Saturday, 30th November 2024

ಮನಸ್ಸನ್ನು ಅರ್ಥ ಮಾಡಿಕೊಳ್ಳುವ ಮನಸ್ಸುಗಳು ಬೇಕು !

ಗಂಟಾಘೋಷ

ಗುರುರಾಜ್ ಗಂಟಿಹೊಳೆ

ಮೊನ್ನೆ ಅಮೆರಿಕದಲ್ಲಿ, ಆಟದ ಸಾಮಾನು ಕೊಡಿಸಲು ತಂದೆ ನಿರಾಕರಿಸಿದ್ದಕ್ಕೆ, ಮಗು ಏಕಾಂಗಿತನದ ಒತ್ತಡವನ್ನು ಸಹಿಸಿಕೊಳ್ಳಲು ಸಾಧ್ಯವಾಗದೇ ಮಾನಸಿಕ ಸ್ಥಿಮಿತ ಕಳೆದುಕೊಂಡು ಬಹುಮಹಡಿಯ ಕಿಟಕಿಯಿಂದ ಹಾರಿ ಸಾವನ್ನಪ್ಪಿತು.

ಎಲ್ಲೋ ಉಗ್ರದಾಳಿಯಲ್ಲಿ ಗುಂಡಿನ ಶಬ್ದ ಕೇಳುತ್ತಿದ್ದ ಕಾಲದಿಂದ, ನಮ್ಮ ನಡುವಿನ ಸಮಾಜದಲ್ಲಿ ನಮ್ಮ ಮಕ್ಕಳೇ ಬಹಿರಂಗವಾಗಿ ಗನ್ ಹಿಡಿದು ಕೊಂಡು ವಿನಾಕಾರಣ ಮುಗ್ಧರ ಮೇಲೆ ದಾಳಿ ಮಾಡುತ್ತಿರುವ ಘಟನೆಗಳು ಮನೋವಿಕಾರತೆಯ ತೀವ್ರತೆ ಯುವಜನಾಂಗವನ್ನು ಆವರಿಸಿರುವ ಪರಿ ಯನ್ನು ನಾವು ಗಮನಿಸಬಹುದು. ಇನ್ನು, ಭಾರತದಲ್ಲಿ ಅದೆಷ್ಟೋ ಮನೋವಿಕಲರು ಅಪ್ರಾಪ್ತರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ, ಅಫೀಮುಗಳ ದಾಸರಾಗಿ ಸಮಾಜ ಕಂಟಕದ ಹಾದಿಯಲ್ಲಿ ನಡೆಯುತ್ತಿರುವ ಸಂದರ್ಭಗಳೂ ಸಾಕಷ್ಟಿವೆ.

ಆತಂಕಕಾರಿ ಸಂಗತಿಯೆಂದರೆ, ವಿದ್ಯಾರ್ಥಿಗಳಿಗೆ ಮಾನಸಿಕ ಆರೋಗ್ಯವನ್ನು ನಿಭಾಯಿಸುವ ಮತ್ತು ಅಗತ್ಯವಿರುವ ಸಂಖ್ಯೆಯ ಸಲಹೆಗಾರರ, ಮನೋವೈದ್ಯರ ದೊಡ್ಡ ಕೊರತೆಯು ಭಾರತದಲ್ಲಿದೆ. ೧,೦೦,೦೦೦ ರೋಗಿಗಳಿಗೆ ೦.೭೫ ಮನೋವೈದ್ಯರು ಮಾತ್ರ ಲಭ್ಯವಿದ್ದಾರೆ ಎಂದು ಅಧ್ಯಯನವು
ಹೇಳುತ್ತದೆ.

೨೦೧೭ರ ೨೨ನೇ ನಿಮ್ಹಾ ಘಟಿಕೋತ್ಸವದಲ್ಲಿ ಅಂದಿನ ರಾಷ್ಟ್ರಪತಿ ಕೋವಿಂದ್, ‘ಆರ್ಥಿಕತೆ ಹಾಗೂ ತಂತ್ರಜ್ಞಾನ ಬೆಳೆದಂತೆ ನಗರವೂ ಅಭಿವೃದ್ಧಿ ಯಾಗುತ್ತಿದೆ. ಈ ಬದಲಾವಣೆಗಳ ನಡುವೆ ಬದುಕುತ್ತಿರುವ ಜನರು ಮಾನಸಿಕ ರೋಗಗಳಿಗೆ ಒಳಗಾಗುತ್ತಿದ್ದಾರೆ. ನಿಮ್ಹಾ ನಡೆಸಿದ ಅಧ್ಯಯನವೊಂದರಲ್ಲಿ, ದೇಶದಲ್ಲಿ ಶೇ.೧೦ಕ್ಕಿಂತ ಹೆಚ್ಚು ಭಾರತೀಯರು ಮಾನಸಿಕ ಕಾಯಿಲೆಗಳಿಂದ ಬಳಲುತ್ತಿರುವುದು ಪತ್ತೆಯಾಗಿದೆ. ಯುವಜನರಲ್ಲೂ ಮಾನಸಿಕ ಕಾಯಿಲೆ ಕಂಡುಬಂದಿರುವುದು ಆಘಾತಕಾರಿ’ ಎಂದು ತಿಳಿಸಿದರು. ಇದು ಪ್ರಸ್ತುತ ವರ್ಷಗಳಲ್ಲಿ ದ್ವಿಗುಣಗೊಳ್ಳುತ್ತ ಸಾಗುತ್ತಿರುವುದು ಆತಂಕಕಾರಿಯಾಗಿದೆ.

ಇಂದಿನ ಬಹುತೇಕ ಯುವಕರ ಬಹುದೊಡ್ಡ ಸಮಸ್ಯೆಯೆಂದರೆ ಮಾನಸಿಕ ಒತ್ತಡವನ್ನು ನಿರ್ವಹಿಸುವಲ್ಲಿ, ನಿಭಾಯಿಸುವಲ್ಲಿ ಸೋಲುತ್ತಿರುವುದು. ವೈದ್ಯಲೋಕದಲ್ಲಿ ಮಾನಸಿಕ ಅಸ್ವಸ್ಥತೆಗಳನ್ನು ಸರಿಪಡಿಸುವ ಪರಿಣಾಮಕಾರಿ ಚಿಕಿತ್ಸೆಗಳು ಲಭ್ಯವಿದ್ದರೂ, ಮಾನಸಿಕ ಖಿನ್ನತೆಗೆ ಒಳಗಾದವರು, ಮನೋರೋಗಿಗಳು ಸರಿಯಾದ ಚಿಕಿತ್ಸೆ ಪಡೆಯಲು ಹಿಂಜರಿಯುತ್ತಿರುವುದು ಆತಂಕದ ವಿಷಯ.

ದಶಕಗಳ ಹಿಂದೆ ಖಿನ್ನರಾಗಿ ಮನೆಯಲ್ಲಿ ಮಕ್ಕಳು ಕುಳಿತಿದ್ದರೆ, ಪೋಷಕರು ಅವರನ್ನು ಗದರಿಸಿ, ಶ್ರಮದಾಯಕ ದುಡಿಮೆಗಳಿಗೆ ತೊಡಗಿಸುವಂತೆ ಮಾಡುತ್ತಿದ್ದುದರಿಂದ ಅಂದಿನ ಸಮಸ್ಯೆಗಳು ಅಷ್ಟಾಗಿ ದೊಡ್ಡದೆನಿಸುತ್ತಿರಲಿಲ್ಲ. ಆದರೆ, ಇಂದಿನ ತಲೆಮಾರಿನವರ ಮನಸ್ಥಿತಿ ಎಷ್ಟು ಸೂಕ್ಷ್ಮವಾಗಿದೆ ಯೆಂದರೆ, ಕೆಲಸದಲ್ಲಿ ಸ್ವಲ್ಪ ಏರುಪೇರಾದರೂ ಆತಂಕ, ಖಿನ್ನತೆಗೊಳಗಾಗಿಬಿಡುತ್ತಾರೆ. ಇನ್ನೂ ಕೆಲವರು ಆತ್ಮಹತ್ಯೆಗಳಂತಹ ಮಾರ್ಗ ಹಿಡಿಯುತ್ತಾರೆ. ಈ ಸಮಸ್ಯೆ ತಲೆದೋರಲು ಹತ್ತು ಹಲವು ಕಾರಣಗಳಿವೆ.

