ಅಭಿಮತ
ನಾಗರಾಜ ಜಿ.ನಾಗಸಂದ್ರ
ಜೀವ ಸಂಕುಲದಲ್ಲೇ ಅತ್ಯಂತ ಬುದ್ಧಿಹೊಂದಿದ ಜೀವಿ ಮನುಷ್ಯ. ಅವನು ತನ್ನ ಸ್ವಾರ್ಥಕ್ಕಾಗಿ ಯಾವ ಮಟ್ಟಕ್ಕಾದರೂ ಇಳಿಯಬಲ್ಲ. ಅವನು ತನ್ನ ಸ್ವಾರ್ಥಕ್ಕಾಗಿ ನೆಲ, ಜಲ, ಅರಣ್ಯ ಮಾತ್ರವಲ್ಲದೆ ತನ್ನದೇ ಆದ ಮನುಷ್ಯ ಕುಲವನ್ನು ಕಾಡುವ ಗುಣ ಹೊಂದಿದ್ದಾನೆ. ಹಾಗೆಂದು ಜಗತ್ತಿನಲ್ಲಿರುವವರೆಲ್ಲ ಸ್ವಾರ್ಥಿಗಳಾಗಲು ಸಾಧ್ಯವಿಲ್ಲ. ಹಾಗೊಂದು ವೇಳೆ ಎಲ್ಲರೂ ಸ್ವಾರ್ಥಿಗಳೇ ಆದಲ್ಲಿ ಸತ್ಯ ನಿಷ್ಠೆಗಳಿಗೆ ಬೆಲೆ ಇರುವುದಿಲ್ಲ. ಅಂತಹ ಸಮಾಜ ಹೆಚ್ಚು
ದಿನ ಉಳಿಯುವುದೂ ಸಾಧ್ಯವಿಲ್ಲ.
ಎಲ್ಲಿ ಅಸಹನೆ, ಅಸಹಾಯಕತೆಗಳು ಹೆಚ್ಚು ವಿಜೃಂಭಿಸುತ್ತವೋ ಅಲ್ಲಿ ವಿನಾಶ ತಪ್ಪಿದ್ದಲ್ಲ. ಇದಕ್ಕೆ ರಷ್ಯಾ, ಪ್ರಾನ್ಸ್‌ನಲ್ಲಿ ನಡೆದ ಕ್ರಾಂತಿಗಳೇ ಸಾಕ್ಷಿ. ಮಿತಿಮೀರಿದ ಶೋಷಣೆ, ದೌರ್ಜನ್ಯಗಳು ಒಂದು ಹಂತ ತಲುಪಿದಲ್ಲಿ ಅದಕ್ಕೆ ಅಂತ್ಯ ಕಂಡಿತವಾಗಿಯೂ ಇದ್ದೆ ಇರುತ್ತದೆ. ಒಂದು ಸಾಮಾನ್ಯ
ಇರುವೆಯೂ ತನ್ನ ಮೇಲಾಗುವ ದೌರ್ಜನ್ಯವನ್ನು ಪ್ರತಿಭಟಿಸುವ ಸಲುವಾಗಿ ಕಚ್ಚುತ್ತದೆ. ಅದು ಸೌಮ್ಯ ಜೀವಿಯಾಗಿದ್ದರೂ ಅದಕ್ಕೆ ಆದ ನೋವಿಗೆ
ಪ್ರತಿಭಟಿಸುತ್ತದೆ. ಇನ್ನು ಬುದ್ಧಿ ಜೀವಿಯಾದ ಮಾನವನು ಪ್ರತಿಭಟಿಸುವುದರಲ್ಲಿ ಸಂದೇಹವಿಲ್ಲ.
