ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ದೇಶವೇ ತಲೆ ತಗ್ಗಿಸುವ ಘಟನೆ; ಆಭರಣಕ್ಕಾಗಿ ತಾಯಿಯ ಅಂತ್ಯ ಸಂಸ್ಕಾರ ನಡೆಸಲು ಬಿಡದ ಪಾಪಿ ಪುತ್ರ

Viral Video: ರಾಜಸ್ಥಾನದಲ್ಲಿ ಇಡೀ ದೇಶವೇ ತಲೆ ತಗ್ಗಿಸುವಂತ ಘಟನೆಯೊಂದು ನಡೆದಿದೆ. ಆಭರಣ ನೀಡದ ಹೊರತು ತಾಯಿಯ ಅಂತ್ಯಕ್ರಿಯೆ ನಡೆಸಲು ಬಿಡುವುದಿಲ್ಲ ಎಂದು ಪಾಪಿ ಪುತ್ರನೊಬ್ಬ ಗಲಾಟೆ ಮಾಡಿರುವ ವಿಡಿಯೊ ವೈರಲ್‌ ಆಗಿದೆ. ನೆಟ್ಟಿಗರು ಆತನ ವರ್ತನೆಗೆ ಕಿಡಿಕಾರಿದ್ದಾರೆ.

ಆಭರಣಕ್ಕಾಗಿ ತಾಯಿಯ ಅಂತ್ಯ ಸಂಸ್ಕಾರ ನಡೆಸಲು ಬಿಡದ ಪಾಪಿ ಪುತ್ರ

Profile Ramesh B May 16, 2025 7:04 PM

ಜೈಪುರ: ʼಹಣ ಕಂಡರೆ ಹೆಣವೂ ಬಾಯಿ ಬಿಡುತ್ತದೆʼ ಎನ್ನವುದು ಗಾದೆ ಮಾತು. ಆದರೆ ರಾಜಸ್ಥಾನದ ಪಾಪಿ ಮಗನೊಬ್ಬ ಆಭರಣದ ಆಸೆಗೆ ತಾಯಿಯ ಅಂತ್ಯ ಸಂಸ್ಕಾರಕ್ಕೆ ತಡೆ ಒಡ್ಡಿದ ಹೀನ ಘಟನೆ ನಡೆದಿದೆ. ಹೆತ್ತ ತಾಯಿ ಮೃತಪಟ್ಟಾಗ ಆ ದುಃಖ ಪಡುವ ಬದಲು ಆತನಿಗೆ ತಾಯಿಯ ಬೆಳ್ಳಿ ಆಭರಣವೇ ಮುಖ್ಯವಾಗಿದೆ. ಇದಕ್ಕಾಗಿ ಸಹೋದರನೊಂದಿಗೆ ಜಗಳಕ್ಕಿಳಿದ್ದಾನೆ. ಸದ್ಯ ಈ ಘಟನೆ ವಿಡಿಯೊ ಸೋಶಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದ್ದು (Viral Video), ಆತನ ಕೃತ್ಯ ಕಂಡು ಇಡೀ ದೇಶವೇ ನಾಚಿಕೆಯಿಂದ ತಲೆ ತಗ್ಗಿಸುವಂತಾಗಿದೆ.

ರಾಜಸ್ಥಾನದ ಕೋಟ್‌ಪುಟ್ಲಿ-ಬೆಹ್ರೋರ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ತಾಯಿಯ ಬೆಳ್ಳಿ ಆಭರಣವನ್ನು ತನಗೆ ನೀಡದ ಹೊರತು ಆಕೆಯ ಅಂತ್ಯ ಸಂಸ್ಕಾರಕ್ಕೆ ಅವಕಾಶ ನೀಡುವುದಿಲ್ಲ ಎಂದು ಮಗರಾಯ ರಾದ್ಧಾಂತ ಎಬ್ಬಿಸಿದ್ದಾನೆ. ಅಲ್ಲದೆ ಚಿತೆಯ ಮೇಲೆ ಮಲಗಿ ಆಭರಣ ನೀಡದೆ ತಾಯಿಯ ಅಂತ್ಯಕ್ರಿಯೆ ನಡೆಸಲು ಬಿಡುವುದಿಲ್ಲ. ಬೇಕಿದ್ದರೆ ತನ್ನನ್ನೂ ಸುಟ್ಟುಬಿಡಿ ಎಂದು ಅಮಾನವೀಯವಾಗಿ ನಡೆದುಕೊಂಡಿದ್ದಾನೆ. ಸದ್ಯ ಆತನ ಕೃತ್ಯಕ್ಕೆ ದೇಶಾದ್ಯಂತ ಖಂಡನೆ ವ್ಯಕ್ತವಾಗುತ್ತಿದ್ದು, ನೆಟ್ಟಿಗರು ಆತನ ಬೆಂಡೆತ್ತುತ್ತಿದ್ದಾರೆ.

