Purnam Kumar Shaw: ಬಾತ್‌ರೂಂ ಇಲ್ಲ, ನಿದ್ದೆಗೆ ಅವಕಾಶ ಇಲ್ಲ...ಪಾಕ್‌ನಲ್ಲಿ ಕಳೆದ 21 ದಿನಗಳ ಭಯಾನಕ ಅನುಭವ ಬಿಚ್ಚಿಟ್ಟ ಬಿಎಸ್‌ಎಫ್ ಯೋಧ
ಮೇ 14ರಂದು ಪಾಕಿಸ್ತಾನ ಬಂಧನದಿಂದ ಬಿಡುಗಡೆಯಾದ ಬಿಎಸ್‌ಎಫ್ ಯೋಧ ಪೂರ್ಣಮ್ ಕುಮಾರ್ ಶಾ ಅಲ್ಲಿನ ಭಯಾನಕ ಅನುಭವವನ್ನು ಬಿಚ್ಚಿಟ್ಟಿದ್ದಾರೆ. ದೈಹಿಕ ಹಿಂಸೆ ನೀಡದಿದ್ದರೂ ಅಲ್ಲಿನ ಅಧಿಕಾರಿಗಳು ಹೇಗೆ ಮಾಸಿಕ ಕಿರುಕುಳ ನೀಡುತ್ತಿದ್ದರು ಎನ್ನುವುದನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.


ಹೊಸದಿಲ್ಲಿ: ಏ. 23ರಂದು ಪಂಜಾಬ್ ಬಳಿಯ ಅಂತಾರಾಷ್ಟ್ರೀಯ ಗಡಿ ದಾಟಿ ಆಕಸ್ಮಿಕವಾಗಿ ಪಾಕ್‌ಗೆ ಕಾಲಿಟ್ಟು, ಅಲ್ಲಿನ ರೇಂಜರ್‌ಗಳಿಂದ ಬಂಧಿಸಲ್ಪಟ್ಟು ಸುಮಾರು 21 ದಿನ ಅವರ ವಶದಲ್ಲೇ ಇದ್ದ ಪಶ್ವಿಮ ಬಂಗಾಳ ಮೂಲದ ಬಿಎಸ್‌ಎಫ್ ಯೋಧ ಪೂರ್ಣಮ್ ಕುಮಾರ್ ಶಾ (Purnam Kumar Shaw) ಅವರನ್ನು ಕೊನೆಗೂ ಮೇ 14ರಂದು ರಿಲೀಸ್ ಮಾಡಲಾಗಿದೆ. ಇದೀಗ ಅವರು ಸುಮಾರು 21 ದಿನ ಪಾಕಿಸ್ತಾನದಲ್ಲಿ ಕಳೆದ ಅನುಭವವನ್ನು ಬಿಚ್ಚಿಟ್ಟಿದ್ದಾರೆ. ದೈಹಿಕ ಹಿಂಸೆ ನೀಡದಿದ್ದರೂ ಅಲ್ಲಿನ ಅಧಿಕಾರಿಗಳು ಹೇಗೆ ಮಾಸಿಕ ಕಿರುಕುಳ ನೀಡುತ್ತಿದ್ದರು ಎನ್ನುವುದನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ. ಸೂಕ್ತ ಬಾತ್‌ರೂಂ ವ್ಯವಸ್ಥೆ ಇಲ್ಲದೆ, ಸರಿಯಾಗಿ ಹಲ್ಲುಜ್ಜಲೂ ಸಾಧ್ಯವಾಗದೆ ಯಾವ ರೀತಿ ಹಿಂಸೆ ಅನುಭವಿಸಿದೆ ಎನ್ನುವುದನ್ನು ಅವರು ವಿವರಿಸಿದ್ದಾರೆ. 3 ವಾರಗಳ ಕಾಲ ಮಾನಸಿಕ ಹಿಂಸೆ ಅನುಭವಿಸಿದ ಅವರು ಆಘಾತಕ್ಕೆ ಒಳಗಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸದ್ಯ ಅವರಿಗೆ ಸೂಕ್ತ ಆರೈಕೆ ನೀಡಲಾಗುತ್ತಿದೆ.
ಮೂಲಗಳ ಪ್ರಕಾರ, ಶಾ ಅವರಿಗೆ ದೈಹಿಕ ಹಿಂಸೆ ನೀಡಲಾಗಿಲ್ಲ. ಆದರೆ ಬಂಧನದ ವೇಳೆ ಅವರು ಮಾನಸಿಕ ಒತ್ತಡಕ್ಕೆ ಒಳಗಾಗಿದ್ದರು. ಅವರಿಗೆ ಸೂಕ್ತ ಬಾತ್‌ರೂಂ ವ್ಯವಸ್ಥೆ ಕಲ್ಪಿಸಿರಲಿಲ್ಲ, ಸರಿಯಾಗಿ ನಿದ್ದೆ ಮಾಡಲೂ ಬಿಡುತ್ತಿರಲಿಲ್ಲ. ಅಷ್ಟೇಕೆ ಹಲ್ಲುಜ್ಜಲೂ ಸಾಧ್ಯವಾಗುತ್ತಿರಲಿಲ್ಲ. ಇದರಿಂದ ಅವರು ಮಾನಸಿಕವಾಗಿ ಜರ್ಝರಿತರಾಗಿದ್ದಾರೆ ಎಂದು ಮೂಲಗಳು ವರದಿ ಮಾಡಿವೆ.
