Friday, 18th October 2024

ವಿಶ್ವದ ಉತ್ಪಾದನಾ ಕ್ಷೇತ್ರದಲ್ಲಿ ಮುಂಚೂಣಿಗೆ ಬರಲಿದೆ ಭಾರತ

 

ಡಾ. ಸಿದ್ದರಾಜು ವಿ.ಜಿ

ಜಾಗತಿಕ ಮಟ್ಟದಲ್ಲಿ ಭಾರತವು ಹೆಚ್ಚು ವಿಶ್ವಾಾಸಾರ್ಹತೆ ಗಳಿಸುತ್ತಿದೆ. ಕಾರಣ, ಕೇಂದ್ರ ಸರಕಾರದ ಪೂರ್ವಭಾವಿ, ಸಮಯ ಪ್ರಜ್ಞೆ ಮತ್ತು ಧೈರ್ಯಶಾಲಿ ನಡೆಯಿಂದ ಕರೋನಾ ಸಾಂಕ್ರಾಮಿಕ ರೋಗವನ್ನು ನಿಯಂತ್ರಿಸುವಲ್ಲಿ ಮುಂಚೂಣಿಯಲ್ಲಿದ್ದು ಜಾಗತಿಕ ಮಟ್ಟದಲ್ಲಿ ಭಾರತ ದೇಶವು ಮೆಚ್ಚುಗೆಗೆ ಪಾತ್ರವಾಗಿದೆ. ಜಾಗತಿಕ ಮಟ್ಟದಲ್ಲಿ ಸೋಂಕಿತರು ಮತ್ತು ಸಾವಿನ ಸರಾಸರಿ ಅನುಪಾತದ ಪ್ರಮಾಣವು ಭಾರತದಲ್ಲಿ ಕಡಿಮೆಯಿದೆ. ಭಾರತದ ಸರಕಾರವು ಏ.27ರಂದು ಬಿಡುಗಡೆ ಮಾಡಿರುವ ಅಂಕಿಅಂಶಗಳ ಪ್ರಕಾರ 28,380 ಜನರು ಕರೋನಾ ಸೋಂಕಿತರಾಗಿದ್ದು 886 ಜನರು ಮೃತಪಟ್ಟಿದ್ದಾರೆ. ಸೋಂಕಿತರು ಮತ್ತು ಸಾವಿನ ಪ್ರಮಾಣದ ಅನುಪಾತವು ಶೇ.3.1ರಷ್ಟಿದೆ. ಆದರೆ ಪ್ರಪಂಚದಾದ್ಯಂತ ಏ.27ರಂದು ವಿಶ್ವ ಆರೋಗ್ಯ ಸಂಸ್ಥೆಯು ಬಿಡುಗಡೆ ಮಾಡಿರುವ ಅಂಕಿಅಂಶಗಳ ಪ್ರಕಾರ 28,58,635 ಜನರು ಕರೋನಾ ಸೋಂಕಿತರಾಗಿದ್ದು 1,96,295 ಜನರು ಮೃತಪಟ್ಟಿದ್ದು, ಸೋಂಕಿತರು ಮತ್ತು ಸಾವಿನ ಸರಾಸರಿ ಅನುಪಾತ ಪ್ರಮಾಣವು ಶೇ.6.9ರಷ್ಟಿದೆ.

ಪ್ರಪಂಚದಲ್ಲಿ ಚೀನಾವು ಉತ್ಪಾದನ ವಲಯದಲ್ಲಿ ಮುಂಚೂಣಿಯಲ್ಲಿದ್ದು, ಜಾಗತಿಕ ದೇಶಿಯ ವಸ್ತುಗಳ ಉತ್ಪಾದನೆಯಲ್ಲಿ ಶೇ. 16ರಷ್ಟು ಪಾಲು ಹೊಂದಿದೆ. ಅನೇಕ ರಾಷ್ಟ್ರಗಳು ಚೀನಾದ ಕಡಿಮೆ ದರ್ಜೆಯ ಉತ್ಪನ್ನಗಳಿಂದ ಹಿಡಿದು ಉತ್ತಮ ದರ್ಜೆಯ ಉತ್ಪನ್ನಗಳನ್ನು ಅಮದು ಮಾಡಿಕೊಳ್ಳುತ್ತಿರುವುದರಿಂದಾಗಿ ಚೀನಾದ ಜಿಡಿಪಿ ದರವೂ ಹೆಚ್ಚಾಗಿ ಜಗತ್ತಿನ 2ನೇ ದೊಡ್ಡ ಆರ್ಥಿಕ ಶಕ್ತಿಯಾಗಿದೆ. ಆದರೆ, ಕರೋನಾ ಕಾಳ್ಗಿಚ್ಚು ಚೀನಾದ ಮೇಲೆ ನಂಬಿಕೆಯನ್ನು ಕಳೆದುಕೊಳ್ಳುವಂಥ ಸನ್ನಿವೇಶ ನಿರ್ಮಾಣವಾಗಿದೆ. ಅಮೆರಿಕ, ಜಪಾನ್,
ಭಾರತ ಮುಂತಾದ ರಾಷ್ಟ್ರಗಳು ಚೀನಾದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವುದರ ಮೂಲಕ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದರ ಜತೆಗೆ ಆರ್ಥಿಕ ಚಟುವಟಿಕೆಗಳ ಅಂತರವನ್ನು ಕಾಯ್ದುಕೊಳ್ಳುವ ನಿರ್ಧಾರವನ್ನು ಮಾಡಿವೆ. ಇದರಿಂದಾಗಿ ಭಾರತವು ವಿದೇಶಿ ಹೂಡಿಕೆಯನ್ನು ಆಕರ್ಷಿಸಿಕೊಂಡು ಉತ್ಪಾದನಾ ಕ್ಷೇತ್ರದಲ್ಲಿ ಹೆಚ್ಚು ಅವಕಾಶಗಳನ್ನು ಪಡೆದು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೆಳವಣಿಗೆಯನ್ನು ಸಾಧಿಸುವ ಸಮಯ ಬಂದಿದೆ.

ಕರೋನಾ ಸಾಂಕ್ರಾಮಿಕ ರೋಗದಿಂದ 2020-21ರ ಅವಧಿಯಲ್ಲಿ ಜಾಗತಿಕ ಒಟ್ಟು ದೇಶೀಯ ಉತ್ಪನ್ನದಲ್ಲಿ 9 ಟ್ರಿಲಿಯನ್ ಮೊತ್ತದ ನಷ್ಟಕ್ಕೆ ಕಾರಣವಾಗಬಹುದು ಎಂದು ಅಂದಾಜಿಸಲಾಗಿದೆ. ಭಾರತದ ಜಿಡಿಪಿ ದರವು 2020-21ರಲ್ಲಿ ಶೇ.1.9ರಷ್ಟನ್ನು ಸಾಧಿಸಲಿದ್ದು, ಇದು ಆರ್ಥಿಕ ಹಿಂಜರಿತ ಪೀಡಿತ ಜಗತ್ತಿನಲ್ಲಿ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯಾಗಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿಯು ಹೇಳಿದೆ. ಪ್ರಸ್ತುತ ಭಾರತವು ಜಾಗತಿಕ ಕಂಪನಿಗಳಿಗೆ ನೈಸರ್ಗಿಕ ತಾಣವಾಗುತ್ತಿದ್ದು ಹೆಚ್ಚು ಚೇತರಿಸಿಕೊಳ್ಳುವ, ಪೂರೈಕೆ ಸರಪಳಿಗಳನ್ನು ನಿರ್ಮಿಸಲು ಮತ್ತು ಚೀನಾ ಕೇಂದ್ರಿತವಾಗದಂತೆ ವೈವಿಧ್ಯಗೊಳಿಸಲು ಪ್ರಯತ್ನಿಸುತ್ತಿದೆ. ಇದಕ್ಕೆ ಪುಷ್ಠಿ ನೀಡುವಂತೆ ಭಾರತದ ಆರ್ಥಿಕವಲಯದ ವಾತಾವರಣವು ಉತ್ತಮವಾಗಿದೆ. ಅಂದರೆ ಕಾರ್ಪೋರೇಟ್ ತೆರಿಗೆ ಕಡಿತವು ಕಳೆದ ಎರಡು ದಶಕಗಳಲ್ಲಿ ಏಕೈಕ ದೊಡ್ಡ ಸುಧಾರಣೆಯಾಗಿದ್ದು, ಕಾರ್ಪೋರೇಟ್ ತೆರಿಗೆಯ ಪರಿಣಾಮಕಾರಿ ದರವನ್ನು ಒಂದೇ ಬಾರಿಗೆ ಶೇ.30ರಿಂದ ಶೇ. 25.17ಕ್ಕೆ ಕಡಿಮೆಯಾಗಿರುವುದು ಭಾರಿ ಕಡಿತವಾಗಿದೆ ಎಂದು ಹಲವು ಅರ್ಥಶಾಸ್ತ್ರಜ್ಞರು ಅಭಿಪ್ರಾಾಯ ಪಟ್ಟಿದ್ದಾರೆ. ಹೊಸ ಉತ್ಪಾದನಾ ಕಂಪನಿಗಳಿಗೆ, ಇದು ಶೇ.17.01ರಷ್ಟಾಗಿರುತ್ತದೆ. ದಕ್ಷಿಣ ಏಷ್ಯಾದಲ್ಲಿಯೇ ಅತ್ಯಂತ ಕಡಿಮೆ ಕಾರ್ಪೋರೇಟ್ ತೆರಿಗೆಯಾಗಿದೆ. ಭಾರತದ ಹತ್ತಿರದ ಉತ್ಪಾದನಾ ಪ್ರತಿಸ್ಪರ್ಧಿಗಳಾದ ವಿಯೆಟ್ನಾಾಂ, ಇಂಡೋನೇಷ್ಯಾ ಮತ್ತು ಬಾಂಗ್ಲಾದೇಶಕ್ಕೆ ಹೋಲಿಸಿದರೆ ಇದು ಭಾರಿ ಸ್ಪರ್ಧಾತ್ಮಕವಾಗಿದೆ. ಇದರ ಜತೆಗೆ ಭಾರತದಲ್ಲಿ ಬೃಹತ್ ಮಾರುಕಟ್ಟೆ ಇರುವುದರಿಂದ ಕಡಿಮೆ ದರದಲ್ಲಿ ಉತ್ಪನ್ನಗಳನ್ನು ಭಾರತದಲ್ಲಿ ಉತ್ಪಾದನೆ ಮಾಡಿ ಭಾರತದಲ್ಲಿಯೇ ಮಾರಾಟ ಮಾಡುವ ಅವಕಾಶ ಸಿಗುತ್ತದೆ. ಹೀಗಾಗಿ ಕಳೆದ ಆರು ವರ್ಷಗಳಿಂದ ಭಾರತದಲ್ಲಿ ವಿದೇಶಿ ನೇರ ಬಂಡವಾಳದಲ್ಲಿ ಏರಿಕೆಯಾಗುತ್ತಿದ್ದು, ವಿದೇಶಿ ಹೂಡಿಕೆಯನ್ನು ಆಕರ್ಷಿಸಲು ಮೇಕ್ ಇನ್ ಇಂಡಿಯಾ ಕಾರ್ಯಕ್ರಮಕ್ಕೆ ಇದು ಉತ್ತಮ ವೇಗವರ್ಧಕ ಎಂದು ಹೇಳಬಹುದು. ಚೀನಾದ ಕುತಂತ್ರಕ್ಕೆ ನಡುಗಿ ಹೋಗಿರುವ ಅಭಿವೃದ್ಧಿ ಹೊಂದಿರುವ ರಾಷ್ಟ್ರಗಳು ಬೇರೆ ರಾಷ್ಟ್ರಗಳಲ್ಲಿ ಬಂಡವಾಳ ಹೂಡಿಕೆ ಮಾಡುವ ಮೂಲಕ ಹೊಸ ಕಾರ್ಯವಿಧಾನವನ್ನು ಅನುಸರಿಸಲು ತುದಿಗಾಲಲ್ಲಿ ನಿಂತಿದ್ದು, ಅಮೆರಿಕ ಮತ್ತು ಇತರೆ ದೇಶದ ಪ್ರಮುಖ 1000ಕ್ಕೂ ಹೆಚ್ಚು ಕಂಪನಿಗಳು ಚೀನಾದೊಂದಿಗಿನ ವ್ಯಾಪಾರ ಬಿಡಿಸಿಕೊಂಡು ಪರ್ಯಾಯ ಜಾಗತಿಕ ಉತ್ಪಾದನಾ ನೆಲೆಗಳನ್ನು ನೋಡುತ್ತಿರುವ ಸಮಯದಲ್ಲಿ ಭಾರತಕ್ಕೆ ಈ ಸಮಯವು ಸೂಕ್ತವಾಗಿದೆ. ಸದ್ಯ ಚೀನಾದಿಂದ ಅನೇಕ ಕಂಪನಿಗಳು ವಿದಾಯ ಹೇಳಿ ಭಾರತಕ್ಕೆ ಬರಲು ಸಜ್ಜಾಗಿವೆ.

ಭಾರತೀಯ ವ್ಯವಹಾರದ ದೃಷ್ಟಿಕೋನದಿಂದ ನೋಡುವುದಾದರೆ, ಕರೋನಾ ವೈರಸ್ ಏಕಾಏಕಿ ಭಾರತೀಯ ವ್ಯವಹಾರಗಳಿಗೆ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಲು ಮತ್ತು ಮೇಕ್ ಇನ್ ಇಂಡಿಯಾ ಅಭಿಯಾನಕ್ಕೆ ಒತ್ತು ನೀಡುವ ಸನ್ನಿವೇಶ ನಿರ್ಮಾಣವಾಗಿದೆ. ಜತೆಗೆ, ಹೆಚ್ಚುತ್ತಿರುವ ನಿರುದ್ಯೋಗ, ಬಡ್ಡಿದರಗಳು ಮತ್ತು ಹಣಕಾಸಿನ ಕೊರತೆಯ ನಡುವೆಯೂ ಭಾರತದ ಆರ್ಥಿಕತೆಯು ಉತ್ತಮ ದಿನಗಳನ್ನು ಕಂಡಿದೆ. ಭಾರತವು ನುರಿತ, ಪ್ರತಿಭಾವಂತರನ್ನು ಹೊಂದಿದ್ದು, ಅವರಲ್ಲಿರುವ ಕೌಶಲ್ಯಗಳ ಲಾಭವನ್ನು ಪಡೆದುಕೊಳ್ಳಬಹುದು ಮತ್ತು ಉತ್ಪಾದನಾ ಚಟುವಟಿಕೆಯನ್ನು ವೇಗಗೊಳಿಸಬಹುದು. ಹಾಗೆ ಮಾಡುವುದರಿಂದ ಭಾರತವು ದೊಡ್ಡ ಉದ್ಯೋಗಾವಕಾಶಗಳನ್ನು ಸೃಷ್ಟಿಸಬಹುದು. ಭಾರತವು ಕಟ್ಟಡ ನಿರ್ಮಾಣದ ವಸ್ತುಗಳಾದ ಕಬ್ಬಿಣ, ಸ್ಟೀಲ್, ಎಲೆಕ್ಟ್ರಾನಿಕ್, ಪ್ಲಾಸ್ಟಿಕ್, ಪೈಬರ್, ಸೋಲರ್ ಪ್ಯಾನಲ್ ಮುಂತಾದವುಗಳನ್ನು ಚೀನಾದಿಂದ ಹೆಚ್ಚಿನ ಪ್ರಮಾಣದಲ್ಲಿ ಆಮದು ಮಾಡಿಕೊಳ್ಳುತ್ತಿದ್ದೇವೆ. ಆದರೆ, ಚೀನಾದ ಪೂರೈಕೆ ಮಾರ್ಗಗಳು ಓರೆಯಾಗಿರುವುದರಿಂದ ಕಚ್ಚಾ ವಸ್ತುಗಳನ್ನು ಸಂಗ್ರಹಿಸಲು ಮತ್ತು ಚೀನಾದ ಆಮದಿನ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಇತರ ಮಾರುಕಟ್ಟೆಗಳನ್ನು ಅನ್ವೇಷಿಸಲು ಉದ್ಯಮಕ್ಕೆ ಅವಕಾಶವಿದೆ. ಈ ಹಿನ್ನೆಲೆಯಲ್ಲಿ, ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಲು ಮತ್ತು ದೊಡ್ಡ ಮಾರುಕಟ್ಟೆ ಪಾಲನ್ನು ಪಡೆದುಕೊಳ್ಳಲು ಭಾರತ ಸರಕಾರ ಉಕ್ಕಿನ ಕಂಪನಿಗಳನ್ನು ಪ್ರೋತ್ಸಾಹಿಸಲು ಪ್ರಸ್ತುತ ಸನ್ನಿವೇಶದಲ್ಲಿ 50,000 ಉದ್ಯೋಗ ಸಾಮರ್ಥ್ಯದೊಂದಿಗೆ 50,000 ಕೋಟಿ ರು. ವೆಚ್ಚದಲ್ಲಿ 10 ಮಿಲಿಯನ್ ಟನ್ ವಿಶೇಷ ಉಕ್ಕನ್ನು ಉತ್ಪಾದಿಸಲು ಭಾರತ ಸರಕಾರದ ಉಕ್ಕಿನ ಸಚಿವಾಲಯವು ಕಾರ್ಯತಂತ್ರವನ್ನು ಸಿದ್ಧಪಡಿಸುತ್ತಿದೆ. ಭಾರತವು ಆಮದು ಮಾಡಿಕೊಳ್ಳುವ ಎಲೆಕ್ಟ್ರಾನಿಕ್‌ಸ್‌ ಉಪಕರಣಗಳಲ್ಲಿ ಶೇ.55ರಷ್ಟು ಚೀನಾದಿಂದ ಬಂದಿದ್ದು, ಕರೋನಾ ವೈರಸ್‌ನಿಂದಾಗಿ ಆಮದುಗಳ ಪ್ರಮಾಣ ಈಗಾಗಲೇ ಶೇ.40ಕ್ಕೆ ಇಳಿದಿವೆ. ಪ್ರತಿಕ್ರಮವಾಗಿ, ಒಂದೇ ಮಾರುಕಟ್ಟೆಯ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ದೇಶೀಯ ಉತ್ಪಾದನೆಯ ಉತ್ತೇಜನವನ್ನು ಭಾರತ ಪರಿಗಣಿಸುತ್ತಿದೆ.

ಜಾಗತಿಕ ಮಟ್ಟದಲ್ಲಿ ಉತ್ಪಾದನಾ ಕ್ಷೇತ್ರದಲ್ಲಿ ಆಗುತ್ತಿರುವ ಬೆಳವಣಿಗೆಗಳಿಂದ ಭಾರತ ದೇಶಕ್ಕೆ ಹೆಚ್ಚು ಲಾಭವಿದೆ. ಯುರೋಪಿಯನ್ ರಾಷ್ಟ್ರಗಳಿಗೆ ಹೆಚ್ಚಿನ ಪ್ರಮಾಣದ ಹತ್ತಿಬಟ್ಟೆಯ ಉತ್ಪನ್ನಗಳನ್ನು ಚೀನಾ ದೇಶವು ರಫ್ತು ಮಾಡುತ್ತಿತ್ತು, ಆದರೆ ಕರೋನಾ ವೈರಸ್‌ನಿಂದಾಗಿ ಹತ್ತಿ ಬಟ್ಟೆ ಉತ್ಪಾದನೆಯು ಕಳೆದ ಎರಡು ತಿಂಗಳಿನಿಂದ ಚೀನಾದಲ್ಲಿ ಸ್ಥಗಿತಗೊಂಡಿದೆ. ಇದರ ಪರಿಣಾಮವಾಗಿ ಜಗತ್ತಿನ ನಾನಾ ದೇಶಗಳ 140ಕ್ಕೂ ಹೆಚ್ಚಿನ ಹತ್ತಿಬಟ್ಟೆ ಬೇಡಿಕೆ ಇರುವ ಕಂಪನಿಗಳು ಭಾರತದ ಕಾಟನ್ ಸಿಟಿ ಎಂದು ಖ್ಯಾತಿ ಪಡೆದಿರುವ ತಮಿಳುನಾಡು ಮತ್ತು ಕೋಲ್ಕತ್ತಾಗೆ ಬಟ್ಟೆೆ ಖರೀದಿಗೆ ಒಪ್ಪಂದ ಮಾಡಿಕೊಂಡಿವೆ ಎಂದು ಹೇಳಲಾಗುತ್ತಿದೆ. ಇದರಿಂದಾಗಿ ಸ್ಥಳೀಯ ಹತ್ತಿ ಉತ್ಪಾದಕರು ಮತ್ತು ಬಟ್ಟೆ ತಯಾರಕರಿಗೆ ಹೆಚ್ಚು ಲಾಭವಾಗುವ ಸಾಧ್ಯತೆಯಿದೆ. ಅದೇ ರೀತಿ ಆಹಾರ ಉತ್ಪನ್ನಗಳು, ಹಾಲು ಉತ್ಪಾದನೆ, ದೇಸಿ ಆಟಿಕೆ ಉದ್ಯಮ, ಕೆಮಿಕಲ್ ಉದ್ಯಮ ಮತ್ತು ಮತ್ಸೋದ್ಯಮದ ಉತ್ಪನ್ನಗಳನ್ನು ಚೀನಾವು ಉತ್ಪಾದನೆ ಮಾಡಿ ಜಗತ್ತಿನ ಇತರೆ ರಾಷ್ಟ್ರಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ರಫ್ತು ಮಾಡುತ್ತಿತ್ತು. ಆದರೆ, ಕರೋನಾ ವೈರಸ್‌ನ ಭೀತಿಯಿಂದ ಚೀನಾದ ಉತ್ಪನ್ನಗಳ ಆಮದಿಗೆ ಭಾರತದ ಕೇಂದ್ರ ಸರಕಾರ ತಡೆಯೊಡ್ಡಿದ್ದರ ಪರಿಣಾಮ ಭಾರತದ ಸ್ಥಳೀಯ ಉದ್ಯಮಗಳಿಗೆ ಈ ಸುವರ್ಣ ಅವಕಾಶವನ್ನು ಬಳಸಿಕೊಂಡು ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದನೆ ಮಾಡಿ ಜಗತ್ತಿನ ಇತರೆ ದೇಶಗಳಿಗೆ ರಫ್ತು ಮಾಡುವುದರ ಮೂಲಕ ಪ್ರಭುತ್ವ ಸಾಧಿಸಲು ಇದು ಸೂಕ್ತ ಕಾಲವಾಗಿದೆ.

ಜಗತ್ತಿನ ಬೇರೆ ದೇಶಗಳಿಂದ ವಿಶೇಷವಾಗಿ ಚೀನಾದಿಂದ ಬರುವ ಕಂಪನಿಗಳು ಭಾರತದಲ್ಲಿ ತಮ್ಮ ಕಂಪನಿಗಳನ್ನು ಸ್ಥಾಪಿಸುವುದರ ಮೂಲಕ ಉದ್ಯೋಗ ಸೃಷ್ಟಿಗೆ ಕಾರಣವಾಗಿ ಸ್ಥಳೀಯರಿಗೆ ಹೆಚ್ಚಿನ ಅವಕಾಶ ಸಿಗುವಂತಾಗುತ್ತದೆ. ಅದರಲ್ಲೂ ವಿಶೇಷವಾಗಿ ದೇಶದ ಯುವಕರಿಗೆ ಉದ್ಯೋಗವಕಾಶಗಳು ಹೆಚ್ಚಿನ ಪ್ರಮಾಣದಲ್ಲಿ ಸಿಗುವುದರಿಂದ ಪ್ರತಿಭಾವಂತ ಯುವಕರು ಅವಕಾಶಗಳ ಕೊರತೆಯಿಂದ ವಿದೇಶಕ್ಕೆ ಹೋಗುತ್ತಿರುವವರ ಸಂಖ್ಯೆ ಕಡಿಮೆಯಾಗಿ ಭಾರತದಲ್ಲಿ ಪ್ರತಿಭಾ ಪಲಾಯನ ತಡೆಯಲು ಸಾಧ್ಯವಾಗುತ್ತದೆ. ಸ್ಥಳೀಯವಾಗಿ ಕೈಗಾರಿಕೆಗಳು ಸ್ಥಾಪನೆಯಾಗುವುದರಿಂದ ಕೈಗಾರಿಕೆ ಸುತ್ತಲಿನ ಪ್ರದೇಶಗಳಲ್ಲಿ ಆರ್ಥಿಕ ಚಟುವಟಿಕೆಗಳು ಚುರುಕಾಗಿ ಅಭಿವೃದ್ಧಿಗೊಳ್ಳಲು ಸಾಧ್ಯವಾಗುತ್ತದೆ. ಅಲ್ಲದೆ ಭಾರತವು