ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Gururaj Gantihole Column: ಓದುವ ಸಂಸ್ಕೃತಿ ಬೆಳೆಸುವ ಗ್ರಂಥಾಲಯಗಳನ್ನು ನಿರ್ಲಕ್ಷಿಸುವುದೇಕೆ ?

ಕ್ರಿಯಾಶೀಲ ಶಿಕ್ಷಕರಿರುವ ಶಾಲೆಗಳಲ್ಲಿ ‘ಕಾರ್ನರ್ ಲೈಬ್ರರಿ’ ಎಂಬ ಪುಟ್ಟ ಗ್ರಂಥಾಲಯವನ್ನು ವ್ಯವಸ್ಥೆ ಮಾಡುತ್ತಾರೆ. ಇದರಿಂದಾಗಿ ಮಕ್ಕಳಿಗೆ ಓದಿನ ಜತೆಗೆ, ಗ್ರಂಥಾಲಯ ಹೇಗಿರುವುದೆಂಬ ಅರಿವೂ ಮೂಡು ತ್ತದೆ. ಇತ್ತೀಚಿನ ವರ್ಷ ಗಳಲ್ಲಿ, ಪ್ರಾಥಮಿಕ-ಪ್ರೌಢಶಾಲಾ ಮಕ್ಕಳನ್ನು ಆಯಾ ಪಂಚಾಯತ್ ಅಡಿಯಲ್ಲಿ ಕಾರ್ಯನಿರ್ವಹಿಸುವ ಗ್ರಂಥಾ ಲಯಗಳಿಗೆ ಶಿಕ್ಷಕರು ಒಯ್ದು ಆ ವ್ಯವಸ್ಥೆಯನ್ನು ಪರಿಚಯಿಸುತ್ತಿದ್ದಾರೆ. ಹೀಗೆ ಎಳವೆಯಲ್ಲೇ ಓದಿನ ಅಭಿರುಚಿ ಬೆಳೆದಾಗಷ್ಟೇ ಗ್ರಂಥಾಲಯಗಳು ನಳನಳಿಸಲು ಸಾಧ್ಯ

ಓದುವ ಸಂಸ್ಕೃತಿ ಬೆಳೆಸುವ ಗ್ರಂಥಾಲಯಗಳನ್ನು ನಿರ್ಲಕ್ಷಿಸುವುದೇಕೆ ?

ಗಂಟಾಘೋಷ

ಗುರುರಾಜ್‌ ಗಂಟಿಹೊಳೆ

ದೇಶದ ಕೊನೆ ತುದಿಯ ಹಳ್ಳಿಯಲ್ಲಿ ಬದುಕಿಗಾಗಿ ದಿನಪತ್ರಿಕೆಗಳನ್ನು ಹಂಚುತ್ತಿದ್ದ ಹುಡುಗ ಓದಿನಲ್ಲಿ ಮುಂದಿದ್ದ. ಮುಂದೆ ಓದುವ ಹಸಿವಿತ್ತು, ಹಂಬಲವಿತ್ತು, ಜತೆಗೆ ಬಡತನವಿತ್ತು. ಆದರೇ ನಂತೆ, ವಿದ್ಯಾದೇವಿ ಯಾವತ್ತೂ ತಾರತಮ್ಯ ಮಾಡಳು ಎಂಬಂತೆ, ಆತನ ಆಸಕ್ತಿ ಕಂಡು ಅಯ್ಯರ್ ಗುರುಗಳು ಕೈಹಿಡಿದು ಮಾರ್ಗದರ್ಶನ ತೋರಿ ದರು. ರಾಮೇಶ್ವರದಲ್ಲಿ ಮನೆಮನೆಗೆ ಪೇಪರ್ ಹಾಕುತ್ತಿದ್ದ ಮುಗ್ಧ ಬಾಲಕ ಅಬ್ದುಲ್ ಕಲಾಂ, ದೇಶದ ಸರ್ವೋಚ್ಚ ಪದವಿಯವರೆಗೂ ಬೆಳೆದು ಬಂದ. ಇಂಥ ಯೋಗ್ಯತೆ ಸಂಪಾದಿಸಿದ್ದಾದರೂ ಹೇಗೆ ಎಂಬುದನ್ನು ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರು ಮುಂದೊಂದು ದಿನ ಮಕ್ಕಳ ಕಾರ್ಯಕ್ರಮದಲ್ಲಿ ವಿವರಿಸುತ್ತ, “ನಿರಂತರ ಅಧ್ಯಯನ, ಪ್ರಯತ್ನ, ಪತ್ರಿಕೆ-ಪುಸ್ತಕಗಳೊಂದಿಗಿನ ಒಡನಾಟ ಮಾತ್ರವೇ ನಿಮ್ಮನ್ನು ಜೀವನದಲ್ಲಿ ಗೆಲ್ಲುವಂತೆ ಮಾಡಬಲ್ಲದು" ಎಂದರು.

