ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್ಗೆ ಹಠಾತ್ ವಿದಾಯ ಹೇಳಲು ಪ್ರಮುಖ 5 ಕಾರಣಗಳು!
ಭಾರತ ತಂಡದ ಮಾಜಿ ನಾಯಕ ಹಾಗೂ ಆಧುನಿಕ ಕ್ರಿಕೆಟ್ ದಿಗ್ಗಜ ವಿರಾಟ್ ಕೊಹ್ಲಿ ಮೇ 12 ರಂದು ಸೋಮವಾರ ತಮ್ಮ ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ ವೃತ್ತಿ ಜೀವನಕ್ಕೆ ವಿದಾಯ ಹೇಳಿದ್ದಾರೆ. ಆ ಮೂಲಕ ತಮ್ಮ 14 ವರ್ಷಗಳ ಟೆಸ್ಟ್ ವೃತ್ತಿ ಜೀವನದ ಪಯಣವನ್ನು ಅಂತ್ಯಗೊಳಿಸಿದ್ದಾರೆ ಹಾಗೂ ವಿಶ್ವ ಕ್ರಿಕೆಟ್ಗೆ ಅಚ್ಚರಿ ಮೂಡಿಸಿದ್ದಾರೆ. 2011ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದ ವಿರಾಟ್ ಕೊಹ್ಲಿ, ಇಲ್ಲಿಯವರೆಗೂ 123 ಟೆಸ್ಟ್ ಪಂದ್ಯಗಳನ್ನು ಆಡಿದ್ದು, 46.85ರ ಸರಾಸರಿಯಲ್ಲಿ 9,230 ರನ್ಗಳನ್ನು ದಾಖಲಿಸಿದ್ದಾರೆ. ಇದರಲ್ಲಿ ಅವರು 30 ಶತಕಗಳು ಹಾಗೂ 31 ಅರ್ಧಶತಕಗಳನ್ನು ಬಾರಿಸಿದ್ದಾರೆ.



ಕೊಹ್ಲಿ ಟೆಸ್ಟ್ಗೆ ವಿದಾಯ ಹೇಳಲು 5 ಕಾರಣಗಳು
ವಿರಾಟ್ ಕೊಹ್ಲಿ ಸದ್ಯ ನಡೆಯುತ್ತಿರುವ 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಉತ್ತಮ ಪಾರ್ಮ್ನಲ್ಲಿದ್ದು, 500ಕ್ಕೂ ಅಧಿಕ ರನ್ಗಳನ್ನು ಕಲೆ ಹಾಕಿದ್ದಾರೆ. ಆ ಮೂಲಕ ಉತ್ತಮ ಫಾರ್ಮ್ನಲ್ಲಿದ್ದಾರೆ. ಆದರೂ ಅವರು ಇಂಗ್ಲೆಂಡ್ ಟೆಸ್ಟ್ ಸರಣಿಗೂ ಮುನ್ನ ದೀರ್ಘಾವಧಿ ಸ್ವರೂಪಕ್ಕೆ ಹಠಾತ್ ವಿದಾಯ ಹೇಳಿದ್ದಾರೆ. ಇದಕ್ಕೆ ಪ್ರಮುಖ ಕಾರಣಗಳನ್ನು ಇಲ್ಲಿ ವಿವರಿಸಲಾಗಿದೆ.

- ನಾಲ್ಕನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್
ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ನ ಹೊಸ ಋತು ಜೂನ್ನಲ್ಲಿ ಪ್ರಾರಂಭವಾಗುತ್ತಿದೆ. ಒಂದು ಆವೃತ್ತಿಯು ಎರಡು ವರ್ಷಗಳವರೆಗೆ ದೀರ್ಘಾವಧಿ ನಡೆಯುತ್ತದೆ. ಇದಾದ ನಂತರ ಫೈನಲ್ ಪಂದ್ಯ ನಡೆಯುತ್ತದೆ. ವಿರಾಟ್ ಕೊಹ್ಲಿಗೆ ಎರಡು ವರ್ಷಗಳ ಕಾಲ ಟೆಸ್ಟ್ ಆಡುವುದು ಕಷ್ಟಕರವಾಗಿದೆ. ಹಾಗಾಗಿ ಯುವ ಆಟಗಾರರು ಆಡಬೇಕೆಂದು ಬಯಸುತ್ತಿದ್ದಾರೆ ಹಾಗೂ ಭಾರತ ತಂಡ ಫೈನಲ್ಗೆ ಬರುವ ಹೊತ್ತಿಗೆ ಯುವ ಆಟಗಾರರಿಗೆ ಉತ್ತಮ ಅನುಭವ ಸಿಗಬಹುದೆಂದು ಅವರು ಯೋಚಿಸುತ್ತಿರಬಹದು.