ಪ್ರೇಮ ವೈಫಲ್ಯ, ಓದಿನಲ್ಲಿ, ಪರೀಕ್ಷೆಯಲ್ಲಿ ಹಿನ್ನೆಡೆ. ನಿರೀಕ್ಷಿತ ಫಲಿತಾಂಶ ಬರದಿರುವುದು. ಪೋಷಕರು ಹೇರುವ ಒತ್ತಡ, ಬೆದರಿಕೆ ಮತ್ತು ನಿರ್ಲಕ್ಷ್ಯ, ಕೆಲಸದ ಸ್ಥಳಗಳಲ್ಲಿ ನಡೆಯುವ ಶೋಷಣೆ, ಟಾರ್ಗೆಟ್ ರೀಚ್ ಆಗದಿರುವ ಆತಂಕ, ಗುರಿ ತಲುಪುವಲ್ಲಿ ವಿಳಂಬ ಇತ್ಯಾದಿ ವಿಷಯಗಳಿಂದ ಯುವ ಸಮೂಹ ತೀವ್ರವಾಗಿ ಖಿನ್ನತೆಗೊಳಗಾಗಿರುವುದನ್ನು ನಾವೆಲ್ಲ ಗಮನಿಸುತ್ತೇವೆ. ಹೀಗೆ ಮಾನಸಿಕ ಆರೋಗ್ಯ ಹದಗೆಡುತ್ತಿರುವುದು ಒಂದು ಗಂಭೀರ ಸಮಸ್ಯೆಯಲ್ಲವೇ? ಪ್ರಸ್ತುತ ಕುಟುಂಬ ಮತ್ತು ನಮ್ಮ ಸಮಾಜ ಈ ಸಮಸ್ಯೆಯನ್ನು ನಿರ್ಲಕ್ಷಿಸುತ್ತಿರುವುದು ಏಕೆ? ಮಾನಸಿಕ ಆರೋಗ್ಯ ಎಂದರೇನು ಎಂಬುದನ್ನು ವಿವೇಚಿಸಿದಾಗ, ಇದು ಅರಿವಿನ, ವರ್ತನೆಯ ಮತ್ತು ಭಾವನಾತ್ಮಕ ಯೋಗಕ್ಷೇಮವನ್ನು ಸೂಚಿಸುತ್ತದೆ.

ಇದು ಯೋಗಕ್ಷೇಮದ ಸ್ಥಿತಿಯಾಗಿದ್ದು, ಇದರಲ್ಲಿ ಒಬ್ಬ ವ್ಯಕ್ತಿಯು ಯೋಚಿಸುತ್ತಾನೆ, ಅನುಭವಿಸುತ್ತಾನೆ ಮತ್ತು ವರ್ತಿಸುತ್ತಾನೆ. ಪ್ರಸ್ತುತದಲ್ಲಿ ಮಾನಸಿಕ ಆರೋಗ್ಯವು ಅತ್ಯಂತ ಮುಖ್ಯವಾಗಿದ್ದು, ಅದು ನಮ್ಮ ಜೀವನದ ಪ್ರಮುಖ ಭಾಗವಾಗಿದೆ ಮತ್ತು ನಮ್ಮ ಆಲೋಚನೆಗಳು, ನಡವಳಿಕೆಗಳು ಮತ್ತು ಭಾವನೆಗಳ ಮೇಲೆ ಪರಿಣಾಮ ಬೀರುತ್ತವೆ. ಭಾವನಾತ್ಮಕವಾಗಿ ಮತ್ತು ಮಾನಸಿಕವಾಗಿ ಆರೋಗ್ಯವಾಗಿರುವುದು ವ್ಯಕ್ತಿಯ ಸಮರ್ಥ ಕಾರ್ಯನಿರ್ವಹಣೆ ಮತ್ತು ಪರಿಣಾಮಕಾರತ್ವವನ್ನು ಉತ್ತೇಜಿಸುತ್ತದೆ.

ಹಾಗೆಯೇ, ನಮ್ಮ ಸಂಬಂಧಗಳ ಆರೋಗ್ಯದಲ್ಲಿ ಪ್ರಮುಖ ಪಾತ್ರವಹಿಸುತ್ತದೆ ಮತ್ತು ನಮ್ಮ ಜೀವನದಲ್ಲಿ ಬದಲಾವಣೆಗಳಿಗೆ ಹೊಂದಿಕೊಳ್ಳಲು ಮತ್ತು ಪ್ರತಿಕೂಲತೆಯನ್ನು ನಿಭಾಯಿಸಲು ನಮಗೆ ಮಾನಸಿಕ ಸ್ಥಿರತೆ ನೀಡುತ್ತದೆ. ಮಾನಸಿಕ ಅಸ್ವಸ್ಥತೆಗಳ ಹೊರೆಯು ಆರೋಗ್ಯ ಮತ್ತು ಸಾಮಾಜಿಕ, ಮಾನವ ಹಕ್ಕುಗಳು ಮತ್ತು ಆರ್ಥಿಕ ಪರಿಣಾಮಗಳ ಮೇಲೆ ಗಮನಾರ್ಹ ಪರಿಣಾಮಗಳೊಂದಿಗೆ ಬೆಳೆಯುತ್ತಲೇ ಇದೆ. ಭಾರತದಲ್ಲಿಯೇ ಪ್ರತಿವರ್ಷ ೨೦೦ ಮಿಲಿ ಯನ್ ಜನರು ಮಾನಸಿಕ ಖಾಯಿಲೆಗಳಿಂದ ಬಳಲುತ್ತಿದ್ದಾರೆ. ಇತರೆ ಸಾಮಾನ್ಯ ಮಾನಸಿಕ ಆರೋಗ್ಯ ಸಮಸ್ಯೆಗಳೆಂದರೆ- ಬೈಪೋಲಾರ್ ಡಿಸಾರ್ಡರ್, ಸ್ಕಿಜೋ-ನಿಯಾ ಮತ್ತು ಇತರ ಮನೋರೋಗಗಳು, ಬುದ್ಧಿಮಾಂದ್ಯತೆ ಇತ್ಯಾದಿಗಳನ್ನು ನಾವು ಹೆಸರಿಸಬಹುದು.

