Begging Ban: ಭೋಪಾಲ್‌ನಲ್ಲಿ ಭಿಕ್ಷಾಟನೆ ನಿಷೇಧ- ಕಟ್ಟುನಿಟ್ಟಿನ ನಿಗಾ ವಹಿಸಲು ಜಿಲ್ಲಾಧಿಕಾರಿ ಆದೇಶ
ಭೋಪಾಲ್‌ನಲ್ಲಿ ಭಿಕ್ಷಾಟನೆಯನ್ನು ನಿಲ್ಲಿಸುವ ಸಲುವಾಗಿ ಭೋಪಾಲ್ ಜಿಲ್ಲಾಧಿಕಾರಿ ಕೌಶಲ್ಯೇಂದ್ರ ವಿಕ್ರಮ್ ಸಿಂಗ್ ಸೋಮವಾರ ಜಿಲ್ಲೆಯ ವ್ಯಾಪ್ತಿಯಲ್ಲಿರುವ ಸಾರ್ವಜನಿಕ ಪ್ರದೇಶಗಳಲ್ಲಿ ಭಿಕ್ಷಾಟನೆಯನ್ನು ನಿಷೇಧಿಸಿ ಆದೇಶ ಹೊರಡಿಸಿದ್ದಾರೆ. ಒಂದು ವೇಳೆ ನಿಯಮವನ್ನು ಉಲ್ಲಂಘಿಸಿದ್ದರೆ ಒಂದು ವರ್ಷದವರೆಗೆ ಜೈಲು ಶಿಕ್ಷೆ, 2,500 ರೂ. ವರೆಗೆ ದಂಡ ವಿಧಿಸಲಾಗುವುದು ಎಂದು ಆದೇಶದಲ್ಲಿ ತಿಳಿಸಿದ್ದಾರೆ.
ಭೋಪಾಲ್: ಭಿಕ್ಷಾಟನೆ ಮತ್ತು ಸಂಬಂಧಿತ ಸಮಸ್ಯೆಗಳನ್ನು ನಿಗ್ರಹಿಸುವ ಸಲುವಾಗಿ ಭೋಪಾಲ್ ಜಿಲ್ಲಾಧಿಕಾರಿ ಕೌಶಲ್ಯೇಂದ್ರ ವಿಕ್ರಮ್ ಸಿಂಗ್ ಸೋಮವಾರ ಜಿಲ್ಲೆಯ ವ್ಯಾಪ್ತಿಯಲ್ಲಿರುವ ಸಾರ್ವಜನಿಕ ಪ್ರದೇಶಗಳಲ್ಲಿ ಭಿಕ್ಷಾಟನೆಯನ್ನು ನಿಷೇಧಿಸಿ(Begging Ban) ಆದೇಶ ಹೊರಡಿಸಿದ್ದಾರೆ. ಭಾರತೀಯ ನ್ಯಾಯ ಸಂಹಿತಾ (BNS) ಸೆಕ್ಷನ್ 163 ನಿಯಮದ ಪ್ರಕಾರ ಭಿಕ್ಷುಕರಿಂದ ದಾನ ನೀಡುವುದು ಅಥವಾ ವಸ್ತುಗಳನ್ನು ಖರೀದಿಸುವುದು ಸಹ ಕಾನೂನುಬಾಹಿರವೆಂದು ಪರಿಗಣಿಸಲಾಗುತ್ತದೆ. ಭೋಪಾಲ್‌ನ ನಗರ ಸಂಚಾರ ಸಿಗ್ನಲ್‌ಗಳು, ರೋಟರಿಗಳು, ಧಾರ್ಮಿಕ ಸ್ಥಳಗಳು ಮತ್ತು ಮಾರುಕಟ್ಟೆಗಳಲ್ಲಿ ಇನ್ನು ಮುಂದೆ ಸಿಸಿಟಿವಿಗಳನ್ನು ಅಳವಡಿಕೆ ಮಾಡಲಾಗುತ್ತದೆ. ನಗರದಲ್ಲಿ ಭಿಕ್ಷಾಟನೆ ಹೆಚ್ಚಾಗಿದ್ದು, ಭಿಕ್ಷುಕರು ಹೆಚ್ಚಾಗಿ ಅಪರಾಧ ಚಟುವಟಿಕೆಗಳು ಮತ್ತು ಮಾದಕ ದ್ರವ್ಯ ಸೇವನೆಯಲ್ಲಿ ತೊಡಗುತ್ತಿದ್ದಾರೆ ಎಂದು ತಿಳಿದು ಬಂದಿದೆ.
