Dheekshith Shetty: ತಮ್ಮದೇ ಪ್ರೊಡಕ್ಷನ್ ಹೌಸ್ ಮೂಲಕ ಹೊಸ ಸಿನಿಮಾ ಘೋಷಿಸಿದ ʼದಿಯಾ' ಹೀರೋ ದೀಕ್ಷಿತ್ ಶೆಟ್ಟಿ
ದೀಕ್ಷಿತ್ ಶೆಟ್ಟಿ 'ಧೀ ಸಿನಿಮಾಸ್' ಪ್ರೊಡಕ್ಷನ್ ಹೌಸ್ ಘೋಷಿಸಿ ನಿರ್ಮಾಪಕರಾಗಿಯೂ ಇದೀಗ ಗುರುತಿಸಿಕೊಂಡಿದ್ದಾರೆ. ʼಬ್ಲಿಂಕ್ʼ ಚಿತ್ರದ ಯಶಸ್ಸಿನ ನಂತರ ದೀಕ್ಷಿತ್ ಶೆಟ್ಟಿ ಹಾಗೂ ಶ್ರೀನಿಧಿ ಬೆಂಗಳೂರು ಇದೀಗ ʼವಿಡಿಯೋʼ ಎಂಬ ಚಿತ್ರದ ಮೂಲಕ ಮತ್ತೆ ಒಂದಾಗಿದ್ದಾರೆ. ಈ ಚಿತ್ರದ ಮೂಲಕ ದೀಕ್ಷಿತ್ ಶೆಟ್ಟಿ ತಮ್ಮದೇ ನಿರ್ಮಾಣ ಸಂಸ್ಥೆಯನ್ನು ಸ್ಥಾಪಿಸಿದ್ದಾರೆ.

DHEE CINEMAS

ಬೆಂಗಳೂರು: ಕನ್ನಡದ ʼದಿಯಾʼ, ʼಬ್ಲಿಂಕ್ʼ, ತೆಲುಗಿನ ʼದಸರಾʼ ಸೇರಿದಂತೆ ಹಲವು ಚಿತ್ರಗಳ ಮೂಲಕ ಜನಪ್ರಿಯರಾಗಿರುವ ನಟ ದೀಕ್ಷಿತ್ ಶೆಟ್ಟಿ (Dheekshith Shetty) ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ. ಸದ್ಯ ದೀಕ್ಷಿತ್ ಶೆಟ್ಟಿ 'ಧೀ ಸಿನಿಮಾಸ್' ಎನ್ನುವ ತಮ್ಮದೇ ಪ್ರೊಡಕ್ಷನ್ ಹೌಸ್ ಘೋಷಿಸಿ ನಿರ್ಮಾಪಕರಾಗಿಯೂ ಕಲಾ ಸೇವೆ ಸಲ್ಲಿಸಲು ಮುಂದಾಗಿದ್ದಾರೆ. ʼಬ್ಲಿಂಕ್ʼ ಚಿತ್ರದ ಯಶಸ್ಸಿನ ನಂತರ ಮತ್ತೆ ಒಂದಾದ ದೀಕ್ಷಿತ್ ಶೆಟ್ಟಿ ಹಾಗೂ ಶ್ರೀನಿಧಿ ಬೆಂಗಳೂರು ಇದೀಗ ʼವಿಡಿಯೋʼ ಎಂಬ ಚಿತ್ರದ ಮೂಲಕ ಮ್ಯಾಜಿಕ್ ಸೃಷ್ಟಿಸಲು ಮುಂದಾಗಿದ್ದಾರೆ. ಈ ಚಿತ್ರವನ್ನು 'ಧೀ ಸಿನಿಮಾಸ್' ಪ್ರೊಡಕ್ಷನ್ ಹೌಸ್ ನಿರ್ಮಿಸಲಿದೆ.
ʼಬ್ಲಿಂಕ್ʼ ಚಿತ್ರದ ಯಶಸ್ಸಿನ ನಂತರ ದೀಕ್ಷಿತ್ ಶೆಟ್ಟಿ ಹಾಗೂ ಶ್ರೀನಿಧಿ ಬೆಂಗಳೂರು ಮತ್ತೆ ಕೈ ಜೋಡಿಸಿದ್ದು, ಇದೀಗ ʼವಿಡಿಯೋʼ ಎಂಬ ಚಿತ್ರದ ಮೂಲಕ ಪ್ರೇಕ್ಷಕರನ್ನು ಮನರಂಜಿಸಲು ಮುಂದಾಗಿದ್ದಾರೆ. 'ಧೀ ಸಿನಿಮಾಸ್' ಪ್ರೊಡಕ್ಷನ್ ಹೌಸ್ ಅಡಿ ಬರುತ್ತಿರುವ ಚೊಚ್ಚಲ ಚಿತ್ರ ಇದಾಗಿದೆ. ಈ ಚಿತ್ರವು ಫೌಂಡ್ ಫೂಟೇಜ್ ಜಾನರ್ ಚಿತ್ರವಾಗಿದ್ದು ವ್ಲಾಗ್ ಮತ್ತು ಡಾಕ್ಯುಮೆಂಟರಿ ಶೈಲಿಯಲ್ಲಿ ಬರಲಿದೆ ಎಂದು ನಿರ್ದೇಶಕ ಶ್ರೀನಿಧಿ ಬೆಂಗಳೂರು ಹೇಳಿದ್ದಾರೆ.