ಮಾನಸಿಕ ವ್ಯತ್ಯಯಗಳಿರುವ ಮಕ್ಕಳು, ಯುವಕಯುವತಿರ ವರ್ತನೆಗಳನ್ನು ಇಂದಿನ ಪೋಷಕರು, ಹಿರಿಯರು ಸೂಕ್ಷ್ಮವಾಗಿ ಗಮನಿಸದೆ ಹೋದಲ್ಲಿ ಮುಂದೆ ಗಂಭೀರ ಅಪಾಯಕ್ಕೀಡಾಗುವ ಸಾಧ್ಯತೆಗಳೂ ಉಂಟು. ಯಾಕೆಂದರೆ, ಮನಸ್ಸಿಗೆ ಸಂಬಂಧಿಸಿದ ಸೂಕ್ಷ್ಮತೆಗಳನ್ನು ಅರ್ಥಮಾಡಿಕೊಳ್ಳುವ ಸೌಜನ್ಯತೆ ಮತ್ತು ತಾಳ್ಮೆ ತುಂಬಾ ಅಗತ್ಯವಾಗಿದೆ. ಇಂದಿನ ಯಾಂತ್ರಿಕ ಬದುಕಿನ ಜಂಜಾಟದಲ್ಲಿ ಪೋಷಕರು ಹಣಗಳಿಕೆ, ಉದ್ಯೋಗ, ದುಡಿಮೆಗಳತ್ತ ಲಕ್ಷ್ಯ  ಕೊಡುವುದರಿಂದ ಈ ಮನೋಕಾಯಿಲೆಗಳು ಜಾಸ್ತಿಯಾಗಲೂಬಹುದು.

ಮಾನಸಿಕ ಅಸ್ವಸ್ಥತೆಯ ಕೆಲವು ಆರಂಭಿಕ ಲಕ್ಷಣಗಳೆಂದರೆ – ಗೊಂದಲಮಯ ಚಿಂತನೆ, ದುಃಖ ಅಥವಾ ಕಿರಿಕಿರಿ, ಆಸಕ್ತಿಯಿಲ್ಲದಿರುವುದು, ಅಸಮ ತೋಲಿತ ತೀವ್ರ ಮನಸ್ಥಿತಿ ಬದಲಾವಣೆಗಳು, ಅತಿಯಾದ ಭಯ ಅಥವಾ ಚಿಂತೆಗಳು, ತಿನ್ನುವಲ್ಲಿ ಅಥವಾ ಮಲಗುವಲ್ಲಿನ ಅಭ್ಯಾಸಗಳು, ವಿಚಿತ್ರ
ಆಲೋಚನೆಗಳು ಮತ್ತು ಕೋಪದಿಂದ ಕೂಡಿದ ಭಾವನೆಗಳು. ಇದಕ್ಕೆ ಹಲವು ಕಾರಣಗಳಿದ್ದು, ಮುಖ್ಯವಾಗಿ ಮೆದುಳಿನ ಸಂಕೇತ ರಾಸಾಯನಿಕಗಳಲ್ಲಿ ಅಸಮತೋಲನ, ಆರಂಭಿಕ ಬಾಲ್ಯದ ಆಘಾತ, ಮಾದಕವಸ್ತು ಚಟ, ಉದ್ಯೋಗ ನಷ್ಟ, ಪ್ರೀತಿಪಾತ್ರರ ಸಾವು, ಆರ್ಥಿಕ ತೊಂದರೆಗಳು ಅಥವಾ
ವಿಚ್ಛೇದನದಂತಹ ಸಂಕಷ್ಟದ ಜೀವನ ಸನ್ನಿವೇಶಗಳೊಂದಿಗೆ, ಥೈರಾಯ್ಡ್ ಸಮಸ್ಯೆ, ಕ್ಯಾನ್ಸರ್, ಹೃದ್ರೋಗ ಅಥವಾ ದೀರ್ಘಕಾಲದ ನೋವಿನಂತಹ ವೈದ್ಯಕೀಯ ಪರಿಸ್ಥಿತಿಗಳು ಸಹ ಈ ಸಮಸ್ಯೆ ಉದ್ಭವಿಸಲು ಕಾರಣಗಳಾಗಬಹುದು.

