ವಿದೇಶ ಫ್ಯಾಷನ್‌ ಲೋಕ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್‌ ಹೌಸ್‌ ಸಂಪಾದಕೀಯ

Roopa Gururaj Column: ಲಾಭ-ನಷ್ಟವನ್ನೂ ಮೀರಿದ್ದು ಹೃದಯ- ಬಾಂಧವ್ಯ

ಕಾರಿನಲ್ಲೇ ಕೂತಿದ್ದ ಗಂಡ ಈ ಚೌಕಾಸಿ ವ್ಯಾಪಾರವನ್ನು ನೋಡುತ್ತಾ ನಗುತ್ತಿದ್ದ. ಆ ಹುಡುಗಿ ಹಣ್ಣನ್ನು ತಂದು ಕಾರಿನಿಂದ ಹೊರಗೆ ಕೈಚಾಚಿದ್ದ ಆ ಮಗುವಿನ ಕೈಗೆ ಕೊಟ್ಟರೂ ಅದು ಕೈ ನಿಂದ ಜಾರಿ ಕೆಳಗೆ ಬಿತ್ತು. ಕಾರಲ್ಲಿದ್ದ ಆ ಮಗು ಅಳಲು ಶುರು ಮಾಡಿತು. ಆ ಹುಡುಗಿ ಓಡಿ ಹೋಗಿ ಮತ್ತೊಂದು ಹಣ್ಣನ್ನು ತಂದು ಜಾಗರೂಕತೆಯಿಂದ ಕೊಟ್ಟಳು. ಮಹಿಳೆ ಆಕೆಯ ಕೈಗೆ 80 ರುಪಾಯಿ ಕೊಟ್ಟಳು

ಲಾಭ-ನಷ್ಟವನ್ನೂ ಮೀರಿದ್ದು ಹೃದಯ- ಬಾಂಧವ್ಯ

ಒಂದೊಳ್ಳೆ ಮಾತು

ರಸ್ತೆಯ ಪಕ್ಕದಲ್ಲಿ ಪುಟ್ಟ ಹುಡುಗಿಯೊಬ್ಬಳು ಕಲ್ಲಂಗಡಿ ಹಣ್ಣನ್ನು ಇಟ್ಟುಕೊಂಡು ಮಾರುತ್ತಿದ್ದಳು. ಗಂಡ-ಹೆಂಡತಿ-ಮಗು ಪ್ರಯಾಣಿಸುತ್ತಿದ್ದ ಕಾರೊಂದು ಅಲ್ಲಿ ಬಂದು ನಿಂತಿತು. ಅದರಿಂದ ಕೆಳಗಿಳಿದ ಮಹಿಳೆಯು, “ಒಂದು ಹಣ್ಣಿಗೆ ಎಷ್ಟಮ್ಮಾ?" ಎಂದು ಕೇಳಿದಳು.

ಅದಕ್ಕೆ ಆ ಹುಡುಗಿ, “40 ರುಪಾಯಿ" ಎಂದಳು.

“20 ರು. ಕೊಡ್ತೀನಿ ಕೊಡು" ಎಂದಳು ಮಹಿಳೆ.

“ಇಲ್ಲ" ಎಂದಳು ಆ ಹುಡುಗಿ.

ಪಟ್ಟು ಬಿಡದ ಮಹಿಳೆ, “30ಕ್ಕಾದರೂ ಕೊಡು" ಎಂದಳು.

“ನಾನು ತಂದಿದ್ದೇ 35ಕ್ಕೆ. 30 ರುಪಾಯಿಗೆ ಬರೋದಿಲ್ಲ" ಎಂದಳು ಹುಡುಗಿ.

“ಸರಿ ಹಾಗಿದ್ರೆ, ಕೊಡು" ಎಂದಳು ಮಹಿಳೆ.

ಕಾರಿನಲ್ಲೇ ಕೂತಿದ್ದ ಗಂಡ ಈ ಚೌಕಾಸಿ ವ್ಯಾಪಾರವನ್ನು ನೋಡುತ್ತಾ ನಗುತ್ತಿದ್ದ. ಆ ಹುಡುಗಿ ಹಣ್ಣನ್ನು ತಂದು ಕಾರಿನಿಂದ ಹೊರಗೆ ಕೈಚಾಚಿದ್ದ ಆ ಮಗುವಿನ ಕೈಗೆ ಕೊಟ್ಟರೂ ಅದು ಕೈನಿಂದ ಜಾರಿ ಕೆಳಗೆ ಬಿತ್ತು. ಕಾರಲ್ಲಿದ್ದ ಆ ಮಗು ಅಳಲು ಶುರು ಮಾಡಿತು. ಆ ಹುಡುಗಿ ಓಡಿಹೋಗಿ ಮತ್ತೊಂದು ಹಣ್ಣನ್ನು ತಂದು ಜಾಗರೂಕತೆಯಿಂದ ಕೊಟ್ಟಳು. ಮಹಿಳೆ ಆಕೆಯ ಕೈಗೆ 80 ರುಪಾಯಿ ಕೊಟ್ಟಳು. ಎಣಿಸಿಕೊಂಡ ಆ ಹುಡುಗಿ 40 ರುಪಾಯಿ ಯನ್ನು ವಾಪಸ್ ಕೊಟ್ಟಳು. ಕೆಲ ಕ್ಷಣಗಳ ಹಿಂದೆ ಚೌಕಾಸಿ ಮಾಡಿದ್ದ ಆ ಮಹಿಳೆ, ಒತ್ತಾಯ ಮಾಡಿ ಕೊಡಲು ಯತ್ನಿಸಿದರೂ ಆ ಹುಡುಗಿ ಸುತರಾಂ ತೆಗೆದುಕೊಳ್ಳಲಿಲ್ಲ. ‌