“ನಿಮ್ಮನ್ನು ಕಣ್ಣೆತ್ತಿಯೂ ನೋಡದ, ನಿಮ್ಮೊಂದಿಗೆ ಮಾತಾಡದ ರಾಜ-ರಾಣಿಯರ/ರಾಜಕಾರಣಿಗಳ ಕೃಪಾಕಟಾಕ್ಷ ಕ್ಕಾಗಿ, ದಯಾಭಿಕ್ಷೆಗಾಗಿ ಕಾಯಬೇಡಿ. ಗ್ರಂಥಾಲಯದ ಕಪಾಟುಗಳಲ್ಲಿ ಪುಸ್ತಕಗಳಾಗಿ ಕೂತು ಕೈಬೀಸಿ ಕರೆಯುತ್ತಿರುವ ರಾಜ-ರಾಣಿಯರನ್ನು ಮಾತಾಡಿಸಿ ಪ್ರೀತಿಯಿಂದ ಎತ್ತಿಕೊಳ್ಳಿ! ಅವರೇ ನಿಮ್ಮ ಬದುಕನ್ನು ನಿಜಾರ್ಥದಲ್ಲಿ ಬದಲಿಸು ವವರು" ಎಂದಿದ್ದಾರೆ ಜಾನ್ ರಸ್ಕಿನ್. ಇನ್ನು ಸುಭಾಷ್‌ಚಂದ್ರ ಬೋಸರು, ಬ್ರಿಟಿಷರ ಕಾಲೇಜಿಗೆ ಸೇರಿದರೆ ಅಪರೂಪದ ಪುಸ್ತಕಗಳು ಸಿಗುತ್ತವೆ ಎಂಬ ಕಾರಣಕ್ಕೆ ಕಠಿಣ ಪ್ರವೇಶ ಪರೀಕ್ಷೆ ಬರೆದು, ಕಲ್ಕತ್ತ ದಲ್ಲಿ ಬ್ರಿಟಿಷರ ಮಕ್ಕಳು ಮಾತ್ರ ಹೋಗಬಹುದಾಗಿದ್ದ ಗ್ರಂಥಾಲಯಕ್ಕೆ ಹೋಗಿ ಪುಸ್ತಕ ಎರವಲು ಪಡೆಯುವ ಹಕ್ಕು ಪಡೆದಿದ್ದರಂತೆ!

