IND vs ENG: ಶುಭಮನ್ ಗಿಲ್ ಭರ್ಜರಿ ಶತಕ, ಗೆಲುವಿನ ಹಾದಿಯಲ್ಲಿ ಟೀಮ್ ಇಂಡಿಯಾ!
IND vs ENG 2nd Test Day 4 Highlight: ಬರ್ಮಿಂಗ್‌ಹ್ಯಾಮ್‌ನ ಎಜ್‌ಬಾಸ್ಟನ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದ ನಾಲ್ಕನೇ ದಿನವೂ ಭಾರತ ತಂಡ ಮೇಲುಗೈ ಸಾಧಿಸಿದೆ. ಆ ಮೂಲಕ ಶುಭಮನ್ ಗಿಲ್ ನಾಯಕತ್ವದ ಟೀಮ್ ಇಂಡಿಯಾ ಎರಡನೇ ಟೆಸ್ಟ್ ಗೆಲ್ಲುವ ಸನಿಹದಲ್ಲಿದೆ. ಐದನೇ ದಿನವಾದ ಭಾನುವಾರ ಭಾರತ ತಂಡ ಗೆಲ್ಲಲು 7 ವಿಕೆಟ್‌ಗಳನ್ನು ಪಡೆಯಬೇಕಿದೆ.

ಎರಡನೇ ಟೆಸ್ಟ್ ಪಂದ್ಯದ ನಾಲ್ಕನೇ ದಿನವೂ ಭಾರತ ತಂಡ ಮೇಲುಗೈ.

ಬರ್ಮಿಂಗ್‌ಹ್ಯಾಮ್: ಶುಭಮನ್ ಗಿಲ್(Shubman Gill) ಅವರ ದಾಖಲೆಯ ಶತಕ ಹಾಗೂ ಆಕಾಶ್ ದೀಪ್ (Akash Deep) ಅವರ ಮಾರಕ ಬೌಲಿಂಗ್ ದಾಳಿಯ ಸಹಾಯದಿಂದ ಭಾರತ ತಂಡ, ಎರಡನೇ ಟೆಸ್ಟ್ ಪಂದ್ಯದ (IND vs ENG) ನಾಲ್ಕನೇ ದಿನವೂ ಆತಿಥೇಯ ಇಂಗ್ಲೆಂಡ್ ವಿರುದ್ದ ಮೇಲುಗೈ ಸಾಧಿಸಿದೆ. ಆ ಮೂಲಕ ಪ್ರವಾಸಿ ಟೀಮ್ ಇಂಡಿಯಾ ಪಂದ್ಯವನ್ನು ಗೆಲ್ಲುವ ಹಾದಿಯಲ್ಲಿದೆ. ಶುಭಮನ್ ಗಿಲ್ (161) ಅವರ ಶತಕದ ಬಲದಿಂದ ಭಾರತ ತಂಡ, ಇಂಗ್ಲೆಂಡ್‌ಗೆ 608 ರನ್‌ಗಳ ದಾಖಲೆಯ ಗುರಿಯನ್ನು ನೀಡಿದೆ. ಬೃಹತ್ ಮೊತ್ತದ ಗುರಿಯನ್ನು ಹಿಂಬಾಲಿಸಿದ ಬೆನ್ ಸ್ಟೋಕ್ಸ್ ನಾಯಕತ್ವದ ಆಂಗ್ಲರ ನಾಲ್ಕನೇ ದಿನದಾಟದ ಅಂತ್ಯಕ್ಕೆ ಮೂರು ವಿಕೆಟ್‌ಗಳನ್ನು ಕಳೆದುಕೊಂಡು ಸೋಲಿನ ಸುಳಿಗೆ ಸಿಲುಕಿದೆ.