ಇದನ್ನೂ ಓದಿ: Roopa Gururaj Column: ಸಹಾಯ ಮಾಡಿದವರನ್ನು ಮರೆಯಬಾರದು

“ನಿನ್ನ ಹಣ್ಣನ್ನು ಬೀಳಿಸಿದ್ದು ನನ್ನ ಮಗ, ನಿನಗೆ ನಷ್ಟ ಆಗುತ್ತದೆ ತೆಗೆದುಕೋ" ಎಂದಳು ಮಹಿಳೆ. ಅದಕ್ಕೆ ಆ ಹುಡುಗಿ, “ಇಲ್ಲ, ನಷ್ಟ ಮಾಡಿದ್ದು ನನ್ನ ತಮ್ಮನಂಥ ಆ ಮಗು. ಹಾಗಾಗಿ ಅದು ನಷ್ಟವೇನಲ್ಲ ಬಿಡಿ" ಎಂದಳು! ಮಹಿಳೆ ಅದೆಷ್ಟು ಒತ್ತಾಯಿಸಿದರೂ ಒಪ್ಪದ ಆ ಹುಡುಗಿ, “ಇಲ್ಲಮ್ಮ, ಸಂಬಂಧಗಳಲ್ಲಿ ಲಾಭ-ನಷ್ಟಗಳನ್ನು ಲೆಕ್ಕಿಸಬೇಡ ಅಂತ ನನ್ನಮ್ಮ ಹೇಳಿದ್ದಾಳೆ.

ಹಾಗಾಗಿ ಕೆಳಗೆ ಬಿದ್ದು ನಷ್ಟವಾದ ಹಣ್ಣನ್ನು ನಾನು ಲೆಕ್ಕಕ್ಕೆ ತೆಗೆದುಕೊಳ್ಳುವುದಿಲ್ಲ" ಎಂದಳು. ಈ ಮಾತಿಗೆ ಭಾವುಕಳಾದ ಆ ಮಹಿಳೆ, “ನಿಮ್ಮ ಮನೆಯಲ್ಲಿ ಯಾರ‍್ಯಾರು ಇದ್ದೀರಿ ಪುಟ್ಟೀ?" ಎಂದು ಕೇಳಿದಳು.

“ನಾನು ಮತ್ತು ನನ್ನಮ್ಮ ಮಾತ್ರ ಇದ್ದೇವೆ. ಸ್ವಲ್ಪ ದಿನಗಳ ಕೆಳಗೆ ನನ್ನ ತಮ್ಮ ಕಾಯಿಲೆ ಯಿಂದ ನರಳಿ ಸತ್ತುಹೋದ. ನಿಮ್ಮ ಮಗನನ್ನು ನೋಡಿ ಆತ ನನಗೆ ನೆನಪಾದ. ಹಾಗಾಗಿ ನನ್ನ ತಮ್ಮನಂಥ ಆತ ತಿಂದಿದ್ದರೂ, ಕೆಳಗೆ ಬೀಳಿಸಿ ಒಡೆದುಹಾಕಿದ್ದರೂ ಅದು ನನಗೆ ಪ್ರೀತಿಯೇ. ಇಲ್ಲಿ ನಷ್ಟದ ಮಾತೇ ಇಲ್ಲ" ಎಂದು ಹೇಳಿ ತಾನು ಹಣ್ಣುಗಳನ್ನು ಜೋಡಿಸಿ ಟ್ಟುಕೊಂಡಿದ್ದ ಜಾಗಕ್ಕೆ ತೆರಳಿದಳು.

ಒಂದು ಹಣ್ಣಿಗಾಗಿ ಚೌಕಾಸಿ ಮಾಡಿದ್ದ ಮಹಿಳೆ ಈಗ ಕಾರಿನಿಂದಿಳಿದು ಹೋಗಿ, ತನ್ನ ಪರ್ಸಿನಲ್ಲಿದ್ದ 5000 ರುಪಾಯಿಗಳನ್ನು ಆ ಹುಡುಗಿಗೆ ಕೊಟ್ಟಳು. ಅಚ್ಚರಿಗೊಂಡ ಆ ಹುಡುಗಿ, “ಇಷ್ಟೊಂದು ನನಗೇಕೆ? ಬೇಡ" ಎಂದಳು.