ಈ ಒಂದು ಹಂತದಲ್ಲಿ ಮಾನಸಿಕ ಆರೋಗ್ಯ ಬೆಂಬಲದ ಅಗತ್ಯತೆ ತುಂಬಾ ಅವಶ್ಯಕವಾಗಿರುತ್ತದೆ. ಔಷಧಿಗಳು, ಖಿನ್ನತೆ-ಶಮನಕಾರಿಗಳು, ಆತಂಕ-ವಿರೋಧಿ, ಮೂಡ್ -ಸ್ಟೆಬಿಲೈಜರ್‌ಗಳು ಮತ್ತು ಆಂಟಿ ಸೈಕೋಟಿಕ್ ಔಷಧಿಗಳು ಇದಕ್ಕೆ ಪೂರಕವಾಗಿ ಸಹಾಯಮಾಡಬಹುದು. ಇನ್ನು, ಸೈಕೋಥೆರಪಿ ಇದನ್ನು ಟಾಕ್ ಥೆರಪಿ ಎಂದೂ ಕರೆಯುತ್ತಾರೆ, ಮಾನಸಿಕ ಆರೋಗ್ಯ ಚೇತರಿಕೆಯನ್ನು ಉತ್ತೇಜಿಸಲು ಔಷಽಗಳೊಂದಿಗೆ ಸೈಕೋಥೆರಪಿಯು ಅತ್ಯಂತ
ಪರಿಣಾಮಕಾರಿ ಮಾರ್ಗವಾಗಿದೆ. ಕಾಗ್ನಿಟಿವ್ ಬಿಹೇವಿಯರಲ್ ಥೆರಪಿಯು ಮಾನಸಿಕ ಚಿಕಿತ್ಸೆಗೆ ಒಂದು ಉತ್ತಮ ಉದಾಹರಣೆಯಾಗಿದೆ.

ಹಾಗೆಯೇ, ಸಾಮಾನ್ಯ ಮಾನಸಿಕ ಅಸ್ವಸ್ಥತೆಗಳ ಬಗ್ಗೆ ಗಮನಸಿದಾಗ, ಆತಂಕದ ಅಸ್ವಸ್ಥತೆಗಳು, ಮೂಡ್ ಡಿಸಾರ್ಡರ‍್ಸ್, ಸ್ಕಿಜೋಫೆನಿಯಾ ಅಸ್ವಸ್ಥತೆ, ಸಾಮಾನ್ಯ ಆತಂಕದ ಅಸ್ವಸ್ಥತೆ(GAD), ಪ್ಯಾನಿಕ್ ಡಿಸಾರ್ಡರ್ಸ್, ಫೋಬಿಯಾಗಳು, ಒಬ್ಸೆಸಿವ್-ಕಂಪಲ್ಸಿವ್ ಡಿಸಾರ್ಡರ್ (OCD), ಪೋ ಟ್ರಾಮಾಟಿಕ್ ಸ್ಟ್ರೆಸ್ ಡಿಸಾರ್ಡರ್(PTSD) ಇತ್ಯಾದಿಗಳನ್ನು ಹೆಸರಿಸಬಹುದು.

ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಪ್ರತಿಯೊಬ್ಬ ಪೋಷಕರು ತನ್ನ ಮಗು ಅದ್ಭುತವಾದದ್ದನ್ನು ಸಾಧಿಸಬೇಕೆಂದು ಕನಸು ಕಾಣುತ್ತಾರೆ. ಹಾಗಾಗಿ ಆ ಸಾಧನೆಗೆ ಪೂರಕವಾದ ಶಿಕ್ಷಣವನ್ನು ಅದೆಷ್ಟೇ ವೆಚ್ಚ ಭರಿಸಿಯಾದರೂ ನೀಡುತ್ತಾರೆ. ಆದರೆ ಆ ಮಗುವಿನ ಮಾನಸಿಕ ಆರೋಗ್ಯ, ಬುದ್ಧಿಮತ್ತೆಯ ಸಾಮರ್ಥ್ಯದ ಕುರಿತು ಅರಿಯಲು ವಿಫಲರಾಗುತ್ತಾರೆ. ಮಕ್ಕಳಲ್ಲಿ ಮಾನಸಿಕ ದೃಢತೆ, ಸ್ಥಿತಪ್ರಜ್ಞತೆ, ಬೆಳೆಸದೆ ಕೇವಲ ಸಾಧನೆಯಷ್ಟೇ ಮುಖ್ಯವಾದರೆ, ಆ ಮಗು ಜೀವನದಲ್ಲಿ ಗೆಲ್ಲುವುದು ಕಷ್ಟಸಾಧ್ಯ.