ಭಾರತ ತಂಡ ನೀಡಿದ್ದ ಬೃಹತ್ ಮೊತ್ತದ ಗುರಿಯನ್ನು ಹಿಂಬಾಲಿಸಿದ ಇಂಗ್ಲೆಂಡ್ ತಂಡಕ್ಕೆ ಆಕಾಶ ದೀಪ್ ಹಾಗೂ ಮೊಹಮ್ಮದ್ ಸಿರಾಜ್ ಆರಂಭಿಕ ಆಘಾತ ನೀಡಿದ್ದಾರೆ. ಇನಿಂಗ್ಸ್ ಆರಂಭಿಸಿದ ಝ್ಯಾಕ್ ಕ್ರಾವ್ಲಿ ಹಾಗೂ ಬೆನ್ ಡಕೆಟ್ ತಮ್ಮ ತಂಡಕ್ಕೆ ಉತ್ತಮ ಆರಂಭ ತಂದುಕೊಡುವಲ್ಲಿ ವಿಫಲರಾದರು. ಔಟ್ ಆಫ್ ಫಾರ್ಮ್ ಝ್ಯಾಕ್ ಕ್ರಾವ್ಲಿ ಅವರನ್ನು ಮೊಹಮ್ಮದ್ ಸಿರಾಜ್ ಶೂನ್ಯಕ್ಕೆ ಔಟ್ ಮಾಡಿದರು. ನಂತರ ತಮ್ಮ ಮಾರಕ ದಾಳಿಯಿಂದ ಆಕಾಶ್ ದೀಪ್, ಅಪಾಯಕಾರಿ ಬೆನ್ ಡಕೆಟ್ ಮತ್ತು ಮಾಜಿ ನಾಯಕ ಜೋ ರೂಟ್ ಅವರನ್ನು ಕ್ಲೀನ್ ಬೌಲ್ಡ್ ಮಾಡಿದರು. ಆ ಮೂಲಕ ಇಂಗ್ಲೆಂಡ್ ತಂಡ ನಾಲ್ಕನೇ ದಿನದಾಟದ ಅಂತ್ಯಕ್ಕೆ 16 ಓವರ್‌ಗಳಿಗೆ ಮೂರು ವಿಕೆಟ್‌ಗಳ ನಷ್ಟಕ್ಕೆ 72 ರನ್ ಗಳಿಸಿದ್ದು, ಸೋಲಿನ ಭೀತಿಗೆ ಒಳಗಾಗಿದೆ. ಇಂಗ್ಲೆಂಡ್ ಪರ ಕ್ರೀಸ್‌ನಲ್ಲಿ ಝ್ಯಾಕ್ ಕ್ರಾವ್ಲಿ (15*) ಹಾಗೂ ಒಲ್ಲೀ ಪೋಪ್ (24*) ಅಂತಿಮ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಇಂಗ್ಲೆಂಡ್‌ಗೆ ಐದನೇ ದಿನ 536 ರನ್‌ಗಳ ಅಗತ್ಯವಿದೆ.
IND vs ENG: ಅವಳಿ ಶತಕಗಳ ಮೂಲಕ ಕೊಹ್ಲಿ-ಗವಾಸ್ಕರ್ ದಾಖಲೆ ಮುರಿದ ಶುಭಮನ್ ಗಿಲ್!
ಕೆಎಲ್ ರಾಹುಲ್ ಅರ್ಧಶತಕ
ಇದಕ್ಕೂ ಮುನ್ನ ನಾಲ್ಕನೇ ದಿನವಾದ ಶನಿವಾರ ಬೆಳಗ್ಗೆ (ಇಂಗ್ಲೆಂಡ್ ಕಾಲಮಾನ) ಒಂದು ವಿಕೆಟ್ ನಷ್ಟಕ್ಕೆ 64 ರನ್‌ಗಳಿಂದ ದ್ವಿತೀಯ ಇನಿಂಗ್ಸ್ ಮುಂದುವರಿಸಿದ ಭಾರತ ತಂಡದ ಪರ ಆರಂಭಿಕ ಸೆಷನ್‌ನಲ್ಲಿ ಕೆಎಲ್ ರಾಹುಲ್ ಮಿಂಚಿದರು. ಇವರು ಹಾಗೂ ಕರುಣ್ ನಾಯರ್ ಎರಡನೇ ವಿಕೆಟ್‌ಗೆ 45 ರನ್‌ಗಳ ಅಲ್ಪ ಕಾಣಿಕೆಯನ್ನು ನೀಡಿದ್ದರು. ಕರುಣ್ ನಾಯರ್ 26 ರನ್‌ಗೆ ಔಟ್ ಆಗುವ ಮೂಲಕ ಮತ್ತೊಮ್ಮೆ ವೈಫಲ್ಯ ಅನುಭವಿಸಿದರು. ಆದರೆ, ಕೆಎಲ್ ರಾಹುಲ್ ಉತ್ತಮ ಬ್ಯಾಟಿಂಗ್ ಪ್ರದರ್ಶನ ತೋರಿ 55 ರನ್ ಗಳಿಸಿ ಜಾಶ್ ಟಾಂಗ್‌ಗೆ ಕ್ಲೀನ್ ಬೌಲ್ಡ್ ಆದರು.
Stumps on Day 4 in Edgbaston!
— BCCI (@BCCI) July 5, 2025
A magnificent day for #TeamIndia comes to an end 🙌
India need 7⃣ wickets on the final day to win the 2nd Test
Scorecard ▶️ https://t.co/Oxhg97g4BF#ENGvIND pic.twitter.com/tttip5pAbg
175 ರನ್‌ಗಳ ಜೊತೆಯಾಟವಾಡಿದ ಗಿಲ್-ಜಡೇಜಾ
ನಾಲ್ಕನೇ ವಿಕೆಟ್‌ಗೆ ಜೊತೆಯಾದ ಶುಭಮನ್ ಗಿಲ್ ಹಾಗೂ ರಿಷಭ್ ಪಂತ್ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನವನ್ನು ತೋರಿದರು. ಇವರಿಬ್ಬರು ಇಂಗ್ಲೆಂಡ್ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿ 110 ರನ್‌ಗಳ ಶತಕದ ಜೊತೆಯಾಟವನ್ನು ಆಡಿದರು. ಆ ಮೂಲಕ ತಂಡದ ಮೊತ್ತವನ್ನು230ರ ಗಡಿಯನ್ನು ದಾಟಿಸಿದರು. ಸ್ಪೋಟಕ ಬ್ಯಾಟ್ ಮಾಡಿದ ರಿಷಭ್ ಪಂತ್, 58 ಎಸೆತಗಳಲ್ಲಿ 65 ರನ್ ಗಳಿಸಿ ಶೋಯೆಬ್ ಬಶೀರ್‌ಗೆ ವಿಕೆಟ್ ಒಪ್ಪಿಸಿದರು. ನಂತರ ರವೀಂದ್ರ ಜಡೇಜಾ ಅವರ ಜೊತೆಯೂ ಗಿಲ್ ಐದನೇ ವಿಕೆಟ್‌ಗೆ 175 ರನ್‌ಗಳ ದೊಡ್ಡ ಜೊತೆಯಾಟವನ್ನು ಆಡಿದರು. ಭರ್ಜರಿಯಾಗಿ ಬ್ಯಾಟ್ ಮಾಡಿದ್ದ ರವೀಂದ್ರ ಜಡೇಜಾ, 118 ಎಸೆತಗಳಲ್ಲಿ 69 ರನ್ ಗಳಿಸಿ ಅಜೇಯರಾಗಿ ಉಳಿದರು.
A special cricketer joins a special list! 🫡
— BCCI (@BCCI) July 5, 2025
Well done, Captain Shubman Gill! 👏 👏
Updates ▶️ https://t.co/Oxhg97g4BF#TeamIndia | #ENGvIND | @ShubmanGill pic.twitter.com/rSuVgLLdet
ದಾಖಲೆಯ ಶತಕ ಬಾರಿಸಿದ ಶುಭಮನ್ ಗಿಲ್