ಆಗ ಆ ಮಹಿಳೆ, “ಹಾಗೆಲ್ಲಾ ಬೇಡ ಎನ್ನಬಾರದು, ತೆಗೆದುಕೋ. ಈ ಹಣವನ್ನು ನಾನು ಕೊಡುತ್ತಿರುವುದು ಬೇರಾರಿಗೋ ಅಲ್ಲ, ನನ್ನ ಮಗಳಿಗೆ" ಎಂದು ಹೇಳಿ ಒತ್ತಾಯ ಮಾಡಿ ದಾಗ ಅದನ್ನು ತೆಗೆದುಕೊಂಡ ಆ ಹುಡುಗಿ, ಪ್ರೀತಿಯಿಂದ ಮತ್ತೊಂದು ಹಣ್ಣನ್ನು ತಂದು ಕಾರಿನಲ್ಲಿದ್ದ ಆ ಮಗುವಿಗೆ ಕೊಟ್ಟಳು.

ಇವಿಷ್ಟನ್ನೂ ಗಮನಿಸುತ್ತಿದ್ದ ಗಂಡನಿಗೆ ಅಚ್ಚರಿಯೋ ಅಚ್ಚರಿ! ಕೇವಲ ಐದು-ಹತ್ತು ರುಪಾಯಿಗೆ ಚೌಕಾಸಿ ಮಾಡಿದ ಹೆಂಡತಿ, ತನ್ನ ಪರ್ಸಿನಲ್ಲಿದ್ದ ಅಷ್ಟೂ ಹಣವನ್ನು ಆ ಹುಡುಗಿಗೆ ಕೊಟ್ಟಿದ್ದೇಕೆ? ಅಂತ ಗೊತ್ತಾಗದೆ ಅವಳ ಮುಖವನ್ನೇ ನೋಡುತ್ತಿದ್ದ.

ಅವನನ್ನು ಗಮನಿಸದ ಹೆಂಡತಿ ತನ್ನ ಅಣ್ಣನ ಜತೆ ಫೋನ್‌ನಲ್ಲಿ ಹೀಗೆ ಮಾತ ನಾಡುತ್ತಿದ್ದಳು: “ಅಣ್ಣಾ, ನನಗೆ ನಿನ್ನ ಪ್ರೀತಿಯಷ್ಟೇ ಸಾಕು. ಆಸ್ತಿಯ ಸಂಬಂಧವಾಗಿ ನಿನ್ನ ಮೇಲೆ ಹಾಕಿದ್ದ ಕೇಸುಗಳನ್ನು ವಾಪಸ್ ಪಡೆಯುತ್ತಿದ್ದೇನೆ. ಸಂಬಂಧಗಳಲ್ಲಿ ಲಾಭ-ನಷ್ಟದ ಲೆಕ್ಕಾಚಾರವನ್ನು ಇಡಬಾರದು ಅಂತ ಈಗಷ್ಟೇ ಒಂದು ಪುಟ್ಟಹುಡುಗಿ ನನಗೆ ಕಲಿಸಿಕೊಟ್ಟಳು....".

ಪ್ರಾಪಂಚಿಕ ವಸ್ತುಗಳಿಗೆ, ಸುಖಗಳಿಗೆ ಅತಿಯಾಗಿ ಬೆಲೆ ಕೊಡುವ ನಾವು ಇಂದು ಸಂಬಂಧ ಗಳನ್ನು ಮರೆತೇಬಿಟ್ಟಿದ್ದೇವೆ. ಒಮ್ಮೆ ನೆನಪು ಮಾಡಿಕೊಳ್ಳಿ- ನಮ್ಮ ಅಣ್ಣ, ತಮ್ಮ, ಅಕ್ಕ, ತಂಗಿಯ ಜತೆ ನಾವು ಕಳೆದ ಕ್ಷಣಗಳನ್ನು; ಸುಖ-ಸಂತೋಷ, ದುಃಖ, ಆಪ್ತತೆ ಇವೆಲ್ಲವುಗಳ ಮೂಟೆಯಾಗಿದ್ದ ಅವು ನಮ್ಮ ಬದುಕಿನ ಅತ್ಯಮೂಲ್ಯ ಕ್ಷಣಗಳು. ಅದೆಷ್ಟೇ ಹಣ ಕೊಟ್ಟರೂ ಅಂಥ ಗಳಿಗೆಗಳನ್ನು ನಾವು ಮತ್ತೆ ಸೃಷ್ಟಿಮಾಡಲು ