ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Srivathsa Joshi Column: ಆತ್ತಿಚ್ಚೂಡಿ: ತಮಿಳು ವರ್ಣಮಾಲೆಯಲ್ಲಿ ನೀತಿವಾಕ್ಯಗಳ ಸೂಡಿ

ನಾನೋದಿದ ಇಂಗ್ಲಿಷ್ ಲೇಖನದಲ್ಲಿ ಆತ್ತಿಚ್ಚೂಡಿಯಿಂದ ಆಯ್ದ ನಾಲ್ಕಾರು ನೀತಿವಾಕ್ಯಗಳ ಇಂಗ್ಲಿಷ್ ಅನುವಾದ ಮತ್ತು ಪುರಾಣ ಕಥೆಗಳ ಉದಾಹರಣೆಗಳೊಂದಿಗೆ ವ್ಯಾಖ್ಯಾನವೂ ಇತ್ತು. ಆತ್ತಿಚ್ಚೂಡಿಯಲ್ಲಿ ಒಟ್ಟು 109 ನೀತಿವಾಕ್ಯಗಳಿವೆ, ಒಂದೊಂದೂ ಸಾರ್ವ ಕಾಲಿಕ ಮೌಲ್ಯವುಳ್ಳ ಆಣಿಮುತ್ತುಗಳೇ ಆಗಿವೆ ಎಂಬ ವಿವರಣೆಯೂ ಅದರಲ್ಲಿತ್ತು. ಆಮೇಲೆ ಅಂತರ್ಜಾಲದಲ್ಲಿ ಆತ್ತಿಚ್ಚೂಡಿ ಬಗ್ಗೆ ಹುಡುಕಿದಾಗ ಎಲ್ಲ 109 ನೀತಿವಾಕ್ಯಗಳ ತಮಿಳು ಮೂಲ ರೂಪ ಮತ್ತು ಅವುಗಳ ಇಂಗ್ಲಿಷ್ ಅನುವಾದವೂ ಸಿಕ್ಕಿತು

ಆತ್ತಿಚ್ಚೂಡಿ: ತಮಿಳು ವರ್ಣಮಾಲೆಯಲ್ಲಿ ನೀತಿವಾಕ್ಯಗಳ ಸೂಡಿ

ತಿಳಿರು ತೋರಣ

srivathsajoshi@yahoo.com

ಅವ್ವೈಯಾರ್ ಎಂಬ ಪ್ರಾಚೀನ ತಮಿಳು ಕವಯಿತ್ರಿಯೊಬ್ಬಳು ಬರೆದ ಏಕವಾಕ್ಯ ನೀತಿಸೂಕ್ತಿಗಳ ವಿಶಿಷ್ಟಗ್ರಂಥವೊಂದಿದೆ ಎಂದು ನನಗೆ ಮೊನ್ನೆಯಷ್ಟೇ ತಿಳಿದದ್ದು. Athichudi: Ageless Aphorisms ಎಂಬ ಶೀರ್ಷಿಕೆಯಿದ್ದ ಇಂಗ್ಲಿಷ್ ಬರಹವೊಂದು ಅಂತರ್ಜಾಲದಲ್ಲಿ ಸಿಕ್ಕಿದ್ದರಿಂದ. Aphorism ಎಂದರೆ ಗಾದೆಮಾತು.

ನಾಣ್ಣುಡಿ, ನೀತಿವಾಕ್ಯ, ನುಡಿಗಟ್ಟು ಅಂತ ಬೇಕಿದ್ದರೂ ಹೇಳಬಹುದು. ಸಾಮಾನ್ಯವಾಗಿ ಗಾದೆಗಳಿಗೆ, ನಾಣ್ಣುಡಿಗಳಿಗೆ ಮೂಲಕರ್ತೃ ಯಾರೆಂಬ ವಿವರಗಳಿರುವುದಿಲ್ಲ. ಹಾಗಾಗಿ ಇಲ್ಲಿ ನೀತಿವಾಕ್ಯಗಳು ಎಂದು ಅರ್ಥೈಸಿಕೊಳ್ಳುವುದು ಒಳ್ಳೆಯದು. ಅಷ್ಟಾಗಿ, ಅವ್ವೈಯಾರ್ ಎಂಬುದು ಈ ಕವಯಿತ್ರಿಯ ನಿಜವಾದ ಹೆಸರೇನಲ್ಲ.

ಇದನ್ನೂ ಓದಿ: Srivathsa Joshi Column: ರ‍್ಹಿನೊಟಿಲೆಕ್ಸೊಮೆನಿಯಾ ಅಂದರೆ ಮೂಗು ಅಗೆಯುವ ಚಟ

ಕಾವ್ಯನಾಮವೂ ಅಲ್ಲ. ತಮಿಳಿನಲ್ಲಿ ‘ಗೌರವಾರ್ಹ ಒಳ್ಳೆಯ ಹೆಂಗಸು’ ಎಂಬರ್ಥದಲ್ಲಿ ಜನರು ಈಕೆಯನ್ನು ಗುರುತಿಸಿದ ರೀತಿ ಅಷ್ಟೇ. ತಮಿಳು ವ್ಮಾಯದಲ್ಲಿ ಈಕೆಯಲ್ಲದೆ ಇನ್ನೂ ಇಬ್ಬರು ಅವ್ವೈಯಾರ್ ಎಂದು ಗುರುತಿಸಲ್ಪಟ್ಟವರಿದ್ದಾರಂತೆ. ಪುರಾಣಗಳಲ್ಲಿ, ಮುರುಗನ್‌ನಿಂದ ‘ಬೆಂದ ಫಲ ಬೇಕೋ, ಬೇಯದ ಫಲ ಬೇಕೋ?’ ಎಂದು ಪರೀಕ್ಷೆಗೊಳಗಾದ ಭಕ್ತೆಯೊಬ್ಬಳು ಮೊದಲನೆ ಯವಳು; ಕ್ರಿ.ಪೂ.2ನೆಯ ಶತಮಾನದಿಂದ ಕ್ರಿ.ಶ.1ನೆಯ ಶತಮಾನದವರೆಗಿನ ಅವಧಿಯಲ್ಲಿ ಜೀವಿಸಿದ್ದ ಸಂಗಮ ಕವಿಗಳ ಪೈಕಿಯವಳಿರಬೇಕೆಂದು ಪರಿಗಣಿಸಲಾದವಳು ಎರಡನೆಯವಳು.

