ವಿದೇಶ ಫ್ಯಾಷನ್‌ ಲೋಕ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್‌ ಹೌಸ್‌ ಸಂಪಾದಕೀಯ

Vishweshwar Bhat Column: ʼಆಂಡ್-ಆನ್‌ʼ ಅಂದ್ರೆ ಏನು ?

ಯಾಂತ್ರಿಕ ತೊಂದರೆ ಉಂಟಾದಾಗ ತಕ್ಷಣವೇ ಶ್ರಮಿಕರು ಅಥವಾ ಎಂಜಿನಿಯರ್‌ಗಳಿಗೆ ಸೂಚನೆ ನೀಡಲು ಈ ವ್ಯವಸ್ಥೆ ರೂಪಿಸಲಾಗಿದೆ. ಇದು ಕಾರ್ಮಿಕರಿಗೆ ತಕ್ಷಣವೇ ಯಾಂತ್ರಿಕ ಅಥವಾ ಗುಣಮಟ್ಟ ಸಂಬಂಧಿತ ಸಮಸ್ಯೆಗಳನ್ನು ವರದಿ ಮಾಡುವ ಅಧಿಕಾರ ನೀಡುತ್ತದೆ. ಕಾರ್ಯಕ್ಷಮತೆ ಹೆಚ್ಚಿಸುವುದರ ಜತೆಗೆ, ಉತ್ಪಾದನೆಯ ನಿಲುಗಡೆಯಾದ ಭಾಗವನ್ನು ತ್ವರಿತ ವಾಗಿ ಸರಿಪಡಿಸಲು ಸಹಕಾರಿಯಾಗುತ್ತದೆ

ʼಆಂಡ್-ಆನ್‌ʼ ಅಂದ್ರೆ ಏನು ?

ಸಂಪಾದಕರ ಸದ್ಯಶೋಧನೆ

ಜಪಾನಿನಿಂದ ಮರಳಿದ ಬಳಿಕ ನನಗೆ ಆ ದೇಶದ ಹೆಗ್ಗುರುತಿನ ಕಂಪನಿ ಎಂದು ಕರೆಯಿಸಿ ಕೊಳ್ಳುವ ಟೊಯೋಟಾ ಸಂಸ್ಥೆಯ ಬೆಂಗಳೂರು ಘಟಕದಲ್ಲಿ ಮಧ್ಯಮ ಶ್ರೇಯಾಂಕದಲ್ಲಿ ಕೆಲಸ ಮಾಡುವ ಸ್ನೇಹಿತರೊಬ್ಬರ ಪರಿಚಯವಾಯಿತು. ಟೊಯೋಟಾ ಸಂಸ್ಥೆಯಲ್ಲಿ ಆಚರಣೆಯಲ್ಲಿರುವ ಕಾಯಕ ಸಂಸ್ಕೃತಿ ಬಗ್ಗೆ ನಮ್ಮ ಮಾತು ಕತೆ ಕೇಂದ್ರೀಕೃತವಾಗಿತ್ತು. ಅದು ಆ ದೇಶದ ಸಂಸ್ಕೃತಿಯನ್ನೂ ಅನುಸರಿಸುತ್ತಿರುವುದರ ಬಗ್ಗೆ ಅವರು ನನ್ನ ಗಮನ ಸೆಳೆದರು. ಹಾಗೆ ಹೇಳುವಾಗ ಅವರು, “ಜಪಾನಿನಲ್ಲಿನ ಅತ್ಯಂತ ಪ್ರಮುಖ ಮತ್ತು ಪರಿಣಾ ಮಕಾರಿ ಉತ್ಪಾದನಾ ವ್ಯವಸ್ಥೆಗಳಲ್ಲಿ, ‘ಆಂಡ್ -ಆನ್’ ( Andon) ವ್ಯವಸ್ಥೆ ಕೂಡ ಒಂದು" ಎಂದು ಹೇಳಿದರು.

ಇದನ್ನೂ ಓದಿ: Toyota: "ಸಂತೋಷದ ಹಾದಿಯಲ್ಲಿ ಒಟ್ಟಾಗಿ ಸಾಗೋಣ" ಜಾಹೀರಾತು ಅಭಿಯಾನ ಅನಾವರಣ ಗೊಳಿಸಿದ ಟೊಯೋಟಾ ಕಿರ್ಲೋಸ್ಕರ್ ಮೋಟಾರ್