ಇತ್ತೀಚಿನ ದಿನಗಳಲ್ಲಿ ಅಸಹಿಷ್ಣತೆ ಹೆಚ್ಚುತ್ತಿದೆ. ಭ್ರಾತೃತ್ವತೆ ಮರೆಯಾಗುತ್ತಿದೆ. ಅದು ಜಾತಿ ಜಾತಿಗಳ ನಡುವೆ ಹಾಗೂ ಧರ್ಮ ಧರ್ಮಗಳ ನಡುವೆ ಅಸಮದಾನದ ಬಿರುಕು ದೊಡ್ಡದಾಗುತ್ತಲೇ ಸಾಗುತ್ತಿದೆ. ಸಣ್ಣ ಸಣ್ಣ ವಿಚಾರಗಳಿಗೂ ಜಾತಿ ಧರ್ಮದ ಬಣ್ಣ ಕಟ್ಟಿ ಮಾರುಕಟ್ಟೆ ಮಾಡಿಕೊಳ್ಳುವವರ
ಸಂಖ್ಯೆ ಹೆಚ್ಚುತ್ತಿದೆ. ಇದು ಬಹಳ ದೊಡ್ಡ ಅಪಾಯಕ್ಕೆ ಮುನ್ನುಡಿಯಾಗಬಲ್ಲದು. ಕ್ರೂಸೇಡ್ ಯುದ್ಧಗಳಂತಹ ಕೆಲವು ಯುದ್ಧಗಳನ್ನು ಹೊರತು ಪಡಿಸಿದರೆ, ಇದುವರೆಗೂ ನಡೆದ ಬಹುತೇಕ ಕ್ರಾಂತಿಗಳು ಆರ್ಥಿಕ ಅಸಮಾನತೆ ಇಲ್ಲವೆ ದುಷ್ಟ ಆಡಳಿತದ ದೌರ್ಜನ್ಯದ ವಿರುದ್ದವಾಗಿದ್ದವು. ಆದರೆ ಅವು ಅಲ್ಪಕಾಲಿಕ ಪ್ರಭಾವವನ್ನು ಬೀರಿದ್ದವು. ಆಡಳಿತ ಬದಲಾವಣೆಯೊಂದಿಗೆ ಅವು ಅಂತ್ಯವಾದವು.
ಆದರೆ ಧರ್ಮದ ಅಫೀಮಿನಲ್ಲಿ ಮುಳುಗಿದ ಆಂದೋಲನಗಳು ಅಷ್ಟು ಸುಲಭವಾಗಿ ನಿಲ್ಲಲಾರವು. ಇವು ಜನಾಂಗದ ವಿನಾಶವನ್ನು ಬಯಸುತ್ತವೆ. ಆದ್ದರಿಂದ ಇದು ಸಮಾಜಕ್ಕೆ ದೊಡ್ಡ ಅಪಾಯವನ್ನು ತಂದೊಡ್ಡಬಲ್ಲದು. ನಮ್ಮ ಲೋಪಗಳನ್ನು ಮುಚ್ಚಿಕೊಳ್ಳಲು ಮತ್ತೊಬ್ಬರನ್ನು ಸದಾ ದೂರುವ ಹವ್ಯಾಸ ಹೆಚ್ಚುತ್ತಿದೆ. ಹಳ್ಳಿಯ ಒಂದು ಸಾಮಾನ್ಯ ಪೆಟ್ಟಿಗೆ ಅಂಗಡಿಯ ಮುಂದೆ ಕೂತು ಮಾತನಾಡುವ ಹಳ್ಳಿಗರೂ ಕೂಡ ಆ ರಾಜಕಾರಣಿ ಅಷ್ಟು ಸಾವಿರ ಕೋಟಿ ತಿಂದ, ಇವನು ಇಷ್ಟು ಕೋಟಿ ತಿಂದ ಎಂದು ಮಾತನಾಡುವುದು ಸಾಮಾನ್ಯ ಸಂಗತಿಯಾಗಿದೆ.
ಹಾಗಾದರೆ ಹಳ್ಳಿಯವ ಇಂತಹ ಮಾತನಾಡುವುದು ತಪ್ಪೇ? ಅವನು ಈ ದೇಶದ ಪ್ರಜೆಯಲ್ಲವೇ? ಅನ್ನುವ ಪ್ರಶ್ನೆಗಳು ಸಹಜವಾಗಿಯೇ ಕೇಳಿ ಬರುತ್ತವೆ. ಹೌದು ಭಾರತೀಯ ಪ್ರಜೆಯಾದ ಪ್ರತಿಯೊಬ್ಬರಿಗೂ ಮಾತನಾಡುವ ಹಾಗೂ ತಮ್ಮ ಅಭಿಪ್ರಾಯವನ್ನು ತಿಳಿಸುವ ಹಕ್ಕನ್ನು ಕೊಟ್ಟಿದೆ. ಹಾಗೆಂದು
ತಮ್ಮ ಪಾಲಿನ ಜವಬ್ದಾರಿಗಳನ್ನು ಮರೆತು ಸದಾ ಮತ್ತೊಬ್ಬರ ಹುಳುಕುಗಳನ್ನು ಹುಡುಕುತ್ತಾ ಅದರ ಬಗ್ಗೆ ಮಾತನಾಡುತ್ತಾ ಕೂರುವುದು ಸರಿಯಾದ ಮಾರ್ಗವಲ್ಲ.
ಯಾವುದೋ ಹಳ್ಳಿಗಾಡಿನ ಜಮೀನಿನಲ್ಲಿ ರೈತನೊಬ್ಬ ಕೊಳವೆ ಬಾವಿತೆಗೆಸಿ ನೀರು ಬರದ ಕಾರಣ ಹಾಗೇಯೇ ಬಿಟ್ಟಿರುತ್ತಾನೆ. ಆಕಸ್ಮಿಕವೆಂಬಂತೆ ಆ ಕೊಳವೇ ಬಾವಿಗೆ ಮಗುವೊಂದು ಬಿದ್ದರೆ. ಅದಕ್ಕೆ ಮುಖ್ಯಮಂತ್ರಿ ಇಲ್ಲವೇ ಪ್ರದಾನ ಮಂತ್ರಿಗಳನ್ನು ದೂಷಿಸುತ್ತಾರೆ. ಅವರ ಆಡಳಿತ ಸರಿಯಿಲ್ಲವೆಂದು ಮಾತನಾಡುತ್ತಾರೆ. ಒಂದು ಹಳ್ಳಿಯಲ್ಲಿ ನಡೆಯುವ ಈ ದುರ್ಘಟನೆಗೆ ದೂರದಲ್ಲಿರುವ ಪ್ರಧಾನಿ ಅಥವಾ ಮುಖ್ಯಮಂತ್ರಿ ಹೇಗೆ ಕಾರಣಾರಾಗುತ್ತಾರೆಂಬ
ಸಾಮಾನ್ಯ ಜ್ಞಾನ ನಮ್ಮಲ್ಲಿರಬೇಕಾಗುತ್ತದೆ. ಜಮೀನಿನಲ್ಲಿ ನೀರು ಬರದಿದ್ದಾಗ ಅದನ್ನು ಮುಚ್ಚಲು ಸರಕಾರ ಬರಬೇಕೆ? ಇದು ನಬಮ್ಮ ಜವಬ್ದಾರಿ ಅಲ್ಲವೇ? ಸರಕಾರವನ್ನು ದೂರುವ ಮುನ್ನ ನಾವೆಷ್ಟು ಉತ್ತಮ ಪ್ರಜೆಗಳೆಂದು ಆತ್ಮವಿಮರ್ಶೆ ಮಾಡಿಕೊಳ್ಳಬೇಕಲ್ಲವೇ? ಜನಸಾಮಾನ್ಯರ ಪರಿಸ್ಥಿತಿ ಹೀಗಾದರೆ ಇನ್ನು ನಮ್ಮನ್ನು ಆಳುತ್ತಿರುವ ನಾಯಕರ ಮನಸ್ಥಿತಿಗಳು ಮತ್ತಷ್ಟು ಕೇಳದರ್ಜೆಗೆ ಇಳಿದಿರುವುದು ದೇಶದ ಹಿತ ದೃಷ್ಠಿಯಿಂದ ಹಾಗೂ
ಸಮಾಜದ ಹಿತದೃಷ್ಠಿಯಿಂದ ಮಾರಕವಾಗುತ್ತದೆ. ಜನಸಾಮಾನ್ಯರು ಆಡುವ ಮಾತುಗಳು ಕೇವಲ ಒಂದೆರಡು ಕಿವಿಗಳ ಮೇಲಷ್ಟೇ ಪ್ರಭಾವ ಬೀರಬಲ್ಲವು.
