Nimrat Kaur: ತಂದೆಯನ್ನು ಉಗ್ರರು ಅಪಹರಿಸಿ ಕ್ರೂರವಾಗಿ ಕೊಂದರು; ಭಾವುಕರಾದ ನಟಿ ನಿಮ್ರತ್ ಕೌರ್..
ನಿಮ್ರತ್ ಕೌರ್ ಬಾಲಿವುಡ್ನ ಖ್ಯಾತ ನಟಿಯಾಗಿದ್ದು 'ದಿ ಲಂಚ್ ಬಾಕ್ಸ್' ಚಿತ್ರದ ಮೂಲಕ ಫೇಮ್ ಗಿಟ್ಟಿಸಿ ಕೊಂಡಿದ್ದಾರೆ. ನಟಿ ನಿಮ್ರತ್ ಕೌರ್ ಅವರ ತಂದೆ ಮೇಜರ್ ಭೂಪೇಂದ್ರ ಸಿಂಗ್, ಕಾಶ್ಮೀರದಲ್ಲಿ ಭಯೋತ್ಪಾದಕರಿಂದ ಹತ್ಯೆಯಾದರು. ಈ ದುರಂತ ಘಟನೆಯ ಬಗ್ಗೆ ನಿಮ್ರತ್ ಕೌರ್ ಅವರು ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ.



ಬಾಲಿವುಡ್ ನಟಿ ನಿಮ್ರತ್ ಕೌರ್ ತಮ್ಮ ತಂದೆಯನ್ನು ನೆನೆದು ಭಾವುಕರಾಗಿದ್ದಾರೆ. ಆಕೆಯ ತಂದೆ ಭೂಪೇಂದ್ರ ಸಿಂಗ್ ಭಾರತೀಯ ಸೇನೆಯ ಅಧಿಕಾರಿಯಾಗಿದ್ದು, ಅವರನ್ನು ಭಯೋತ್ಫಾದಕರು ಕಿಡ್ನ್ಯಾಪ್ ಮಾಡಿ ಚಿತ್ರ ಹಿಂಸೆ ನೀಡಿ ಹತ್ಯೆ ಮಾಡಿದ್ದರು ಎಂದು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ

ನಿಮ್ರತ್ ಕೌರ್ ಈ ಬಗ್ಗೆ ಮಾತನಾಡಿ ನನ್ನ ತಂದೆ ಸೇನಾಧಿಕಾರಿಯಾಗಿದ್ದು ವೆರಿಗಾನ್ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು ಆಗ ನಮ್ಮ ತಂದೆ ಕಾಶ್ಮೀರದಲ್ಲಿ ಸೇವೆ ಸಲ್ಲಿಸುತ್ತಿದ್ದರೆ ನಾವು ಪಟಿಯಾಲಾದಲ್ಲಿ ವಾಸ ಮಾಡುತ್ತಿದ್ದೆವು.1994ರ ಜನವರಿ ಯಲ್ಲಿ ಚಳಿಗಾಲದ ರಜೆಯಲ್ಲಿ ನಾವು ನಮ್ಮ ತಂದೆಯನ್ನು ನೋಡಲು ಕಾಶ್ಮೀರಕ್ಕೆ ಹೋಗಿದ್ದೆವು. ಇದೇ ಸಮಯದಲ್ಲಿ ಅವರ ಕರ್ತವ್ಯದ ಸ್ಥಳದಿಂದ ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಯವರು ಅಪಹರಿಸಿದ್ದರು ಎಂದು ಹೇಳಿಕೊಂಡಿದ್ದಾರೆ.