ಎಲ್ಲವನ್ನು ವಿದೇಶದಿಂದ ಆಮದು ಮಾಡಿಕೊಳ್ಳುವ ಅವಶ್ಯಕತೆ ಇರುವುದಿಲ್ಲ. ಬದಲಾಗಿ ಹೆಚ್ಚು ಕೈಗಾರಿಕೆಗಳ ಸ್ಥಾಾಪನೆಯಿಂದ ಹೆಚ್ಚಿನ ಪ್ರಮಾಣದ ಉತ್ಪಾಾದನೆ ಮಾಡುವುದರ ಮೂಲಕ ಭಾರತದಲ್ಲಿ ಉತ್ಪಾದನೆಯಾಗುವ ವಸ್ತುಗಳನ್ನು ವಿದೇಶಗಳಿಗೆ ರಫ್ತುು ಮಾಡುವುದರಿಂದ ಭಾರತಕ್ಕೆ ಆರ್ಥಿಕವಾಗಿ ಹೆಚ್ಚಿನ ಲಾಭವಾಗುತ್ತದೆ. ಅಲ್ಲದೆ ವಿದೇಶಿ ಕಂಪನಿಗಳು ಭಾರತಕ್ಕೆ ಬರುವುದರಿಂದ ಭಾರತದ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಉತ್ಪನ್ನಗಳಿಗೆ ಹೆಚ್ಚಿನ ಬೇಡಿಕೆ ಸಿಗುತ್ತದೆ. ಜತೆಗೆ ಬಹುರಾಷ್ಟ್ರೀಯ ಕಂಪನಿಗಳು ಭಾರತಕ್ಕೆ ಬರುವುದರಿಂದ ಭಾರತದಲ್ಲಿ ತಂತ್ರಜ್ಞಾನದ ಮಟ್ಟ ಮೇಲ್ದರ್ಜೆಗೇರಲು ಸಾಧ್ಯವಾಗುತ್ತದೆ. ಇದರಿಂದ ದೇಶದ ಜಿಡಿಪಿ ಬೆಳವಣಿಗೆ ದರವು ವೃದ್ಧಿಯಾಗಿ ಪ್ರಬಲ ಆರ್ಥಿಕತೆಯಾಗಿ ಹೊರಹೊಮ್ಮುವ ಸಾಧ್ಯತೆಯಿದೆ. ಜತೆಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅಮೆರಿಕದ ಡಾಲರ್ ಎದುರು ಭಾರತದ ರುಪಾಯಿ ಮೌಲ್ಯವು ಹೆಚ್ಚಾಗುತ್ತದೆ.

ಹೊಸ ಭಾರತವನ್ನು ನಿರ್ಮಿಸುವ ನಮ್ಮ ಪ್ರಯತ್ನಗಳನ್ನು ಚುರುಕುಗೊಳಿಸುವ ಸಮಯ ಇದು. ಸಹಜವಾಗಿ, ನಾವು ಇದೀಗ ಎದುರಿಸುತ್ತಿರುವ ಅಸಾಧಾರಣ ಸವಾಲುಗಳನ್ನು ನಾವು ಎದುರಿಸಬೇಕು. ನಾವು ಕರೋನಾ ವೈರಸ್ ಪೀಡಿತ ರೋಗಿಗಳನ್ನು ಯಶಸ್ವಿಯಾಗಿ ನಿಯಂತ್ರಿಸಲು ಉತ್ತಮ ಚಿಕಿತ್ಸೆ ನೀಡಬೇಕು. ನಮ್ಮ ಲಾಕ್‌ಡೌನ್ ತಂತ್ರಗಳನ್ನು ಎಚ್ಚರಿಕೆಯಿಂದ ಯೋಜಿಸುವುದರ ಜತೆಗೆ ದುರ್ಬಲ ಜನರಿಗೆ ಆಹಾರ ಮತ್ತು ಆದಾಯದ ಬೆಂಬಲವನ್ನು ನೀಡುವುದು ಅವಶ್ಯಕವಾಗಿದೆ. ಸ್ಥಳೀಯವಾಗಿ ಸ್ಥಾಪಿತವಾಗಿರುವ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಹಾಗೂ ದೊಡ್ಡ ಉದ್ಯಮಗಳಿಗೆ ದೊಡ್ಡ ಪ್ರಮಾಣದ ಆರ್ಥಿಕ ಸಹಾಯದ ಅಗತ್ಯವಿದೆ. ನಮ್ಮ ಹಣಕಾಸು ವ್ಯವಸ್ಥೆಯು ಬೆಳವಣಿಗೆಗೆ ಮುಂದಾಗಲು ಸಾಕಷ್ಟು ಷೇರು ಬಂಡವಾಳವನ್ನು ಹೊಂದಿರಬೇಕಾದ ತೀವ್ರ ಸವಾಲು ಎದುರಾಗಿದೆ. ಆಶಾದಾಯಕ ಸನ್ನಿವೇಶ ಅಂದರೆ ಕೆಲವು ತಿಂಗಳುಗಳ ತನಕ ನಾವು ರೋಗವನ್ನು ಪರಿಣಾಮಕಾರಿಯಾಗಿ ಚಿಕಿತ್ಸೆ ನೀಡುವ ಔಷಧಗಳನ್ನು ಹೊಂದಿದ್ದು, ಕೆಲವು ತಿಂಗಳುಗಳಲ್ಲಿ ನಾವು ಸಾಂಕ್ರಾಮಿಕ ರೋಗವನ್ನು ಕೊನೆಗೊಳಿಸುವ ಲಸಿಕೆಗಳು ಸಿಗುವ ವಾತಾವರಣ ಕಾಣಬಹುದಾಗಿರುವುದು. ಆದ್ದರಿಂದ, ಕರೋನಾ ನಂತರದ ಜಗತ್ತಿನಲ್ಲಿ ನಮ್ಮ ಸ್ವಾಭಾವಿಕ ಅನುಕೂಲಗಳನ್ನು ಸಂಪೂರ್ಣವಾಗಿ ಲಾಭ ಮಾಡಿಕೊಳ್ಳಲು ಸಹಾಯ ಮಾಡುವಂಥ ಆಲೋಚನೆಗಳನ್ನು ನಾವು ಪರೀಕ್ಷಿಸಲು ಮುಂದಾಗಬೇಕು.

ಜಗತ್ತಿನಲ್ಲೇ ಅತಿ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ದೇಶಗಳ ಸಾಲಿನಲ್ಲಿ ಭಾರತವು ಮುಂಚೂಣಿಯಲ್ಲಿದೆ. ಪ್ರಸ್ತುತ ಸನ್ನಿವೇಶವು ಭಾರತಕ್ಕೆ ಹೊಸ ಹೊಸ ಅವಕಾಶಗಳನ್ನು ಸೃಷ್ಟಿಯಾಗುತ್ತಿದ್ದು, ಅತಿ ಶೀಘ್ರದಲ್ಲೇ ಭಾರತವು ಉತ್ಪಾದನಾ ಕ್ಷೇತ್ರದ ಪ್ರಗತಿಯೊಂದಿಗೆ ಜಗತ್ತಿನ ಬಲಿಷ್ಠ ರಾಷ್ಟ್ರಗಳಲ್ಲೊೊಂದಾಗುವ ಎಲ್ಲ ಸಾಧ್ಯತೆಗಳೂ ಇವೆ. ಆದರೆ ಭಾರತ ಈ ಅವಕಾಶಗಳನ್ನು ಯಾವ ರೀತಿ ಬಳಸಿಕೊಳ್ಳುತ್ತದೆ ಎನ್ನುವುದರ ಮೇಲೆ ಭಾರತ ಉತ್ಪಾದನಾ ಕ್ಷೇತ್ರದಲ್ಲಿ ಮುಂಚೂಣಿಗೆ ಬರಲು ಸಾಧ್ಯವಾಗುತ್ತಾ, ಇಲ್ಲವೋ ಎನ್ನುವುದು ನಿರ್ಧಾರವಾಗುತ್ತದೆ.