ಅವರಂತಲ್ಲದೆ ಈ ಮೂರನೆಯ ಅವ್ವೈಯಾರ್ ಕ್ರಿ.ಶ. 12ನೆಯ ಶತಮಾನದ ಚೋಳ ಸಾಮ್ರಾಜ್ಯ ಕಾಲದಲ್ಲಿ ಬದುಕಿದ್ದವಳು, ತಮಿಳಿನ ಪ್ರಖ್ಯಾತ ಕಂಬರಾಮಾಯಣವನ್ನು ಬರೆದ ಕಂಬನ್‌ನ ಸಮಕಾಲೀನಳು ಎಂದು ಹೇಳಲಾಗಿದೆ. ಈಕೆ ಊರೂರು ಅಲೆದಾಡುತ್ತ, ಅಲ್ಲಿಯ ಹಿರಿಕಿರಿಯ ರನ್ನೆಲ್ಲ ತನ್ನವರೆಂದೇ ತಿಳಿದು ಅವರಿಗೆ ಬದುಕಿನ ನೀತಿಗಳನ್ನು ಬೋಧಿಸುತ್ತ, ಅವರಲ್ಲಿ ಜೀವನೋ ತ್ಸಾಹ ತುಂಬುತ್ತ ಇದ್ದವಳು.

ಅಂಥ ನೀತಿವಾಕ್ಯಗಳ ಸಂಗ್ರಹವೇ ಆತ್ತಿಚ್ಚೂಡಿ. ಅತ್ತಿಹೂವುಗಳ ಮಾಲೆ ಧರಿಸಿದವನು, ಪರಶಿವ ಎಂದು ಈ ಪದದ ಭಾವಾರ್ಥ. ನಾನೋದಿದ ಇಂಗ್ಲಿಷ್ ಲೇಖನದಲ್ಲಿ ಆತ್ತಿಚ್ಚೂಡಿಯಿಂದ ಆಯ್ದ ನಾಲ್ಕಾರು ನೀತಿವಾಕ್ಯಗಳ ಇಂಗ್ಲಿಷ್ ಅನುವಾದ ಮತ್ತು ಪುರಾಣ ಕಥೆಗಳ ಉದಾಹರಣೆಗಳೊಂದಿಗೆ ವ್ಯಾಖ್ಯಾನವೂ ಇತ್ತು. ಆತ್ತಿಚ್ಚೂಡಿಯಲ್ಲಿ ಒಟ್ಟು 109 ನೀತಿವಾಕ್ಯಗಳಿವೆ, ಒಂದೊಂದೂ ಸಾರ್ವ ಕಾಲಿಕ ಮೌಲ್ಯವುಳ್ಳ ಆಣಿಮುತ್ತುಗಳೇ ಆಗಿವೆ ಎಂಬ ವಿವರಣೆಯೂ ಅದರಲ್ಲಿತ್ತು. ಆಮೇಲೆ ಅಂತರ್ಜಾಲದಲ್ಲಿ ಆತ್ತಿಚ್ಚೂಡಿ ಬಗ್ಗೆ ಹುಡುಕಿದಾಗ ಎಲ್ಲ 109 ನೀತಿವಾಕ್ಯಗಳ ತಮಿಳು ಮೂಲ ರೂಪ ಮತ್ತು ಅವುಗಳ ಇಂಗ್ಲಿಷ್ ಅನುವಾದವೂ ಸಿಕ್ಕಿತು.

62 R

ಲೇಖನದಲ್ಲಿದ್ದ ಬಣ್ಣನೆಯಂತೆ ಪ್ರತಿಯೊಂದು ನೀತಿ ವಾಕ್ಯವೂ ಗಾಢ ಉಪದೇಶವುಳ್ಳದ್ದೂ, ವ್ಯಕ್ತಿತ್ವವಿಕಸನಕ್ಕೆ ಪೋಷಕಾಂಶ ಒದಗಿಸುವಂಥದ್ದೂ ಆಗಿರುವುದು ಹೌದೆಂದು ಮನದಟ್ಟಾ ಯಿತು. ಇವೆಲ್ಲಕ್ಕಿಂತ ನನಗಿದು ವಿಶೇಷ ಆಕರ್ಷಣೆಯಾಗಿ ಕಂಡಿದ್ದು ಈ 109 ನೀತಿವಾಕ್ಯಗಳು ತಮಿಳು ವರ್ಣಮಾಲೆಯ ಅಕ್ಷರಗಳಿಗೆ ಅನುಗುಣವಾಗಿ ಒಂಬತ್ತು ವರ್ಗಗಳಾಗಿ ವಿಂಗಡಣೆ ಆಗಿರುವುದು, ಮತ್ತು ಹಿಂದಿನ ಕಾಲದಲ್ಲಿ ಮಕ್ಕಳಿಗೆ ತಮಿಳು ವರ್ಣಮಾಲೆ ಕಲಿಸಲಿಕ್ಕೆ ಈ ಆತ್ತಿಚ್ಚೂಡಿ ನೀತಿವಾಕ್ಯಗಳನ್ನೇ ಬಳಸುತ್ತಿದ್ದರೆಂಬ ವಿಚಾರ.