ನಾನು ಆ ಬಗ್ಗೆ ಕೇಳಿರಲಿಲ್ಲ. ಆ ಕುರಿತು ವಿವರಿಸುವಂತೆ ಅವರನ್ನು ಕೋರಿದೆ. “ಆಂಡ್-ಆನ್ (Andon) ಅಂದ್ರೆ ಟೊಯೋಟಾ ಪ್ರೊಡಕ್ಷನ್ ಸಿಸ್ಟಂ (TPS)ನ ಒಂದು ಭಾಗ. ಅದು ನಿರಂತರ ಸುಧಾರಣೆ ಮತ್ತು ಗುಣಮಟ್ಟ ನಿರ್ವಹಣೆಗೆ ಮುಖ್ಯ ಸಾಧನವಾಗಿದೆ ಎಂದು ಸ್ಥೂಲವಾಗಿ ಹೇಳಬಹುದು" ಎಂದರು. ನಾನು ಇನ್ನಷ್ಟು ವಿವರಿಸುವಂತೆ ಹೇಳಿದೆ. ‘ Andon’ ಪದವು ಜಪಾನಿ ಭಾಷೆಯಲ್ಲಿ ಸಿಗ್ನಲ್ ಲೈಟ್ ಅಥವಾ ಸೂಚನಾ ದೀಪ ಎಂಬ ಅರ್ಥವನ್ನು ಹೊಂದಿದೆ.

ಇದನ್ನು ಮುಖ್ಯವಾಗಿ ಉತ್ಪಾದನಾ ಯಂತ್ರಗಳಲ್ಲಿ ಅಥವಾ ಅಸೆಂಬ್ಲಿ ಲೈನಿನಲ್ಲಿ ಯಾವು ದೇ ಸಮಸ್ಯೆ ಉಂಟಾದಾಗ ತಕ್ಷಣ ಗಮನಕ್ಕೆ ತರುವುದಕ್ಕಾಗಿ ಬಳಸಲಾಗುತ್ತದೆ.

ಯಾಂತ್ರಿಕ ತೊಂದರೆ ಉಂಟಾದಾಗ ತಕ್ಷಣವೇ ಶ್ರಮಿಕರು ಅಥವಾ ಎಂಜಿನಿಯರ್‌ಗಳಿಗೆ ಸೂಚನೆ ನೀಡಲು ಈ ವ್ಯವಸ್ಥೆ ರೂಪಿಸಲಾಗಿದೆ. ಇದು ಕಾರ್ಮಿಕರಿಗೆ ತಕ್ಷಣವೇ ಯಾಂತ್ರಿಕ ಅಥವಾ ಗುಣಮಟ್ಟ ಸಂಬಂಧಿತ ಸಮಸ್ಯೆಗಳನ್ನು ವರದಿ ಮಾಡುವ ಅಧಿಕಾರ ನೀಡುತ್ತದೆ. ಕಾರ್ಯಕ್ಷಮತೆ ಹೆಚ್ಚಿಸುವುದರ ಜತೆಗೆ, ಉತ್ಪಾದನೆಯ ನಿಲುಗಡೆಯಾದ ಭಾಗವನ್ನು ತ್ವರಿತ ವಾಗಿ ಸರಿಪಡಿಸಲು ಸಹಕಾರಿಯಾಗುತ್ತದೆ. ಟೊಯೋಟಾ ಕಾರ್ಖಾನೆಯಲ್ಲಿ ಕಾರ್ಮಿಕರು ಮತ್ತು ಎಂಜಿನಿಯರ್‌ಗಳು ತಮ್ಮ ಕಾರ್ಯಸ್ಥಳದಲ್ಲಿ ಒಂದು ಕೇಬಲ್ ಅಥವಾ ಸ್ವಿಚ್ ಹೊಂದಿರುತ್ತಾರೆ.

ಯಾವುದೇ ತೊಂದರೆಯುಂಟಾದಾಗ ಅವರು ‘ಆಂಡ್ -ಆನ್’ ಬಟನ್ ಒತ್ತಬಹುದು. ಇದು ಬೆಳಕು ಅಥವಾ ಧ್ವನಿ ಸಿಗ್ನಲ್ ಮೂಲಕ ಮೇಲಧಿಕಾರಿಗಳಿಗೆ ಎಚ್ಚರಿಕೆ ನೀಡುತ್ತದೆ. ಈ ಬೆಳಕು ಮೂರು ಪ್ರಮುಖ ಬಣ್ಣಗಳಲ್ಲಿ ಇರಬಹುದು. ಹಸಿರು ಬೆಳಕು ಬಂದರೆ ಯಾಂತ್ರಿಕ ವ್ಯವಸ್ಥೆ ಸರಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದರ್ಥ. ಹಳದಿ ಬೆಳಕು ಬಂದರೆ ಚಿಕ್ಕ ಸಮಸ್ಯೆ ಇದೆ, ಆದರೆ ಅದನ್ನು ತಕ್ಷಣ ಸರಿಪಡಿಸಬಹುದಾಗಿದೆ ಎಂದರ್ಥ.