image-5261172a-7732-4075-8ff7-8e88d911b99d.jpg

ಕ್ರಿಯಾಶೀಲ ಶಿಕ್ಷಕರಿರುವ ಶಾಲೆಗಳಲ್ಲಿ ‘ಕಾರ್ನರ್ ಲೈಬ್ರರಿ’ ಎಂಬ ಪುಟ್ಟ ಗ್ರಂಥಾಲಯವನ್ನು ವ್ಯವಸ್ಥೆ ಮಾಡುತ್ತಾರೆ. ಇದರಿಂದಾಗಿ ಮಕ್ಕಳಿಗೆ ಓದಿನ ಜತೆಗೆ, ಗ್ರಂಥಾಲಯ ಹೇಗಿರುವುದೆಂಬ ಅರಿವೂ ಮೂಡುತ್ತದೆ. ಇತ್ತೀಚಿನ ವರ್ಷ ಗಳಲ್ಲಿ, ಪ್ರಾಥಮಿಕ-ಪ್ರೌಢಶಾಲಾ ಮಕ್ಕಳನ್ನು ಆಯಾ ಪಂಚಾಯತ್ ಅಡಿಯಲ್ಲಿ ಕಾರ್ಯನಿರ್ವಹಿಸುವ ಗ್ರಂಥಾ ಲಯಗಳಿಗೆ ಶಿಕ್ಷಕರು ಒಯ್ದು ಆ ವ್ಯವಸ್ಥೆಯನ್ನು ಪರಿಚಯಿಸುತ್ತಿದ್ದಾರೆ. ಹೀಗೆ ಎಳವೆಯಲ್ಲೇ ಓದಿನ ಅಭಿರುಚಿ ಬೆಳೆದಾಗಷ್ಟೇ ಗ್ರಂಥಾಲಯಗಳು ನಳನಳಿಸಲು ಸಾಧ್ಯ. ಇಂಥ ಗ್ರಂಥಾಲಯ/ವಾಚನಾಲಯಗಳ ಕುರಿತು ನಮ್ಮ ಜನರಿಗೆ, ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಇಷ್ಟೆಲ್ಲ ವಿವರಿಸುವ ಅಗತ್ಯವಿಲ್ಲ. ಆದರೆ ಅವುಗಳ ಪ್ರಾಮುಖ್ಯವಷ್ಟೇ ಗೊತ್ತಾದರೆ ಸಾಲದು, ಅವುಗಳ ಸಮಸ್ಯೆಗಳನ್ನು ನಿವಾರಿಸುವ ಆಸಕ್ತಿಯೂ ಇರಬೇಕಲ್ಲವೇ? ಉಡುಪಿ ಜಿಲ್ಲೆಯನ್ನೇ ಪರಿಗಣಿಸಿದರೆ ಅಲ್ಲಿ ಉಡುಪಿ, ಕುಂದಾಪುರ, ಬೈಂದೂರು, ಕಾರ್ಕಳ, ಬ್ರಹ್ಮಾವರ, ಕಾಪು, ಹೆಬ್ರಿ ತಾಲೂಕುಗಳಿವೆ.

ಉಡುಪಿಯಲ್ಲಿ ನಗರ ಮತ್ತು ಜಿಲ್ಲಾ ಗ್ರಂಥಾಲಯಗಳಿವೆ. ಕಾಪು ತಾಲೂಕಾದ ಮೇಲೆ ಅಲ್ಲಿ ಹಿಂದೆ ಇದ್ದ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಗ್ರಂಥಾಲಯವನ್ನೇ ತಾಲೂಕು ಗ್ರಂಥಾಲಯ ಎಂದು ಕರೆಯಲಾಗುತ್ತಿದೆ. ಹೆಬ್ರಿ ಯದ್ದೂ ಇದೇ ಕಥೆ. ಉಳಿದಂತೆ ಕಾರ್ಕಳ, ಬ್ರಹ್ಮಾವರ, ಸಾಲಿಗ್ರಾಮಗಳಲ್ಲೂ ತಕ್ಕಮಟ್ಟಿಗೆ ದಿನಪತ್ರಿಕೆಗಳನ್ನು ಓದಲು ಕೂರಬಹುದಾದಂಥ ಕೋಣೆಗಳಲ್ಲಿ ಗ್ರಂಥಾಲಯಗಳಿವೆ.

ಇದು ಬಹುತೇಕ ಎಲ್ಲ ಜಿಲ್ಲೆಗಳಲ್ಲೂ ಕಾಣಬರುವ ಸ್ಥಿತಿ. 1991-92ರ ಸುಮಾರಿಗೆ, ಬೈಂದೂರು ಪಟ್ಟಣದಲ್ಲಿಗ್ರಂಥಾಲಯದ ಕಟ್ಟಡ ನಿರ್ಮಿಸಲೆಂದೇ ಸುಮಾರು ೩೪೮೦ ಚದರಡಿಯಷ್ಟು ಜಾಗವನ್ನು ಖರೀದಿಸಲಾಗಿತ್ತು.ಕಾರಣಾಂತರಗಳಿಂದ ಇದರ ನಿರ್ಮಾಣ/ಅಭಿವೃದ್ಧಿಗೆ ಹಿನ್ನಡೆಯಾಗಿ ಈಗಲೂ ಅಲ್ಲೊಂದು ಸುಸಜ್ಜಿತ ಗ್ರಂಥಾ ಲಯಕ್ಕೆ ಕಾಯುವಂತಾಗಿದೆ. ಹತ್ತು ಮಂದಿ ಕೂರಲೂ ಜಾಗವಿಲ್ಲದಷ್ಟು ಕಿರಿದಾದ ಪಟ್ಟಣ ಪಂಚಾಯಿತಿಯ ಕೋಣೆಗೆ ಗ್ರಂಥಾಲಯದ ನಾಮಫಲಕ ನೇತುಹಾಕಲಾಗಿದೆ. 30 ವರ್ಷ ಕಳೆದರೂ ಒಂದು ಗ್ರಂಥಾಲಯ ನಿರ್ಮಿಸಲುಮೀನ-ಮೇಷ ಎಣಿಸುತ್ತಿದೆ ನಮ್ಮ ಸರಕಾರ. ಹಲವು ಇಲಾಖೆಗಳೊಂದಿಗೆ ಬೆಸೆದುಕೊಂಡಿದ್ದ ಈ ವಿಭಾಗವು ಈಗಶಿಕ್ಷಣ ಇಲಾಖೆಯಡಿ ‘ಸಾರ್ವಜನಿಕ ಗ್ರಂಥಾಲಯ ಇಲಾಖೆ’ ಎಂದು ಕಾರ್ಯನಿರ್ವಹಿಸುತ್ತಿದೆ. ರಾಜ್ಯಾದ್ಯಂತದ ಎಲ್ಲ ಸಾರ್ವಜನಿಕ ಗ್ರಂಥಾಲಯಗಳ ನಿರ್ವಹಣೆ ಈ ಇಲಾಖೆಯದ್ದು. ಹೀಗಿದ್ದರೂ ಇಲಾಖೆಯಲ್ಲಿ ಹಣವಿಲ್ಲ, ಅನುದಾನದ ಕೊರತೆ ಎಂದು ಹೇಳಲಾಗುತ್ತಿದೆ.

