ವಿದೇಶ ಫ್ಯಾಷನ್‌ ಲೋಕ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್‌ ಹೌಸ್‌ ಸಂಪಾದಕೀಯ

Geetha Kundapura Column: ಅಪರೂಪದ ಕೆತ್ತನೆಗಳು ಅಸಾಧಾರಣ ವಾಸ್ತು

ಭಾರತೀಯ ವಾಸ್ತುಶಿಲ್ಪ, ಕಲೆ, ಸಂಸ್ಕೃತಿ, ಪರಂಪರೆಗೆ ಉತ್ತಮ ಉದಾಹರಣೆಯಂತಿರುವ ಕೊನಾರ್ಕ್ ಸೂರ್ಯ ದೇವಾಲಯವನ್ನು ನೋಡಬೇಕೆನ್ನುವುದು ಬಹಳ ವರ್ಷಗಳ ಹಂಬಲ ವಾಗಿತ್ತು. 2025ರ ಫೆಬ್ರವರಿಯಲ್ಲಿ ಎಲ್ಲರೂ ಪ್ರಯಾಗರಾಜ್‌ನ ಕುಂಭಮೇಳಕ್ಕೆ ಹೊರಟರೆ ನಾವು ಕೊನಾರ್ಕ್‌ ನತ್ತ ಹೊರಟೆವು

ಅಪರೂಪದ ಕೆತ್ತನೆಗಳು ಅಸಾಧಾರಣ ವಾಸ್ತು

Profile Ashok Nayak Mar 2, 2025 1:15 PM

ಗೀತಾ ಕುಂದಾಪುರ

ಇನ್ನೇನು ಶಾಲೆಗಳಿಗೆ ಸದ್ಯದಲ್ಲೇ ರಜಾಕಾಲ; ಪೋಷಕರಿಗೆ ಇದು ಪ್ರವಾಸದ ಕಾಲ; ಮಕ್ಕಳೊಂದಿಗೆ ವಿವಿಧ ಪ್ರವಾಸಿ ತಾಣಗಳನ್ನು ಸಂದರ್ಶಿಸಲು ಇದುವೇ ಸಕಾಲ. ಕೊನಾರ್ಕದ ಸೂರ್ಯಮಂದಿರವು ಈ ವರ್ಷದ ನಿಮ್ಮ ಪ್ರವಾಸಿತಾಣಗಳ ಪಟ್ಟಿ ಯಲ್ಲಿರಲಿ!

ಭಾರತೀಯ ವಾಸ್ತುಶಿಲ್ಪ, ಕಲೆ, ಸಂಸ್ಕೃತಿ, ಪರಂಪರೆಗೆ ಉತ್ತಮ ಉದಾಹರಣೆಯಂತಿರುವ ಕೊನಾರ್ಕ್ ಸೂರ್ಯ ದೇವಾಲಯವನ್ನು ನೋಡಬೇಕೆನ್ನುವುದು ಬಹಳ ವರ್ಷಗಳ ಹಂಬಲವಾಗಿತ್ತು. 2025ರ ಫೆಬ್ರವರಿಯಲ್ಲಿ ಎಲ್ಲರೂ ಪ್ರಯಾಗರಾಜ್‌ನ ಕುಂಭಮೇಳಕ್ಕೆ ಹೊರಟರೆ ನಾವು ಕೊನಾರ್ಕ್‌ ನತ್ತ ಹೊರಟೆವು. ಭುವನೇಶ್ವರದಲ್ಲಿರುವ 7-13ನೇ ಶತಮಾ ನದಲ್ಲಿ ಕಟ್ಟಿದ ಹಲವು ದೇವಾಲಯಗಳನ್ನು ನೋಡಿದೆವು, ಇವುಗಳ ವಾಸ್ತುಶಿಲ್ಪ ಆಕರ್ಷಕ ಹಾಗೂ ಸಾಕಷ್ಟು ಪ್ರಸಿದ್ಧ. ಎರಡನೆಯ ದಿನ ಕೊನಾರ್ಕನದತ್ತ ಹೊರಟೆವು. ಇದು ಪುರಿಯಿಂದ ಸುಮಾರು 35 ಕೀಮಿ ದೂರದಲ್ಲಿದೆ.

ಇದನ್ನೂ ಓದಿ: Vinayaka M Bhatta Column: ಕನ್ನಡಿಗರಿಗೊಲಿದ ಅದಿಕಾವ್ಯದ ಅಧ್ಯಯನ ಸೌಲಭ್ಯ

ಪೂರ್ವ ಗಂಗಾ ರಾಜವಂಶದ ರಾಜ ನೃಸಿಂಹ ದೇವ ಸೂರ್ಯದೇವನ ಭಕ್ತ, ಅವನೇ ಈ ಮಂದಿರದ ರೂವಾರಿ. ಮಂದಿರದ ವಾಸ್ತುಶಿಲ್ಪ ಎಂತವರನ್ನೂ ಆಕರ್ಷಿಸುತ್ತದೆ; ಇದರ ಖಗೋಳಶಾಸ, ವಿಜ್ಞಾನ, ಎಂಜಿನಿಯರಿಂಗ್, ನಿಖರತೆ, ಆಶ್ಚರ್ಯಚಕಿತವಾ ಗುವಂತೆ ಮಾಡಿ ಇದರ ಚೌಕಟ್ಟು, ಸೌಂದರ್ಯ, ಸೂಕ್ಷ್ಮತೆ ರೋಮಾಂಚನಗೊಳ್ಳುವಂತೆ ಮಾಡು ತ್ತದೆ.

ಕೊನಾರ್ಕ್ ಶಬ್ದದಲ್ಲೇ ಎರಡು ಶಬ್ದಗಳಿವೆ, ಕೊನ ಎಂದರೆ ಮೂಲೆ ಮತ್ತು ಅರ್ಕ ಎಂದರೆ ಸೂರ್ಯ. ಇದನ್ನು ಕಟ್ಟಲು 1200 ಕೆಲಸಗಾರರು 12 ವರ್ಷ (1243-1255) ತೆಗೆದು ಕೊಂಡ ರಂತೆ. ಸೂರ್ಯನ ರಥದ ಆಕಾರದಲ್ಲಿರುವ ಈ ದೇವಾಲಯಕ್ಕೆ 24 ಚಕ್ರಗಳಿವೆ, 7 ಕುದುರೆ ಗಳಿಂದ ಎಳೆಯುತ್ತಿ ರುವಂತೆ ಕಟ್ಟಲಾಗಿದೆ.

24 ಚಕ್ರಗಳು ಅತ್ಯದ್ಭುತ, ಈ ಚಕ್ರವೇ ಕೊನಾರ್ಕ್ ದೇವಾಲಯದ ಹೆಗ್ಗುರುತಾಗಿದೆ. ಚಕ್ರಗಳು ಸುಮಾರು 12 ಅಡಿ ಉದ್ದಗಲವಿದ್ದು ಚಕ್ರದಲ್ಲಿ 8 ಕೆತ್ತನೆಗಳಿರುವ ಗೆರೆಗಳಿವೆ. 12 ಜೊತೆ ಚಕ್ರಗಳು ವರ್ಷದ 12 ತಿಂಗಳನ್ನು ಸೂಚಿಸುವಂತೆ (ತಿಂಗಳಿಗೆ 2 ಪಕ್ಷ, ಶುಕ್ಲ ಪಕ್ಷ, ಕೃಷ್ಣ ಪಕ್ಷ), ಚಕ್ರದೊಳಗಿರುವ 8 ಗೆರೆಗಳು ದಿನವನ್ನು 8 ಪ್ರಹರಗಳಾಗಿ ವಿಭಾಗ ಮಾಡು ತ್ತವೆ, ಸಮಯವನ್ನು ಲೆಕ್ಕ ಹಾಕುವ ಲೆಕ್ಕಾಚಾರವಿಲ್ಲಿದೆ. ಮಂದಿರದ ಮುಖ್ಯ ವಾಸ್ತುಶಿಲ್ಪಿ ‘ಬಿಶು ಮಹರಾನ’. ಮಂದಿರದ ವಾಸ್ತುಶಿಲ್ಪವು ಕಳಿಂಗ ಶೈಲಿಯಲ್ಲಿದೆ. ಮಂದಿರವು 26.2 ಎಕರೆ ವಿಸ್ತೀರ್ಣವುಳ್ಳ ಜಾಗದಲ್ಲಿದೆ.