2. ಟೆಸ್ಟ್ ಕ್ರಿಕೆಟ್ನಲ್ಲಿ ಫಾರ್ಮ್ ಕಳೆದುಕೊಂಡಿರುವ ಕೊಹ್ಲಿ
ವಿರಾಟ್ ಕೊಹ್ಲಿ ಬಹಳ ಸಮಯದಿಂದ ಟೆಸ್ಟ್ ಸ್ವರೂಪದಲ್ಲಿ ಕಳಪೆ ಫಾರ್ಮ್ನಲ್ಲಿದ್ದಾರೆ. 2019ರ ಅಂತ್ಯದಲ್ಲಿ ಅವರ ಟೆಸ್ಟ್ ಸರಾಸರಿ 55ರ ಆಸುಪಾಸಿನಲ್ಲಿತ್ತು. ಈಗ ಅದು 47 ಕ್ಕಿಂತ ಕಡಿಮೆಯಾಗಿದೆ. 2020 ರಿಂದ ವಿರಾಟ್ ಟೆಸ್ಟ್ ಕ್ರಿಕೆಟ್ನಲ್ಲಿ ಕೇವಲ ಮೂರು ಶತಕಗಳನ್ನು ಮಾತ್ರ ಗಳಿಸಿದ್ದಾರೆ. ಈ ಅವಧಿಯಲ್ಲಿ ಅವರ ಸರಾಸರಿ 35ಕ್ಕಿಂತ ಕಡಿಮೆ ಇದೆ.

3. ಆಫ್ ಸ್ಟಂಪ್ ಹೊರಗಡೆಯಲ್ಲಿ ತೊಂದರೆ
ವಿರಾಟ್ ಕೊಹ್ಲಿ ಬ್ಯಾಟಿಂಗ್ನಲ್ಲಿನ ತನ್ನ ಒಂದು ದೌರ್ಬಲ್ಯದಿಂದ ತುಂಬಾ ತೊಂದರೆಗೀಡಾಗಿದ್ದಾರೆ. ಅವರು ಆಫ್ ಸ್ಟಂಪ್ ಹೊರಗಿನ ಎಸೆತಗಳಲ್ಲಿ ನಿರಂತರವಾಗಿ ಔಟ್ ಆಗುತ್ತಿದ್ದಾರೆ. ಕಳೆದ ಆಸ್ಟ್ರೇಲಿಯಾ ಪ್ರವಾಸದ ಸಮಯದಲ್ಲಿ ಅವರು ನಿರಂತರವಾಗಿ ವಿಕೆಟ್ ಕೀಪರ್ ಅಥವಾ ಸ್ಲಿಪ್ನಲ್ಲಿ ಕ್ಯಾಚ್ಗಳನ್ನು ಕೊಟ್ಟು ಔಟ್ ಆಗುತ್ತಿದ್ದರು. ಪ್ರತಿ ಬಾರಿಯೂ ಚೆಂಡು ಅವರ ಬ್ಯಾಟ್ನ ಅಂಚನ್ನು ತಾಗಿ ಸ್ಟಂಪ್ಸ್ ಹಿಂದೆ ಹೋಗುತ್ತಿತ್ತು.

4. 2027ರ ಏಕದಿನ ವಿಶ್ವಕಪ್ ಮೇಲೆ ಗಮನ
ವಿರಾಟ್ ಕೊಹ್ಲಿಗೆ ಈಗ 36 ವರ್ಷ ವಯಸ್ಸು. ಎರಡು ವರ್ಷಗಳ ನಂತರ ಅಂದರೆ 2027ರಲ್ಲಿ ಏಕದಿನ ವಿಶ್ವಕಪ್ ಟೂರ್ನಿ ನಡೆಯಲಿದೆ. ರೋಹಿತ್ ಶರ್ಮಾ ರೀತಿಯೇ ಕೊಹ್ಲಿಯ ಸಂಪೂರ್ಣ ಗಮನ ಏಕದಿನ ವಿಶ್ವಕಪ್ ಮೇಲಿದೆ. ಭಾರತ ಕೊನೆಯ ಬಾರಿ ವಿಶ್ವಕಪ್ ಫೈನಲ್ ತಲುಪಿದ್ದು 2023 ರಲ್ಲಿ. ಆದರೆ, ಆಸ್ಟ್ರೇಲಿಯಾ ಎದುರು ಸೋತಿತ್ತು. ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ್ದ ವಿರಾಟ್ ಕೊಹ್ಲಿ ಟೂರ್ನಿ ಶ್ರೇಷ್ಠ ಪ್ರಶಸ್ತಿ ಪಡೆದಿದ್ದರು.

5. ಕುಟುಂಬಕ್ಕೆ ಹೆಚ್ಚಿನ ಸಮಯ ನೀಡಲು
ವಿರಾಟ್ ಕೊಹ್ಲಿ ಸುಮಾರು ಒಂದೂವರೆ ದಶಕದಿಂದ ಅಂತಾರಾಷ್ಟ್ರೀಯ ಕ್ರಿಕೆಟ್ ಆಡುತ್ತಿದ್ದಾರೆ. 2017ರಲ್ಲಿ ಅವರು ಅನುಷ್ಕಾ ಶರ್ಮಾ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಅವರಿಗೆ ಈಗ ಇಬ್ಬರು ಮಕ್ಕಳಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಈಗಾಗಲೇ ಅನೇಕ ದಾಖಲೆಗಳನ್ನು ಬರೆದಿರುವ ಅವರು, ಇದೀಗ ತಮ್ಮ ಕುಟುಂಬದ ಜೊತೆ ಹೆಚ್ಚಿನ ಸಮಯವನ್ನು ಕಳೆಯಲು ಬಯಸುತ್ತಿದ್ದಾರೆ. ಹಾಗಾಗಿ ಟೆಸ್ಟ್ ಕ್ರಿಕೆಟ್ನಿಂದ ದೂರ ಉಳಿದು ಕೇವಲ ಒಡಿಐ ಕಡೆಗೆ ಗಮನ ನೀಡಲು ಬಯಸುತ್ತಿದ್ದಾರೆ.