ಬೆಂಗಳೂರು: ವಾಹನ ಮಾಲೀಕರಿಗೆ ರಾಜ್ಯ ಸರ್ಕಾರ ಗುಡ್ ನ್ಯೂಸ್ ನೀಡಿದೆ. 2019ರ ಏಪ್ರಿಲ್ ತಿಂಗಳಿಗೂ ಮೊದಲು ನೋಂದಾಯಿಸಲಾದ ವಾಹನಗಳಿಗೆ ಹೈ-ಸೆಕ್ಯೂರಿಟಿ ರಿಜಿಸ್ಟ್ರೇಶನ್ ಪ್ಲೇಟ್ (HSRP Deadline) ಅಳವಡಿಕೆ ಗಡುವನ್ನು ಮತ್ತೊಮ್ಮೆ ವಿಸ್ತರಣೆ ಮಾಡಿದ್ದು, ಇದಕ್ಕೆ ನವೆಂಬರ್ 30ರವರೆಗೆ ಕಾಲಾವಕಾಶ ನೀಡಲಾಗಿದೆ.
ಈ ಹಿಂದೆ ನಾಲ್ಕು ಬಾರಿ ಗಡವು ವಿಸ್ತರಿಸಿದರೂ ಬಹುತೇಕ ವಾಹನ ಮಾಲೀಕರು ಇನ್ನೂ ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಸಿಕೊಂಡಿಲ್ಲ. ಹೀಗಾಗಿ ರಾಜ್ಯ ಸರ್ಕಾರ ಸೋಮವಾರ ಮತ್ತೊಮ್ಮೆ ಗಡುವು ವಿಸ್ತರಣೆ ಮಾಡಿದೆ. ನವೆಂಬರ್ 30ರವರೆಗೆ ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಅಳವಡಿಕೆಗೆ ಸಮಯ ನೀಡಲಾಗಿದೆ. ಒಂದು ವೇಳೆ ಈ ಗಡುವಿನೊಳಗೂ ಹೊಸ ಮಾದರಿಯ ನಂಬರ್ ಪ್ಲೇಟ್ ಹಾಕಿಸಿಕೊಳ್ಳದಿದ್ದರೆ ಡಿಸೆಂಬರ್ 1ರಿಂದ ದಂಡ ವಿಧಿಸಲು ಸಾರಿಗೆ ಇಲಾಖೆ ತೀರ್ಮಾನಿಸಿದೆ.
ಸಾರಿಗೆ ಇಲಾಖೆಯು ಪೊಲೀಸ್ ಇಲಾಖೆ ಜತೆ ಸೇರಿ ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಇಲ್ಲದ ವಾಹನಗಳಿಗೆ ದಂಡ ಹಾಕಲು ನಿರ್ಧರಿಸಿದೆ. ಅವಧಿಯೊಳಗೆ ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಕೆ ಮಾಡದಿದ್ದರೆ, 500-1000 ರೂಪಾಯಿವರೆಗೆ ದಂಡ ವಿಧಿಸಲಿದೆ ಎಂದು ಎನ್ನುವ ಮಾಹಿತಿ ಲಭ್ಯವಾಗಿದೆ.
ಎಚ್ಎಸ್ಆರ್‌ಪಿ ಪಡೆಯುವುದು ಹೇಗೆ?
- ಕರ್ನಾಟಕ ಸಾರಿಗೆ ಇಲಾಖೆ ವೆಬ್‌ಸೈಟ್ ಅಥವಾ ಸೊಸೈಟಿ ಆಫ್ ಇಂಡಿಯನ್ ಆಟೋಮೊಬೈಲ್ ಮ್ಯಾನುಫ್ಯಾಕ್ಚರರ್ಸ್ (SIAM) ವೆಬ್‌ಸೈಟ್ ಭೇಟಿ ನೀಡಿ ಮತ್ತು Book HSRP ಅನ್ನು ಕ್ಲಿಕ್ ಮಾಡಿ.
- ನಿಮ್ಮ ವಾಹನ ತಯಾರಕರನ್ನು ಆಯ್ಕೆ ಮಾಡಿ.
- ವಾಹನದ ಮೂಲ ವಿವರ ಭರ್ತಿ ಮಾಡಿ.
- HSRP ನಂಬರ್ ಪ್ಲೇಟ್ ಅಳವಡಿಕೆಗೆ ನಿಮ್ಮ ಅನುಕೂಲಕ್ಕೆ ತಕ್ಕಂತೆ ಡೀಲರ್ ಸ್ಥಳವನ್ನು ಆಯ್ಕೆ ಮಾಡಿ.
- ಶುಲ್ಕವನ್ನು ಆನ್‌ಲೈನ್‌ನಲ್ಲಿ ಪಾವತಿಸಿ, ನಗದು ರೂಪದಲ್ಲಿ ಪಾವತಿಗೆ ಅವಕಾಶವಿಲ್ಲ.
- ನಿಮ್ಮ ಅನುಕೂಲಕ್ಕೆ ತಕ್ಕಂತಹ HSRP ಅಳವಡಿಕೆಯ ದಿನಾಂಕ ಮತ್ತು ಸಮಯವನ್ನು ಆಯ್ಕೆ ಮಾಡಿ.
- ನಿಮ್ಮ ವಾಹನದ ಯಾವುದೇ ತಯಾರಕ, ಡೀಲರ್ ಸಂಸ್ಥೆಗೆ ಭೇಟಿ ನೀಡಿ.