‘ಕರ್ನಾಟಕ ಸಾರ್ವಜನಿಕ ಗ್ರಂಥಾಲಯ ಕಾಯ್ದೆ, 1965’ರ ಅನ್ವಯ, ರಾಜ್ಯದಲ್ಲಿ ಸಾರ್ವಜನಿಕ ಗ್ರಂಥಾಲಯವ್ಯವಸ್ಥೆಯನ್ನು ಕಾರ್ಯರೂಪಕ್ಕೆ ತರಲಾಗಿದ್ದು, ರಾಜ್ಯ ಮಟ್ಟದಲ್ಲಿ ‘ರಾಜ್ಯ ಕೇಂದ್ರ ಗ್ರಂಥಾಲಯ’, ನಗರಗಳಲ್ಲಿ‘ನಗರ ಕೇಂದ್ರ ಗ್ರಂಥಾಲಯ’ ಹಾಗೂ ಶಾಖಾ ಗ್ರಂಥಾಲಯಗಳು, ಜಿಲ್ಲಾ ಮಟ್ಟದಲ್ಲಿ ‘ಜಿಲ್ಲಾ ಕೇಂದ್ರ ಗ್ರಂಥಾಲಯ’,ತಾಲೂಕು ಕೇಂದ್ರ, ಪುರಸಭೆ ಮತ್ತು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಗ್ರಾಮೀಣ ಗ್ರಂಥಾಲಯಗಳು, ಅಲೆಮಾರಿಮತ್ತು ಕೊಳಚೆ ಪ್ರದೇಶ ಸ್ಥಳಗಳಲ್ಲಿ ಅಲೆಮಾರಿ ಮತ್ತು ಕೊಳಚೆ ಪ್ರದೇಶ ಗ್ರಂಥಾಲಯಗಳು, ಮಕ್ಕಳಿಗಾಗಿ ‘ಸಮುದಾಯ ಮಕ್ಕಳ ಗ್ರಂಥಾಲಯಗಳು’ ಕಾರ್ಯನಿರತವಾಗಿವೆ ಎನ್ನುತ್ತವೆ ಸರಕಾರಿ ದಾಖಲೆಗಳು.