ಅಂದರೆ, ಕನ್ನಡದಲ್ಲಿ ನಾವು ಅ ಆ ಇ ಈ... ಅಕ್ಷರಕಲಿಕೆಗೆ ಅಗಸ ಆಟ ಇಲಿ ಈಶ ಉದಯ ಊಟ ಋಷಿ... ಎಂದು, ಅಥವಾ ಇಂಗ್ಲಿಷ್‌ನಲ್ಲಾದರೆ A for Apple, B for Boy, C for Cat... ಎಂದು ಪದಗಳನ್ನು ಬಳಸುತ್ತೇವಲ್ಲ, ಹಾಗೆ ತಮಿಳಿನಲ್ಲಿ “ಅರನ್ಸೆಯವಿರುಮ್ಪು", “ಆರುವತುಸಿನಮ್", “ಇಯಲ್ವತುಕರವೇಲ್", “ಈವದುವಿಲಕ್ಕೇಲ್"... ಎಂದು ಆತ್ತಿಚ್ಚೂಡಿ ನೀತಿವಾಕ್ಯಗಳ ಬಳಕೆ ಯಿತ್ತಂತೆ!

ಅಕ್ಷರ ಕಲಿಯುವ ನಾಲ್ಕೈದು ವಯಸ್ಸಿನ ಮಕ್ಕಳಿಗೆ ಈ ನೀತಿವಾಕ್ಯಗಳು ಅಥವಾ ಪ್ರಕಾಂಡ ಪದಪುಂಜಗಳು ಅರ್ಥವಾಗುತ್ತವೆಯೇ? ಇಲ್ಲ. ಆ ಹಂತದಲ್ಲಿ ಅರ್ಥವಾಗಬೇಕೆಂಬುದು ಉದ್ದೇಶವೇ ಅಲ್ಲ. ಅಕ್ಷರವನ್ನು ಗುರುತಿಸಿ ನೆನಪಿಟ್ಟುಕೊಂಡರೆ ಸಾಕು. ಪದಪುಂಜವೇನಿದ್ದರೂ ಕಂಠಪಾಠ ಮಾಡಿಡಲಿಕ್ಕೆ. ಹಸಿಗೋಡೆಯಲ್ಲಿ ಹರಳು ನೆಟ್ಟಂತೆ ಅದು ಮಗುವಿನ ಮಿದುಳಿನಲ್ಲಿ ಅಚ್ಚೊತ್ತಿ ನಿಲ್ಲಬೇಕು.

ಮುಂದೆ ಮಗು ದೊಡ್ಡವನಾಗಿ ಬೆಳೆದಾಗ ಆ ನೀತಿವಾಕ್ಯವು ಬದುಕಿಗೆ ದಾರಿದೀಪವಾಗಬೇಕು. ಸಜ್ಜನಿಕೆ, ಸಾಮರಸ್ಯ, ಸಾಧನೆ, ಸಂತೃಪ್ತಿಗಳುಳ್ಳ ಒಂದು ಅರ್ಥಪೂರ್ಣ ಜೀವನಕ್ಕೆ ಕೈಪಿಡಿ ಯಾಗಬೇಕು. ಎಂಥ ಚಂದದ ಏರ್ಪಾಡು ಅಲ್ಲವೇ? ಬಹುಶಃ ಜಗತ್ತಿನ ಬೇರಾವ ಭಾಷೆಯಲ್ಲೂ ಈ ರೀತಿಯ ಅಕ್ಷರಕಲಿಕೆ ಕ್ರಮ ಇಲ್ಲವೇನೋ. ಅಷ್ಟಾಗಿ, ಆ ನೀತಿ ವಾಕ್ಯಗಳೆಲ್ಲ ಬಂದಿರುವುದು ಒಬ್ಬ ಅಲೆಮಾರಿ ಹೆಂಗಸು ಅವ್ವೈಯಾರ್‌ಳಿಂದ. ನೀತಿವಾಕ್ಯಗಳ ಸಾರ್ವಕಾಲಿಕ ಮೌಲ್ಯದಿಂದಾಗಿ, ಮಕ್ಕಳಿಗೆ ಎಳವೆಯಲ್ಲೇ ಅಕ್ಷರಗಳೊಂದಿಗೆ ಪರೋಕ್ಷವಾಗಿ ಜೀವನಮೌಲ್ಯಗಳನ್ನೂ ಪರಿಚಯಿಸಿ ಕಲಿಸುವುದರಿಂದಾಗಿ ತಮಿಳರ ಪಾಲಿಗೆ ಅವ್ವೈಯಾರ್ ಅಜರಾಮರಳಾಗಿದ್ದಾಳೆ.

ಚೆನ್ನೈಯಲ್ಲಿ ಮರೀನಾ ಬೀಚ್‌ನಲ್ಲಿ ಅವ್ವೈಯಾರ್‌ಳದೊಂದು ಪ್ರತಿಮೆಯೂ ಇದೆಯಂತೆ. ಒಳ್ಳೆಯ ವಿಚಾರಗಳು ಎಲ್ಲಿಂದ ಬಂದರೇನು? “ಆ ನೋ ಭದ್ರಾಃ ಕ್ರತವೋ ಯಂತು ವಿಶ್ವತಃ" ಎಂದಿರುವ ಉದಾತ್ತ ಸಂಸ್ಕೃತಿ ನಮ್ಮದು. ಅಂದಮೇಲೆ ಪಕ್ಕದ ರಾಜ್ಯದವರ ಭಾಷೆಯ ಸಾಹಿತ್ಯದಿಂದ ಒಳ್ಳೆಯದನ್ನು ಹೆಕ್ಕಿಕೊಳ್ಳುವುದಕ್ಕೆ ನಮಗೆ ಮಡಿವಂತಿಕೆ ಅಥವಾ ಮುಜುಗರ ಬೇಡ. ನಮ್ಮದೇ ದೇಶದ ಇನ್ನೊಂದು ಭಾಷೆಯಲ್ಲಿರುವುದನ್ನು ಅರ್ಥ ಮಾಡಿಕೊಳ್ಳಲಿಕ್ಕೆ ಮಧ್ಯವರ್ತಿಯಾಗಿ ನಮಗೆ ಇಂಗ್ಲಿಷ್ ಬೇಕಾಗುತ್ತದೆನ್ನುವುದು ವಿಪರ್ಯಾಸವೇ ಹೌದಾದರೂ ಅದರ ಬಗ್ಗೆ ವ್ಯಥೆಯೂ ಬೇಡ.

