ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

KKR vs DC: ಮೊದಲ ಮುಖಾಮುಖಿಗೆ ಸಜ್ಜಾದ ಡೆಲ್ಲಿ-ಕೆಕೆಆರ್‌

ಡೆಲ್ಲಿ ಈ ಪಂದ್ಯಕ್ಕೆ ತನ್ನ ಬೌಲಿಂಗ್‌ ವಿಭಾಗದಲ್ಲಿ ಒಂದು ಮಹತ್ವದ ಬದಲಾವಣೆ ಮಾಡುವ ಸಾಧ್ಯತೆ ಗೋಚರಿಸಿದೆ. ಆರ್‌ಸಿಬಿ ವಿರುದ್ಧ ಮೂರು ಓವರ್‌ಗಳಲ್ಲಿ 50 ರನ್‌ ಬಿಟ್ಟುಕೊಟ್ಟ ಮುಕೇಶ್‌ ಕುಮಾರ್‌ ಬದಲಿಗೆ ತಮಿಳುನಾಡಿದ ಎಡಗೈ ವೇಗಿ ಟಿ. ನಟರಾಜನ್‌ಗೆ ಅವಕಾಶ ನೀಡುವ ಸಾಧ್ಯತೆ ಇದೆ.

ಮೊದಲ ಮುಖಾಮುಖಿಗೆ ಸಜ್ಜಾದ ಡೆಲ್ಲಿ-ಕೆಕೆಆರ್‌

Profile Abhilash BC Apr 28, 2025 4:01 PM

ನವದೆಹಲಿ: ಭಾನುವಾರವಷ್ಟೇ ಆರ್‌ಸಿಬಿ ವಿರುದ್ಧ ಸೋಲು ಕಂಡಿದ್ದ ಡೆಲ್ಲಿ ಕ್ಯಾಪಿಟಲ್ಸ್‌(KKR vs DC) ಮತ್ತೆ ಗೆಲುವಿನ ಹಳಿ ಏರುವ ವಿಶ್ವಾಸದೊಂದಿಗೆ ಮಂಗಳವಾರ ನಡೆಯುವ ತವರಿನ ಐಪಿಎಲ್(IPL 2025) ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಕೆಕೆಆರ್‌ ವಿರುದ್ಧ ಸೆಣಸಾಟ ನಡೆಸಲಿದೆ. ಇದು ಹಾಲಿ ಆವೃತ್ತಿಯಲ್ಲಿ ಇತ್ತಂಡಗಳ ಮೊದಲ ಮುಖಾಮುಖಿ. 7 ಅಂಕದೊಂದಿಗೆ 7ನೇ ಸ್ಥಾನದಲ್ಲಿರುವ ಅಜಿಂಕ್ಯ ರಹಾನೆ ಪಡೆಗೆ ಇದು ಮಾಡು ಇಲ್ಲವೇ ಮಡಿ ಪಂದ್ಯ. ಸೋತರೆ ಪ್ಲೇ ಆಫ್‌ ಹಾದಿ ಬಹುತೇಕ ಕೊನೆಗೊಳ್ಳಲಿದೆ.

ಕೆಕೆಆರ್‌ ತಂಡಕ್ಕೆ ಹೋಲಿಸಿದರೆ ಡೆಲ್ಲಿ ಬಲಿಷ್ಠವಾಗಿದೆ. ತಂಡದಲ್ಲಿ ಬಿಗ್‌ ಹಿಟ್ಟರ್‌ಗಳ ಪಡೆಯೇ ಇದ್ದರೂ ಕೂಡ ಯಾರು ಸ್ಥಿರ ಪ್ರದರ್ಶನ ತೋರುತ್ತಿಲ್ಲ. ವಿಂಡೀಸ್‌ನ ರಸೆಲ್‌ ಮತ್ತು ಸುನಿಲ್‌ ನರೈನ್‌ ಇದುವರೆಗೂ ದೊಡ್ಡ ಇನಿಂಗ್ಸ್‌ ಆಡಿಲ್ಲ. ನರೈನ್‌ ಬೌಲಿಂಗ್‌ನಲ್ಲಿಯೂ ದುಬಾರಿಯಾಗುತ್ತಿದ್ದಾರೆ. ರಿಂಕು ಸಿಂಗ್‌, ವೆಂಕಟೇಶ್‌ ಅಯ್ಯರ್‌ ತೀವ್ರ ರನ್‌ ಬರಗಾಲದಲ್ಲಿದ್ದಾರೆ. ಇವರ ಬ್ಯಾಟಿಂಗ್‌ ಸುಧಾರಣೆ ಕಾಣದ ಹೊರತು ತಂಡ ಗೆಲುವಿನ ಹಳಿಗೆ ಮರಳುವುದು ಕಷ್ಟ ಸಾಧ್ಯ.