ರಾಜ್ಯ ಕೇಂದ್ರ ಗ್ರಂಥಾಲಯವು ಬ್ರಿಟಿಷ್ ಶೈಲಿಯ ಕಟ್ಟಡದಲ್ಲಿ 1915ರಲ್ಲಿ ಆರಂಭವಾಯಿತು. ಇದು ಎಲ್ಲಾಭಾಷೆ ಮತ್ತು ವಿಷಯಗಳ ಆಕರ ಗ್ರಂಥಗಳು, ಆಧುನಿಕ ಸಲಕರಣೆಗಳಿರುವ ಉತ್ತಮ ಪರಾಮರ್ಶನ ಗ್ರಂಥಾಲಯವಾಗಿದ್ದು, ಗ್ರಂಥಸ್ವಾಮ್ಯ, ಕಂಪ್ಯೂಟರ್, ಅಂತರ್ಜಾಲ ವಿಭಾಗ, ಬ್ರೈಲ್ ಲಿಪಿಯ ಪುಸ್ತಕಗಳು, ಉದ್ಯೋಗ ಮಾಹಿತಿ ಮತ್ತು ನಿಯತಕಾಲಿಕ ವಿಭಾಗಗಳು ಇದರ ಪ್ರಮುಖ ಭಾಗಗಳಾಗಿವೆ. ಲೈಬ್ರರಿಯನ್, ಅಸಿಸ್ಟೆಂಟ್ ಲೈಬ್ರರಿಯನ್, ಲೈಬ್ರರಿ ಅಸಿಸ್ಟೆಂಟ್, ಅಟೆಂಡರ್ ಮತ್ತು ಕೆಲವೆಡೆ ಟೈಪಿಸ್ಟ್‌ಗಳು ಕಾರ್ಯನಿರ್ವಹಿಸುತ್ತಿದ್ದರೆ, ಮತ್ತೆ ಕೆಲವೆಡೆ ಒಬ್ಬರೋ ಇಬ್ಬರೋ ಎಲ್ಲ ಕಾರ್ಯಗಳನ್ನೂ ತಾವೇ ನಿರ್ವಹಿಸುತ್ತಿದ್ದಾರೆ. ಪುಸ್ತಕಗಳನ್ನು ಹೆಸರು, ವಿಷಯವಾರು ವಿಂಗಡಿಸಿ, ವಿಶೇಷ ಸಂಖ್ಯೆ ಒದಗಿಸಿ ಜೋಡಿಸಿಡುವುದು ಒಂದು ಜವಾಬ್ದಾರಿ. ಉಳಿದಂತೆ, ಓದುಗರು ಓದಲು ತೆಗೆದುಕೊಂಡು ಹೇಗೆಂದರೆ ಹಾಗೆ ಟೇಬಲ್ ಮೇಲೆ ಬಿಟ್ಟುಹೋದ ಪುಸ್ತಕ/ಪತ್ರಿಕೆಗಳನ್ನು ಸ್ವಸ್ಥಾನಕ್ಕೆ ಜೋಡಿಸುವುದು ಕಾಯಕದ ಒಂದು ಭಾಗವಾಗಿರುತ್ತದೆ. ಇದು ದೈನಂದಿನ ವಿದ್ಯಮಾನ.

ಸರಕಾರ/ಇಲಾಖೆಯ ಕಾರ್ಯವೈಖರಿ ಪ್ರಶ್ನಿಸುವಂತಿದ್ದರೂ ಗ್ರಂಥಾಲಯಗಳ ಸಿಬ್ಬಂದಿ, ಅಕಾರಿಗಳ ಪರಿಶ್ರಮ,ಅಗತ್ಯವಿರುವವರಿಗೆ ಪುಸ್ತಕ ಹೊಂದಿಸುವಲ್ಲಿ ಅವರು ಪಡುವ ಪಾಡು ಸರಳವಾಗಿಲ್ಲ. ರಾಜ್ಯ/ಜಿಲ್ಲಾ ಕೇಂದ್ರಗ್ರಂಥಾಲಯಕ್ಕೆ ಭೇಟಿಕೊಟ್ಟು ನೋಡಿದರೆ ಇದು ಕಾಣುತ್ತದೆ. ಗ್ರಂಥಾಲಯ ಮುಚ್ಚುವ ವೇಳೆ ಎಲ್ಲ ಪುಸ್ತಕಗಳನ್ನು ಮರಳಿ ಅವುಗಳ ಸ್ಥಾನದಲ್ಲಿ ಇರಿಸುವುದಕ್ಕೇ ಅರ್ಧದಿನ ಬೇಕಾಗುತ್ತದೆ.

