Vishweshwar Bhat Column: ಬೆಳಗಾವಿಗೆ ಹೋಗಿ ಕುಂದಾ ನೋಡಿ, ರುಚಿ ಸವಿಯದೇ ಬಂದಂತೆ !
ವಿಶಾಲವಾದ ನದಿಯೊಂದು ಇದ್ದಕ್ಕಿದ್ದಂತೆ ಜಲಪಾತವಾದರೆ ಹೇಗಿರುವುದೋ, ಹಾಗಿದೆ. ಅಷ್ಟು ಎತ್ತರದಿಂದ ನೀರು ಧುಮುಕಿದರೂ, ಸ್ವಲ್ಪವೂ ಸದ್ದೇ ಇಲ್ಲ. ಇದನ್ನು ಮೌನ ಜಲಪಾತ ಅಂತಾನೂ ಕರೆಯುತ್ತಾರೆ. ಆ ಫಾಲ್ಸ್‌ಗೆ ಹೋಗುವುದೇ ಒಂದು ವಿಶೇಷ ಅನುಭವ. ಆ ಮಾರ್ಗವೇ ಒಂದು ಪ್ರೇಕ್ಷಣೀಯ ಸ್ಥಳ. ಇದು ಕೇವಲ ಜಲಪಾತವಲ್ಲ.


ಇದೇ ಅಂತರಂಗ ಸುದ್ದಿ
vbhat@me.com
ಬ್ರಿಟನ್‌ನ ವೇಲ್ಸ್ ರಾಜಧಾನಿ ಕಾರ್ಡಿಫ್ ನಲ್ಲಿ ಓದುವಾಗ, ನಾನು ಶನಿವಾರ ಮತ್ತು ಭಾನುವಾರ ಹಾಗೂ ಇನ್ನಿತರ ರಜಾದಿನಗಳು ಬಂದರೆ, ಸುತ್ತಮುತ್ತಲಿನ ಪ್ರದೇಶಗಳನ್ನು ನೋಡಲು ಹೋಗುತ್ತಿದ್ದೆ. ಬ್ರಿಟನ್‌ನಲ್ಲಿ ಸ್ಕಾಟ್‌ಲ್ಯಾಂಡ್ ಬಹಳ ಸುಂದರ ಅಂತಾರೆ. ಸ್ಕಾಟ್ ಲ್ಯಾಂಡ್‌ಗೆ ತೀವ್ರ ಪೈಪೋಟಿ ನೀಡುವ ಇನ್ನೊಂದು ಪ್ರದೇಶವಿದ್ದರೆ ಅದು ವೇಲ್ಸ್.
ಅಲ್ಲಿನ ಹಳ್ಳಿಗಳನ್ನು ವರ್ಣಿಸುವುದು ಕಲ್ಪನೆಗಳ ಮೇಲೆ ಸವಾರಿ ಮಾಡಿದಂತೆ. ಕಾರ್ಡಿಫ್ ಗೆ ಹತ್ತಿರದಲ್ಲಿ ಬ್ರೆಕಾನ್ ಬೀಕನ್ಸ್ ನ್ಯಾಷನಲ್ ಪಾರ್ಕ್ಇದೆ. ಇದು ಪ್ರಕೃತಿಯ ವಿಸ್ಮಯಗಳನ್ನು ತನ್ನ ಒಡಲೊಳಗೆ ಹುದುಗಿಸಿಕೊಂಡಿರುವ ನಿಸರ್ಗದ ಒಂದು ಅದ್ಭುತ ವಿಸ್ಮಯ. ಆ ಪ್ರದೇಶದಲ್ಲಿ ಕನಿಷ್ಠ ನೂರಕ್ಕೂ ಹೆಚ್ಚು ಜಲಪಾತಗಳಿದ್ದಿರಬಹುದು. ಆ ಪ್ರದೇಶದಲ್ಲಿ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಯಾವುದಾದರೂ ದಿಕ್ಕಿನಲ್ಲಿ ಸುಮ್ಮನೆ ಕೆಮರಾ ಬಟನ್ ಅಮುಕಿದರೂ ಅದ್ಭುತ ಫೋಟೋ ಸೆರೆಯಾಗಿರುತ್ತದೆ. ಅಂಥ ಮನಮೋಹಕ ಪರಿಸರವದು.
ನಾನು ಅಂದು ಜಲಪಾತ ನೋಡಲು ಹೋಗಿದ್ದೆ. ಆ ಜಲಪಾತದ ಹಾದಿಯಲ್ಲಿ ಹತ್ತಾರು ಸಣ್ಣ-ಪುಟ್ಟ ಜಲಪಾತಗಳನ್ನು ಬಳಸಿ ಹೋಗಬೇಕಿತ್ತು. ಸಾಮಾನ್ಯವಾಗಿ ವೇಲ್ಸ್ ನ ಊರುಗಳ ಹೆಸರು ಗಳನ್ನು ಸುಲಭವಾಗಿ ಹೇಳಲು ಬರುವುದಿಲ್ಲ. ವೇಲ್ಸ್ ನ ಅಂಗ್ಲೇಸೇಯ್ ಎಂಬ ದ್ವೀಪದ ಸನಿಹ ಐವತ್ತೆಂಟು ಅಕ್ಷರಗಳ ಬಹಳ ಉದ್ದ ಹೆಸರಿನ ( Llanfairpwllgwyn gyllgogerychwyrndrobwllllan tysiliogogogoch ) ಊರಿದೆ. ಅದೊಂದೇ ಕಾರಣಕ್ಕೆ ಜನ ಜಗತ್ತಿನ ಎಲ್ಲಿಂದಲೋ ಆ ಊರಿಗೆ ಭೇಟಿ ನೀಡುತ್ತಾರೆ.