ಕೆಂಪು ಬೆಳಕು ಬಂದರೆ ಗಂಭೀರ ದೋಷವಿದೆ ಮತ್ತು ಉತ್ಪಾದನೆಯನ್ನು ತಾತ್ಕಾಲಿಕವಾಗಿ ತಕ್ಷಣ ನಿಲ್ಲಿಸಬೇಕು ಎಂದರ್ಥ. ಇದರಿಂದ ಏನು ಪ್ರಯೋಜನ? ಹಾಳಾದ ಉತ್ಪನ್ನಗಳು ಮಾರುಕಟ್ಟೆಗೆ ಹೋಗುವುದನ್ನು ತಡೆಯಬಹುದು, ತಕ್ಷಣ ದೋಷವನ್ನು ಗುರುತಿಸುವ ಮೂಲಕ ಉತ್ಪಾದನಾ ವ್ಯತ್ಯಯವನ್ನು ಕಡಿಮೆ ಮಾಡಬಹುದು, ಅನವಶ್ಯಕ ಸಮಯ ನಷ್ಟ ತಡೆಯಬಹುದು, ಉತ್ಪಾದನಾ ಕಾರ್ಯಕ್ಷಮತೆ ಹೆಚ್ಚಿಸಬಹುದು, ಇದು ಕೆಲಸಗಾರರ ನೈತಿಕ ಬದ್ಧತೆಯನ್ನು ವೃದ್ಧಿಸಬಹುದು.

ಟೊಯೋಟಾ ಕಾರ್ಖಾನೆಯಲ್ಲಿ ಬಳಸುವ ‘ಆಂಡ್-ಆನ್’ ವ್ಯವಸ್ಥೆಯು ಸಂವೇದಕಗಳು, ಲೈಟ್ಸ್, ಸೈರನ್‌ಗಳು ಮತ್ತು ತಂತ್ರಾಂಶವನ್ನು ಒಳಗೊಂಡಿದೆ. ಕೆಲವು ಸ್ಥಳಗಳಲ್ಲಿ IoT (Internet of Things) ಆಧರಿತ ‘ಆಂಡ್-ಆನ್’ ವ್ಯವಸ್ಥೆಯನ್ನೂ ಅಳವಡಿಸಲಾಗಿದೆ. ಇದರಿಂದಾಗಿ ದೋಷಗಳು ಸ್ವಯಂಚಾಲಿತವಾಗಿ ವರದಿ ಮಾಡಬಹುದು. ಈ ವ್ಯವಸ್ಥೆಯು ಕೇವಲ ಕಾರ್ಮಿಕರ ಹೊಣೆಯನ್ನು ಮಾತ್ರ ಹೆಚ್ಚಿಸುವುದಿಲ್ಲ, ಅವರ ಕಾರ್ಯಕ್ಷಮತೆ ಯನ್ನೂ ಹೆಚ್ಚುವಂತೆ ಮಾಡುತ್ತದೆ.

‘ Zero Defects’ (ಶೂನ್ಯ ನ್ಯೂನತೆ) ತತ್ವವನ್ನು ಅನುಸರಿಸುವ ಮೂಲಕ ಕಾರ್ಖಾನೆ ಗಳಲ್ಲಿ ಉತ್ತಮ ಗುಣಮಟ್ಟದ ಉತ್ಪನ್ನಗಳ ಉತ್ಪಾದನೆಯನ್ನು ಖಚಿತಪಡಿಸುತ್ತದೆ. ‘ಆಂಡ್ - ಆನ್’ ವ್ಯವಸ್ಥೆಯು ಕೇವಲ ಟೊಯೋಟಾ ಮಾತ್ರವಲ್ಲ, ಇಡೀ ಮ್ಯಾನ್ಯು ಫ್ಯಾಕ್ಚರಿಂಗ್ ಉದ್ಯಮದಲ್ಲಿ ಒಂದು ಕ್ರಾಂತಿಕಾರಿ ಪರಿಕಲ್ಪನೆಯಾಗಿದೆ.

ಇದು ಕಾರ್ಯಕ್ಷಮತೆ, ಗುಣಮಟ್ಟ ಮತ್ತು ನಿರಂತರ ಸುಧಾರಣೆಗೆ ಮಾರ್ಗದರ್ಶಿಯಾಗಿ ಕಾರ್ಯನಿರ್ವಹಿಸುತ್ತದೆ. ಈ ತಂತ್ರವನ್ನು ಅಳವಡಿಸಿಕೊಂಡು, ಹಲವಾರು ಕಂಪನಿಗಳು ಲಾಭ ಗಳಿಸುತ್ತಿವೆ ಮತ್ತು ಉತ್ಪಾದನಾ ವೆಚ್ಚವನ್ನು ಕಡಿಮೆ ಮಾಡಿಕೊಳ್ಳುತ್ತಿವೆ. ಇದು ಲೀನ್ ಮ್ಯಾನ್ಯುಫ್ಯಾಕ್ಚರಿಂಗ್ ತಂತ್ರದ ಅತ್ಯುತ್ತಮ ಉದಾಹರಣೆಯಾಗಿದ್ದು, ಜಗತ್ತಿನ ಹಲವಾರು ಕಂಪನಿಗಳು ಇದನ್ನು ಅನುಸರಿಸುತ್ತಿವೆ.