ಜಿಲ್ಲೆಗೊಂದು ಗ್ರಂಥಾಲಯ ಪ್ರಾಧಿಕಾರ ಎಂಬ ಸಮಿತಿಯನ್ನು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ರಚಿಸಲಾಗಿದ್ದು, ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರು ಉಪಾಧ್ಯಕ್ಷರಾಗಿದ್ದರೆ, ಸದಸ್ಯರಾಗಿ ಬಿಇಒ, ಡಿಡಿಪಿಐ, ಸ್ಥಳೀಯ ಬರಹಗಾರರು, ಗ್ರಾಮ ಪಂಚಾಯಿತಿಯಿಂದ ಒಬ್ಬ ನಾಮನಿರ್ದೇಶಿತ ಸದಸ್ಯರಿರುತ್ತಾರೆ. ಪುಸ್ತಕ ಖರೀದಿ, ಇತರೆ ಗ್ರಂಥಾಲಯಗಳ ಸ್ಥಿತಿಗತಿ, ಉಸ್ತುವಾರಿ ಈ ಸಮಿತಿಯದ್ದು.

6798 ಸಾರ್ವಜನಿಕ ಗ್ರಂಥಾಲಯಗಳೊಂದಿಗೆ ಕರ್ನಾಟಕವು ದೇಶದಲ್ಲಿ 3ನೇ ಸ್ಥಾನದಲ್ಲಿದೆ. ಇಲ್ಲಿಯವರೆಗೆ2 ಕೋಟಿಯಷ್ಟು ಓದುಗರು ‘ಇ-ಸಾರ್ವಜನಿಕ ಗ್ರಂಥಾಲಯ ಅಪ್ಲಿಕೇಷನ್’ ಮೂಲಕ ಡಿಜಿಟಲ್ ಲೈಬ್ರರಿಯಲ್ಲಿನೋಂದಣಿಯಾಗಿದ್ದು, ೨ ಲಕ್ಷ ಪುಸ್ತಕ/ಮಾಹಿತಿಯನ್ನು ವೀಕ್ಷಿಸಿದ ದಾಖಲೆಯಿದೆ. 10 ಲಕ್ಷಕ್ಕೂ ಅಧಿಕವಿದ್ಯಾರ್ಥಿಗಳಿಗೆ ಡಿಜಿಟಲ್ ಲೈಬ್ರರಿ ಒದಗಿಸಿದ ಖುಷಿಯೂ ಇಲಾಖೆಗಿದೆ.

ಇವೆಲ್ಲ ಹೇಳಿದಷ್ಟು ಸುಲಭವಲ್ಲ. ಹಲವು ಗ್ರೇಡ್‌ಗಳ ಮೂಲಕ ವಿವಿಧ ಹುದ್ದೆಯಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳನ್ನು ಗ್ರಂಥಾಲಯ ವ್ಯವಸ್ಥೆ ಹೊಂದಿದ್ದು, ಮುಖ್ಯ ಗ್ರಂಥಪಾಲಕರು ನೇರ ಇಲಾಖೆಗೆ ಒಳಪಡುತ್ತಾರೆ. ಉಳಿದಂತೆ ವಿವಿಧ ಸಿಬ್ಬಂದಿಗಳನ್ನು ತಾತ್ಕಾಲಿಕವಾಗಿ ಗ್ರಾಮ/ತಾಲೂಕು ಪಂಚಾಯಿತಿ ಮೂಲಕ ನೇಮಿಸಿಕೊ ಳ್ಳಲಾಗಿದೆ. ರಾಜ್ಯದಲ್ಲಿ ಒಟ್ಟು 13 ಸಂಚಾರಿ ಗ್ರಂಥಾಲಯಗಳಿದ್ದು, ಗ್ರಾಮೀಣರ ಸಮಯವು ದುಪಯೋಗವಾಗ ಲೆಂದು ಒಟ್ಟು 5766 ಗ್ರಾಮ ಪಂಚಾಯಿತಿ ಗ್ರಂಥಾಲಯಗಳನ್ನು ಗ್ರಾಮಾಂತರ ಪ್ರದೇಶಗಳಲ್ಲಿ ಸ್ಥಾಪಿಸಲಾಗಿದೆ. ಇವುಗಳ ಸಂಪೂರ್ಣ ನಿರ್ವಹಣೆ ಗ್ರಾಮೀಣಾ ಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯದ್ದು.