ಇಲ್ಲಿ ಭಾಷೆ ಮುಖ್ಯವಲ್ಲ, ಬೋಧನೆ ಮುಖ್ಯ. ಮಾಧ್ಯಮ ಮುಖ್ಯವಲ್ಲ, ಸಂದೇಶ ಮುಖ್ಯ. ಈ ನೀತಿವಾಕ್ಯಗಳನ್ನು ನಿತ್ಯ ಪಾಠವಾಗಿಸಿಕೊಂಡರೆ, ನಿಯಮಗಳಂತೆ ಕಟ್ಟುನಿಟ್ಟಾಗಿ ಪಾಲಿಸಿದರೆ ನಮಗೇ ಒಳ್ಳೆಯದಲ್ಲವೇ? ಏಕೆಂದರೆ ಮನುಷ್ಯನ ಮೂಲಭೂತ ಅಗತ್ಯಗಳಾದ ಆಹಾರ, ಬಟ್ಟೆ ಮತ್ತು ವಾಸಸ್ಥಳವನ್ನು ಪೂರೈಸಿಕೊಳ್ಳುವುದರ ಮಹತ್ತ ; ಸಂಪತ್ತು, ಸಂತೋಷ, ಮತ್ತು ಧರ್ಮ ವನ್ನು ಎತ್ತಿ ಹಿಡಿಯುವ ಮೂಲಕ ಶಾಶ್ವತ ಶ್ರೇಷ್ಠತೆಯನ್ನು ಸಾಧಿಸುವುದರ ಮಹತ್ತ - ಎಲ್ಲವೂ ಇದೆ ಆತ್ತಿಚ್ಚೂಡಿಯಲ್ಲಿ!

ಈ ಆಶಯದಿಂದ ಎಲ್ಲ 109 ನೀತಿವಾಕ್ಯಗಳ ಕನ್ನಡ ಅನುವಾದವನ್ನು ಇಂದಿನ ತೋರಣ ವಾಗಿಸಿದ್ದೇನೆ. ಕನ್ನಡದಲ್ಲಿ ಇವು ಈ ಮೊದಲೂ ಪ್ರಕಟವಾಗಿವೆಯೋ ಇಲ್ಲವೋ ಗೊತ್ತಿಲ್ಲ. ಆಗಿದ್ದರೂ ಮತ್ತೊಮ್ಮೆ ಒಪ್ಪಿ ಅಪ್ಪಿಕೊಳ್ಳುವುದಕ್ಕೆ ಅಡ್ಡಿಯೇನಿಲ್ಲ. ಅಂದಹಾಗೆ ಇಲ್ಲಿ ನಾನು ಕೊಡುತ್ತಿರುವುದು ಇಂಗ್ಲಿಷ್‌ನಿಂದ ಕನ್ನಡ ಅನುವಾದ.

ವರ್ಣಮಾಲೆಯ ಅನುಕ್ರಮ ಆಯ್ದುಕೊಂಡಿರುವುದು ಮಾತ್ರ ಮೂಲ ತಮಿಳು ವಾಕ್ಯಗಳದು. ಮೊದಲಿಗೆ ಸ್ವರಾಕ್ಷರಗಳ ಗುಂಪು ‘ಉಯಿರ್ ವರುಕ್ಕಮ್’. ಇದರಲ್ಲಿ ‘ಅ’ದಿಂದ ‘ಅಃ’ವರೆಗೆ ಒಟ್ಟು ಹದಿಮೂರು ಅಕ್ಷರಗಳಿಗೆ ಹೊಂದಿಕೊಂಡ ಹದಿಮೂರು ನೀತಿವಾಕ್ಯಗಳು: ೧. ಯಾವಾಗಲೂ ಧರ್ಮಮಾರ್ಗದಲ್ಲೇ ನಡೆ. ೨. ಕೋಪವನ್ನು ನಿಯಂತ್ರಣದಲ್ಲಿಟ್ಟುಕೋ. ೩. ಸಾಧ್ಯವಾದಾಗಲೆಲ್ಲ ಕೊಡುಗೈ ದಾನಿಯಾಗಿ ಇತರರಿಗೆ ನೆರವಾಗು. ೪. ಇತರರ ಒಳ್ಳೆಯ ಕಾರ್ಯಗಳಿಗೆ ತಡೆಯಾಗಬೇಡ. ೫. ಸಾಮರ್ಥ್ಯ-ಸಂಪತ್ತುಗಳ ಬಗ್ಗೆ ಜಂಭಪಡಬೇಡ. ೬. ಭರವಸೆ ಮತ್ತು ಪ್ರೇರಣೆಯನ್ನು ಎಂದಿಗೂ ಕಳೆದುಕೊಳ್ಳಬೇಡ. ೭. ಅಕ್ಷರಗಳಾಗಲೀ ಸಂಖ್ಯೆಗಳಾಗಲೀ ನಗಣ್ಯವೆಂದುಕೊಳ್ಳಬೇಡ. ೮. ಭಿಕ್ಷೆ ಬೇಡುವ ಸ್ಥಿತಿ ತಂದುಕೊಳ್ಳಬೇಡ. ೯. ಉಣ್ಣುವ ಮೊದಲು ಇತರರಿಗೂ ಹಂಚು. ೧೦. ಬದಲಾಗು ತ್ತಿರುವ ಜಗತ್ತಿನೊಡನೆ ಹೊಂದಿಕೋ. ೧೧. ಕಲಿಕೆ ನಿರಂತರವೆಂದು ತಿಳಿ. ೧೨. ಇತರರ ಬಗ್ಗೆ ಕೆಟ್ಟ ಮಾತಾಡಬೇಡ. ೧೩. ಅಭಿವೃದ್ಧಿ ಅಥವಾ ಸರ್ಜನಶೀಲತೆಗೆ ಅಡ್ಡಿಯಾಗಬೇಡ.