ಇದನ್ನೂ ಓದಿ: Vishweshwar Bhat Column: ವಿಮಾನದ ಬಾಗಿಲುಗಳ ಮಹತ್ವ
ಆ ಊರಿನ ಹೆಸರನ್ನು ಇಂಗ್ಲಿಷಿನಲ್ಲಿ ಅನುವಾದಿಸಿದರೆ, St. Mary's Church in the hollow of the white hazel near a rapid whirlpool and the Church of St. Tysilio of the red cave ಎಂದಾ ಗುತ್ತದೆ. ಇರಲಿ, ನಾವು ನೋಡಲು ಹೋದ ಆ ಜಲಪಾತದ ಹೆಸರನ್ನು ಹೇಳುವುದು ಕಷ್ಟ. ಕಾರಣ ಅದನ್ನು ಉಚ್ಚರಿಸಲು ಬರುತ್ತಿರಲಿಲ್ಲ. Ddwli Falls ಎಂದು ಬರೆದರೆ ಏನೆಂದು ಉಚ್ಚರಿಸುವುದು? ನಾನು ಯಾವ ಅಕ್ಷರಕ್ಕೂ ಅನ್ಯಾಯವಾಗಬಾರದೆಂದು ‘ಡಿಡಿವಿಲಿ ಫಾಲ್ಸ್’ ಎಂದು ಹೇಳುತ್ತಿದ್ದೆ. ಈ ಜಲಪಾತದ ಹೆಸರನ್ನು ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಹೇಳುತ್ತಿದ್ದರು. ಸ್ಥಳೀಯರು ಈ ಜಲಪಾತವನ್ನು ‘Sgwd Ddwli Isaf’ ಎಂದು ಬೇರೆ ಹೇಳುತ್ತಾರೆ.
ಈ ಜಲಪಾತದ ವೈಶಿಷ್ಟ್ಯ ಏನೆಂದರೆ ಇದು Waterfall Country ಎಂದೇ ಪ್ರಖ್ಯಾತಿ ಪಡೆದ ಪ್ರದೇಶದ ಒಂದು ಭಾಗ. ಇಲ್ಲಿ ಹಲವಾರು ಜಲಪಾತಗಳಿದ್ದು, ಪ್ರತಿಯೊಂದು ವಿಭಿನ್ನ ಶೈಲಿಯಲ್ಲಿ ಬಿದ್ದು, ಸುತ್ತಲಿನ ಪರಿಸರಕ್ಕೆ ವಿಶೇಷ ಸೌಂದರ್ಯವನ್ನು ನೀಡುತ್ತದೆ. ಆ ಜಲಪಾತವನ್ನು ಹೆಚ್ಚು ಹುದುಗಿ ರತ್ನ ( hidden gem) ಎಂದು ಸ್ಥಳೀಯರು ಹೇಳುತ್ತಿದ್ದರು.
ವಿಶಾಲವಾದ ನದಿಯೊಂದು ಇದ್ದಕ್ಕಿದ್ದಂತೆ ಜಲಪಾತವಾದರೆ ಹೇಗಿರುವುದೋ, ಹಾಗಿದೆ. ಅಷ್ಟು ಎತ್ತರದಿಂದ ನೀರು ಧುಮುಕಿದರೂ, ಸ್ವಲ್ಪವೂ ಸದ್ದೇ ಇಲ್ಲ. ಇದನ್ನು ಮೌನ ಜಲಪಾತ ಅಂತಾನೂ ಕರೆಯುತ್ತಾರೆ. ಆ ಫಾಲ್ಸ್‌ಗೆ ಹೋಗುವುದೇ ಒಂದು ವಿಶೇಷ ಅನುಭವ. ಆ ಮಾರ್ಗವೇ ಒಂದು ಪ್ರೇಕ್ಷಣೀಯ ಸ್ಥಳ. ಇದು ಕೇವಲ ಜಲಪಾತವಲ್ಲ.
ಅದು ಒಂದು ನಿಸರ್ಗದ ಇಂಪಾದ ನಾದ. ಅದು ನಿಮ್ಮ ಹೃದಯದ ನಿಶ್ಶಬ್ದದೊಂದಿಗೆ ಸಂಗತಿ ಯಾಗುವ ಒಂದು ಪಯಣ. ಎಂಟು ಕಿ.ಮೀ. ಉದ್ದದ ನದಿಯ ಉದ್ದಕ್ಕೂ ಇಪ್ಪತ್ತಕ್ಕೂ ಹೆಚ್ಚು ಕೊಳಗಳು ಇವೆ, ಇದನ್ನು ವಾಟರ್ ಫಾಲ್ ವುಡ್ಸ್ ಎಂದೂ ಕರೆಯಲಾಗುತ್ತದೆ.
ಅದೃಷ್ಟವಿದ್ದರೆ, ಉತ್ತಮ ಹವಾಮಾನದ ದಿನಗಳಲ್ಲಿ ನೀವು ಹತ್ತಾರು ಸಲ ಮಳೆಬಿಲ್ಲುಗಳನ್ನು ನೋಡಬಹುದು. ನಾನು ಈಗ ಆ ಜಲಪಾತದ ಬಗ್ಗೆ ಯಾಕೆ ಇಲ್ಲಿ ಪ್ರಸ್ತಾಪಿಸುತ್ತಿದ್ದೇನೆ ಎಂದು ನಿಮಗೆ ಅನಿಸಬಹುದು. ಕೆಲ ದಿನಗಳ ಹಿಂದೆ, ಪ್ರವಾಸ ಸಾಹಿತ್ಯಕ್ಕೆ ಹೆಸರಾದ ‘ಲೋನ್ಲಿ ಪ್ಲಾನೆಟ್’ ಒಂದು ಅಪರೂಪದ ಪುಸ್ತಕವನ್ನು ಪ್ರಕಟಿಸಿದ್ದು ಅದರ ಹೆಸರು- You Only Live Once: name of travel adventures for the explorer in all of us. ಈ ಕೃತಿಯಲ್ಲಿ ಒಂದು ಅಧ್ಯಾಯವಿದೆ. ಅದರ ಶೀರ್ಷಿಕೆ- Take a waterfall shower.
