Soldier Dies: ಗಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗಲೇ ಹೃದಯಾಘಾತದಿಂದ ಚಿಕ್ಕಬಳ್ಳಾಪುರದ ಯೋಧ ಸಾವು
Chikkaballapur News: ಇಂಡೋ-ಟಿಬೇಟಿಯನ್ ಬಾರ್ಡರ್ ಪೊಲೀಸ್ ಪಡೆಯಲ್ಲಿ ಹವಾಲ್ದಾರ್ ಆಗಿ ಸೇವೆ ಸಲ್ಲಿಸುತ್ತಿದ್ದ ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲೂಕಿನ ತೊಂಡೇಬಾವಿ ಗ್ರಾಮದ ಯೋಧ ಗಂಗಾಧರಪ್ಪ ಅವರು, ಗ್ಯಾಂಗ್ಟಕ್‌ನಲ್ಲಿ ಕರ್ತವ್ಯ ನಿರ್ವಹಿಸುವ ವೇಳೆ ಹೃದಯಾಘಾತದಿಂದ ಶನಿವಾರ ಕೊನೆಯುಸಿರೆಳೆದಿದ್ದಾರೆ.


ಚಿಕ್ಕಬಳ್ಳಾಪುರ: ದೇಶದ ಗಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗಲೇ ಹಠಾತ್ ಹೃದಯಾಘಾತದಿಂದ ಜಿಲ್ಲೆಯ ಯೋಧರೊಬ್ಬರು ಕೊನೆಯುಸಿರೆಳೆದಿರುವ ಘಟನೆ (Soldier Dies) ಶನಿವಾರ ನಡೆದಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ತೊಂಡೇಬಾವಿ ಗ್ರಾಮದ ಯೋಧ ಗಂಗಾಧರಪ್ಪ (54) ಮೃತರು. ಮೂರು ದಶಕಗಳಿಂದ ದೇಶ ಸೇವೆಯಲ್ಲಿ ತೊಡಗಿದ್ದ ಇವರು ಹೃದಯಾಘಾತದಿಂದ ಮೃತಪಟ್ಟಿದ್ದು,ಇದರಿಂದ ಕುಟುಂಬಸ್ಥರು ಮತ್ತು ಸ್ನೇಹಿತರು ಆಘಾತಕ್ಕೊಳಗಾಗಿದ್ದಾರೆ.
ಇಂಡೋ-ಟಿಬೇಟಿಯನ್ ಬಾರ್ಡರ್ ಪೊಲೀಸ್ (ಐಟಿಬಿಪಿ) ಪಡೆಯಲ್ಲಿ ಹವಾಲ್ದಾರ್ ಆಗಿ ಸೇವೆ ಸಲ್ಲಿಸುತ್ತಿದ್ದ ಗಂಗಾಧರಪ್ಪ ಅವರು, ಗ್ಯಾಂಗ್ಟಕ್‌ನಲ್ಲಿ ಕರ್ತವ್ಯ ನಿರ್ವಹಿಸುವ ವೇಳೆ ಶನಿವಾರ ಮುಂಜಾನೆ ಕೊನೆಯುಸಿರೆಳೆದಿದ್ದಾರೆ. ಇವರ ನಿಧನದ ಸುದ್ದಿ ಕೇಳಿ ಕುಟುಂಬ ಮತ್ತು ಗ್ರಾಮಸ್ಥರು ಕೂಡ ಆಘಾತಕ್ಕೊಳಗಾಗಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ತೊಂಡೇಭಾವಿ ಗ್ರಾಮದಲ್ಲಿ ಶೋಕದ ವಾತಾವರಣ ಸೃಷ್ಟಿಯಾಗಿದೆ. ಇಂದು (ಜು.6) ಗಂಗಾಧರಪ್ಪನವರ ಪಾರ್ಥಿವ ಶರೀರವನ್ನು ಕೆಐಎ ಬೆಂಗಳೂರು ವಿಮಾನ ನಿಲ್ದಾಣಕ್ಕೆ ತಂದು, ಅಲ್ಲಿಂದ ತೊಂಡೇಬಾವಿಗೆ ತೆಗೆದುಕೊಂಡು ಹೋಗಲಾಗುತ್ತದೆ. ಸ್ವಗ್ರಾಮದಲ್ಲಿ ಅವರ ಅಂತ್ಯಕ್ರಿಯೆ ನಡೆಯಲಿದೆ.
ಗಂಗಾಧರಪ್ಪ ಅವರು ತಮ್ಮ ಬಾಲ್ಯದಿಂದಲೇ ದೇಶ ಸೇವೆಯ ಕನಸನ್ನು ಕಂಡವರು. ಇಂಡೋ-ಟಿಬೇಟಿಯನ್ ಬಾರ್ಡರ್ ಪೊಲೀಸ್ ಪಡೆಗೆ ಸೇರಿಕೊಂಡ ಬಳಿಕ, ಮೂರು ದಶಕಗಳಿಗೂ ಹೆಚ್ಚು ಕಾಲ ಭಾರತದ ಗಡಿಗಳ ರಕ್ಷಣೆಯಲ್ಲಿ ತಮ್ಮ ಜೀವನವನ್ನು ಅರ್ಪಿಸಿದರು. ಗ್ಯಾಂಗ್ಟಕ್‌ನಂತಹ ಕಠಿಣ ಭೌಗೋಳಿಕ ಮತ್ತು ಹವಾಮಾನ ಪರಿಸ್ಥಿತಿಗಳಿರುವ ಗಡಿ ಪ್ರದೇಶದಲ್ಲಿ ಕರ್ತವ್ಯ ನಿರ್ವಹಿಸುವುದು ಸಾಮಾನ್ಯ ಸೈನಿಕನಿಗೆ ಸವಾಲಿನ ಕೆಲಸ. ಆದರೆ, ಗಂಗಾಧರಪ್ಪ ಅವರು ಈ ಸವಾಲನ್ನು ಧೈರ್ಯದಿಂದ ಎದುರಿಸಿ, ದೇಶದ ಭದ್ರತೆಗಾಗಿ ತಮ್ಮನ್ನು ತಾವು ಸಮರ್ಪಿಸಿಕೊಂಡಿದ್ದರು. ಐಟಿಬಿಪಿ ಪಡೆಯಲ್ಲಿ ಹವಾಲ್ದಾರ್ ಆಗಿ ಸೇವೆ ಸಲ್ಲಿಸುತ್ತಿದ್ದ ಗಂಗಾಧರಪ್ಪ, ತಮ್ಮ ಕರ್ತವ್ಯದಲ್ಲಿ ಯಾವಾಗಲೂ ಚುರುಕಾಗಿರುತ್ತಿದ್ದರು.