ಸಣ್ಣ ಸಮಸ್ಯೆಯನ್ನು ಎದುರಿಸಲಾರದ ಮಗು ಒತ್ತಡ, ಉದ್ವಿಗ್ನತೆಗೆ ಒಳಗಾಗಿ ಜೀವಕ್ಕೆ ಅಪಾಯ ತಂದುಕೊಳ್ಳುವ ನಿರ್ಧಾರಕ್ಕೆ ಬರುತ್ತದೆ. ಹಾಗಾಗಿ ಪೋಷಕರು, ಶಿಕ್ಷಕರು ಮಗುವಿನ ಮಾನಸಿಕ ಆರೋಗ್ಯದ ಕುರಿತು ನಿಗಾ ಇಡುವುದು ಇಂದಿನ ಜರೂರುಗಳಲ್ಲಿ ಒಂದು. ಶಿಕ್ಷಕರು ಮತ್ತು ಪೋಷಕರಾಗಿ, ಕೆಲವೊಮ್ಮೆ ಅವರಿಗೆ ಅಗತ್ಯವಿಲ್ಲದ್ದಿದ್ದರೂ ನಾವು ಮಕ್ಕಳಿಗೆ ಉತ್ತಮ ಪರಿಸರ ಮತ್ತು ಸೌಲಭ್ಯಗಳನ್ನು ನೀಡಲು ಪ್ರಯತ್ನಿಸುತ್ತೇವೆ. ೧೦-೧೯ ವರ್ಷ
ದೊಳಗಿನ ಮಕ್ಕಳಲ್ಲಿ ಅನೇಕ ಮಾನಸಿಕ ಆರೋಗ್ಯ ಸವಾಲುಗಳಿವೆ, ಅದನ್ನು ನಾವು ಗುರುತಿಸುವಲ್ಲಿ ಸೋತಿದ್ದೇವೆ ಎನ್ನಬಹುದು. ಇತ್ತೀಚೆಗಿನ ಕಲಿಕಾ ಕ್ಷೇತ್ರದಲ್ಲಿನ ಕೆಲವು ಶಾಲೆಗಳಲ್ಲಿ ಮಾನಸಿಕ ಸಲಹೆಗಾರರನ್ನು ಸೇರಿಸಲಾಗಿದೆ.

ಹೀಗಿದ್ದರೂ, ವಿದ್ಯಾರ್ಥಿಗಳಲ್ಲಿ ಮಾನಸಿಕ ಆರೋಗ್ಯದ ಮೇಲೆ ಆಗುತ್ತಿರುವ ಪರಿಣಾಮಗಳನ್ನು UNICEF ಮಾಹಿತಿಯ ಪ್ರಕಾರ, ಭಾರತದಲ್ಲಿ ಪ್ರತಿ ೭ ವಿದ್ಯಾರ್ಥಿಗಳಲ್ಲಿ ಒಬ್ಬರಿಗೆ (೧೮-೨೪ ವರ್ಷಗಳು) ಖಿನ್ನತೆ, ಆತಂಕ ಮತ್ತು ನಿರಾಸಕ್ತಿಯಂತಹ ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿzರೆ.
ಕಾಲ ಬದಲಾದಂತೆ ವಿದ್ಯಾರ್ಥಿಗಳಲ್ಲಿ ಭಾವನಾತ್ಮಕ ಉತ್ಸಾಹವನ್ನು ಒತ್ತಡ ಅಥವಾ ಪೋಷಕರ ಒತ್ತಡ, ಲೆಂಗಿಕ ಕಿರುಕುಳ, ಸಂಬಂಧಗಳು, ಸ್ಪರ್ಧೆ, ಗಮನ ಕೊರತೆ, ಲೈಂಗಿಕ ದೃಷ್ಟಿಕೋನ, ವಸ್ತುವಿನ ಬಳಕೆ, ಖಿನ್ನತೆ, ಸಾಮಾಜಿಕ ಸಂಪರ್ಕದಿಂದ ದೂರವಿರುವುದು ಸೇರಿದಂತೆ ಬೆಳೆಯುತ್ತಿರುವ
ಮಾನಸಿಕ ಆರೋಗ್ಯ ಮತ್ತು ಅದರ ಪರಿಣಾಮಗಳನ್ನು ನಿರ್ಧರಿಸುವಲ್ಲಿ ಗೆಳೆಯರ ಒತ್ತಡ ಮತ್ತು ಬೆದರಿಸುವಿಕೆ ಪ್ರಮುಖ ಅಂಶಗಳಾಗಿವೆ.