ಜೀವನದಲ್ಲಿ ಎಂದಾದರೂ ಜಲಪಾತ ಸ್ನಾನ ಮಾಡುವುದಿದ್ದರೆ ಈ ನಾಲ್ಕರ ಪೈಕಿ ಪೈಕಿ ಒಂದರದರೂ ಮಾಡಲೇಬೇಕು ಎಂದು ‘ಲೋನ್ಲಿ ಪ್ಲಾನೆಟ್’ ಆ ಪುಸ್ತಕದಲ್ಲಿ ಹೇಳಿದೆ. ಆ ನಾಲ್ಕು ಜಲಪಾತಗಳಲ್ಲಿ ‘ಡಿಡಿವಿಲಿ ಫಾಲ್ಸ್’ ಕೂಡ ಒಂದು! ಅದನ್ನು ಓದುತ್ತಿದ್ದಂತೆ ಮನಸ್ಸು ಇಪ್ಪತ್ತೇಳು ವರ್ಷಗಳ ಹಿಂದೆ ಹೋಗಿ ನಿಂತಿತು. ನಾನು ಆ ಜಲಪಾತದ ಸುಂದರ ತಪ್ಪಲಲ್ಲಿ ಒಂದು ಇಡೀ ದಿನ ಕಳೆದಿದ್ದೆ. ಆದರೆ ಸ್ನಾನ ಮಾಡಿರಲಿಲ್ಲ.
‘ಅಲ್ಲಿ ಹೋಗಿ ಸ್ನಾನ ಮಾಡದೇ ಬಂದರೆ ನಿರರ್ಥಕ’ ಎಂದು ಬರೆದಿದ್ದನ್ನು ಕಂಡು ಮನಸ್ಸಿಗೆ ಬಹಳ ಪಿಚ್ಚೆನಿಸಿತು. ಜಲಪಾತ ಸ್ನಾನಕ್ಕೆ ಜಗತ್ತಿನಲ್ಲಿಯೇ ಪ್ರಸಿದ್ಧವಾದ ಸ್ಥಳಕ್ಕೆ ಹೋಗಿ, ಹಾಗೆ ಬಂದೇನಲ್ಲ ಎಂದು ಖೇದವಾಯಿತು. ಬೆಳಗಾವಿಗೆ ಹೋಗಿ ಕುಂದಾ ನೋಡಿ, ರುಚಿ ಸವಿಯದೇ ಬಂದ ಹಾಗೆ. ಮತ್ತೊಮ್ಮೆ ಅಲ್ಲಿಗೆ ಹೋಗಲು ಒಂದು ನೆಪವೂ ಸಿಕ್ಕಿತು ಅನ್ನಿ.
ಪಾಪು ಹೇಳಿದ ಪ್ರಮಾದಗಳು
ಪಾಟೀಲ ಪುಟ್ಟಪ್ಪನವರು ಹೆಡ್‌ಲೈನ್‌ಗಳಲ್ಲಿ ಪದಗಳನ್ನು ಬೇಕಾಬಿಟ್ಟಿ ಕತ್ತರಿಸುವುದರಿಂದ ಆಗುವ ಆವಾಂತರಗಳ ಬಗ್ಗೆ ರಸವತ್ತಾಗಿ ಬಣ್ಣಿಸುತ್ತಿದ್ದರು. ವಿಜಯಲಕ್ಷ್ಮಿಬಾಯಿ ತೇರದಾಳ ಎಂಬುವವರು ನಿಧನರಾದಾಗ, ವಿಜಯಲಕ್ಷ್ಮಿ/ ಬಾಯಿ ತೆರದಾಳ/ ನಿಧನ ಎಂದು ಪ್ರಕಟವಾಗಿತ್ತು. ಉತ್ತರ ಕರ್ನಾಟಕದ ಭಾಗಗಳಲ್ಲಿ ‘ಬಾಯಿ ತೆರದಾಳ’ ಅಂದರೆ ನಿಧನಳಾದಳು ಎಂದೇ ಅರ್ಥ. ಹೀಗಾಗಿ ಹೆಸರನ್ನು ಬೇಕಾಬಿಟ್ಟಿ ಕತ್ತರಿಸಿದ್ದರಿಂದ ಅರ್ಥವ್ಯತ್ಯಾಸವಾಗಿ ಎಡವಟ್ಟಾಗಿತ್ತು.
ಪಂಡಿತ ಜವಾಹರಲಾಲ್ ನೆಹರು ಅವರ ಸಹೋದರಿ ವಿಜಯಲಕ್ಷ್ಮಿ ಪಂಡಿತ್ ಅಮೆರಿಕ ರಾಯಭಾರಿಯಾಗಿ ನೇಮಕವಾದರು. ಆರು ತಿಂಗಳಲ್ಲಿ ಅವರು ಅಮೆರಿಕವನ್ನು ಸುತ್ತಿ ಬಂದರು. ಅದನ್ನೇ ಕನ್ನಡದ ಪತ್ರಿಕೆಯೊಂದು ದೊಡ್ಡ ಸುದ್ದಿ ಮಾಡಿತು. ‘ಅಮೆರಿಕೆಯಲ್ಲಿ/ ವಿಜಯಲಕ್ಷ್ಮಿ ಯವರ/ ಸಂಚಾರ’ ಎಂಬ ಶೀರ್ಷಿಕೆ ‘ಅಮೆರಿಕೆಯಲ್ಲಿ/ ವಿಜಯಲಕ್ಷ್ಮಿಯ/ ವರ ಸಂಚಾರ’ ಎಂದು ಪ್ರಕಟವಾಗಿಬಿಟ್ಟಿತು. ‘ವಿಜಯಲಕ್ಷ್ಮಿಯವರ’ ಎಂಬ ಪದ ಮೊದಲ ಸಾಲಿನಲ್ಲಿ ಫಿಟ್ ಆಗದೇ ಇದ್ದುದು ಈ ಪ್ರಮಾದಕ್ಕೆ ಕಾರಣವಾಗಿತ್ತು.
ಇನ್ನೊಂದು ಪ್ರಸಂಗ. ಒಮ್ಮೆ ಕೇಂದ್ರದ ಕೃಷಿ ಮತ್ತು ಆಹಾರ ಸಚಿವ ಕನ್ಹಯ್ಯಾಲಾಲ್ ಮುನಸಿ ಯವರು ತಮ್ಮ ಪತ್ನಿಯೊಂದಿಗೆ ಸೂರತ್ ನಗರಕ್ಕೆ ಭೇಟಿ ನೀಡಿದ್ದರು. ಆ ಸಂದರ್ಭದಲ್ಲಿ ಅವರು ಸಮಾರಂಭದಲ್ಲಿ ಭಾಗವಹಿಸಿದ್ದರು. ಈ ಸುದ್ದಿ ಕನ್ನಡ ಪತ್ರಿಕೆಗಳಿಗೆ ಪಿಟಿಐ ಮತ್ತು ಯುಎನ್‌ಐ ಸಂಸ್ಥೆಗಳ ಮೂಲಕ ಬಂದಿತು. ಅದನ್ನು ಕನ್ನಡಕ್ಕೆ ಅನುವಾದಿಸಿ ಸುದ್ದಿಯಾಗಿ ತೆಗೆದುಕೊಳ್ಳ ಲಾಯಿತು. ಕನ್ನಡದ ಒಂದು ಪ್ರಮುಖ ಪತ್ರಿಕೆಯಲ್ಲಿ ಈ ಸುದ್ದಿ, ‘ಮುನಸಿ ದಂಪತಿಗಳ ಸುರತ ಸಮಾರಂಭ’ ಎಂದು ಪ್ರಕಟವಾಗಿತ್ತು. ಸೂರತ್ ಪದ ಸುರತ ಆಗಿ ಮುಜುಗರಕ್ಕೆ ಕಾರಣವಾಗಿತ್ತು.
ಮಹಾತ್ಮ ಗಾಂಧಿಯವರು ದಂಡಿ ಸತ್ಯಾಗ್ರಹಕ್ಕೆ ಸಿದ್ಧತೆ ಮಾಡುತ್ತಿದ್ದಾಗ ತಮ್ಮನ್ನು ಬಂಧಿಸ ಬಹುದು ಎಂಬ ಸಂದೇಹ ಅವರನ್ನು ಕಾಡಲಾರಂಭಿಸಿತು. ಒಂದು ವೇಳೆ ತಮ್ಮ ಬಂಧನವಾದರೆ ಜನ ಯಾವ ರೀತಿ ಪ್ರತಿಕ್ರಿಯಿಸಬೇಕು ಎಂಬುದನ್ನು ತಿಳಿಸುವುದಕ್ಕಾಗಿ ಅವರು ‘ಬಾಂಬೆ ಕ್ರಾನಿಕಲ್’ ಪತ್ರಿಕೆಗೆ ಒಂದು ಸಂದರ್ಶನ ನೀಡಿದರು. ಆಗ ಆ ಪತ್ರಿಕೆಯ ಸಂಪಾದಕರಾಗಿದ್ದ ಸೈಯದ್ ಅಬ್ದು ಬ್ರೆಲ್ವಿ ಅವರೇ ಖುದ್ದಾಗಿ ಗಾಂಧಿಯವರ ಸಂದರ್ಶನ ಮಾಡಿದರು.
ಆ ಸಂದರ್ಶನಕ್ಕೆ ಬ್ರೆಲ್ವಿಯವರೇ, Mahatma Gandhi's message to the masses ಎಂಬ ಶೀರ್ಷಿಕೆ ನೀಡಿದರು. ಆ ದಿನಗಳಲ್ಲಿ ಅಚ್ಚುಮೊಳೆಯಲ್ಲಿ ಅಕ್ಷರಗಳನ್ನು ಜೋಡಿಸುತ್ತಿದ್ದರು. masses ಎಂಬ ಪದದಲ್ಲಿ ‘ m ’ ಅಕ್ಷರ ಎಗರಿ ಹೋಗಿ, asses(ಕತ್ತೆ ಅಥವಾ ಅಂಡು) ಎಂದಾಗಿ ಬಿಟ್ಟಿತು. ಇದನ್ನು ಖುದ್ದು ಗಾಂಧಿಯವರೇ ನೋಡಿ ಖೇದ ವ್ಯಕ್ತಪಡಿಸಿದರು.
ಉತ್ತಮ ಫೀಲ್ಡರ್ ಕೂಡ!

ಕೆಲವು ದಿನಗಳ ಹಿಂದೆ, ‘ದಿ ಹಿಂದು’ ಪತ್ರಿಕೆಯಲ್ಲಿ ಖ್ಯಾತ ಕ್ರಿಕೆಟ್ ಬರಹಗಾರ ಸುರೇಶ ಮೆನನ್, ‘ಭಾರತದ ಕ್ರಿಕೆಟ್‌ನಲ್ಲಿ ಫೀಲ್ಡಿಂಗ್ ಮಹತ್ವವನ್ನು ಎತ್ತಿ ತೋರಿದ ಟೈಗರ್ ಪಟೌಡಿ’ ಎಂಬ ಅಂಕಣ ಬರೆದಿದ್ದರು. ಪಟೌಡಿ ಒಬ್ಬ ಶ್ರೇಷ್ಠ ಬ್ಯಾಟ್ಸಮನ್ ಎಂಬ ಸಂಗತಿ ಎಲ್ಲರಿಗೂ ಗೊತ್ತು. ಆದರೆ ಅವರೊಬ್ಬ ಅದ್ಭುತ ಫೀಲ್ಡರ್ ಆಗಿದ್ದರು ಮತ್ತು ಫೀಲ್ಡಿಂಗ್ ಮಹತ್ವವನ್ನು ಭಾರತ ತಂಡಕ್ಕೆ ಮನಗಾಣಿಸಿದ ನಾಯಕರಾಗಿದ್ದರು ಎಂಬುದು ಗೊತ್ತಿರಲಿಕ್ಕಿಲ್ಲ.
ಭಾರತ ತಂಡದಲ್ಲಿ ವಿನೂ ಮಂಕಡ್ ಅದ್ಭುತ ಫೀಲ್ಡರ್ ಆಗಿ ಹೊರಹೊಮ್ಮಿದ್ದರು. ಹೇಮು ಅಧಿಕಾರಿ ಕವರ್ ಪಾಯಿಂಟಿನಲ್ಲಿ ಅದ್ಭುತ ಆಟಗಾರನಾಗಿ ಗಮನ ಸೆಳೆದಿದ್ದರು. ಆದರೆ ಟೈಗರ್ ಪಟೌಡಿ ಬಂದ ನಂತರ ಫೀಲ್ಡಿಂಗ್ ಚಿತ್ರಣವೇ ಬದಲಾಯಿತು. ಫೀಲ್ಡಿಂಗ್‌ಗೆ ಸಂಬಂಧಿಸಿದಂತೆ, ಇಂದಿನ ದಿನಗಳ ಆಟಗಾರರು ಮಾಡುವುದನ್ನು ಪಟೌಡಿ ಅರವತ್ತರ ದಶಕದಲ್ಲೇ ಮಾಡಿದ್ದರಂತೆ.
ದಕ್ಷಿಣ ಆಫ್ರಿಕಾದಲ್ಲಿ ಪಂದ್ಯ ನಡೆದಾಗ ಅಲ್ಲಿನ ಅದ್ಭುತ ಕವರ್ ಫೀಲ್ಡರ್ ಎಂದು ಖ್ಯಾತರಾಗಿರುವ ಕೊಲಿನ್ ಬ್ಲಾಂಡ್, ಸುರೇಶ ಮೆನನ್ ಅವರಿಗೆ ಹೇಳಿದ್ದರಂತೆ- ಜಾಂಟಿ ರೋಡ್ಸ್ ಗಿಂತ ಪಟೌಡಿ ಅದ್ಭುತವಾದ ಫೀಲ್ಡರ್ ಆಗಿದ್ದರು ಮತ್ತು ಅವರ ನಿರೀಕ್ಷಣಾ ಸಾಮರ್ಥ್ಯ ವಿಶೇಷವಾಗಿತ್ತು.
‘ನಾನು ನನ್ನ ಫೀಲ್ಡಿಂಗಿನ ದುರಭಿಮಾನಿಯಾಗಿದ್ದೆ’ ಎಂದು ಪಟೌಡಿ ಒಂದೆಡೆ ಬರೆದುಕೊಂಡಿದ್ದ ರಂತೆ. ಇಂಗ್ಲೆಂಡಿನಲ್ಲಿ ಆಡುವಾಗ ಪಟೌಡಿ ಅವರು ತಮ್ಮ ಟೀಮ್ ಸದಸ್ಯರೊಂದಿಗೆ ಮಾತನಾಡು ತ್ತಾ, ‘ನಾವು ಪೆವಿಲಿಯನ್‌ನಿಂದ ಹೊರಹೋಗಬೇಕಾದರೆ ವಿಶೇಷವಾದದ್ದನ್ನು ಸಾಧಿಸಿರಬೇಕು. ನಮ್ಮ ಮೊಣಕಾಲು ಮೈದಾನದ ಧೂಳಿನಿಂದ ಕೊಳಕಾಗಿರಬೇಕು, ಅಂಥದ್ದೊಂದು ತಂಡ ನನ್ನ ಜತೆಗಿರಬೇಕು’ ಎಂದು ಹೇಳಿದ್ದರಂತೆ.
ಪಟೌಡಿ ಈ ಮಾತನ್ನು ಆಗಾಗ ಹೇಳುತ್ತಿದ್ದರಂತೆ. ಪೆವಿಲಿಯನ್‌ಗೆ ಮರಳುವಾಗ ಆಟಗಾರನೊಬ್ಬನ ಡ್ರೆಸ್ ನೀಟಾಗಿದ್ದನ್ನು ನೋಡಿದ ಪಟೌಡಿ, ‘ಏನು, ನೀವು ಪಾರ್ಟಿಗೆ ಹೋಗುತ್ತಿದ್ದೀರಾ ಅಥವಾ ಆಡಲು ಹೋಗುತ್ತಿದ್ದೀರಾ?’ ಎಂದು ತೀಕ್ಷ್ಣವಾಗಿ ಹೇಳಿದ್ದರಂತೆ. ಪಟೌಡಿ ಗರಡಿಯಲ್ಲಿ ಪಳಗಿದವರೇ ಆದ ಅಜಿತ್ ವಾಡೇಕರ್, ಏಕನಾಥ ಸೋಲ್ಕರ್, ಆಬಿದ್ ಆಲಿ, ವೆಂಕಟರಾಘವನ್, ಸುನಿಲ್ ಗಾವಸ್ಕರ್ ಫೀಲ್ಡರ್ ಆಗಿಯೂ ಗಮನ ಸೆಳೆದವರು.
ಬೌಂಡರಿ ಹತ್ತಿರವಿದ್ದ ಆಟಗಾರರು ನೆಲಕ್ಕೆ ಬಿದ್ದು ಚೆಂಡನ್ನು ತಡೆಯದಿದ್ದಾಗ, ಆಟಗಾರನ ಹತ್ತಿರ ಓಡಿ ಬರುತ್ತಿದ್ದ ಪಟೌಡಿ, ‘ಚೆಂಡು ಯಾವತ್ತೂ ನಮ್ಮ ಕೈಗೆ ಬಂದು ಬೀಳುವುದಿಲ್ಲ. ನಾವು ಅದರ ಬೆನ್ನಟ್ಟಿ ಹಿಡಿಯಬೇಕಾಗುತ್ತದೆ. ಬಿದ್ದು ಹಿಡಿಯಬೇಕಾಗುತ್ತದೆ’ ಎಂದು ಹೇಳುತ್ತಿದ್ದರಂತೆ. ಫೀಲ್ಡಿಂಗ್ ಬಗ್ಗೆ ಪಟೌಡಿ ಅವರ ಧೋರಣೆಯಿಂದಾಗಿ ಆಟದ ಫಲಿತಾಂಶದಲ್ಲಿ ಗಣನೀಯ ಬದಲಾವಣೆ ಕಾಣಲಾರಂಭಿಸಿತು. ಫೀಲ್ಡಿಂಗ್ ಕೂಡ ಆಟದ ಗತಿಯನ್ನು ಬದಲಿಸಬಲ್ಲುದು ಎಂಬುದನ್ನು ಪಟೌಡಿ ಪದೇ ಪದೆ ತೋರಿಸಿಕೊಟ್ಟರು. ಅದಾದ ಬಳಿಕ ತಂಡದ ಆಟಗಾರರನ್ನು ಆಯ್ಕೆ ಮಾಡುವಾಗ, ಉತ್ತಮ ಫೀಲ್ಡರ್ ಗುಣವೂ ಮಾನದಂಡವಾಯಿತು.