ಪೂರ್ಣಮ್ ಕುಮಾರ್ ಶಾ ಅವರನ್ನು ಬಂಧಿಸಿದ ವಿಡಿಯೊ ನೋಡಿ:
21 days in darkness, BSF Jawan blindfolded, sleep-deprived in Pakistani custody. #BSFjawan #India #Pakistan #IndiaPakistanWar pic.twitter.com/W4D7nUe2dR
— Bhavya Khanna (@bhavyakhannaaa) May 16, 2025
ಈ ಸುದ್ದಿಯನ್ನೂ ಓದಿ: BSF Soldier: ಆಕಸ್ಮಿಕ ಗಡಿ ದಾಟಿದ ಬಿಎಸ್‌ಎಫ್ ಯೋಧನ ಬಿಡುಗಡೆ ಮಾಡಿದ ಪಾಕ್
"ಅವರ ಕಣ್ಣನ್ನು ಹಲವು ಬಾರಿ ಮುಚ್ಚಲಾಗಿತ್ತು. ಜತೆಗೆ ಅಪರಿಚಿತರ ಭಯವು ಅವರ ಮಾನಸಿಕ ಆರೋಗ್ಯದ ಮೇಲೂ ಪರಿಣಾಮ ಬೀರಿದೆ" ಎಂದು ವರದಿ ತಿಳಿಸಿದೆ. ಗಡಿಯಲ್ಲಿ ಬಿಎಸ್‌ಎಫ್ ನಿಯೋಜನೆಯಂತಹ ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ಸೂಕ್ಷ್ಮ ವಿವರಗಳ ಬಗ್ಗೆಯೂ ಪದೇ ಪದೆ ಪ್ರಶ್ನಿಸಲಾಯಿತು ಎನ್ನುವುದನ್ನು ಅವರು ತಿಳಿಸಿದ್ದಾರೆ ಎನ್ನಲಾಗಿದೆ. 3 ವಾರಗಳ ಸೆರೆಯಲ್ಲಿ ಅನುಭವಿಸಿದ ಮಾನಸಿಕ ಆಘಾತದಿಂದ ಅವರನ್ನು ಹೊರತರಲು ಚಿಕಿತ್ಸೆ ನೀಡಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ಮೇ 14ರ ಬೆಳಗ್ಗೆ 10.30ಕ್ಕೆ ಅಟ್ಟಾರಿ-ವಾಘಾ ಗಡಿಯ ಮೂಲಕ ಪೂರ್ಣಮ್ ಕುಮಾರ್ ಶಾ ಬಿಡುಗಡೆಗೆ ಮುಂಚಿತವಾಗಿ ಪಾಕಿಸ್ತಾನ ರೇಂಜರ್‌ಗಳೊಂದಿಗೆ ಭಾರತ ಸರ್ಕಾರ, ಬಿಎಸ್‌ಎಫ್ ಹಲವು ಸುತ್ತಿನ ಮಾತುಕತೆಗಳನ್ನು ನಡೆಸಿದೆ.
ಪೂರ್ಣಮ್ ಕುಮಾರ್ ಶಾ ಅವರ ತಂದೆ ಭೋಲಾನಾಥ್ ಶಾ ಮಾತನಾಡಿ, ಮಗ ಮತ್ತೆ ದೇಶಕ್ಕಾಗಿ ಕೆಲಸ ಮಾಡಬೇಕು ಎಂದು ಹೇಳಿದ್ದಾರೆ. "ಪೂರ್ಣಮ್ ಮತ್ತೆ ದೇಶಕ್ಕಾಗಿ ಕೆಲಸ ಮಾಡಬೇಕೆಂದು ನಾನು ಬಯಸುತ್ತೇನೆ. ಅವನು ಮತ್ತೆ ನಮ್ಮ ದೇಶ ಸೇವೆಗೆ ಮರಳುವ ವಿಶ್ವಸವಿದೆʼʼ ಎಂದು ತಿಳಿಸಿದರು.
ಪೂರ್ಣಮ್ ಸುರಕ್ಷಿತವಾಗಿ ಭಾರತಕ್ಕೆ ಬರುತ್ತಲೇ ಅವರ ಪತ್ನಿ ರಜನಿ ಶಾ ಕೇಂದ್ರ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸಿದ್ದರು. "ಪ್ರಧಾನಿ ಮೋದಿ ಇದ್ದರೆ ಎಲ್ಲವೂ ಸಾಧ್ಯ. ಏ. 22ರಂದು ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಉಗ್ರರು ದಾಳಿ ನಡೆಸಿ 26 ಪ್ರವಾಸಿಗರನ್ನು ಹತ್ಯೆಗೈದಿದ್ದರು. ಮಹಿಳೆಯರ ಮುತೈದೆತನ ಕಸಿದುಕೊಂಡ ಉಗ್ರರ ವಿರುದ್ಧ ಕೇಂದ್ರ ಸರ್ಕಾರ ಆಪರೇಷನ್ ಸಿಂಧೂರ್ ಮೂಲಕ 15-20 ದಿನಗಳಲ್ಲಿ ಸೇಡು ತೀರಿಸಿಕೊಂಡಿದೆ. ಅದಾಗಿ 4-5 ದಿನಗಳ ನಂತರ ಕೇಂದ್ರ ನನ್ನ ಮುತೈದೆತನವನ್ನೂ ಮರಳಿ ತಂದಿದೆ. ಆದ್ದರಿಂದ ನಾನು ನನ್ನ ಕೈಗಳನ್ನು ಮಡಚಿ ಕೇಂದ್ರ ಸರ್ಕಾರಕ್ಕೆ ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸುತ್ತೇನೆʼʼ ಎಂದು ರಜನಿ ಶಾ ಹೇಳಿದ್ದರು.