Neeraj Chopra Classic 2025: ಬೆಂಗಳೂರಿನಲ್ಲಿ ಚಿನ್ನದ ಪದಕ ಗೆದ್ದ ನೀರಜ್ ಚೋಪ್ರಾ!
ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಶನಿವಾರ ನಡೆದಿದ್ದ 2025ರ ನೀರಜ್ ಚೋಪ್ರಾ ಕ್ಲಾಸಿಕ್ ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ಭಾರತದ ಸ್ಟಾರ್ ಜಾವೆಲಿನ್ ತಾರೆ ಹಾಗೂ ಒಲಿಂಪಿಕ್ಸ್ ಪದಕ ವಿಜೇತ ನೀರಜ್ ಚೋಪ್ರಾ ಚಿನ್ನದ ಪದಕವನ್ನು ಗೆದ್ದುಕೊಂಡಿದ್ದಾರೆ. ಬೆಂಗಳೂರಿನ ಅತ್ಯಂತ ಕೆಟ್ಟ ಹವಾಮಾನ ಮತ್ತು ಪ್ರತಿಕೂಲ ಪರಿಸ್ಥಿತಿಗಳ ಹೊರತಾಗಿಯೂ ನೀರಜ್ ಚೋಪ್ರಾ 86.18 ಮೀಟರ್ ಜಾವೆಲಿನ್ ಎಸೆದು ಚಿನ್ನದ ಪದಕವನ್ನು ಗೆದ್ದರು.



ಬೆಂಗಳೂರಿನಲ್ಲಿ ಚಿನ್ನ ಗೆದ್ದ ನೀರಜ್ ಚೋಪ್ರಾ
ಶನಿವಾರ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆದಿದ್ದ 2025ರ ನೀರಜ್ ಚೋಪ್ರಾ ಎನ್ಸಿ ಕ್ಲಾಸಿಕ್ ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ಭಾರತದ ನೀರಜ್ ಚೋಪ್ರಾ ಚಿನ್ನದ ಪದಕವನ್ನು ಮುಡಿಗೇಡಿಸಿಕೊಂಡಿದ್ದಾರೆ.

86.18 ಮೀ ಜಾವೆಲಿನ್ ಎಸೆದಿದ್ದ ನೀರಜ್
ಈ ಸ್ಪರ್ಧೆಯಲ್ಲಿ ನೀರಜ್ ಚೋಪ್ರಾ ತಮ್ಮ ಐದನೇ ಪ್ರಯತ್ನದಲ್ಲಿ 84.07 ಮೀಟರ್ ಎಸೆದು ತಮ್ಮ ಮುನ್ನಡೆಯನ್ನು ಕಾಯ್ದುಕೊಂಡಿದ್ದರು. ಕೊನೆಯಲ್ಲಿ, ನೀರಜ್ 86.18 ಮೀಟರ್ ಎಸೆದು ಚಿನ್ನ ಗೆದ್ದರು.

ಜೂಲಿಯಸ್ ಯೆಗೊಗೆ ಎರಡನೇ ಸ್ಥಾನ
ಕೀನ್ಯಾದ ಜೂಲಿಯಸ್ ಯೆಗೊ ತಮ್ಮ ನಾಲ್ಕನೇ ಪ್ರಯತ್ನದಲ್ಲಿ 84.51 ಮೀಟರ್ ಎಸೆದು ಋತುವಿನ ಅತ್ಯುತ್ತಮ ಎಸೆತವನ್ನು ಎರಡನೇ ಸ್ಥಾನ ಪಡೆದರು. ಶ್ರೀಲಂಕಾದ ರುಮೇಶ್ ಪತಿರಾಜ ಮೂರನೇ ಸ್ಥಾನ ಪಡೆದರು.

ನೀರಜ್ ಚೋಪ್ರಾ ಹೇಳಿಕೆ
ಚಿನ್ನದ ಪದಕ ಗೆದ್ದ ಬಳಿಕ ಮಾತನಾಡಿದ ಗೋಲ್ಡನ್ ಬಾಯ್ ನೀರಜ್ ಚೋಪ್ರಾ, "ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವುದು ನನ್ನ ಏಕೈಕ ಗುರಿ. ಇದು ನನ್ನ ಪ್ರಮುಖ ಆಧ್ಯತೆಯಾಗಿದೆ. ಎನ್ಸಿ ಕ್ಲಾಸಿಕ್ ಅನ್ನು ಆಯೋಜಿಸುವುದು ಸ್ವತಃ ಒಂದು ದೊಡ್ಡ ವಿಷಯ. ಇತರ ವಿಷಯಗಳು ಈಗ ಮುಖ್ಯವಲ್ಲ. ನಾನು ಈ ಕ್ರೀಡೆಯನ್ನು ಉತ್ತೇಜಿಸಲು ಬಯಸುತ್ತೇನೆ," ಎಂದು ಹೇಳಿದ್ದರು.