ಜಗತ್ತಿನ ಅತ್ಯುತ್ತಮ ಫೀಲ್ಡರ್ ಎಂದೇ ಹೆಸರುವಾಸಿಯಾದ ಜಾಂಟಿ ರೋಡ್ಸ್ ಕೂಡ ಪಟೌಡಿ ಬಗ್ಗೆ ಪ್ರಶಂಸೆಯ ಮಾತುಗಳನ್ನಾಡಿದ್ದಾರೆ. ‘ಪಟೌಡಿ ಒಬ್ಬ ಅದ್ಭುತ ಫೀಲ್ಡರ್ ಕೂಡ ಆಗಿದ್ದರು ಎಂದು ಕೇಳಿದ್ದೇನೆ. ಅವರಿಂದ ಪ್ರೇರಣೆ ಪಡೆದಿದ್ದೇನೆ’ ಎಂದು ಹೇಳಿದ್ದನ್ನು ಮರೆಯುವಂತೆಯೇ ಇಲ್ಲ. (ಇಲ್ಲಿ ನನಗೆ ಜಾಂಟಿ ರೋಡ್ಸ್ ಅವರ I got more bruises, grass burns and cuts in practice than in match play ಎಂಬ ಮಾತು ನೆನಪಾಗುತ್ತಿದೆ. ಒಮ್ಮೆ ಯಾರೋ ರೋಡ್ಸ್ ಗೆ ಕೇಳಿದರಂತೆ- ‘ಆ ಕ್ಯಾಚನ್ನು ನೀವು ಹೇಗೆ ಹಿಡಿದಿರಿ?’ ಅದಕ್ಕೆ ರೋಡ್ಸ್- ‘ಪ್ರಾಕ್ಟೀಸ್ ಸೆಷನ್‌ನಲ್ಲಿ ನಾನು ಪ್ರತಿದಿನ ಅಂಥ ಇಪ್ಪತ್ತು ಕ್ಯಾಚ್ ಹಿಡಿದಿರುತ್ತೇನೆ’ ಎಂದು ಹೇಳಿದ್ದನ್ನು ಮರೆಯುವಂತೆಯೇ ಇಲ್ಲ).
ಅಮ್ಮಾವ್ರ ಗಂಡನಾಗುವುದು
ಜಗತ್ತಿನಲ್ಲಿ ಅತ್ಯಂತ ಆಕರ್ಷಕ, ಆದರೆ ಯಮಯಾತನೆಯ ಹುದ್ದೆ ಅಂದ್ರೆ ಇಂಗ್ಲೆಂಡಿನ ಎಲಿಜಬೆತ್ ರಾಣಿಯ ಗಂಡನಾಗುವುದಂತೆ. ಈ ಜವಾಬ್ದಾರಿಯನ್ನು ರಾಣಿಯ ಗಂಡ ಪ್ರಿ ಫಿಲಿಪ್ ಸುಮಾರು ಎಪ್ಪತ್ತು ವರ್ಷಗಳ ಕಾಲ ನಿಭಾಯಿಸಿದ ಅಂದ್ರೆ ಅವರ ಗುಣವನ್ನು ಮೆಚ್ಚಲೇಬೇಕು. ಪ್ರಿ ಫಿಲಿಪ್ ಜೀವನದುದ್ದಕ್ಕೂ ರಾಣಿಯ ಗಂಡನಂತೆ ವರ್ತಿಸಿದನೇ ಶಿವಾಯ, ಎಂದೂ ರಾಜ ಎಂದು ಅನಿಸಿಕೊಳ್ಳಲೇ ಇಲ್ಲ.
ಆ ಹುದ್ದೆಯೇ ಅಂಥದ್ದು. ಅಮ್ಮಾವ್ರ ಗಂಡನಾಗಿರಬೇಕು. ಅರಮನೆಯಲ್ಲಿರಲಿ, ಸರಕಾರದಲ್ಲಿರಲಿ ಅಥವಾ ಇನ್ನೆಲ್ಲಿಯೇ ಇರಲಿ ಪ್ರಥಮ ಪ್ರಾಶಸ್ತ್ಯ ರಾಣಿಗೇ. ರಾಜನಾದವನು ರಾಣಿಯನ್ನು ಹಿಂಬಾಲಿಸಬೇಕಷ್ಟೆ. ಇದಕ್ಕೆ ಅತ್ಯಂತ ವಿಶಾಲ ಹೃದಯಬೇಕು. ಅಮ್ಮಾವ್ರ ಗಂಡನಾಗುವುದು ಸಣ್ಣ ಕೆಲಸವಲ್ಲ.
ಗಂಡನಾದರೂ ಪ್ರತಿ ನಿತ್ಯ ಹೆಂಡತಿಯ ನಂತರದ ಸ್ಥಾನಕ್ಕೆ ತೃಪ್ತನಾಗುವುದು ಸುಲಭದ ವಿಷಯವಲ್ಲ. ವಿದೇಶಿ ಗಣ್ಯರು ಬರಲಿ, ರಾಯಲ್ ಸಮಾರಂಭವಿರಲಿ, ವಿದೇಶಿ ಗಣ್ಯರ ಜತೆಗೆ ಭೋಜನಕೂಟವಿರಲಿ, ಎಡೆಯೂ ರಾಣಿಗೆ ಅಗ್ರತಾಂಬೂಲ. ಕೆಲವು ಸಲ ಪ್ರಿ ಫಿಲಿಪ್ ಅವರ ಹೆಸರನ್ನು ಹೇಳಲು ಮರೆತುಬಿಡುತ್ತಿದ್ದರು ಅಥವಾ ಇನ್ಯಾರೋ ನೆನಪಿಸಿದ ಬಳಿಕ ಅವರ ಹೆಸರನ್ನು ಹೇಳುತ್ತಿದ್ದರು. ಇಂಥ ಅನೇಕ ಪ್ರಸಂಗಗಳಾಗಿವೆ. ಆದರೆ ಪ್ರಿ ಫಿಲಿಪ್ ಬೇಸರಿಸಿಕೊಳ್ಳುತ್ತಿರಲಿಲ್ಲ.