ನಾಟ್ಯ ಮಂಟಪ: ಮೊದಲಿಗೆ ಸಿಗುವುದೇ ನಾಟ್ಯ ಮಂಟಪ; ಇಲ್ಲಿ 16ಕಂಬಗಳಿವೆ. ಇವು ಮೂರು ಭಾಗಗಳಿದ್ದು ಉತ್ತರಾಯಣ, ದಕ್ಷಿಣಾಯನ, ಮಧ್ಯಕಾಲದಲ್ಲಿ ಸೂರ್ಯನ ಕಿರಣಗಳು ಕಾಲಕ್ಕನುಗುಣವಾಗಿ ಇದರ ಮೂಲಕ ಹಾದು ಹೋಗುತ್ತದೆ. ಕಂಭಗಳ ಮೇಲೆ ವಾದ್ಯಗಳನ್ನು ನುಡಿಸುವ, ಹಾಡು ಹೇಳುವ, ನೃತ್ಯ ಮಾಡುತ್ತಿರುವ, ಅಲಂಕರಿಸಿ ಕೊಳ್ಳುತ್ತಿರುವ ಮಹಿಳೆಯರ ಕೆತ್ತನೆಗಳಿವೆ. ಈ ಮಂಟಪಕ್ಕೆ ಮುಚ್ಚಿಗೆಯಿಲ್ಲ. ಇದರ ದುರು ಭಾಗದಲ್ಲಿ ಮನುಷ್ಯ, ಮನುಷ್ಯನ ಮೇಲೆ ಆನೆ, ಆನೆಯ ಮೇಲೆ ಸಿಂಹವಿರುವ ಎರಡು ದೊಡ್ಡ ಕಲ್ಲಿನ ಮೂರ್ತಿಗಳಿವೆ (ಮನುಷ್ಯನನ್ನು ಸಂಪತ್ತು, ಅಹಂ ಸವಾರಿ ಮಾಡಿದೆ ಎಂಬ ಅರ್ಥವಂತೆ).

ಸೂರ್ಯ ಮಂದಿರ: ಕಳಿಂಗ ವಾಸ್ತುಶಿಲ್ಪದ ಇತರ ಮಂದಿರಗಳಲ್ಲಿರುವಂತೆ ಇಲ್ಲಿಯೂ ಮಂದಿರವು ಎರಡು ಭಾಗದಲ್ಲಿದೆ, ಮುಂಭಾಗದಲ್ಲಿ ಸಭಾಂಗಣ (ಜಗಮೋಹನ ಎಂದೂ ಕರೆಯುತ್ತಾರೆ) ಅದಕ್ಕೆ ಜೋಡಿಸಿಕೊಂಡು ಗರ್ಭಗುಡಿ. ಇಡೀ ಮಂದಿರವು ಸೂರ್ಯನ ರಥದ ಆಕಾರದಲ್ಲಿದೆ. ಸಭಾಂಗಣದ ಗೋಡೆಗಳ ಎತ್ತರ ಸುಮಾರು 100 ಅಡಿ. ರಥವನ್ನು 7 ಕಲ್ಲಿನ ಕುದುರೆಗಳು ಎಳೆಯುವಂತಿದೆ, ಒಂದು ಕಡೆ 4, ಮತ್ತೊಂದು ಕಡೆ 3 ಕುದುರೆಗಳು, ಸುತ್ತ 2 ಚಕ್ರಗಳು. ಈಗಿನ ದಿನಗಳಲ್ಲಿ ಇದನ್ನು ಹೊರಗಡೆಯಿಂದಷ್ಟೇ ನೋಡಬಹುದು,

ಒಳಗೆ ಪ್ರವೇಶವಿಲ್ಲ; ಇದನ್ನು ‘ಕಪ್ಪು ಪಗೋಡ’ ಎಂದೂ ಯೂರೋಪಿನ ವರ್ತಕರು ಕರೆಯುತ್ತಿದ್ದರಂತೆ. ಸೂರ್ಯನ ಕೆತ್ತನೆಗಳು: ಮಂದಿರದ ಮೂರು ಭಾಗದಲ್ಲಿ ಮೂರು ಸೂರ್ಯನ ಮೂರ್ತಿಗಳಿವೆ. ಎಡಗಡೆ ಇರುವ ಸೂರ್ಯನ ಮೂರ್ತಿಯು ಬಾಲಕನಂತೆ ಕಾಣಿಸುತ್ತಿದ್ದು ಇದರ ಮೇಲೆ ಬೆಳಗ್ಗಿನ ಸೂರ್ಯನ ಕಿರಣಗಳು ಬೀಳುತ್ತವೆ.

ಹಿಂದಿನ ಭಾಗದಲ್ಲಿ ಎರಡನೆಯ ಸೂರ್ಯನ ಮೂರ್ತಿ, ಮಧ್ಯಾಹ್ನದ ಬಿಸಿಲು ಇದರ ಮೇಲೆ ಬೀಳುತ್ತದೆ. ಇಲ್ಲಿರುವ ಸೂರ್ಯನ ಮುಖದಲ್ಲಿ ಯೌವನದ ಛಾಯೆ ಕಾಣಿಸುತ್ತದೆ. ಬಲಭಾಗದ ಗೋಡೆಯಲ್ಲಿ ಮೂರನೆಯ ಸೂರ್ಯನ ಮೂರ್ತಿಯಿದೆ, ಸೂರ್ಯನು ಕುದುರೆಯ ಮೇಲೆ ಕೂತಿರುವಂತೆ ಕೆತ್ತಲಾಗಿದೆ. ಸೂರ್ಯನ ಮುಖದಲ್ಲಿ ಮುಪ್ಪಿನ ಛಾಯೆ ಕಾಣಿಸುತ್ತಿದೆ, ಸಂಜೆಯ ಸೂರ್ಯನ ಕಿರಣಗಳು ಈ ಸೂರ್ಯನ ಮೂರ್ತಿಯ ಮೇಲೆ ಬೀಳುತ್ತದೆ.

ನಿತ್ಯಜೀವನದ ದೃಶ್ಯಗಳು: ಮಂದಿರದ ತಳಭಾಗದಲ್ಲಿರುವ ಗೋಡೆಗಳಲ್ಲಿ ಎಲೆ, ಹೂವು, ಪ್ರಾಣಿಗಳು, ಅಪ್ಸರೆಯರ ಮೂರ್ತಿಗಳಿವೆ. ಕೆಲವು ಕಡೆ ಜನಜೀವನವನ್ನು ಬಿಂಬಿಸುವ ಕೆತ್ತನೆಗಳಿವೆ, ಬೇಟೆಯಾಡುತ್ತಿರುವ ದೃಶ್ಯ, ಭಾರ ಹೊರುತ್ತಿರುವ ಕೆಲಸದವರು, ಉತ್ಸವ, ಜಾತ್ರೆಯ ದೃಶ್ಯ, ಯಾತ್ರೆಯ ದೃಶ್ಯ, ವೀಣೆಯನ್ನು ನುಡಿಸುತ್ತಿರುವ ಮಹಿಳೆ, ಮರದಡಿಯಲಿ ತಲೆಕೂದಲನ್ನು ಒಣಗಿಸಿಕೊಳ್ಳುತ್ತಿರುವ ಮಹಿಳೆ, ನೃತ್ಯ ಮಾಡುವ ಮಹಿಳೆಯರ ಕೆತ್ತನೆ ಗಳಿವೆ. ಅಲ್ಲದೆ ಗುರುಗಳಿಂದ ಆಶೀರ್ವಾದ ಪಡೆಯುತ್ತಿರುವ ರಾಜನ ಕೆತ್ತನೆಯೂ ಇದೆ. ಮಧ್ಯ ಭಾಗದ ಗೋಡೆಯಲ್ಲಿ ಕಾಮ ಪ್ರಚೋದಕ, ಭೋಗಾಸಕ್ತ ಮಿಥುನ ಶಿಲ್ಪಗಳಿವೆ. ಮೇಲ್ಬಾಗದ ಗೋಡೆಗಳಲ್ಲಿ ಇಂದ್ರ, ಅಗ್ನಿ, ವಾಯು, ಕುಬೇರನ ಮೂರ್ತಿಗಳಲ್ಲದೆ ವಿಷ್ಣು, ಗಜಲಕ್ಷ್ಮಿ, ಪಾರ್ವತಿ, ಕೃಷ್ಣ, ನೃಸಿಂಹ, ಮಹಿಷಾಸುರ ಮರ್ದಿನಿಯ ಮೂರ್ತಿಗಳಿವೆ.

ಛಾಯಾದೇವಿ ಮಂದಿರ: ಛಾಯಾದೇವಿ ಸೂರ್ಯನ ಹೆಂಡತಿ, ಮಾಯಾದೇವಿ ಎನ್ನುವ ಹೆಸರೂ ಇದೆ. ಮಂದಿರವು ಜೀರ್ಣಾವಸ್ಥೆಯಲ್ಲಿದೆ. ಗರ್ಭಗುಡಿಗೆ ಗೇಟ್ ಇದ್ದು ಹೊರಗಿ ನಿಂದ ಹಣಕಬಹುದು. ಒಳಗೆ ಒಂದು ಎರಡಡಿ ಉದ್ದ, ಅಗಲದ ಕೆತ್ತನೆ ಇರುವ ಕಲ್ಲಿದೆ. ಆಶ್ಚರ್ಯದ ವಿಷಯವೆಂದರೆ ಇದನ್ನು 11ನೇ ಶತಮಾನದಲ್ಲಿ ಕಟ್ಟಲಾಯಿತಂತೆ. ಅಸಲಿಗೆ ಮೊದಲು ಕಟ್ಟಿಸಿದ ಸೂರ್ಯ ದೇವಾಲಯವಿದು, ನಂತರ ಇದನ್ನು ಛಾಯಾದೇವಿಗಾಗಿ ಮೀಸಲಿಡಾಯಿತು ಎನ್ನುವ ಮಾತೂ ಇದೆ. ಗೋಡೆಗಳ ಮೇಲೆ ಸೂರ್ಯ, ವಾಯು, ಅಗ್ನಿ, ವಿಷ್ಣುವಿನ ಕೆತ್ತನೆಗಳಿವೆ.

ಭೋಗ ಮಂಟಪ, ನವಗ್ರಹ ಮಂದಿರ, ವೈಷ್ಣವ ಮಂದಿರ, ಮ್ಯೂಸಿಯಮ್‌ಗಳೂ ಇವೆ. ಮಂದಿರಕ್ಕೆ ಉಪಯೋಗಿಸಿದ ಕಲ್ಲಗಳನ್ನು ಹೊರದೇಶದಿಂದ ತರಲಾಯಿತು ಎಂಬ ಮಾಹಿತಿಯಿದೆ. ಅಲ್ಲದೆ ಧಾರಾಳವಾಗಿ ಲೋಡ್ ಸ್ಟೋನ್ ಉಪಯೋಗಿಸಿ ಕಟ್ಟಿದರು. ಇದು ನೈಸರ್ಗಿಕ ಅಯಸ್ಕಾಂತದಂತೆ ಕೆಲಸ ಮಾಡುತ್ತದೆ, ಇದರಿಂದ ಮುಖ್ಯ ಸೂರ್ಯ ದೇವರ ಮೂರ್ತಿಯು ಗರ್ಭಗುಡಿಲ್ಲಿ ತೇಲುವಂತೆ ಮಾಡಿದ್ದರು!