ಪ್ರಥಮ ಇನಿಂಗ್ಸ್‌ನಲ್ಲಿ ದ್ವಿಶತಕವನ್ನು ಬಾರಿಸಿದ್ದ ಶುಭಮನ್ ಗಿಲ್, ದ್ವಿತೀಯ ಇನಿಂಗ್ಸ್‌ನಲ್ಲಿ ಇಂಗ್ಲೆಂಡ್ ಬೌಲರ್‌ಗಳಿಗೆ ಬೆವರಿಳಿಸಿದರು. ಆಕ್ರಮಣಕಾರಿಯಾಗಿ ಬ್ಯಾಟ್ ಮಾಡಿದ ನಾಯಕ ಗಿಲ್, 162 ಎಸೆತಗಳಲ್ಲಿ 8 ಸಿಕ್ಸರ್ ಹಾಗೂ 13 ಬೌಂಡರಿಗಳೊಂದಿಗೆ 161 ರನ್‌ಗಳನ್ನು ಸಿಡಿಸಿದರು. ಆ ಮೂಲಕ ಭಾರತ ತಂಡ 600ಕ್ಕೂ ಅಧಿಕ ರನ್ ಕಲೆ ಹಾಕಲು ಗಿಲ್ ನೆರವು ನೀಡಿದರು. ಅಲ್ಲದೆ ಗಿಲ್ ಏಕೈ ಟೆಸ್ಟ್ ಪಂದ್ಯದಲ್ಲಿ 430 ರನ್ ಹಾಕಿದರು. ಆ ಮೂಲಕ ಟೆಸ್ಟ್ ಪಂದ್ಯವೊಂದರಲ್ಲಿ ಅತ್ಯಧಿಕ ರನ್ ಗಳಿಸಿದ ಭಾರತದ ಮೊದಲ ಬ್ಯಾಟರ್ ಎನಿಸಿಕೊಂಡರು. ಆ ಮೂಲಕ ಶುಭಮನ್ ಗಿಲ್ ಅವರ ದಾಖಲೆಯನ್ನು ಹಿಂದಿಕ್ಕಿದ್ದರು. ಅಲ್ಲದೆ ಟೆಸ್ಟ್ ಪಂದ್ಯದಲ್ಲಿ ದ್ವಿಶತಕ ಹಾಗೂ 150 ರನ್ ಗಳಿಸಿದ ಮೊದಲ ಆಟಗಾರ ಹಾಗೂ ಮೊದಲ ನಾಯಕ ಎಂಬ ಖ್ಯಾತಿಗೆ ಗಿಲ್ ಭಾಜನರಾದರು. ಅಂತಿಮವಾಗಿ ಭಾರತ ತಂಡ, 6 ವಿಕೆಟ್ ನಷ್ಟಕ್ಕೆ 467 ರನ್ ಗಳಿಸಿ ದ್ವಿತೀಯ ಇನಿಂಗ್ಸ್ ಅನ್ನು ಡಿಕ್ಲೆರ್ ಮಾಡಿಕೊಂಡಿತು. ಆ ಮೂಲಕ ಎದುರಾಳಿ ಇಂಗ್ಲೆಂಡ್‌ಗೆ 608 ರನ್‌ಗಳ ದಾಖಲೆಯ ಗುರಿಯನ್ನು ನೀಡಿತ್ತು.
ENG vs IND: ಸುನೀಲ್ ಗವಾಸ್ಕರ್‌ರ ದೀರ್ಘಕಾಲದ ದಾಖಲೆ ಮುರಿದ ಯಶಸ್ವಿ ಜೈಸ್ವಾಲ್!
ಪ್ರಥಮ ಇನಿಂಗ್ಸ್‌ನಲ್ಲಿ 587 ರನ್ ಕಲೆ ಹಾಕಿದ್ದ ಭಾರತ
ಭಾರತ ತಂಡ ಶುಭಮನ್ ಗಿಲ್ ದ್ವಿಶತಕದ ನೆರವಿನಿಂದ ಪ್ರಥಮ ಇನಿಂಗ್ಸ್‌ನಲ್ಲಿ 587 ರನ್‌ಗಳನ್ನು ಕಲೆ ಹಾಕಿತ್ತು. ನಂತರ ಪ್ರಥಮ ಇನಿಂಗ್ಸ್ ಆಡಿದ್ದ ಇಂಗ್ಲೆಂಡ್ ತಂಡ, ಮೊಹಮ್ಮದ್ ಸಿರಾಜ್ ಮಾರಕ ಬೌಲಿಂಗ್ ದಾಳಿಗೆ ನಲುಗೆ 407 ರನ್‌ಗಳಿಗೆ ಆಲ್‌ಔಟ್ ಆಗಿತ್ತು. ಇಂಗ್ಲೆಂಡ್ ಪರ ಜೇಮಿ ಸ್ಮಿತ್ (184 ರನ್) ಹಾಗೂ ಹ್ಯಾರಿ ಬ್ರೂಕ್ (158 ರನ್) ಅವರನ್ನು ಹೊರತುಪಡಿಸಿ ಇನ್ನುಳಿದ ಬ್ಯಾಟರ್‌ಗಳು ವಿಫಲರಾಗಿದ್ದರು. ಆ ಮೂಲಕ ಪ್ರಥಮ ಇನಿಂಗ್ಸ್‌ನಲ್ಲಿ ಟೀಮ್ ಇಂಡಿಯಾ 180 ರನ್‌ಗಳ ಮುನ್ನಡೆಯನ್ನು ಪಡೆದಿತ್ತು.