ಸುಮಾರು ಏಳು ದಿನಗಳ ಕಾಲ ತನ್ನ ತಂದೆಯನ್ನು ಬಂಧನದಲ್ಲಿರಿಸಿ ಚಿತ್ರಹಿಂಸೆ ನೀಡಿ ಹತ್ಯೆ ಮಾಡಿದರು. ಕೆಲ ವ್ಯಕ್ತಿಗಳ ಬಿಡುಗಡೆಗೆ ಭಯೋತ್ಪಾದಕರು ಬೇಡಿಕೆ ಇಟ್ಟಿದ್ದರು. ಆದರೆ ನನ್ನ ತಂದೆ ಕರ್ತವ್ಯಕ್ಕೆ ಬದ್ದರಾಗಿ ಅವರ ಕೆಲಸ ಮಾಡಲು ನಿರಾಕರಿಸಿದರು ಎಂದು ನಿಮ್ರತ್ ಕೌರ್ ತಮ್ಮ ಸಂದರ್ಶನದಲ್ಲಿ ಹೇಳಿದ್ದಾರೆ.

ನಿಮ್ರತ್ ಕೌರ್ ತಂದೆ ಮೇಜರ್ ಭೂಪೇಂದರ್ ಸಿಂಗ್ ನಿಧನರಾದಾಗ ಅವರಿಗೆ ಕೇವಲ 44 ವರ್ಷ ವಯಸ್ಸಾಗಿತ್ತು. ನಿಮ್ರತ್ ಕೌರ್ಗೆ ಆಗ ಹನ್ನೆರಡು ವರ್ಷವಾಗಿತ್ತು. ಸುದ್ದಿ ತಿಳಿದ ನಂತರ ನಾವು ದೆಹಲಿಗೆ ಹಿಂತಿರುಗಿದೆವು. ಅವರ ಮೃತದೇಹವನ್ನು ನಾನು ಮೊದಲ ಬಾರಿಗೆ ದೆಹಲಿಯಲ್ಲಿ ನೋಡಿದೆ ಎಂದು ನಿಮ್ರತ್ ಭಾವುಕರಾಗಿ ನೆನಪಿಸಿಕೊಂಡಿದ್ದಾರೆ.

ಮೇಜರ್ ಭೂಪೇಂದರ್ ಸಿಂಗ್ ಅವರಿಗೆ ಮರಣೋತ್ತರವಾಗಿ ಭಾರತದ ಅತ್ಯುನ್ನತ ಶೌರ್ಯ ಪ್ರಶಸ್ತಿಗಳಲ್ಲಿ ಒಂದಾದ ಶೌರ್ಯ ಚಕ್ರವನ್ನು ನೀಡಿ ಗೌರವಿಸಲಾಗಿದೆ. ಸದ್ಯ ನಿಮ್ರತ್ ಕೌರ್ ಸೆಕ್ಷನ್ 84 ಎಂಬ ಚಿತ್ರದಲ್ಲಿ ಅಭಿನಯಿಸಿದ್ದು ಈ ಚಿತ್ರ ಇನ್ನಷ್ಟೇ ಬಿಡುಗಡೆಯಾಗಬೇಕಿದೆ.ನಿಮ್ರತ್ ಮೊದಲು ಮಾಡೆಲಿಂಗ್ನಲ್ಲಿ ತನ್ನ ವೃತ್ತಿಜೀವನವನ್ನು ಪ್ರಾರಂಭಿಸಿದ್ದರು. 2004 ಮತ್ತು 2005 ರಲ್ಲಿ, ಕುಮಾರ್ ಸಾನು ತೇರಾ ಮೇರಾ ಪ್ಯಾರ್, ಶ್ರೇಯಾ ಘೋಷಾಲ್ ಯೇ ಕ್ಯಾ ಹುವಾ ಮುಂತಾದ ಮ್ಯೂಸಿಕ್ ಆಲ್ಬಂಗಳಲ್ಲಿ ಕಾಣಿಸಿಕೊಂಡರು. 2013ರಲ್ಲಿ ಬಿಡುಗಡೆಯಾದ 'ದಿ ಲಂಚ್ಬಾಕ್ಸ್' ಚಿತ್ರದ ಮೂಲಕ ಹೆಚ್ಚು ಖ್ಯಾತಿ ಗಳಿಸಿದರು.