ಆದರೆ ನಾಯಕರೆನಿಸಿಕೊಂಡವರು ಕೀಳು ಮಟ್ಟದ ಮಾತುಗಳನ್ನು ಆಡಿದಲ್ಲಿ ಸಮಾಜದ ವ್ಯವಸ್ಥೆಯನ್ನೇ ಬುಡಮೇಲು ಮಾಡಬಲ್ಲವು. ಇಲ್ಲಿ ಅಭಿವೃದ್ಧಿಯ ಮಾತುಗಳಿಗಿಂತ ವೈಯಕ್ತಿಕ ಟೀಕೆಗಳು ಹೆಚ್ಚು ಮಹತ್ವ ಪಡೆದುಕೊಳ್ಳುತ್ತಿರುವುದು ದುರದೃಷ್ಟಕರ ಸಂಗತಿ. ಇದಕ್ಕಿಂತ ಮತ್ತಷ್ಟು ಅಪಾಯಕಾರಿ ಬೆಳವಣಿಗೆ ಎಂದರೆ ತಮ್ಮ ಅನುಕೂಲಕ್ಕಾಗಿ ಜಾತಿ ಧರ್ಮಗಳನ್ನು ಬಳಸಿಕೊಳ್ಳುತ್ತಿರುವುದು. ಆ ಮೂಲಕ ಅಧಿಕಾರ ಸ್ಥಾಪನೆಗೆ
ಮುಂದಾಗುತ್ತಿರುವುದು. ದೇಶದ ಹಿತ ಮಣ್ಣುಪಾಲಾಗುವಂತೆ ಮಾಡುತ್ತಿದೆ.
ಕಳೆದ ಕೆಲ ವರ್ಷಗಳಿಂದ ವೈಯುಕಿಕ ಕೆಸರೆಚಾಟ ಮುಗಿಲು ಮುಟ್ಟಿದೆ. ಇದು ಪ್ರಜಾಪ್ರಭುತ್ವ ವಿನಾಶಕ್ಕೆ ಬರೆದ ಮುನ್ನುಡಿ ಅನ್ನಬಹುದು. ಇಲ್ಲಿ ಪಕ್ಷ ಅಥವಾ ವ್ಯಕ್ತಿ ಮುಖ್ಯವಲ್ಲ. ಆದರೆ ಅವರ ನಡವಳಿಕೆಗಳು ಮುಖ್ಯ. ಯಾವುದೇ ಪಕ್ಷ ತನ್ನ ಸಾಧನೆಯನ್ನು ಜನರ ಮುಂದೆ ಇಡುವ ಮೂಲಕ ಜನ ಮನ ಗೆಲ್ಲುವ ಪ್ರಯತ್ನ ನಡೆಸಬೇಕು. ಆದರೆ ಈಗ ನಡೆಯುತ್ತಿರುವುದೇ ಬೇರೆ. ಸದಾ ತಮ್ಮ ವಿರೋಽಗಳ ನಡೆಗಳನ್ನು ವಿಮರ್ಶಿಸುವದೇ ಮತಗಳಿಕೆಯ ತಂತ್ರಗಳನ್ನಾಗಿ ಬಳಸುವುದು ಯಾವ ದೇಶದ ನ್ಯಾಯ? ಎಂದು ಅವರೇ ಉತ್ತರಿಸಬೇಕಾಗಿದೆ. ಇಲ್ಲಿ ದೇಶಕ್ಕಿಂತ ಅಽಕಾರ ಮತ್ತು ಸ್ವಾರ್ಥ ಎದ್ದು
ವಿಜೃಂಭಿಸುತ್ತಿದೆ.
