ವಯಸ್ಸಾದರೂ ಪತ್ರಿಕೆ ಓದಬೇಕೆಂಬ ಹಂಬಲ
ಸುದ್ದಿ, ಹೂರಣಗಳ ಮೇಲೆ ಕಣ್ಣು
ಹೊಸಪೇಟೆ: ಇಳಿವಯಸ್ಸಿನಲ್ಲಿಯೂ ಸಮಾಜದಲ್ಲಿ ನಡೆಯುವ ವಿಚಾರಗಳ ಬಗ್ಗೆ ತಿಳಿಯುವ ಉತ್ಸುಕತೆ, ವಯಸ್ಸಾದರೂ ಪತ್ರಿಕೆ ಓದಬೇಕೆಂಬ ಹಂಬಲ, ನೀಗದ ಜ್ಞಾನ ದಾಹ.
ಹೌದು, ಸ್ಥಳೀಯ ಸ್ಟೇಷನ್ ರಸ್ತೆಯ ನಿವಾಸಿ ೯೬ ವರ್ಷದ ಹನುಮಂತಮ್ಮ ಅವರು ನಿತ್ಯ ಬೆಳಿಗ್ಗೆ ಪತ್ರಿಕೆಗಳನ್ನು ಒಮ್ಮೆ ತಿರುವಿ ಹಾಕದಿದ್ದರೆ ಸಮಾಧಾನವಿಲ್ಲ. ಬೆಳಿಗ್ಗೆ ತಂದುಕೊಡುವ ಹುಡುಗನ ಸೈಕಲ್ ಬೆಲ್ನ ಶಬ್ದವಾಯಿತೆಂದರೇ ಮೆಲ್ಲಗೆ ತಾವೇ ಎದ್ದು ಪತ್ರಿಕೆಗಳನ್ನು ಎತ್ತುಕೊಂಡು ಬಂದು ಮನೆ ಆವರಣದಲ್ಲಿ ಕುಳಿತು ಕುತೂಹಲದಿಂದ ಪುಟಗಳನ್ನು ತಿರುವಿ ಹಾಕುತ್ತಾರೆ.
ಪತ್ರಿಕೆಗಳ ಮೇಲಿನ ಪ್ರೀತಿ. ಇಳಿ ವಯಸ್ಸಿನ ಹನುಮಂತಮ್ಮ ಅವರು ೩ನೇ ತರಗತಿ ಓದಿದ್ದಾರೆ. ಮೂಲತಃ ಹನುಮಂತಮ್ಮನವರ ಪತಿ ದಿವಂಗತ ಹನುಮಂತ ರಾವ್ ಅವರು ಶಿಕ್ಷಕ ವೃತ್ತಿಯಲ್ಲಿದ್ದರು. ಮನೆಯಲ್ಲಿ ಮಕ್ಕಳಿಗೆ ಪಾಠ ಕಲಿಸಿಕೊಡುವುದನ್ನೇ ಇವರೂ ಮನೆ ಕೆಲಸ ಕಾರ್ಯಗಳ ಜೊತೆಯಲ್ಲಿಯೇ ನಿರಂತರವಾಗಿ ಕೇಳಿಸಿಕೊಳ್ಳುತ್ತಾ ಓದುವುದು, ಬರೆಯುವುದನ್ನೂ ಕಲಿತಿದ್ದಾರೆ.
ಕಳೆದ ೨ ದಶಕಕ್ಕೂ ಹೆಚ್ಚು ಹಿಂದಿನಿಂದಲೂ ಪತ್ರಿಕೆಗಳನ್ನು ಓದುವ ಹವ್ಯಾಸ ರೂಢಿಸಿಕೊಂಡಿದ್ದಾರೆ ಎನ್ನುತ್ತಾರೆ ಇವರ ಹಿರಿಯ ಮಗ ಗುರುರಾಜ್ ರಾವ್. 96 ವರ್ಷವಾಗಿದ್ದರೂ ಪತ್ರಿಕೆಯಲ್ಲಿನ ಸುದ್ದಿಗಳು, ಮನೆಗೆ ಬರುವ ಕಾಗದ ಪತ್ರಗಳನ್ನು ಸ್ಪಷ್ಟವಾಗಿ ಓದುತ್ತಾರೆ. ಪತ್ರಿಕೆಗಳ ಮುಖಪುಟದ ಸುದ್ದಿ, ವಿಶೇಷ ಲೇಖನ, ಅಂಕಣಗಳನ್ನು ಹೆಚ್ಚು ಕುತೂಹಲದಿಂದ ಓದುವುದು ವಿಶೇಷ. ನಿತ್ಯ ಕನ್ನಡದ ಎರಡ್ಮೂರು ಪತ್ರಿಕೆಗಳನ್ನು ಓದಿದ ಬಳಿಕವೇ ತಿಂಡಿ, ಉಪಾಹಾರ ಸೇವನೆ ಮಾಡುವುದನ್ನು ರೂಢಿಸಿಕೊಂಡಿ ದ್ದಾರೆ. ಅಲ್ಲದೇ ಈ ಇಳಿವಯಸ್ಸಿನಲ್ಲೂ ಬ್ಯಾಂಕಿಗೆ ತೆರಳಿ ಪಿಂಚಣಿ ತರುವುದಲ್ಲದೇ ವೈಯಕ್ತಿಕ ಕೆಲಸಗಳನ್ನು ಮತ್ತೊಬ್ಬರ ಸಹಾಯವಿಲ್ಲದೆ ಪೂರೈಸಿಕೊಳ್ಳುತ್ತಾರೆ ಎನ್ನುತ್ತಾರೆ ಅವರನ್ನು ಹತ್ತಿರದಿಂದ ಕಂಡವರು.