ಎರಡನೆಯದು ವ್ಯಂಜನಗಳ ‘ಉಯಿರ್ಮೆಯ್ ವರುಕ್ಕಮ್’ ಗುಂಪು. ದೇವನಾಗರಿ ಅಥವಾ ಕನ್ನಡ ದಂತಲ್ಲದೆ ತಮಿಳಿನಲ್ಲಿ ಹತ್ತೇ ವರ್ಗೀಯ ವ್ಯಂಜನಗಳು (ಕ, , ಚ, ಞ, ಟ, ಣ, ತ, ನ, ಪ, ಮ) ಮತ್ತು ಎಂಟು ಅವರ್ಗೀಯ ವ್ಯಂಜನಗಳು. ಆದ್ದರಿಂದ ಈ ಗುಂಪಿನಲ್ಲಿ ಹದಿನೆಂಟು ನೀತಿ ವಾಕ್ಯಗಳು: ೧೪. ನೋಡುವುದೊಂದು ಹೇಳುವುದೊಂದು ಮಾಡಬೇಡ. ೧೫. ತಮಿಳಿನ ಅಕ್ಷರದಂತೆ ಬಾಗುವುದನ್ನು ಕಲಿ. ೧೬. ಶನಿವಾರ ತಲೆಸ್ನಾನ ಮಾಡು. ೧೭. ಮಾತು ಮೃದುಮಧುರವಾಗಿರಲಿ. ೧೮. ಮನೆಯೊಳಗಿ ನ ಜೋಡಣೆ ಅಚ್ಚುಕಟ್ಟಾಗಿರಲಿ. ೧೯. ಸಜ್ಜನರ ಸಂಗ ಬೆಳೆಸು. ೨೦. ಹೆತ್ತವರ ರಕ್ಷಣೆ ಮಾಡು. ೨೧. ಕೃತಜ್ಞನಾಗಿರಲು ಮರೆಯಬೇಡ. ೨೨. ಕಾಲಮಾನಕ್ಕನುಗುಣವಾಗಿ ಉತ್ತಿ ಬಿತ್ತಿ ಬೆಳೆ. ೨೩. ಪರರ ಆಸ್ತಿ ಕಸಿದುಕೊಳ್ಳಬೇಡ. ೨೪. ಕೀಳು ಅಭಿರುಚಿಯ ಕೃತ್ಯಗಳಿಂದ ದೂರವಿರು. ೨೫. ಸರ್ಪಗಳೊಡನೆ ಸರಸ ಬೇಡ. ೨೬. ಹತ್ತಿಯ ಹಾಸಿಗೆಯ ಮೇಲೆ ಮಲಗು. ೨೭.ಕಪಟ-ಕುತಂತ್ರ ಮಾಡದಿರು. ೨೮. ಕೊಳಕು ಕೆಲಸಗಳನ್ನು ಮಾಡಬೇಡ. ೨೯. ಎಳವೆಯಲ್ಲೇ ಸಾಧ್ಯವಿದ್ದಷ್ಟೂ ಕಲಿತುಕೋ. ೩೦. ಕರ್ತವ್ಯಚ್ಯುತ ನಾಗಬೇಡ. ೩೧. ಅತಿಯಾಗಿ ನಿದ್ದೆ ಮಾಡುವುದು ಅಸಹ್ಯಕರ. ಮುಂದೆ ವ್ಯಂಜನಗಳ ಕಾಗುಣಿತಾಕ್ಷರ ವರ್ಗಗಳು.

ಏಳು ಮುಖ್ಯ ವ್ಯಂಜನಗಳ ತಲಾ ಹನ್ನೊಂದು ಕಾಗುಣಿತಗಳ ನೀತಿ ವಾಕ್ಯಗಳು. ಕ-ಕಾ ವರ್ಗದಲ್ಲಿ ಮಾತ್ರ ಹನ್ನೆರಡು ಇವೆ: ೩೨. ಇತರರನ್ನು ಹಳಿಯಬೇಡ. ೩೩. ಧಾನ್ಯದ ಉಳಿತಾಯ ಉಪವಾಸಕ್ಕೆ ಸಮಾನ. ೩೪. ಕಾಲಕ್ಕೆ ತಕ್ಕಂತೆ ಬದುಕು. ೩೫. ಬಡತನ ನೀಗಿಸಲು ಯತ್ನಿಸು. ೩೬. ಶೀಲ ಕಳೆದು ಕೊಳ್ಳದಿರು. ೩೭. ಸ್ನೇಹವನ್ನು ಬಿಡಬೇಡ. ೩೮. ದ್ವೇಷವನ್ನು ಬಿಟ್ಟುಬಿಡು. ೩೯. ಪ್ರಶ್ನೆ ಕೇಳಿ ಅರಿತುಕೋ. ೪೦. ಯಾವುದಾದರೊಂದು ಕರಕುಶಲಕಲೆಯನ್ನು ಕಲಿತುಕೋ. ೪೧. ಮೋಸ ಮಾಡಬೇಡ. ೪೨. ನೋಯಿಸುವ ಆಟಗಳಲ್ಲಿ ಪಾಲ್ಗೊಳ್ಳಬೇಡ. ೪೩. ಬೆನ್ನಹಿಂದೆ ಕೆಟ್ಟ ಮಾತಾಡುವುದನ್ನು ಬಿಡು.