ಒಂದು ಸಂದರ್ಭದಲ್ಲಿ ತಮ್ಮ ಹೆಸರನ್ನು ಯಾರೂ ಹೇಳದಿದ್ದಾಗ, ತಾವೇ ಎದ್ದು ನಿಂತು, ತಾನೂ ಉಪಸ್ಥಿತನಿದ್ದೇನೆ ಎಂದು ಕೈಯೆತ್ತಿ ಜ್ಞಾಪಿಸಿದ್ದರು. ಕಾರ್ಯಕ್ರಮಗಳಲ್ಲಿ ರಾಣಿ ಹೆಸರನ್ನು ಹತ್ತು ಸಲ ಹೇಳಿ, ತಮ್ಮ ಹೆಸರನ್ನು ಹೇಳಲು ಮರೆತಾಗ, ಶಿಷ್ಟಾಚಾರ ಉಲ್ಲಂಘನೆಯಾದಾಗ, ಅವರು ಅದನ್ನು ಗಂಭೀರವಾಗಿ ಪರಿಗಣಿಸುತ್ತಿರಲಿಲ್ಲ. ‘ಇವೆಲ್ಲಾ ನನಗೆ ರೂಢಿಯಾಗಿದೆ’ ಎಂದು ನಗುತ್ತಲೇ ಹೇಳಿ, ವಾತಾವರಣ ತಿಳಿಗೊಳಿಸುತ್ತಿದ್ದರು.
ರಾಣಿಯ ಗಂಡನಾಗಿ ಎಪ್ಪತ್ತು ವರ್ಷಗಳ ಕಾಲ ಅವರು ಇಂಥ ಅವೆಷ್ಟೋ ‘ಅಪಮಾನ’ಗಳನ್ನು ಅನುಭವಿಸಿದ್ದರೋ, ಅವರಿಗೊಂದೇ ಗೊತ್ತಿರಲು ಸಾಧ್ಯ. ಆದರೆ ಅವರೆಂದೂ ತಮ್ಮ ಅಸಮಾಧಾನ ವನ್ನು ಸಾರ್ವಜನಿಕವಾಗಿ ತೋರಿಸಿಕೊಳ್ಳಲಿಲ್ಲ. ಒಮ್ಮೆ ರಾಣಿ ನ್ಯೂಜಿಲ್ಯಾಂಡಿಗೆ ಹೋಗಿದ್ದಾಗ, ಅಂತಾರಾಷ್ಟ್ರೀಯ ಚಾರಿಟಿ ಸಂಸ್ಥೆಯೊಂದು ಏರ್ಪಡಿಸಿದ ಕಾರ್ಯಕ್ರಮದಲ್ಲಿ, ಪ್ರಿ ಫಿಲಿಪ್ ಅವರನ್ನು ವೇದಿಕೆಗೆ ಕರೆಯಲೇ ಇಲ್ಲ. ತಮ್ಮನ್ನು ಮೇಲೆ ಕರೆಯಬಹುದು ಎಂದು ಪ್ರಿ ನಿರೀಕ್ಷಿಸಿದ್ದರು.
ಆದರೆ ಕೊನೆ ತನಕವೂ ಅವರಿಗೆ ಆಹ್ವಾನವೇ ಬರಲಿಲ್ಲ. ವೇದಿಕೆ ಮೇಲೆ ದೇಶದ ಪ್ರಧಾನಿ ಸೇರಿದಂತೆ ಗಣ್ಯಮಾನ್ಯ ವ್ಯಕ್ತಿಗಳಿದ್ದರು. ಕಾರ್ಯಕ್ರಮದ ಕೊನೆಯಲ್ಲಿ ಅದೊಂದು ಲೋಪವೆಂಬುದು ಗೊತ್ತಾಯಿತು. ಕಾರ್ಯಕ್ರಮ ಸಂಘಟಕರು ಅದಕ್ಕೆ ಕ್ಷಮೆಯಾಚಿಸಿದರು. ಆ ಸಭೆಯ ಮೊದಲ ಸಾಲಿನಲ್ಲಿ ತಾವು ಕುಳಿತಲ್ಲಿಂದಲೇ ಎದ್ದು ನಿಂತ ಪ್ರಿ ಫಿಲಿಪ್, ‘ನೀವು ವೇದಿಕೆಗೆ ನನ್ನನ್ನು ಕರೆಯ ಲಿಲ್ಲ. ನಾನು ಅದನ್ನು ಅವಮಾನ ಎಂದು ಭಾವಿಸಿರಲಿಲ್ಲ. ಆದರೆ ವೇದಿಕೆಗೆ ಕರೆಯದೇ ಇದ್ದುದು ಲೋಪವಾಯಿತೆಂದು ನನಗಾದ ಗಾಯದ ಮೇಲೆ ಉಪ್ಪು ಸವರಿ ನನಗೆ ಅಪಮಾನ ಮಾಡಿದಿರಿ’ ಎಂದು ಬಹಿರಂಗವಾಗಿ ನಗುನಗುತ್ತಲೇ ಹೇಳಿದರು.