ಸ್ಪರ್ಧೆಯ ಫಲಿತಾಂಶ
ಮೊದಲ ಸ್ಥಾನ: ನೀರಜ್ ಚೋಪ್ರಾ (ಭಾರತ) - 86.18 ಮೀಟರ್
ಎರಡನೇ ಸ್ಥಾನ: ಜೂಲಿಯಸ್ ಯೆಗೊ (ಕೀನ್ಯಾ) - 84.51 ಮೀಟರ್
ಮೂರನೇ ಸ್ಥಾನ: ರೋಮೇಶ್ ಪತಿರಾಜ (ಶ್ರೀಲಂಕಾ) - 84.34 ಮೀಟರ್

ವಿಜೇತರಿಗೆ ಪದಕ ವಿತರಣೆ
"ನೀರಜ್ ಚೋಪ್ರಾ ಕ್ಲಾಸಿಕ್- 2025" ಜಾವೆಲಿನ್ ಎಸೆತ ಕ್ರೀಡಾಕೂಟದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರ ಜೊತೆಯಾಗಿ ಪಾಲ್ಗೊಂಡು, ವಿಶ್ವಶ್ರೇಷ್ಠ ಜಾವೆಲಿನ್ ಎಸೆತಗಾರರ ಕ್ರೀಡಾ ಪ್ರದರ್ಶನವನ್ನು ವೀಕ್ಷಿಸಿ, ವಿಜೇತರಿಗೆ ಪದಕ ಪ್ರದಾನ ಮಾಡಿ ಗೌರವಿಸಿದರು.

ಸಿಎಂ ಸಿದ್ದರಾಮಯ್ಯ ಹೇಳಿಕೆ
2 ಬಾರಿ ಒಲಿಂಪಿಕ್ ಪದಕ ವಿಜೇತ, ಹಾಲಿ ವಿಶ್ವಚಾಂಪಿಯನ್, ವಿಶ್ವನಂ. 1 ಜಾವಲಿನ್ ಪಟು ನೀರಜ್ ಚೋಪ್ರ ತಮ್ಮ ಹೆಸರಿನಲ್ಲಿ ಆರಂಭಿಸಿರುವ ಅಂತಾರಾಷ್ಟ್ರೀಯ ಜಾವಲಿನ್ ಕೂಟವು ಜಾವಲಿನ್ ಎಸೆತದಲ್ಲಿನ ದಿಗ್ಗಜರ ಕ್ರೀಡಾ ಸಾಮರ್ಥ್ಯ ಪ್ರದರ್ಶನದ ವೇದಿಕೆಯಾಗಿದ್ದು, ಮುಂದೆಯೂ ಇಂತಹ ಕ್ರೀಡಾಕೂಟದಲ್ಲಿ ರಾಜ್ಯದಲ್ಲಿ ಆಯೋಜನೆಗೊಂಡು ಯುವ ಜನರನ್ನು ಕ್ರೀಡೆಯತ್ತ ಆಕರ್ಷಿಸಲಿ ಎಂದು ಸಿಎಂ ಸಿದ್ದರಾಮಯ್ಯ ಶುಭ ಕೋರಿದ್ದಾರೆ.

ಹಾಜರಿದ್ದ ಗೃಹ ಸಚಿವ ಜಿ ಪರಮೇಶ್ವರ್
ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋತ್ , ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹ ಸಚಿವ ಜಿ.ಪರಮೇಶ್ವರ್ ವಿಜೇತರಿಗೆ ಪ್ರಶಸ್ತಿ ಮತ್ತು ಪದಕಗಳನ್ನು ನೀಡಿ ಗೌರವಿಸಿದರು. ಒಲಂಪಿಕ್ ಅಸೋಸಿಯೇಷನ್ ಅಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಗೋವಿಂದರಾಜು, ಶಾಸಕ ರಿಜ್ವಾನ್ ಅರ್ಷದ್ ಅವರು ಉಪಸ್ಥಿತರಿದ್ದರು.