ಚ-ಚಾ ವರ್ಗದ ಹನ್ನೊಂದು: ೪೪. ನೀ ನಿಂತ ನೆಲದ ಕಾನೂ ನನ್ನು ಗೌರವಿಸು. ೪೫. ಅರಿತವ ರೊಡನೆ ಒಡನಾಟ ಬೆಳೆಸು. ೪೬. ಉತ್ಪ್ರೇಕ್ಷೆ ಮಾಡುವುದನ್ನು ನಿಲ್ಲಿಸು. ೪೭. ಸದಾ ನೀತಿವಂತ ನಾಗಿರು. ೪೮. ಇನ್ನೊಬ್ಬರ ಭಾವನೆಗಳನ್ನು ಘಾಸಿಗೊಳಿಸದಿರು. ೪೯. ಜೂಜಾಡಬೇಡ. ೫೦. ಅತ್ಯುತ್ತಮ ವರ್ತನೆ ಪ್ರದರ್ಶಿಸು. ೫೧. ಒಳ್ಳೆಯ ಸ್ನೇಹಿತರನ್ನು ಹುಡುಕಿಕೋ. ೫೨. ಅವಮಾನಿತ ನಾಗುವುದಕ್ಕೆ ಆಸ್ಪದ ಕೊಡಬೇಡ. ೫೩. ಇನ್ನೊಬ್ಬರೊಡನೆ ಸಂಭಾಷಿಸುವಾಗ ಆಯಾಸ-ಅನಾಸಕ್ತಿ ತೋರದಿರು. ೫೪. ಸೋಮಾರಿಯಾಗಿರಬೇಡ.

ತ-ತಾ ವರ್ಗದ ಹನ್ನೊಂದು: ೫೫. ನಂಬಲರ್ಹ ವಾಗಿರು. ೫೬. ನತದೃಷ್ಟರಿಗೆ ಕರುಣಾಮಯಿ ಆಗಿರು. ೫೭. ತಿರುಮಲ ಸ್ವಾಮಿಯ ಸೇವಕನಾಗು. ೫೮. ಪಾಪಕೃತ್ಯಗಳನ್ನು ಎಸಗಬೇಡ. ೫೯. ಯಾತನೆಯನ್ನು ಸೆಳೆದುಕೊಳ್ಳಬೇಡ. ೬೦. ಸದುದ್ದೇಶದ ಕೆಲಸಗಳನ್ನಷ್ಟೇ ಮಾಡು. ೬೧. ದೈವವನ್ನು ಕಡೆಗಣಿಸಬೇಡ. ೬೨. ದೇಶವಾಸಿಗಳೊಡನೆ ಒಗ್ಗಟ್ಟಿ ನಿಂದ ಬಾಳು. ೬೩. ದುರುದ್ದೇಶ ಪೂರಿತ ಭಾಷಣಗಳಿಂದ ದೂರವಿರು. ೬೪. ಚರಿತ್ರೆಯಿಂದ ಪಾಠ ಕಲಿ. ೬೫. ಸೋಲು ಖಚಿತವಿದ್ದರೆ ಸ್ಪರ್ಧಿಸಬೇಡ.

ನ-ನಾ ವರ್ಗದವು: ೬೬. ಪ್ರಯೋಜನಕಾರಿ ಯಾದದ್ದನ್ನು ಪಾಲಿಸು. ೬೭. ರಾಷ್ಟ್ರಕ್ಕೆ ಸ್ವೀಕಾರಾರ್ಹ ವಾದದ್ದನ್ನು ಮಾಡು. ೬೮. ಉತ್ತಮ ಸ್ಥಿತಿಯಿಂದ ಜಾರಿಕೊಳ್ಳಬೇಡ. ೬೯. ಜಲಸಮಾಧಿಗೆ ಇಳಿಯ ಬೇಡ. ೭೦. ತಿಂಡಿಪೋತ ನಾಗಬೇಡ. ೭೧. ಒಳ್ಳೆಯ ಪುಸ್ತಕಗಳನ್ನು ಹೆಚ್ಚುಹೆಚ್ಚು ಓದು. ೭೨. ಕೃಷಿಕಾರ್ಯದಲ್ಲಿ ತೊಡ ಗಿಸಿಕೋ. ೭೩. ಯಾವಾಗಲೂ ಒಳ್ಳೆಯ ನಡತೆಯನ್ನು ತೋರಿಸು. ೭೪. ವಿನಾಶಕೃತ್ಯಗಳಲ್ಲಿ ಕೈಜೋಡಿಸಬೇಡ. ೭೫. ಅಶ್ಲೀಲತೆ ಬೇಡ. ೭೬. ಅನಾರೋಗ್ಯಕರ ಜೀವನಶೈಲಿ ಅಳವಡಿಸಿಕೊಳ್ಳಬೇಡ. ಪ-ಪಾ ವರ್ಗದ ಹನ್ನೊಂದು: ೭೭. ಅಸಭ್ಯವಾದ ಮಾತಾಡಬೇಡ. ೭೮. ದುಷ್ಟರಿಂದ ದೂರವಿರು. ೭೯. ಸ್ವಯಂ ಅಪರಾಧದ ಬಗ್ಗೆ ಎಚ್ಚರದಿಂದಿರು. ೮೦. ಗೌರವದ ಮಾರ್ಗವನ್ನು ಅನುಸರಿಸು. ೮೧. ಉಪಕಾರಿಯನ್ನು ರಕ್ಷಿಸು. ೮೨. ಬೇಸಾಯ ಮಾಡಿ ಉಣಿಸು ಮತ್ತು ಉಣ್ಣು. ೮೩. ಅಗತ್ಯವಾದಾಗ ಹಿರಿಯ ರಿಂದ ಮತ್ತು ಬಲ್ಲವರಿಂದ ಸಹಾಯ ಪಡೆದುಕೋ. ೮೪. ಅಜ್ಞಾನವನ್ನು ತೊಡೆದುಹಾಕು. ೮೫. ಮೂರ್ಖರೊಡನೆ ಮೈತ್ರಿ ಬೇಡ. ೮೬. ಸಂಪತ್ತನ್ನು ಉಳಿಸಿ ಬೆಳೆಸು. ೮೭. ಕಾಲುಕೆರೆದು ಜಗಳಕ್ಕಿಳಿಯ ಬೇಡ.