ಪತ್ರಿಕೆಗಳನ್ನು ಓದುವುದರಿಂದ ಎಲ್ಲಲ್ಲಿ ಏನೇನು ನಡೆಯುತ್ತದೆ ಎಂಬುದು ತಿಳಿಯಲಿದೆ. ಪತ್ರಿಕೆಯಲ್ಲಿ ಪ್ರಕಟವಾಗುವ ಬಹುತೇಕ ಸುದ್ದಿಗಳು ಜ್ಞಾನವನ್ನು ನೀಡುತ್ತವೆ. ಜೊತೆಗೆ ವಿಶೇಷ ಲೇಖನ, ಅಂಕಣಗಳು ನಮ್ಮಲ್ಲಿ ಧನಾತ್ಮಕ ಚಿಂತನೆಗಳನ್ನು ಹೆಚ್ಚಿಸಲು ಪೂರಕವಾಗುತ್ತವೆ. ಪ್ರಸ್ತುತ ಎಲ್ಲೆಡೆ ಕರೋನಾ ಅಬ್ಬರದಿಂದ ಸಾಕಷ್ಟು ಮಧ್ಯೆ ವಯಸ್ಸಿನವರು, ಯುವ ಸಮೂಹ ಕಾಯಿಲೆಯಿಂದ ನರಳುತ್ತಿದ್ದಾರೆ. ಅಲ್ಲದೇ ಆತಂಕಕ್ಕೊಳಗಾಗಿದ್ದಾರೆ. ಇವೆಲ್ಲದರಿಂದ ಹೊರಬರಲು ಉತ್ತಮ ಚಿಂತನೆ, ಉತ್ತಮ ಆಹಾರ, ನಡುವಳಿಕೆಯನ್ನು ರೂಢಿಸಿಕೊಳ್ಳಬೇಕು ಎನ್ನುತ್ತಾರೆ ಹಿರಿಯ ಜೀವಿ ಹನುಮಂತಮ್ಮನವರು. ಆರೋಗ್ಯ ಹೇಗೆ ಕಾಪಾಡಿಕೊಳ್ಳಬೇಕು ಹಾಗೂ ಜೀವನ ಹೇಗೆ ನಿರ್ವಹಿಸಬೇಕು ಎನ್ನುವುದನ್ನು ಇವರು ಇತರರಿಗೆ ಮಾದರಿಯಾಗಿದ್ದಾರೆ.
***
ಪ್ರಸ್ತುತ ಕರೋನಾದಿಂದ ಯುವ ಸಮೂಹ, ಮಧ್ಯ ವಯಸ್ಸಿನವರು ಸಾಕಷ್ಟು ಬಾಧೆ ಪಡುತ್ತಿದ್ದಾರೆ. ಭಯವೂ ಇದೆ. ಇದಕ್ಕೆಲ್ಲ ನಮ್ಮ ಜೀವನ ಶೈಲಿಯೇ ಕಾರಣ. ಎಲ್ಲವನ್ನು ನಿರ್ಲಕ್ಷಿಸುವ ಮನೋಭಾವ ಹೆಚ್ಚಾಗುತ್ತಿದೆ. ಟಿವಿ ನೋಡುವುದಕ್ಕಿಂತ ಪತ್ರಿಕೆ ಓದುವುದರಲ್ಲಿ ಹೆಚ್ಚು ಆನಂದವಿದೆ. ಕನ್ನಡ ಪತ್ರಿಕೆಗಳನ್ನು ಕಳೆದ ಹಲವು ವರ್ಷಗಳಿಂದ ಓದುತ್ತಿರುವೆ. ಈ ಹಿಂದಿನಿ ಗಿಂತಲೂ ಪ್ರಸ್ತುತ ಸಾಕಷ್ಟು ಬದಲಾವಣೆಯಾಗಿದೆ. ಮೊದಲಿಗೆ ಸಂಯುಕ್ತ ಕರ್ನಾಟಕ ಹೆಚ್ಚು ಓದುತ್ತಿದ್ದೆ, ನಂತರ ಇತರ ಪತ್ರಿಕೆಗಳನ್ನು ಓದುತ್ತಿರುವೆ. ವಿಶ್ವವಾಣಿ ಪತ್ರಿಕೆಯಲ್ಲಿ ವಿಶೇಷ ಲೇಖನಗಳು, ಅಂಕಣಗಳು ಅಚ್ಚುಮೆಚ್ಚಾಗಿವೆ.
-ಹನುಮಂತಮ್ಮ ಹೊಸಪೇಟೆ