ವೈರಲ್‌ ವಿಡಿಯೊ ಇಲ್ಲಿದೆ ನೋಡಿ:



ಈ ಸುದ್ದಿಯನ್ನೂ ಓದಿ: ‌Viral Video: ಡಿಜೆ ಹಾಡಿನ ವಿಚಾರಕ್ಕೆ ಜಗಳ; ಕ್ಷಣಾರ್ಧದಲ್ಲಿ ರಣರಂಗವಾದ ಮದುವೆ ಮನೆ-ವಿಡಿಯೊ ವೈರಲ್!

ಘಟನೆ ವಿವರ

ಈ ಘಟನೆ ವಿರಾಟ್‌ ನಗರದ ಲೀಲಾ ಕ ಬಸ್‌ ಗ್ರಾಮದಲ್ಲಿ ಮೇ 3ರಂದು ನಡೆದಿದೆ. 80 ವರ್ಷದ ಭೂರಿ ದೇವಿ ವಯೋಸಹಜ ಕಾರಣದಿಂದ ಮೃತಪಟ್ಟಿದ್ದರು. ಈ ವೇಳೆ ಗ್ರಾಮಸ್ಥರೆಲ್ಲ ಅಂತಿಮ ದರ್ಶನಕ್ಕೆ ನೆರೆದಿದ್ದರು. ಕುಟುಂಬಸ್ಥರು ಅಂತ್ಯಕ್ರಿಯೆಗೆ ಸಿದ್ಧತೆ ನಡೆಸತೊಡಗಿದರು. ಆಗಲೇ ಭೂರಿ ದೇವಿ ಅವರ ಮಗ ನಾಟಕ ಶುರುವಿಟ್ಟುಕೊಂಡಿದ್ದ.

ಭೂರಿ ದೇವಿ ಅವರ ಏಳು ಮಕ್ಕಳ ಪೈಕಿ ಐದನೆಯವನಾದ ಓಂ ಪ್ರಕಾಶ್‌ ಇದ್ದಕ್ಕಿದ್ದಂತೆ, ʼʼನನಗೆ ಮೊದಲು ಆಕೆಯ ಬೆಳ್ಳಿ ಬಳೆಗಳನ್ನು ನೀಡಿ. ಅದಾದ ಬಳಿಕ ಅಂತ್ಯ ಸಂಸ್ಕಾರ ನಡೆಸಿʼʼ ಎಂದು ಕಿರುಚತೊಡಗಿದ.

ಸ್ಥಳೀಯರ ಪ್ರಕಾರ ಭೂರಿ ದೇವಿ ಮೃತಪಟ್ಟಾಗ ಅವರ ಆಭರಣಗಳನ್ನು ಹಿರಿಯ ಮಗ ಗಿರ್ಧಾರಿಗೆ ಹಸ್ತಾಂತರಿಸಲಾಗಿತ್ತು. ಇದರಿಂದ ಕುಪಿತನಾದ ಓಂ ಪ್ರಕಾಶ್‌ ಕ್ಯಾತೆ ತೆಗೆದಿದ್ದಾನೆ. ಇನ್ನೇನು ತಾಯಿಯ ಮೃತದೇಹವನ್ನು ಚಿತೆಯಲ್ಲಿ ಇಡಬೇಕು ಎನ್ನುವಷ್ಟರಲ್ಲಿ ತಾಯಿಯ ಆಭರಣ ತನಗೆ ನೀಡಬೇಕು ಎಂದು ಹಠ ಮಾಡತೊಡಗಿದ. ಆಭರಣ ತನಗೆ ನೀಡದಿದ್ದರೆ ತಾಯಿಯ ಅಂತ್ಯಕ್ರಿಯೆ ನಡೆಸಲು ಬಿಡುವುದಿಲ್ಲ ಎಂದು ಹೇಳಿದ.

ಆಘಾತಕ್ಕೊಳಗಾಗ ಮನೆಯವರು ಮತ್ತು ಸ್ಥಳೀಯರು ಆತನ ಮನವೊಲಿಸಲು ಮುಂದಾದರು. ಇದರಿಂದ ಸಮಾಧಾನಗೊಳ್ಳದ ಆತ ತಾಯಿಯ ಜತೆ ತನ್ನನ್ನೂ ಸುಟ್ಟುಬಿಡಿ. ಆದರೆ ಆಭರಣ ಬಿಟ್ಟು ಬಿಡುವ ಪ್ರಶ್ನೆಯೇ ಇಲ್ಲ ಎಂದು ಹೇಳಿ ಚಿತೆ ಮೇಲೆ ಮಲಗಿ ರಂಪ ಮಾಡಿದ. ಈ ನಾಟಕ ಸುಮಾರು 2 ಗಂಟೆಗಳ ಕಾಲ ನಡೆಯಿತು. ಕೊನೆಗೆ ಹಿರಿಯ ಸಗೋದರ ಆಭರಣ ನೀಡಲು ಒಪ್ಪಿಕೊಂಡ. ಬಳಿಕ ಓಂ ಪ್ರಕಾಶ್‌ ತಾಯಿಯ ಅಂತ್ಯಕ್ರಿಯೆ ನಡೆಸಲು ಒಪ್ಪಿಗೆ ಸೂಚಿಸಿದ್ದಾನೆ ಎಂದು ಮೂಲಗಳು ತಿಳಿಸಿವೆ.