ಮ-ಮಾ ವರ್ಗದವು: ೮೮. ದೃಢತೆಯನ್ನು ಕಳೆದುಕೊಳ್ಳಬೇಡ. ೮೯. ಶತ್ರುವನ್ನು ಒಳಸೇರಿಸಿ ಕೊಳ್ಳಬೇಡ. ೯೦. ಯಾವುದನ್ನೂ ನಾಟಕೀಯವಾಗಿಸಬೇಡ. ೯೧. ಹೊಟ್ಟೆಬಾಕ ಆಗಬೇಡ. ೯೨. ನ್ಯಾಯಸಮ್ಮತವಲ್ಲದ ಜಗಳದಲ್ಲಿ ಮೂಗು ತೂರಿಸಬೇಡ. ೯೩. ಹಠಮಾರಿತನವನ್ನು ಒಪ್ಪಬೇಡ. ೯೪. ಆದರ್ಶ ಸತಿಯನ್ನು ತೊರೆಯಬೇಡ. ೯೫. ಪುರಾಣಪುರುಷರ ಮಾತನ್ನಾಲಿಸು. ೯೬. ಹೊಟ್ಟೆ ಕಿಚ್ಚಿನವರ ಬಳಿಯಿಂದ ಹೊರನಡೆ. ೯೭. ಮಾತಿನಲ್ಲಿ ಸ್ಪಷ್ಟತೆಯಿರಲಿ. ೯೮. ಕಾಮದ ಪ್ರಲೋಭನೆಗೆ ಒಳಗಾಗಬೇಡ.

ಕೊನೆಯಲ್ಲಿ ವ-ವಾ ವರ್ಗದವು ಹನ್ನೊಂದು: ೯೯. ತನ್ನ ಬಣ್ಣಿಸಬೇಡ. ೧೦೦. ವದಂತಿಗಳನ್ನು ಹರಡಬೇಡ. ೧೦೧. ಹೊಸ ಕಲಿಕೆಗೆ ತೆರೆದುಕೋ. ೧೦೨. ಶಾಂತಿಯುತ ಬಾಳ್ವೆಯನ್ನು ಧ್ಯೇಯವಾಗಿಸು. ೧೦೩. ಮಾದರಿ ಜೀವನ ನಡೆಸು. ೧೦೪. ಸೌಹಾರ್ದ ಯುತವಾಗಿ ಬದುಕು. ೧೦೫. ನಡೆ-ನುಡಿಯಲ್ಲಿ ಕಠೋರತನ ಬೇಡ. ೧೦೬. ಹಾನಿಯನ್ನು ಯೋಜಿಸಬೇಡ. ೧೦೭. ಬೆಳಗ್ಗೆ ಬೇಗ ಏಳುವ ಅಭ್ಯಾಸವಿಟ್ಟುಕೋ. ೧೦೮. ಶತ್ರುಪಾಳಯ ಸೇರಿಕೊಳ್ಳ ಬೇಡ. ೧೦೯. ಯಾವುದೇ ನಿರ್ಣಯದಲ್ಲಿ ನಿಷ್ಪಕ್ಷಪಾತಿಯಾಗಿರು.

ತಮಿಳು ವರ್ಣಮಾಲೆ ಮತ್ತು ಭಾಷೆ ಕಲಿಕೆಯ ವಿಧಾನವಾಗಿ ಈ ಆತ್ತಿಚ್ಚೂಡಿ ನೀತಿವಾಕ್ಯಗಳ ಸೂಡಿಯನ್ನು ಗಮನಿಸಿದಾಗ ನನಗೊಂದು ವಿಚಾರ ನೆನಪಾಗುತ್ತಿದೆ. ‘ಭಾಷೆ ಇಲ್ಲದವನು’ ಎಂಬೊಂದು ಬೈಗುಳ ನಮ್ಮ ಕರಾವಳಿ ಪ್ರದೇಶದಲ್ಲಿ ಸಾಮಾನ್ಯವಾಗಿ ಬಳಕೆಯಾಗುತ್ತದೆ. ಎಲ್ಲ ಜೀವನಮೌಲ್ಯಗಳನ್ನು ಕಳೆದುಕೊಂಡವನು ಅಥವಾ ಗಾಳಿಗೆ ತೂರಿದವನು ಎಂಬರ್ಥದಲ್ಲಿ. ಯಾವುದೇ ಭಾಷೆಯನ್ನಾಗಲೀ ನಾವು ಕಲಿತುಕೊಳ್ಳುವುದೇ ನಮ್ಮ ವ್ಯಕ್ತಿತ್ವವನ್ನು ಬೆಳಗಿಸಲಿಕ್ಕೆ ಮತ್ತು ಬೆಳೆಸುವುದಕ್ಕೆ. ಅಂಥದರಲ್ಲಿ ಭಾಷೆ ಕಲಿಕೆಯ ಜತೆಜತೆಗೇ ಜೀವನಮೌಲ್ಯಗಳ ಕಲಿಕೆ ನಮಗೆನಿಜಕ್ಕೂ ಶ್ರೇಷ್ಠ ಸಂಸ್ಕಾರ ಒದಗಿಸಬಲ್ಲದು. ಕನ್ನಡದಲ್ಲಿ ತಮಿಳಿಗಿಂತ ಹೆಚ್ಚು ಅಕ್ಷರಗಳಿವೆ. ಇನ್ನಷ್ಟು ಜೀವನಮೌಲ್ಯಗಳನ್ನು ಉಪದೇಶಿಸುವ ವಾಕ್ಯರಚನೆ ಸಾಧ್ಯವಿದೆ. ಕನ್ನಡದಲ್ಲೂ ಯಾರಾದರೂ ಅವ್ವೈಯಾರ್ ಹುಟ್ಟಿಬಂದರೆ ಇಂಥದೊಂದು ಅಜರಾಮರ ಅಕ್ಷರಮಾಲೆ ಕಟ್ಟಬಹುದು!

