆ. ಅವರ ಈ ಪ್ರಯಾಣಕ್ಕೆ ಬೆಂಬಲ ನೀಡಿದ ಪೋಷಕರಿಗೆ ಅಭಿನಂದನೆ ಸಲ್ಲಿಸುತ್ತೇನೆ. ನಿತೀಶ್ ಅವರು ಇನ್ನೂ ಹಲವು ಶತಕಗಳನ್ನು ಗಳಿಸಿ ಮುಂದಿನ ದಿನಗಳಲ್ಲಿ ತಮ್ಮ ಯಶಸ್ಸನ್ನು ಮುಂದುವರಿಸಲಿ," ಎಂದು ಶುಭ ಹಾರೈಸಿದ್ದಾರೆ.
Met with the exceptionally talented young cricketer, our very own @NKReddy07, today. Nitish is truly a shining star of the Telugu community, bringing pride to India on the global stage. I commended his parents for the support they've given him throughout his journey. Wishing him… pic.twitter.com/qEGHXvkMDw
— N Chandrababu Naidu (@ncbn) January 16, 2025
25 ಲಕ್ಷ ರೂ ಚೆಕ್ ಪಡೆದ ಯುವ ಕ್ರಿಕೆಟಿಗ
ನಿತೀಶ್ ಕುಮಾರ್ ರೆಡ್ಡಿ ಅವರಿಗೆ ಸಿಎಂ ಚಂದ್ರಬಾಬು ನಾಯ್ಡು ಅವರು ತಮ್ಮ ಕೈಯಿಂದ 25 ಲಕ್ಷ ರೂ ಚೆಕ್ ಅನ್ನು ನೀಡಿದ್ದಾರೆ. ರಾಜ್ಯದಿಂದ ಕಳೆದ ವರ್ಷ ಐಪಿಎಲ್‌ಗೆ ಐವರು ಆಟಗಾರರು ಆಯ್ಕೆಯಾಗಿದ್ದರು. ಮುಂದಿನ ವರ್ಷ 15 ಮಂದಿ ಆಯ್ಕೆಯಾಗುವಂತೆ ಶ್ರಮಿಸುವುದಾಗಿ ಅಸಿಎ ಸದಸ್ಯರೊಬ್ಬರು ಭರವಸೆ ನೀಡಿದ್ದಾರೆ.