ಪ್ರೋತ್ಸಾಹಿಸಿ: ವಿದ್ಯಾರ್ಥಿಗಳಿಗೆ ಮಾನಸಿಕ ಆರೋಗ್ಯದ ವಿರುದ್ಧ ಹೋರಾಡಲು ಯಾವುದೇ ಪರೋಕ್ಷ ಮಾರ್ಗವಿಲ್ಲ. ನಿಮ್ಮ ಮಗುವಿಗೆ ಅವರ ಆತಂಕಗಳು, ಪ್ರತಿಬಂಧಗಳು ಮತ್ತು ಅಭದ್ರತೆಗಳ ಬಗ್ಗೆ ಮಾತನಾಡಲು ನೀವು ಪ್ರೋತ್ಸಾಹಿಸಿದರೆ ಅದು ಅವರಿಗೆ ಬಹುದೊಡ್ಡ ಸಹಾಯ ಮಾಡಿದಂತಾ ಗುತ್ತದೆ. ಕೇಳುಗರಾಗಿರಿ: ನಿಮ್ಮ ಮಗುವಿನ ಸಮಸ್ಯೆಯನ್ನು ಯಾವಾಗಲೂ ಆಲಿಸಿ. ಅವರ ಯಾವುದೇ ಸಮಸ್ಯೆಗಳನ್ನು ಬಾಲಿಶ, ಅಪ್ರಸ್ತುತ ಎಂದು ಪರಿಗಣಿಸಬೇಡಿ. ಅವರು ನಿಮ್ಮಲ್ಲಿ ವಿಶ್ವಾಸವಿಟ್ಟರೆ, ತಪ್ಪಾಗುವುದಿಲ್ಲ ಎಂಬ ಭಾವನೆ ಬರುವಂತೆ ಮಾಡಿ.

ಯೋಗ ಮತ್ತು ಧ್ಯಾನ: ಯೋಗ ಮತ್ತು ಧ್ಯಾನದ ಪ್ರಯೋಜನಗಳ ಬಗ್ಗೆ ಎಲ್ಲರಿಗೂ ತಿಳಿದಿದೆ. ಯೋಗ ಮತ್ತು ಧ್ಯಾನವನ್ನು ಸಾಮಾನ್ಯವಾಗಿ ವಿದ್ಯಾರ್ಥಿ ಗಳ ಅಧ್ಯಯನದಲ್ಲಿ ಏಕಾಗ್ರತೆಯನ್ನು ಹೆಚ್ಚಿಸಲು ಪ್ರೋತ್ಸಾಹಿಸಲಾಗುತ್ತದೆ. ಭಾರತದಲ್ಲಿ ಮಾನಸಿಕ ಆರೋಗ್ಯ ಕಾಯಿದೆ ೨೦೧೭ (MHCA ೨೦೧೭) ರೋಗಿಗಳ ಹಕ್ಕುಗಳನ್ನು ನಿರ್ದಿಷ್ಟವಾಗಿ ತಿಳಿಸುತ್ತದೆ. ಈ ಕಾನೂನು ಗೌಪ್ಯತೆಯ ಮೌಲ್ಯ, ತಿಳುವಳಿಕೆಯುಳ್ಳ ಒಪ್ಪಿಗೆ ಮತ್ತು ಮಾನಸಿಕ ಆರೋಗ್ಯ ಚಿಕಿತ್ಸೆಯ ಹಕ್ಕಿನ ಮೇಲೆ ಬಲವಾದ ಒತ್ತು ನೀಡುತ್ತದೆ. ಮಾನಸಿಕ ಆರೋಗ್ಯ ಅಸ್ವಸ್ಥತೆಗಳೊಂದಿಗೆ ರೋಗನಿರ್ಣಯ ಮಾಡಿದ ಜನರು ನಿರ್ಬಂಧ ಮತ್ತು ಪ್ರತ್ಯೇಕತೆಯ ವಿಧಾನಗಳನ್ನು ಒಳಗೊಂಡಂತೆ ಎಲ್ಲಾ ರೀತಿಯ ನಿಂದನೆಗಳಿಂದ ಮುಕ್ತರಾಗುವ ಹಕ್ಕನ್ನು ಹೊಂದಿರುತ್ತಾರೆ. ಅವರು ಹೇಗೆ ಬದುಕಬೇಕು ಎಂಬುದನ್ನು ನಿರ್ಧರಿಸುವ ಹಕ್ಕನ್ನು ಅವರು ಹೊಂದಿದ್ದಾರೆ.