ಇನ್ನು ವಿರೋಧ ಪಕ್ಷ ಇರುವುದೇ ಟೀಕಿಸುವುದಕ್ಕೆ ಅನ್ನು ವಂತೆ ನಡೆದುಕೊಳ್ಳುವ ಛಾಳಿ ಎದ್ದು ಕಾಣುತ್ತಿದೆ. ಪಕ್ಷ ಯಾವುದೇ ಇರಲಿ ಸರಕಾರಗಳ ಬಹುತೇಕ ಆದೇಶಗಳು ದೇಶದ ಹಿತ ದೃಷ್ಠಿಯಿಂದ ಉತ್ತಮವಾಗಿರುತ್ತವೆ. ಏಕೆಂದರೆ ಅವರು ಆಡಳಿತಕ್ಕೆ ಬಂದಿರುವುದೇ ಜನರ ಹಿತ ಕಾಯಲು. ಆದರೆ ಅವುಗಳನ್ನು ವಿರೋಧ ಪಕ್ಷಗಳು ಟೀಕಿಸುವುದೇ ನಮ್ಮ ಧರ್ಮ ಅನ್ನುವಂತೆ ವರ್ತಿಸುವುದು. ಆ ಮೂಲಕ ಉತ್ತಮ ಕಾರ್ಯಗಳನ್ನು ಅನುಷ್ಠಾನ ಗೊಳಿಸಲು ಅಡ್ಡಿಪಡಿಸುವುದು ದೇಶದ ಅಭಿವೃದ್ಧಿಗೆ ಕೊಡಲಿ ಪೆಟ್ಟೆ ಸರಿ. ಹೌದು ವಿರೋಧ ಪಕ್ಷಗಳಿರುವುದು ಟೀಕಿಸುವುದಕ್ಕೆ. ಆದರೆ ಅವು ದೇಶ ಮತ್ತು ಜನರ ಹಿತಕ್ಕೆ ಧಕ್ಕೆ ತರುವಂತಿದ್ದರೆ ಬೀದಿಗಿಳಿದು ಹೋರಾಡಲಿ. ಆಗ ಅಂತಹ ಹೋರಾಟಗಳಿಗೆ ಜನ ಮನ್ನಣೆಯೂ ದೊರೆಯುತ್ತದೆ.
ಹಾಗೆಂದು ಟೀಕೆಗಾಗಿ ಟೀಕೆ ಮಾಡುವುದು ಒಂದು ಅಹಿತಕರ ಬೆಳವಣಿಗೆಯೇ ಸರಿ. ಸಂವಿಧಾನದ ರಕ್ಷಕರಾಗಿ ಇರಬೇಕಾದ ಇವರುಗಳು ಸಮಾಜ ಕಂಟಕರಾಗಿ ಬದಲಾದಲ್ಲಿ ಸಮಾಜದ ಹಿತ ಅನ್ನು ಪದ ದೂರವೇ ಉಳಿಯುತ್ತದೆ. ಇನ್ನು ಆಡಳಿತಾರೂಢ ಪಕ್ಷಗಳದ್ದು ಇದಕ್ಕಿಂತ ಭಿನ್ನ ಧ್ವನಿಯೇನಲ್ಲ. ವಿರೋಧ ಪಕ್ಷದ ಮಾತುಗಳಿಗೆ ಕಿವಿಕೊಡುವ ಬದಲು ಅವರ ವಿಮರ್ಶೆಗಳನ್ನು ವ್ಯಂಗ್ಯ ಮಾಡುವುದು ನಕಾರಾತ್ಮಕತೆಯ ಒಂದು ರೂಪ. ವಿಮರ್ಶೆ