ಹಲವು ದಶಕ ಕಳೆದರೂ, ಮೀಸಲಿದ್ದ ಜಾಗ ಖಾಲಿಬಿದ್ದಿದ್ದರೂ, ಇಲಾಖೆಗೆ ಒಂದು ಸಾರ್ವಜನಿಕ ಗ್ರಂಥಾಲಯಕಟ್ಟಲಾಗುತ್ತಿಲ್ಲ. ಇನ್ನು, ಪುಸ್ತಕ, ಪೀಠೋಪಕರಣಗಳ ಖರೀದಿ, ಗ್ರಂಥಾಲಯಗಳ ಜಾಗೃತಿ ಕಾರ್ಯಕ್ರಮಗಳಹಲವು ಒಳವೆಚ್ಚಗಳು ಬೇರೆಯ ಕಥೆಯನ್ನೇ ಹೇಳುತ್ತಿವೆ. ಬೈಂದೂರು ಸೇರಿದಂತೆ ರಾಜ್ಯದ ಹಲವೆಡೆ ಸುಸಜ್ಜಿತಗ್ರಂಥಾಲಯ ಕಟ್ಟಡಗಳ ನಿರ್ಮಾಣಕ್ಕೆ ಸೂಕ್ತ ಜಾಗಗಳಿದ್ದರೆ ಇನ್ನಾದರೂ ವಿಶೇಷ ಗಮನ ಹರಿಸಬೇಕು. 30 ಜಿಲ್ಲಾ, 26 ನಗರ ಮತ್ತು 216 ತಾಲೂಕು ಗ್ರಂಥಾಲಯಗಳನ್ನು ಡಿಜಿಟಲ್ ಗ್ರಂಥಾಲಯಗಳಾಗಿ ಮೇಲ್ದರ್ಜೆಗೆ ಏರಿಸುವುದಾಗಿ 2018-19ರಲ್ಲೇ ಹೇಳಲಾಗಿತ್ತು. ಘೋಷಿತ ಕಾರ್ಯಕ್ರಮಗಳ ನಿರ್ವಹಣೆ ಸಮರ್ಪಕವಾಗಿದೆಯೇಎಂಬು ದನ್ನು ಸಚಿವರು, ಇಲಾಖಾ ಕಾರ್ಯದರ್ಶಿಗಳು ಯಾವತ್ತಾದರೂ ಅವಲೋಕಿಸಿದ್ದಾರೆಯೇ ಎಂಬುದನ್ನುದೇವರೇ ಬಲ್ಲ!

ಕನಿಷ್ಠಪಕ್ಷ, ಈ ಸಾರ್ವಜನಿಕ ಗ್ರಂಥಾಲಯಗಳನ್ನಾದರೂ ಏಕರೂಪ ವ್ಯವಸ್ಥೆಯೊಳಗೆ ತರಲು ಗಮನಹರಿಸಬೇಕು.ಸದ್ಯ ದೇಶದಲ್ಲಿ ಉತ್ತಮ ಮೊಬೈಲ್ ನೆಟ್‌ವರ್ಕ್ ಇದ್ದು, ಹಿಂದುಳಿದ ಗ್ರಾಮದಿಂದ ಹಿಡಿದು ರಾಜ್ಯ ಕೇಂದ್ರಗ್ರಂಥಾಲಯದವರೆಗಿನ ವಿವಿಧ ಸ್ತರದ ಗ್ರಂಥಾಲಯಗಳಲ್ಲಿನ ಎಲ್ಲ ಗ್ರಂಥಗಳು, ನಿಯತಕಾಲಿಕೆಗಳು,ಪರಾಮರ್ಶನ ಪುಸ್ತಕಗಳನ್ನು ಸಾಫ್ಟ್‌ ಕಾಪಿ/ಡೌನ್‌ಲೋಡ್ ಮಾಡಿಕೊಳ್ಳಲು ಅಥವಾ ಮೊಬೈಲ್/ಲ್ಯಾಪ್‌ಟಾಪ್‌ಗಳಮೂಲಕ ಆನ್‌ಲೈನ್‌ನಲ್ಲೇ ಓದಿಕೊಳ್ಳುವಂತಾಗಲು ವ್ಯವಸ್ಥೆಯೊಂದನ್ನು ರೂಪಿಸಬೇಕು.