ವಿದ್ಯಾರ್ಥಿಗಳು ಅಥವಾ ನಿಮ್ಮ ಮಕ್ಕಳು ಯಾವುದೇ ಮಾನಸಿಕ ಅಸ್ವಸ್ಥತೆಯ ಲಕ್ಷಣಗಳನ್ನು ತೋರಿಸಿದರೆ, ಕೂಡಲೇ ಅವರೊಂದಿಗೆ ಮಾತನಾಡಿ. ಮೇಲ್ನೋಟಕ್ಕೆ ಅವರು ಉತ್ತಮವಾಗಿ ಕಾಣುತ್ತಿದ್ದರೂ ಸಹ, ಅಂತರಂಗದಲ್ಲಿ ಮನೋವಿಕಾರತೆಗೆ ಒಳಗಾಗಿರಬಹುದು. ಮುಕ್ತಮನಸ್ಸಿನ ಮಾತುಕತೆಗಳು ಅವರನ್ನು ಖಿನ್ನತೆಯಿಂದ ಹೊರಗೆ ಬರಲು ಸಹಾಯ ಮಾಡಬಲ್ಲವು. ಪ್ರತಿವರ್ಷ ಅಕ್ಟೋಬರ್ ೧೦ರಂದು, ವಿಶ್ವ ಮಾನಸಿಕ ಆರೋಗ್ಯ ದಿನವನ್ನು ವಿಶ್ವಾದ್ಯಂತ ಮಾನಸಿಕ ಆರೋಗ್ಯ ಕಾಳಜಿಗಳ ಜಾಗೃತಿಯನ್ನು ಹೆಚ್ಚಿಸುವ ಮತ್ತು ಮಾನಸಿಕ ಆರೋಗ್ಯಕ್ಕೆ ಬೆಂಬಲವನ್ನು ಸಂಘಟಿಸುವ ಗುರಿ ಗಳೊಂದಿಗೆ ಆಚರಿಸಲಾಗುತ್ತಿದೆ. ಮಾನಸಿಕ ಆರೋಗ್ಯದ ಮಹತ್ವವನ್ನು ತಿಳಿದುಕೊಳ್ಳುವ, ಸಾಧ್ಯವಾದಷ್ಟು ಉತ್ತಮ ಮಾನಸಿಕ ಆರೋಗ್ಯ ಹೊಂದುವ ಹಕ್ಕು ಪ್ರತಿಯೊಬ್ಬರಿಗೂ ಇದೆ.

‘ಯದ್ಭಾವಂ ತದ್ಭವತಿ’ ಎಂದು ನಮ್ಮ ಸಂಸ್ಕೃತಿ ಹೇಳುತ್ತದೆ. ‘ನಿನ್ನ ಮನಸ್ಸು ಏನನ್ನು ಯೋಚಿಸುತ್ತದೆಯೋ ಅದು ನೀನಾಗುತ್ತಿಯ’ ಎಂದು ದಾರ್ಶನಿಕ ಬುದ್ಧ ಹೇಳಿದ್ದಾನೆ. ‘ಮನಸ್ಸಿನಂತೆ ಮಾದೇವ’ ಎಂದು ನಮ್ಮ ಜನಸಾಮಾನ್ಯರು ತಮ್ಮ ಅನುಭಾವಿಕ ನುಡಿ ಹೇಳಿzರೆ. ಅಂದರೆ, ನಮ್ಮ ಮನಶ್ಶಕ್ತಿಯಂತೆ ನಮ್ಮ ಬದುಕಿನ ದಿಸೆ ನಿರ್ಧಾರವಾಗುತ್ತದೆ ಎಂದರ್ಥ. ದೈಹಿಕ ಆರೋಗ್ಯ ಎಷ್ಟು ಮುಖ್ಯವೋ, ಮಾನಸಿಕ ಆರೋಗ್ಯ ಕೂಡ ಅಷ್ಟೇ ಮುಖ್ಯ ಎಂಬುದನ್ನು ನಾವಿಂದು ಮನಗಾಣಬೇಕಿದೆ.