ಒಮ್ಮೆ ರಾಣಿ, ಫಿಲಿಪ್ ಜತೆಗೆ ಆಸ್ಟ್ರೇಲಿಯಾಕ್ಕೆ ಹೋಗಿದ್ದಳು. ಅಲ್ಲಿನ ಪ್ರತಿಷ್ಠಿತ ವಿಶ್ವವಿದ್ಯಾಲಯ ವೊಂದು ರಾಣಿಗಾಗಿ ಔತಣಕೂಟವೊಂದನ್ನು ಏರ್ಪಡಿಸಿತ್ತು. ಆ ಕಾರ್ಯಕ್ರಮದಲ್ಲಿ ಭಾಗವಹಿಸಿ ದ್ದವರನ್ನು ರಾಣಿ ಮತ್ತು ಅವಳ ಪತಿಗೆ ಪರಿಚಯ ಮಾಡಿಕೊಡುತ್ತಿದ್ದರು. ಪ್ರಿ ಫಿಲಿಪ್‌ಗೆ ಒಬ್ಬನನ್ನು ಪರಿಚಯಿಸಿದಾಗ, ‘ಹಿಸ್ ಹೈನೆಸ್, ನಾನು ಅಂಥ ದೊಡ್ಡ ವ್ಯಕ್ತಿಯೇನಲ್ಲ, ನಾನು ನನ್ನ ಪತ್ನಿಯ ಜತೆಗೆ ಬಂದಿದ್ದೇನೆ. ನನ್ನ ಪತ್ನಿ ದೊಡ್ಡ ಸಾಧನೆ ಮಾಡಿದ್ದಾಳೆ. ದಂಪತಿಗಳನ್ನು ಆಹ್ವಾನಿಸಿದ್ದರಿಂದ ಅವಳ ಜತೆಗೆ ನಾನೂ ಬಂದಿದ್ದೇನೆ’ ಎಂದು ಅತ್ಯಂತ ಮುಜುಗರದಿಂದ ಹೇಳಿದ.
ಆತನ ಭುಜದ ಮೇಲೆ ಕೈಹಾಕಿದ ಪ್ರಿ ಫಿಲಿಪ್, ‘ಅಷ್ಟಕ್ಕೇ ಬೇಸರಿಸಿಕೊಳ್ಳಬೇಕಿಲ್ಲ. ನಾನು ಮತ್ತು ನೀವು ಒಂದೇ ದೋಣಿಯ ಪಯಣಿಗರು. ನಿಮ್ಮ ಸ್ಥಿತಿ ಹೇಗಿದೆಯೋ, ನನ್ನದೂ ಹಾಗೇ ಇದೆ. ನಾನೂ ನನ್ನ ಪತ್ನಿಯ ಜತೆಗೆ ಬಂದಿದ್ದೇನೆ’ ಎಂದು ಹೇಳಿ ಸಂತೈಸಿದ್ದರು.
ಪ್ರಿ ಫಿಲಿಪ್‌ಗೆ ಅದು ಹೊಸತೇನೂ ಆಗಿರಲಿಲ್ಲ. ಹಾಗೆಂದು ಅದಕ್ಕಾಗಿ ಅವರು ಬೇಸರಿಸಿ ಕೊಳ್ಳುತ್ತಿರಲಿಲ್ಲ. ಒಳಗಿನಿಂದ ಅತೀವ ಹಿಂಸೆಯಾಗುತ್ತಿದ್ದರೂ ತೋರಗೊಡುತ್ತಿರಲಿಲ್ಲ. ತಾನು ಇರಬೇಕಾದುದೇ ಹಾಗೆ ಎಂಬುದು ಅವರಿಗೆ ಗೊತ್ತಿತ್ತು. ಅಮ್ಮಾವ್ರ ಗಂಡನಾಗಿರುವುದೇ ತಮ್ಮ ರೋಲು ಎಂಬುದನ್ನು ಅವರು ಸ್ವೀಕರಿಸಿದ್ದರು.
ಎಂಥ ಗಂಡನಿಗೂ ಹೆಂಡತಿ ಮುಂದೆ ಹಾಗಿರುವುದು ಕಷ್ಟವೇ. ಆದರೆ ಪ್ರಿ ಫಿಲಿಪ್ ‘ಪಾಲಿಗೆ ಬಂದಿದ್ದು ಪಂಚಾಮೃತ’ ಎಂದು ಪರಿಗಣಿಸಿದ್ದರು. ಅವರ ಮನಸ್ಸಿನಲ್ಲಿ ಒಂದು ಕ್ಷಣ ಕೀಳರಿಮೆ ಬಾಧಿಸಿದ್ದರೆ ಅವರಿಗೆ ತಮ್ಮ ಪಾತ್ರವನ್ನು ನಿಭಾಯಿಸಲು ಸಾಧ್ಯವಾಗುತ್ತಿರಲಿಲ್ಲ. ಈ ದೃಷ್ಟಿಯಿಂದ ನೋಡಿದರೆ, ಪ್ರಿ ಫಿಲಿಪ್ ಅದೆಷ್ಟು ದೊಡ್ಡ ವ್ಯಕ್ತಿಯಾಗಿದ್ದರು ಎಂಬುದು ಗೊತ್ತಾಗುತ್ತದೆ.
ಬೆಡ್‌ರೂಮ್ ವಾಸನೆ
ನಾನು ಎಲ್ಲೋ ಓದಿದ್ದು. ಮದುವೆಯಾದ ನಂತರ, ಬೆಡ್‌ರೂಮಿನಲ್ಲಿ ವಾಸನೆ ಹೇಗಿರುತ್ತದೆ? ಮೊದಲ ಮೂರು ವರ್ಷಗಳಲ್ಲಿ... ಅತ್ತರು (ಪರ್ಫ್ಯೂಮ್), ಹೂವು, ಚಾಕೊಲೇಟ್, ಹಣ್ಣಿನ ವಾಸನೆ ಯಿರುತ್ತದೆ. ಐದು ವರ್ಷಗಳ ನಂತರ... ಬೇಬಿ ಪೌಡರ್, ಜಾನ್ಸನ್ ಕ್ರೀಮ, ಲೋಷನ್, ಬೇಬಿ ಆಯಿಲ್ ವಾಸನೆಯಿರುತ್ತದೆ. ಮೂವತ್ತು ವರ್ಷಗಳ ನಂತರ... ಟೈಗರ್ ಬಾಮ್, ಅಮೃತಾಂಜನ, ವಿಕ್ಸ್ ವಾಸನೆ ಸೂಸುತ್ತಿರುತ್ತದೆ. ಐವತ್ತು ವರ್ಷಗಳ ನಂತರ... ಬರೀ ಅಗರಬತ್ತಿ ವಾಸನೆ!