ಪೋರ್ಚುಗೀಸರ ದುಷ್ಕೃತ್ಯ?: ಮಂದಿರದ ಒಳಗಿರುವ ಮ್ಯಾಗ್ನೇಟ್, ಸನಿಹದ ಸಮುದ್ರದಲ್ಲಿ ಸಂಚರಿಸುವ ವ್ಯಾಪಾರಿ ಹಡುಗಿನ ದಿಕ್ಸೂಚಿಗಳ ದಿಕ್ಕನ್ನೇ ತಪ್ಪಿಸುತ್ತಿದ್ದವು. ಇದನ್ನು ಕಂಡ ಪೋರ್ಚುಗೀಸರು ಮಂದಿರದ ಒಳಗಿರುವ ಮ್ಯಾಗ್ನೇಟ್ ಮತ್ತು ಮೂರ್ತಿಯನ್ನು ಕಿತ್ತೆಸೆದರು ಎನ್ನುತ್ತಾರೆ. ಪೋರ್ಚುಗೀಸರಿಂದ ಇಲ್ಲಿನ ಹಲವಾರು ನೃತ್ಯಗಾತಿಯರು ಹತವಾದರು. ಅವರ ಗೆಜ್ಜೆಯ ಶಬ್ದ, ನಗು, ಮಾತುಗಳು ಈಗಲೂ ರಾತ್ರಿಯಲ್ಲಿ ಕೇಳಿಬರುತ್ತದಂತೆ.

ಭಾರತವನ್ನು ಆಳುತ್ತಿದ್ದ ಬ್ರಿಟಿಷರು ಇದರ ಸಂರಕ್ಷಣೆಗೆ ಮುಂದಾದರು. ಮೊದಲಿಗೆ ಇದರ ಎಲ್ಲಾ ದ್ವಾರಗಳನ್ನು ಮುಚ್ಚಿ ಮರಳನ್ನು ತುಂಬಿಸಿದರು, ನಂತರ ಸ್ವಚ್ಛಗೊಳಿಸಿದರು; 1939ರಲ್ಲಿ ಇದರ ಜವಾಬ್ದಾರಿಯನ್ನು ಭಾರತದ ಪುರತತ್ವ ಇಲಾಖೆ ವಹಿಸಿಕೊಂಡಿತು. 1984ರಲ್ಲಿ ಯೂನಿಸ್ಕೋ ವರ್ಲ್ಡ್ ಹೆರಿಟೇಜ್ ಸೈಟ್ ಎಂದು ಗುರುತಿಸಲ್ಪಟ್ಟಿತು.

ಗರ್ಭಗುಡಿಯೇ ಇಲ್ಲದ ಮಂದಿರವಾದರೇನಂತೆ, ಇದನ್ನು ಸಂದರ್ಶಿಸಲು ಪ್ರವಾಸಿಗರೇ ದಂಡೇ ಬರುತ್ತಿದೆ ಈಗ. ಮಂದಿರವನ್ನು ನೋಡಲು 2-3 ಗಂಟೆಯಾದರೂ ಬೇಕು, ರೂ.50 ಇದರ ಪ್ರವೇಶ ದರ. ಸಂಜೆಯ ಹೊತ್ತಿನಲ್ಲಿ ಲೈಟ್ ಶೋ ಸಹ ನಡೆಯುತ್ತದೆ.

ಬಿದ್ದುಹೋದ ಗರ್ಭಗುಡಿ!

ವಿಶ್ವಪ್ರಸಿದ್ಧ ಕೊನಾರ್ಕ ಮಂದಿರದಲ್ಲಿದ್ದ ಗರ್ಭಗುಡಿ ಕೆಳಗೆ ಉದುರಿ ಬಿದ್ದಿದೆ; ಸುಮಾರು 229 ಅಡಿ ಎತ್ತರದ ಗರ್ಭಗುಡಿಯ ಮೇಲ್ಬಾಗ 1837ರಲ್ಲಿ ಉದುರಿತು, ಇದಕ್ಕೆ ಹಲವಾರು ಕಾರಣಗಳನ್ನು ಉಹಿಸಲಾಗುತ್ತಿದೆ. ಕೆಳಗುರುಳಿದ ಕೆಲವು ಬಂಡೆಗಳನ್ನು ಈಗಲೂ ನೋಡ ಬಹುದು.