Madhya Pradesh | Bhopal district collector yesterday issued an order completely prohibiting begging across all public places within the district's jurisdiction pic.twitter.com/9Ka5dublBD
— ANI MP/CG/Rajasthan (@ANI_MP_CG_RJ) February 4, 2025
ಸದ್ಯ ಜಿಲ್ಲಾಧಿಕಾರಿಯವರು ಈ ಆದೇಶವನ್ನು ಹೊರಡಿಸಿದ್ದು, "ಒಂಟಿಯಾಗಿ ಅಥವಾ ತಮ್ಮ ಕುಟುಂಬಗಳೊಂದಿಗೆ ಭಿಕ್ಷಾಟನೆಯಲ್ಲಿ ತೊಡಗಿರುವ ವ್ಯಕ್ತಿಗಳು, ಸರ್ಕಾರಿ ನಿರ್ದೇಶನಗಳನ್ನು ಉಲ್ಲಂಘಿಸುವುದಲ್ಲದೆ, ಸಾರ್ವಜನಿಕರ ಸಂಚಾರಕ್ಕೆ ಅಡ್ಡಿಪಡಿಸುತ್ತಿದ್ದಾರೆ. . ಈ ವ್ಯಕ್ತಿಗಳಲ್ಲಿ ಹೆಚ್ಚಿನ ಸಂಖ್ಯೆಯ ಜನರು ಇತರ ರಾಜ್ಯಗಳು ಮತ್ತು ನಗರಗಳಿಂದ ಬಂದವರು ಎಂದು ಸರ್ಕಾರ ಗಮನಿಸಿದೆ, ಕೆಲವರು ಕ್ರಿಮಿನಲ್ ದಾಖಲೆಗಳನ್ನು ಹೊಂದಿದ್ದಾರೆ. ಯೋಜನೆಯ ಭಾಗವಾಗಿ ಭಿಕ್ಷುಕರನ್ನು ಕೋಲಾರದಲ್ಲಿ ಸಮುದಾಯ ಆರೋಗ್ಯ ಕೇಂದ್ರದ ಬಳಿ ಇರುವ ಆಶ್ರಯ ಮನೆಗೆ ಸ್ಥಳಾಂತರಿಸಲಾಗುವುದು ಎಂದು ತಿಳಿಸಿದ್ದಾರೆ. ಒಂದು ವೇಳೆ ನಿಯಮವನ್ನು ಉಲ್ಲಂಘಿಸಿದ್ದರೆ ಒಂದು ವರ್ಷದವರೆಗೆ ಜೈಲು ಶಿಕ್ಷೆ, 2,500 ರೂ. ವರೆಗೆ ದಂಡ ವಿಧಿಸಲಾಗುವುದು ಎಂದು ಆದೇಶದ ಪ್ರತಿಯಲ್ಲಿ ತಿಳಿಸಲಾಗಿದೆ.
ಈ ಸುದ್ದಿಯನ್ನೂ ಓದಿ: ಭಿಕ್ಷಾಟನೆಯಲ್ಲಿ ತೊಡಗಿದವರನ್ನು ರಕ್ಷಣೆ ಮಾಡಿದ ಅಧಿಕಾರಿಗಳು
ಇತ್ತೀಚೆಗೆ ಸಾರ್ವಜನಿಕರೊಬ್ಬರು ಜಿಲ್ಲಾಧಿಕಾರಿಯವರಿಗೆ ದೂರು ಸಲ್ಲಿಸಿದ್ದು, ಅದರಲ್ಲಿ ಭಿಕ್ಷುಕನೊಬ್ಬ ಭಿಕ್ಷಾಟನೆ ಬಿಟ್ಟು ಬೇರೆ ಕೆಲಸ ಮಾಡಲು ನಿರಾಕರಿಸಿದ್ದಾನೆ ದಯವಿಟ್ಟು ನಗರದಲ್ಲಿ ಭಿಕ್ಷಾಟನೆಯನ್ನು ನಿಲ್ಲಿಸಿ ಎಂದು ಹೇಳಿದ್ದರು. ಇದೀಗ ಭಿಕ್ಷಾಟನೆ ಕಾನೂನು ಬಾಹಿರ ಎಂದು ಘೋಷಿಸಲಾಗಿದೆ.