ಇದೇ ವ್ಯವಸ್ಥೆಯನ್ನು, ರಾಜ್ಯದಲ್ಲಿರುವ ಒಟ್ಟು 78 ಸಾವಿರಕ್ಕೂ ಅಧಿಕ ಶಾಲೆಗಳನ್ನು ಏಕಗವಾಕ್ಷಿ ವ್ಯವಸ್ಥೆಯಲ್ಲಿ ತರುವ ಮೂಲಕ, ಓದುವ ಸಾಮಗ್ರಿಗಳು ರಾಜ್ಯದ ಯಾವ ಮೂಲೆಯಲ್ಲಿದ್ದರೂ ಸುಲಭವಾಗಿ ಸಿಗುವಂತೆ ಮಾಡಬೇಕು. ಹಳ್ಳಿಯ ಯಾವುದೋ ವಿದ್ಯಾರ್ಥಿಗೆ ಐಎಎಸ್, ವೈದ್ಯಕೀಯದಂಥ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿಯ ಅಗತ್ಯವಿರುತ್ತದೆ. ಓದಲು ಪುಸ್ತಕ/ಗ್ರಂಥಾಲಯಗಳಿಲ್ಲ, ಶಾಲಾ ಕಾಲೇಜಿಗೆ ಹೋಗಲು ಬಸ್ ಇಲ್ಲ ಎಂಬ ಕಾರಣಕ್ಕೆ ಅವರ ಕನಸುಗಳು ಕಮರಿ ಹೋಗುವಂತಾದರೆ, ಅದು ರಾಜ್ಯದ ಜನತೆ, ಶಿಕ್ಷಣ ಇಲಾಖೆ/ಸಚಿವರು ಸೇರಿದಂತೆ ಸರಕಾರದ ಮುಖ್ಯಸ್ಥರೂ ತಲೆತಗ್ಗಿಸುವ ವಿಚಾರವಾಗುತ್ತದೆ.

ಗ್ರಂಥಾಲಯಗಳು ಸುಸಜ್ಜಿತವಾಗುವ ಜತೆಗೆ ಆಧುನಿಕತೆಗೂ ಒಡ್ಡಿಕೊಳ್ಳಬೇಕು. ಪುಸ್ತಕಗಳ ಅಪ್‌ಡೇಟ್ ಆಗುತ್ತಿರಬೇಕು. ಅನೇಕ ವರ್ಷಗಳಿಂದ ಗ್ರಾಮೀಣ ಪ್ರದೇಶದ ಗ್ರಂಥಾಲಯಗಳಿಗೆ ಸರಿಯಾಗಿ ಪುಸ್ತಕ ಪೂರೈಕೆ ಆಗುತ್ತಿಲ್ಲ.ಹೊಸ ತಲೆಮಾರಿನ/ಹೊಸದಾಗಿ ಪ್ರಕಟಗೊಂಡ ಪುಸ್ತಕಗಳು ಅಲ್ಲಿ ಸಿಗುತ್ತಿಲ್ಲ. ಈ ಪರಿಸ್ಥಿತಿಯನ್ನು ಇನ್ನಾದರೂಸುಧಾರಿಸಬೇಕು. ಇನ್ನು, ಆನ್‌ಲೈನ್ ಮೂಲಕ ಅಥವಾ ಮೊಬೈಲ್ ಆಪ್‌ಗಳಲ್ಲಿ ಪುಸ್ತಕ ಓದಲು ಅವಕಾಶಮಾಡಿಕೊಡಲಾಗಿದೆ, ಅದನ್ನು ಇನ್ನಷ್ಟು ಸುಧಾರಿಸಬೇಕು. ಈಗಿರುವ ವ್ಯವಸ್ಥೆಯಲ್ಲಿ ಸೀಮಿತ ಪುಸ್ತಕಗಳನ್ನಷ್ಟೇಪಡೆಯಲು ಸಾಧ್ಯವಿದೆ. ಎಲ್ಲಾ ಪುಸ್ತಕಗಳು ಆನ್‌ಲೈನ್‌ನಲ್ಲೇ ಸಿಗುವಂತಾದರೆ, ಹೊಸ ತಲೆಮಾರಿನವರು ಗ್ರಂಥಾಲಯಕ್ಕೆ ಹೋಗಿ ತಮ್ಮ ಫೋನ್, ಟ್ಯಾಬ್, ಲ್ಯಾಪ್‌ಟಾಪ್ ಮೂಲಕ ಓದಿನಲ್ಲಿ ತೊಡಗಿಸಿಕೊಳ್ಳಲು ಅನುಕೂಲವಾಗಲಿದೆ.

ಇದನ್ನೂ ಓದಿ: Gururaj Gantihole Column: ಸರ್ವರ್‌ ಸಮಸ್ಯೆ: ನಂಗೂ ಫ್ರೀ, ನಿಂಗೂ ಫ್ರೀ…!