Narendra Modi : ನಾಳೆ ಮಹಾಕುಂಭ ಮೇಳದಲ್ಲಿ ಪ್ರಧಾನಿ ಮೋದಿ ಅಮೃತ ಸ್ನಾನ
ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಫೆ. 5 ರಂದು ತೆರಳಲಿದ್ದಾರೆ. ಬೆಳಿಗ್ಗೆ 10 ಗಂಟೆಗೆ ಪ್ರಧಾನಿ ಮೋದಿ ಪ್ರಯಾಗ್‌ರಾಜ್ ವಿಮಾನ ನಿಲ್ದಾಣ ತಲುಪಿ ಅಲ್ಲಿಂದ ಮಹಾ ಕುಂಭವನ್ನು ತಲುಪಲಿದ್ದಾರೆ.
ಲಖನೌ: ಪ್ರಯಾಗ್‌ರಾಜ್‌ನಲ್ಲಿ ಮಹಾಕುಂಭ ಮೇಳ (Mahakumbh) ನಡೆಯುತ್ತಿದ್ದು, ಇದುವರೆಗೆ ಕೋಟ್ಯಾಂತರ ಜನ ಆಗಮಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ (Narendra Modi) ಫೆಬ್ರವರಿ 5 ರಂದು ಪ್ರಯಾಗ್‌ರಾಜ್‌ಗೆ ಭೇಟಿ ನೀಡಲಿದ್ದಾರೆ. ಮಾಘ ಮಾಸದ ಅಷ್ಟಮಿಯಂದು ಅವರು ಪವಿತ್ರ ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಲಿದ್ದಾರೆ. ಬೆಳಗ್ಗೆ 10.05ಕ್ಕೆ ಪ್ರಯಾಗ್ ರಾಜ್ ಬಂದಿಳಿಯಲಿರುವ ಮೋದಿ 10:45 ಕ್ಕೆ ಅರೈಲ್ ಘಾಟ್ ತಲುಪಲಿದ್ದಾರೆ.
ಅರೈಲ್ ಘಾಟ್ ನಿಂದ ದೋಣಿ ಮೂಲಕ ಸಂಗಮ್ ಗೆ ಹೋಗಲಿದ್ದಾರೆ. ಒಟ್ಟಾರೆಯಾಗಿ, ಪ್ರಧಾನಿ ಮೋದಿ ಸುಮಾರು ಒಂದು ಗಂಟೆ ಪ್ರಯಾಗ್‌ರಾಜ್‌ನಲ್ಲಿಯೇ ಇರಲಿದ್ದಾರೆ. ಮಹಾಕುಂಭ ಮೇಳ ಪ್ರಾರಂಭವಾಗುವುದಕ್ಕೂ ಮುನ್ನ ಮೋದಿ ಸಂಗಮದ ದಡದಲ್ಲಿ ಗಂಗಾ ನದಿಗೆ ಆರತಿ ಮತ್ತು ಪೂಜೆ ಸಲ್ಲಿಸಿ ಮಹಾಕುಂಭ ಮೇಳ ಯಶಸ್ವಿಯಾಗಲಿ ಎಂದು ಪ್ರಾರ್ಥಿಸಿದ್ದರು. ಈಗ ನಾಳೆ ಅವರು ಪುಣ್ಯ ಸ್ನಾನ ಮಾಡಲಿದ್ದಾರೆ.
ಸೇನಾ ಹೆಲಿಕಾಪ್ಟರ್‌ಗಳು ಅರೈಲ್‌ನಲ್ಲಿರುವ ಡಿಪಿಎಸ್ ಮೈದಾನದ ಹೆಲಿಪ್ಯಾಡ್‌ನಲ್ಲಿ ಇಳಿಯಲಿದ್ದು, ಅಲ್ಲಿಂದ ಕಾರಿನಲ್ಲಿ ತೆರಳಲಿದ್ದಾರೆ. ಇಲ್ಲಿಂದ ಅವರು ಡಿಪಿಎಸ್ ಹೆಲಿಪ್ಯಾಡ್ ಮೂಲಕ ಪ್ರಯಾಗ್‌ರಾಜ್ ವಿಮಾನ ನಿಲ್ದಾಣವನ್ನು ತಲುಪಲಿದ್ದಾರೆ. ನಂತರ ಮಧ್ಯಾಹ್ನ 12.30 ಕ್ಕೆ ವಾಯುಪಡೆಯ ವಿಮಾನದ ಮೂಲಕ ಪ್ರಯಾಗ್‌ರಾಜ್‌ನಿಂದ ಹಿಂತಿರುಗಲಿದ್ದಾರೆ.
ಜನವರಿ 13 ರಿಂದ ಪ್ರಾರಂಭವಾದ ಫೆ. 26 ರ ವರೆಗೆ ಮಹಾಕುಂಭ ಮೇಳ ನಡೆಯಲಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಕೇಂದ್ರ ಸಚಿವ ಕಿರಣ್ ರಿಜಿಜು, ಯುಪಿ ಮಾಜಿ ಸಿಎಂ ಅಖಿಲೇಶ್ ಯಾದವ್ ಹಾಗೂ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೇರಿದಂತೆ ಹಲವು ಜನರು ಪುಣ್ಯ ಸ್ನಾನ ಮಾಡಿದ್ದಾರೆ.
ಈ ಸುದ್ದಿಯನ್ನೂ ಓದಿ: Narendra Modi: ಫೆ.13ರಂದು ಡೊನಾಲ್ಡ್ ಟ್ರಂಪ್ ಭೇಟಿಯಾಗಲಿರುವ ನರೇಂದ್ರ ಮೋದಿ!
ಉತ್ತರ ಪ್ರದೇಶದ ಸರ್ಕಾರದ ಪ್ರಕಾರ ಸುಮಾರು 45 ಕೋಟಿ ಜನರು ಸೇರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಮೌನಿ ಅಮವಾಸ್ಯೆಯಂದು ಕಾಲ್ತುಳಿತ ಉಂಟಾಗಿ 30 ಜನ ಮೃತಪಟ್ಟಿದ್ದರೆ, ಹಲವು ಜನರು ಗಂಭೀರವಾಗಿ ಗಾಯಗೊಂಡಿದ್ದರು. ಮೃತಪಟ್ಟ ಕುಟುಂಬಗಳಿಗೆ 25 ಲಕ್ಷ ರೂ ಪರಿಹಾರವನ್ನು ಉತ್ತರ ಪ್ರದೇಶ ಸರ್ಕಾರ ಘೋಷಣೆ ಮಾಡಿದೆ.