ಕಳೆದ ಹನ್ನೊಂದು ವರ್ಷಗಳಿಂದ ನಟನಾಗಿ ಕನ್ನಡ ಮಾತ್ರವಲ್ಲದೆ ತೆಲುಗು, ತಮಿಳು, ಮಲಯಾಳಂ ಚಿತ್ರಗಳಲ್ಲೂ ಅಭಿನಯಿಸುತ್ತಿರುವ ದೀಕ್ಷಿತ್ ಶೆಟ್ಟಿ ಈ ಚಿತ್ರದ ಮೂಲಕ ನಿರ್ಮಾಪಕರಾಗಿ ಉದಯೋನ್ಮುಖ ಪ್ರತಿಭೆಗಳಿಗೆ ಬೆಂಬಲ ನೀಡಲು ಮುಂದಾಗಿದ್ದಾರೆ. ಈಗಾಗಲೇ ಶೇ. ಎಂಭತ್ತರಷ್ಟು ಭಾಗದ ಚಿತ್ರೀಕರಣ ಮುಗಿದಿದ್ದು, ಆದಷ್ಟು ಬೇಗ ಬಿಡುಗಡೆಗೆ ತಯಾರಿ ಮಾಡಿ ಕೊಳ್ಳುತ್ತೇವೆ ಎಂದು ಚಿತ್ರತಂಡ ತಿಳಿಸಿದೆ.
11 years. Countless characters. All made possible by your love and strength.
— Dheekshith Shetty (@Dheekshiths) May 15, 2025
Now, a new chapter begins, not just as an actor, but as a storyteller.
Presenting DHEE CINEMAS — a home for fresh stories and rising talent.
Built with your support. Fueled by passion. pic.twitter.com/XHvJUVbazD
ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ವಿಡಿಯೋ ಶೇರ್ ಮಾಡಿರುವ ನಟ-ನಿರ್ಮಾಪಕ ದೀಕ್ಷಿತ್ ಶೆಟ್ಟಿ, ''11 ವರ್ಷಗಳು. ಲೆಕ್ಕವಿಲ್ಲದಷ್ಟು ಪಾತ್ರಗಳು, ಇದು ನಿಮ್ಮ ಪ್ರೀತಿಯಿಂದಲೇ ಸಾಧ್ಯವಾಯಿತು. ಈಗ ಹೊಸ ಅಧ್ಯಾಯ ಪ್ರಾರಂಭ ಮಾಡಿದ್ದೇನೆ. ಕೇವಲ ನಟನಾಗಿ ಮಾತ್ರವಲ್ಲದೇ ಕಥೆಗಾರನಾಗಿ. ಧೀ ಸಿನಿಮಾಸ್ ಅನ್ನು ಪ್ರಸ್ತುತಪಡಿಸುತ್ತಿದ್ದೇನೆ. ಹೊಸ ಕಥೆಗಳು ಮತ್ತು ಉದಯೋನ್ಮುಖ ಪ್ರತಿಭೆಗಳಿಗೆ ಇದು ವೇದಿಕೆʼʼ ಎಂದು ವಿಡಿಯೊದಲ್ಲಿ ತಿಳಿಸಿದ್ದಾರೆ.
ಸದ್ಯ ದೀಕ್ಷಿತ್ ಶೆಟ್ಟಿ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ʼದಿಯಾʼ ನಿರ್ದೇಶಕ ಅಶೋಕ್ ಜತೆ ಮತ್ತೊಂದು ಸಿನಿಮಾ ಮಾಡುತ್ತಿದ್ದು, ಶೂಟಿಂಗ್ ಭರದಿಂದ ಸಾಗುತ್ತಿದೆ. ಇದರೊಂದಿಗೆ ತೆಲುಗಿನಲ್ಲಿ ʼಕೆಜೆಕ್ಯೂʼ, ʼದಿ ಗರ್ಲ್ ಫ್ರೆಂಡ್ʼ ಸಿನಿಮಾದಲ್ಲಿಯೂ ಅಭಿನಯಿಸುತ್ತಿದ್ದಾರೆ.