ಅಥವ ಟೀಕೆ ಯಾರೆ ಮಾಡಲಿ ಅದರಲ್ಲಿನ ಉತ್ತಮ ಅಂಶಗಳನ್ನು ಸ್ವೀಕರಿಸುವ ಗುಣ ಅಽಕಾರದಲ್ಲಿರುವವರಿಗೆ ಇರಬೇಕು. ಹಾಗೆ ಇದ್ದಲ್ಲಿ ದೇಶದ ಅಭಿವೃದ್ಧಿಯಾಗಲು ಸಾಧ್ಯ. ಜವಹರಲಾಲ್ ನೆಹರು ಅವರು ದೇಶದ ಮೊದಲ ಪ್ರಧಾನ ಮಂತ್ರಿಗಳಾಗಿದ್ದ ಕಾಲದಲ್ಲಿ ಅವರನ್ನು ವಿರೋಧ ಪಕ್ಷದ ನಾಯಕರಾದಂತಹ ಜಯಪ್ರಕಾಶ್ ನಾರಾಯಣ್, ರಾಮ ಮನೋಹರ ಲೋಹಿಯಾ, ಎ ಕೆ ಗೋಪಾಲನ್ ಅವರಿಗಿಂತ ಹೆಚ್ಚು ಕಾಡಿದ್ದು ಅವರದ್ದೇ ಪಕ್ಷದ ಸಂಸದ ಫಿರೂಜ್ ಗಾಂಧಿ. ಅಷ್ಟಾದರೂ ಅವರನ್ನು ತಮ್ಮ ಪಕ್ಷದಿಂದ ನಿಯಂತ್ರಿಸುವ ಕಾರ್ಯ ಮಾಡಲಿಲ್ಲ.
ಅವರ ಟೀಕೆಗಳನ್ನು ಸಕಾರಾತ್ಮಕವಾಗಿ ಸ್ವೀಕರಿಸುತ್ತಿದ್ದರು. ಇನ್ನು ದೇಶ ಕಂಡ ಮತ್ತೊಬ್ಬ ಅಪ್ರತಿಮ ನಾಯಕ ಅಟಲ್ ಬಿಹಾರಿ ವಾಜಪೇಯಿ. ಅವರು ಪ್ರಧಾನ ಮಂತ್ರಿಗಳಾಗಿ ಅಽಕಾರ ಸ್ವೀಕರಿಸಿದ ಸಂದರ್ಭದಲ್ಲಿ ಸಂಸತ್ತಿನ ವಿರೋಧ ಪಕ್ಷದ ನಾಯಕಿಯಾಗಿದ್ದು ಸೋನಿಯಾ ಗಾಂಧಿ. ವಿರೋಧ ಪಕ್ಷದಲ್ಲಿ ಅನುಭವದ ಕೊರತೆ ಕಾಣಬಾರದೆಂದು ಭಾವಿಸಿದ್ದ ವಾಜಪೇಯಿ ಸರಕಾರದ ನ್ಯೂನತೆಗಳನ್ನು ತಾವೇ ಪಟ್ಟಿ ಮಾಡಿ ವಿರೋಧ ಪಕ್ಷದ ನಾಯಕಿಗೆ ತಲುಪಿಸುವ ವ್ಯವಸ್ಥೆ ಮಾಡುತ್ತಿದ್ದರು. ಏಕೆಂದರೆ ವಾಜಪೇಯಿ ಅವರು ಸುದೀರ್ಘ ಕಾಲ ವಿರೋಧ ಪಕ್ಷದ ನಾಯಕರಾಗಿ ಸರಕಾರವನ್ನು ಇಕ್ಕಟ್ಟಿಗೆ
ಸಿಲುಕಿಸಿದ ಅನುಭವ ಅವರಲ್ಲಿತ್ತು. ಆ ಮೂಲಕ ಸರಕಾರದ ನಡೆಯನ್ನು ಸರಿದಾರಿಗೆ ತರುವಲ್ಲಿ ಯಶಸ್ಸನ್ನೂ ಕಂಡಿದ್ದರು.
ಅವರು ಅಧಿಕಾರದ ಚುಕ್ಕಾಣಿ ಹಿಡಿದಾಗಲೂ ಅಂತಹ ವಿಮರ್ಶೆಗಳನ್ನು ಬಯಸುತ್ತಿದ್ದರು. ವಿರೋಧ ಪಕ್ಷ ಸದಾ ಎಚ್ಚರಿಕೆಯಲ್ಲಿದ್ದರೆ ಆಡಳಿತ ಪಕ್ಷ ದಾರಿ ತಪ್ಪಲಾರದು ಅನ್ನುವ ಅಚಲ ನಂಬಿಕೆ ಅವರದ್ದು. ಇಂತಹ ನೂರಾರು ಉದಾಹರಣೆಗಳು ನಮ್ಮ ಮುಂದಿದ್ದರೂ ಅಧಿಕಾರ ನಡೆಸುತ್ತಿರುವ ಪಕ್ಷಗಳು ಹಠಕ್ಕೆ ಬಿದ್ದು ಜಿದ್ದು ಸಾಧಿಸುವುದು ಸರಿಯಾದ ಮಾರ್ಗವೆನಿಸಲಾರದು. ಅಧಿಕಾರದಲ್ಲಿರುವವರತ್ತ ಕೋಟ್ಯಾಂತರ ಕಣ್ಣಗಳು ತಮ್ಮ
ದೃಷ್ಠಿ ನೆಟ್ಟಿರುತ್ತವೆ. ಆಗ ವಿಮರ್ಶೆಗಳು ಸಹಜ. ಅಂತಹ ವಿಮರ್ಶೆಗಳಲ್ಲಿ ದೇಶದ ಹಿತವಿದ್ದಲ್ಲಿ ಸ್ವೀಕರಿಸುವ ಮನೋಭಾವ ಆಡಳಿತಾರೂಡ ಪಕ್ಷಗಳಿಗಿರ ಬೇಕಾಗುತ್ತದೆ.
ಇಲ್ಲಿ ಜನ ಸಾಮಾನ್ಯರಲ್ಲೂ ಇಂತಹ ಲೋಭಗಳಿಗೇನು ಕಡಿಮೆಯಿಲ್ಲ. ವ್ಯಕ್ತಿಯೊಬ್ಬ ತಾನು ಇಷ್ಟಪಡುವ ಪಕ್ಷ ಅಥವಾ ಆ ಪಕ್ಷದ ನಾಯಕ ಏನು ಮಾಡಿದರೂ ಸರಿ. ಇತರರು ಏನು ಮಾಡಿದರೂ ತಪ್ಪು ಅನ್ನುವಂತೆ ಬಿಂಬಿಸುತ್ತಾರೆ. ಇಲ್ಲಿ ಪಕ್ಷ ಅಥವಾ ವ್ಯಕ್ತಿಗಿಂತ ದೇಶ ದೊಡ್ಡದು ಅನ್ನುವ ಭಾವನೆ ಜನರಲ್ಲಿರಬೇಕು. ಯಾರೇ ತಪ್ಪು ಮಾಡಿದರೂ ಅದನ್ನು ಟೀಕಿಸುವ ಇಲ್ಲವೇ ಒಳಿತು ಮಾಡಿದಲ್ಲಿ ಅದನ್ನು ಪ್ರಶಂಶಿಸುವ ಮನಸ್ಥಿತಿ ರೂಪುಗೊಳ್ಳಬೇಕಿದೆ. ಆಗ ದೇಶದ ಅಭಿವೃದ್ಧಿ ಮತ್ತು ನಮ್ಮನ್ನಾಳುವ ಸರಕಾರಗಳು ಸಕಾರಾತ್ಮಕವಾಗಿ ನಡೆಯಲು ಸಾಧ್ಯ.
(ಲೇಖಕರು: ಹವ್ಯಾಸಿ ಬರಹಗಾರರು)