ಡೆಲ್ಲಿ ತಂಡದ ಮಧ್ಯಮ ಕ್ರಮಾಂಕದ ಬ್ಯಾಟಿಂಗ್‌ ಬಲಿಷ್ಠವಾಗಿದೆ. ಆದರೆ ಸರಿಯಾದ ಆರಂಭಿಕ ಜೋಡಿಯನ್ನು ಕಂಡುಕೊಳ್ಳಲು ಇದುವರೆಗೂ ಸಾಧ್ಯವಾಗದೇ ಇರುವುದು ತಂಡಕ್ಕೆ ದೊಡ್ಡ ಹಿನ್ನಡೆಯಾಗಿದೆ. ಯುವ ಆಟಗಾರ ಅಭಿಷೇಕ್‌ ಪೋರೆಲ್‌ ಉತ್ತಮ ಆರಂಭ ನೀಡುತ್ತಿದ್ದರೂ ಇವರಿಗೆ ಮತ್ತೊಂದು ತುದಿಯಲ್ಲಿ ಸಾಥ್‌ ನೀಡುವ ಆಟಗಾರ ಇದುವರೆಗೂ ಲಭ್ಯವಾಗಿಲ್ಲ. ಡೆಲ್ಲಿ ಈ ಸಮಸ್ಯೆ ಪರಿಹರಿಸಲು ಹಲವು ಪ್ರಯತ್ನ ನಡೆಸಿದರೂ ಇದರಲ್ಲಿ ಯಶಸ್ಸು ಕಂಡಿಲ್ಲ. ಸದ್ಯಕ್ಕಿರುವ ದಾರಿ ಎಂದರೆ ರಾಹುಲ್‌ ಅವರನ್ನು ಆರಂಭಿಕನಾಗಿ ಕಣಕ್ಕಿಳಿಸುವುದು.



ಡೆಲ್ಲಿ ಈ ಪಂದ್ಯಕ್ಕೆ ತನ್ನ ಬೌಲಿಂಗ್‌ ವಿಭಾಗದಲ್ಲಿ ಒಂದು ಮಹತ್ವದ ಬದಲಾವಣೆ ಮಾಡುವ ಸಾಧ್ಯತೆ ಗೋಚರಿಸಿದೆ. ಆರ್‌ಸಿಬಿ ವಿರುದ್ಧ ಮೂರು ಓವರ್‌ಗಳಲ್ಲಿ 50 ರನ್‌ ಬಿಟ್ಟುಕೊಟ್ಟ ಮುಕೇಶ್‌ ಕುಮಾರ್‌ ಬದಲಿಗೆ ತಮಿಳುನಾಡಿದ ಎಡಗೈ ವೇಗಿ ಟಿ. ನಟರಾಜನ್‌ಗೆ ಅವಕಾಶ ನೀಡುವ ಸಾಧ್ಯತೆ ಇದೆ. ಮೆಗಾ ಹರಾಜಿನಲ್ಲಿ ಅವರನ್ನು 10.75 ಕೋಟಿ ನೀಡಿ ಖರೀದಿಸಿದ್ದರೂ ಇದುವರೆಗೆ ಆಡಿಸದೇ ಇರುವುದು ಅಚ್ಚರಿಗೂ ಕಾರಣವಾಗಿದೆ.

ಪಿಚ್‌ ರಿಪೋರ್ಟ್‌

ಸಾಮಾನ್ಯವಾಗಿ ಫಿರೋಜ್ ಷಾ ಕೋಟ್ಲಾ ಕ್ರೀಡಾಂಗಣದ ಪಿಚ್‌ ಬ್ಯಾಟಿಂಗ್‌ ಸ್ನೇಹಿಯಾಗಿರುತ್ತದೆ. ಆದರೆ ಕಳೆದ ಪಂದ್ಯದಲ್ಲಿ ಸಂಪೂರ್ಣ ಬೌಲಿಂಗ್‌ ಟ್ರ್ಯಾಕ್‌ ಆಗಿ ಬದಲಾಗಿತ್ತು. 150 ರನ್‌ ಬಾರಿಸಲು ಬ್ಯಾಟರ್‌ಗಳು ಹರಸಾಹಸ ಪಟ್ಟಿದ್ದರು. ಹೀಗಾಗಿ ಪಿಚ್‌ ಹೇಗೆ ವರ್ತಿಸಲಿದೆ ಎಂದು ಹೇಳುವುದು ಕೂಡ ಕಷ್ಟ. ಹೆಚ್ಚಾಗಿ ಚೇಸಿಂಗ್‌ ನಡೆಸಿದ ತಂಡಗಳೇ ಇಲ್ಲಿ ಗೆಲುವು ಸಾಧಿಸಿದೆ. ಹೀಗಾಗಿ ಟಾಸ್‌ ಪಾತ್ರ ಕೂಡ ಮುಖ್ಯವಾಗಿದೆ.

ಇದನ್ನೂ ಓದಿ IPL 2025: ಕಾಂತಾರ ಶೈಲಿಯಲ್ಲೇ ರಾಹುಲ್‌ಗೆ ತಿರುಗೇಟು ಕೊಟ್ಟ ಕೊಹ್ಲಿ; ಇಲ್ಲಿದೆ ವಿಡಿಯೊ

ಸಂಭಾವ್ಯ ತಂಡಗಳು

ಡೆಲ್ಲಿ ಕ್ಯಾಪಿಟಲ್ಸ್‌: ಅಭಿಷೇಕ್ ಪೊರೆಲ್, ಫಾಫ್‌ ಡು ಪ್ಲೆಸಿಸ್‌, ಕರುಣ್ ನಾಯರ್, ಕೆಎಲ್ ರಾಹುಲ್ (ವಿ,ಕೀ.), ಅಕ್ಷರ್ ಪಟೇಲ್ (ನಾಯಕ), ಟ್ರಿಸ್ಟಾನ್ ಸ್ಟಬ್ಸ್, ವಿಪ್ರಜ್ ನಿಗಮ್, ಮಿಚೆಲ್ ಸ್ಟಾರ್ಕ್, ಕುಲದೀಪ್ ಯಾದವ್, ದುಷ್ಮಂತ ಚಮೀರಾ, ಟಿ. ನಟರಾಜನ್‌.

ಕೆಕೆಆರ್‌: ರೆಹಮಾನುಲ್ಲಾ ಗುರ್ಬಾಝ್‌ (ವಿ.ಕೀ), ಸುನೀಲ್‌ ನರೇನ್‌, ಅಜಿಂಕ್ಯ ರಹಾನೆ (ನಾಯಕ), ವೆಂಕಟೇಶ್‌ ಅಯ್ಯರ್‌, ರಿಂಕು ಸಿಂಗ್‌, ಆಂಡ್ರೆ ರಸೆಲ್‌, ರಮಣ್‌ದೀಪ್‌ ಸಿಂಗ್‌, ಮೊಯೀನ್‌ ಅಲಿ, ಹರ್ಷಿತ್‌ ರಾಣಾ, ವೈಭವ್‌ ಅರೋರಾ, ವರುಣ್‌ ಚಕ್ರವರ್ತಿ.