ಅವ್ವೈಯಾರ್ ಬಗ್ಗೆ ಶೋಧಿಸಿದಾಗ ಮತ್ತೊಂದಿಷ್ಟು ವಿಚಾರಗಳೂ ತಿಳಿದುಬಂದವು. ಆತ್ತಿಚ್ಚೂಡಿ ಅಷ್ಟೇಅಲ್ಲದೆ ಕೊಂಡ್ರೈವೆಂಡನ್, ನಲ್ವಳಿ, ಮತ್ತು ಮೂಧುರೈ ಎಂಬ ಇನ್ನೂ ಮೂರು ಕಾವ್ಯ ಗಳನ್ನು ಅವ್ವೈಯಾರ್ ರಚಿಸಿದ್ದಾಳೆ. ಎಲ್ಲವೂ ನೀತಿಬೋಧೆ ರೀತಿಯವೇ. ಸಂಖ್ಯೆ ಇಷ್ಟೇ ಆದರೂ, ತಮಿಳು ಭಾಷೆಯ 2500 ವರ್ಷಗಳ ಇತಿಹಾಸದಲ್ಲಿ ಅತಿಪ್ರಮುಖ ಕವಯಿತ್ರಿ ಮತ್ತು ಹೆಚ್ಚು ಜನರಿಗೆ ಹೆಸರು ಕೇಳಿ ಗೊತ್ತಿರುವವಳು ಎಂಬ ಖ್ಯಾತಿ ಅವ್ವೈಯಾರ್‌ಗೆ ಇದೆ.

ಹಳೆ ಕಾಲದ ತಮಿಳಿಗರಿಗೆ ಅವಳ ಕೃತಿಗಳು ಸುಭಾಷಿತಗಳಂತೆ, ಅಮರಕೋಶದಂತೆ ಕಂಠಪಾಠವೇ ಆಗಿವೆ. ಆದರೂ ಸೂಕ್ತ ಅನುವಾದಕರಿಲ್ಲದೆ ಅವ್ವೈಯಾರ್ ರಚನೆಗಳು ತಮಿಳೇತರರಿಗೆ ತಿಳಿದಿಲ್ಲ. ಚಕ್ರವರ್ತಿ ರಾಜಗೋಪಾಲಾಚಾರಿ ಅವರು 1971ರಲ್ಲಿ ಭಾರತೀಯ ವಿದ್ಯಾಭವನದ ಪ್ರಕಟಣೆ ಯಾಗಿ ಒಂದು ಇಂಗ್ಲಿಷ್ ತರ್ಜುಮೆಯನ್ನು ಹೊರತಂದಿದ್ದರಂತೆ. ಅದು ಮರುಮುದ್ರಣಗಳನ್ನು ಕಂಡಿದ್ದಿಲ್ಲ. ಅಲ್ಲದೇ ಆ ಅನುವಾದವೂ ಕಾವ್ಯಾತ್ಮಕವಾಗಿರದೆ ಪದಶಃ ಇಂಗ್ಲಿಷ್ ಭಾಷಾಂತರ ರೀತಿಯಲ್ಲಿ ಇತ್ತಂತೆ.

ಅಮೆರಿಕದ ಲೇಖಕ, ಅನುವಾದಕ ಥಾಮಸ್ ಹಿತೋಷಿ ಪ್ರುಯ್‌ಕ್ಸ್‌ಮಾ ಎಂಬಾತ ಫುಲ್‌ಬ್ರೈಟ್ ಸ್ಕಾಲರ್‌ಶಿಪ್ ಯೋಜನೆಯಡಿ ಭಾರತಕ್ಕೆ, ತಮಿಳುನಾಡಿನ ಮಧುರೈಗೆ ಹೋಗಿ ಅಲ್ಲಿ ದಿ ಅಮೆರಿಕನ್ ಕಾಲೇಜ್‌ನಲ್ಲಿ ಡಾ. ಕೆ.ವಿ.ರಾಮಕೋಟಿ ಎಂಬುವವರಲ್ಲಿ ತಮಿಳು ಭಾಷೆಯನ್ನೂ, ಸಾಹಿತ್ಯವನ್ನೂ ಕಲಿತನು; ಅವ್ವೈಯಾರ್‌ಳ ಆತ್ತಿಚ್ಚೂಡಿ ಮತ್ತಿತರ ಕೃತಿಗಳ ನವನೀತವನ್ನು ಸಂಗ್ರಹಿಸಿದನು. 2009ರಲ್ಲಿ ಲಾಸ್ ಏಂಜಲೀಸ್‌ನ ರೆಡ್ ಹೆನ್ ಪ್ರೆಸ್ ಪ್ರಕಾಶನದಿಂದ Give, Eat, and Live: Poems by Avviyar ಎಂಬ ಕೃತಿಯನ್ನು ಪ್ರಕಟಿಸಿದನು.

ಇದು ಕಾವ್ಯಾತ್ಮಕ ಇಂಗ್ಲಿಷ್‌ನಲ್ಲಿದ್ದು ಅವ್ವೈಯಾರ್‌ಳ ಪ್ರತಿಭೆಯನ್ನೂ ಕಾವ್ಯಶಕ್ತಿಯನ್ನೂ ಸಮೃದ್ಧವಾಗಿ ಪ್ರದರ್ಶಿಸಿದೆ. ೧೨ನೆಯ ಶತಮಾನದಲ್ಲಿ ರಚಿಸಿದ್ದು 21ನೆಯ ಶತಮಾನಕ್ಕೂ ಪ್ರಸ್ತುತವೇ ಆಗಿದೆಯೆಂದು ಸಾಬೀತುಪಡಿಸಿದೆ. ಆದರೂ, ಕುದುರೆಯನ್ನು ನೀರಿನ ಬಳಿಗೆ ಕರೆದುಕೊಂಡು ಹೋಗಬಹುದಷ್ಟೇ ಹೊರತು ಅದು ನೀರು ಕುಡಿಯುವಂತೆ ಮಾಡಲಿಕ್ಕಾಗದು ಎಂಬ ಗಾದೆಯಂತೆ ಯಾವ ಅವ್ವೈಯಾರ್ ಯಾವ ಆತ್ತಿಚ್ಚೂಡಿ ಅಥವಾ ಯಾವ ಅನುವಾದಗಳೇ ಇದ್ದರೂ ಅಳವಡಿಸಿಕೊಳ್ಳುವಿಕೆ ಅವರವರಿಗೆ ಬಿಟ್ಟದ್ದು. ಏನಂತೀರಿ?