Sunday, 6th October 2024

ಕೊಹ್ಲಿಯ ಕ್ಯಾಚ್ ಕೈಚೆಲ್ಲಿದ್ದು ದುಬಾರಿ ಆಯ್ತು: ಪ್ಯಾಟ್ ಕಮ್ಮಿನ್ಸ್

ಚೆನ್ನೈ: ತಮ್ಮ ತಂಡವು ಸ್ಪರ್ಧಾತ್ಮಕ ಮೊತ್ತಕ್ಕಿಂತ ಕನಿಷ್ಠ 50 ರನ್‌ಗಳ ಕೊರತೆ ಹೊಂದಿತ್ತು. ಜೊತೆಗೆ ವಿರಾಟ್ ಕೊಹ್ಲಿಯ ಕ್ಯಾಚ್ ಕೈಚೆಲ್ಲಿದ್ದು ನಮಗೆ ದುಬಾರಿ ಆಯ್ತು ಎಂದು ಆರಂಭಿಕ ಪಂದ್ಯದಲ್ಲಿ ಭಾರತ ವಿರುದ್ಧ ಆರು ವಿಕೆಟ್‌ಗಳ ಸೋಲಿನ ನಂತರ, ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್ ಕಮ್ಮಿನ್ಸ್ ಅವರು ಪ್ರತಿಕ್ರಿಯೆ ನೀಡಿದ್ದಾರೆ.

ವಿರಾಟ್ ಕೊಹ್ಲಿ ಮತ್ತು ಕೆಎಲ್ ರಾಹುಲ್ ನಡುವಣ ಜವಾಬ್ದಾರಿಯುತ ಹಾಗೂ ಸಂಯಮದ ಜೊತೆಯಾಟವು ಚೆನ್ನೈನ ಚೆಪಾಕ್ ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯಾ ವಿರುದ್ಧ ಆರು ವಿಕೆಟ್‌ಗಳ ಜಯ ಸಾಧಿಸಲು ಭಾರತಕ್ಕೆ ಸಹಾಯ ಮಾಡಿತು. ಆಸ್ಟ್ರೇಲಿಯಾ ಆಟಗಾರ ಮಿಚೆಲ್ ಮಾರ್ಷ್ ಕೈಬಿಟ್ಟ ಕೊಹ್ಲಿ ಕ್ಯಾಚ್​​​​​ ದುಬಾರಿಯಾಗಿ ಪರಿಣಮಿಸಿತು. ಆ ವೇಳೆ, ವಿರಾಟ್​ ಕೊಹ್ಲಿ 12 ರನ್​ ಗಳಿಸಿದ್ದರು. ನಂತರ ವಿರಾಟ್ ಅವರು ಮ್ಯಾಚ್ ವಿನ್ನಿಂಗ್​ಗೆ ಪೂರಕವಾಗಿ ಆಡಿದ್ದರಿಂದ ಆಸೀಸ್ ಪಂದ್ಯವನ್ನು ಅಂತಿಮವಾಗಿ ಕಳೆದುಕೊಂಡಿತು. ಜೊತೆಗೆ ಕೆ.ಎಲ್. ರಾಹುಲ್ ದೊಡ್ಡ ಪಾಲುದಾರಿಕೆಯನ್ನೇ ನೀಡಿದರು. ವಿರಾಟ್ ಕೊಹ್ಲಿ 85 ರನ್ ಗಳಿಸಿ ಔಟಾದರು. ಆದರೆ ತಳವೂರಿ ನಿಂತ ರಾಹುಲ್​ 97 ರನ್​ಗಳ ಭರ್ಜರಿ ಬ್ಯಾಟಿಂಗ್ ಮಾಡಿದರು. ಕೊನೆಯಲ್ಲಿ ಇವರಿಗೆ ಸಾಥ್​ ನೀಡಿದ ಹಾರ್ದಿಕ್ ಪಾಂಡ್ಯ 11 ರನ್ ಗಳಿಸಿ ಟೀಂ ಇಂಡಿಯಾಗೆ ಜಯ ತಂದುಕೊಟ್ಟರು.

ಜೋಶ್ ಹ್ಯಾಜಲ್‌ವುಡ್ ಶಾರ್ಟ್ ಬಾಲ್ ಬೌಲಿಂಗ್ ಮಾಡುವುದರೊಂದಿಗೆ, ಕೊಹ್ಲಿ ತಮ್ಮ ಟೈಮಿಂಗ್ ಅನ್ನು ತಪ್ಪಾಗಿ ಗ್ರಹಿಸಿದರು ಮತ್ತು ಎಸೆತವನ್ನು ಸ್ಕಿಡ್ ಮಾಡಿದರು. ಮಾರ್ಷ್ ಮತ್ತು ಅಲೆಕ್ಸ್ ಕ್ಯಾರಿ ಇಬ್ಬರೂ ಚೆಂಡಿನ ಕಡೆಗೆ ಓಡಿದರು. ಮಾರ್ಚ್​ ಕ್ಯಾಚ್​ ತೆಗೆದುಕೊಳ್ಳುವ ಪ್ರಯತ್ನ ಮಾಡಿದರು. ಈ ಮೂಲಕ ಮಾರ್ಷ್ ಕೊಹ್ಲಿಗೆ ಜೀವದಾನ ನೀಡಿದರು. ಈ ಜೀವದಾನ ಭಾರತದ ಗೆಲುವಿಗೆ ಕಾರಣವಾಯ್ತು.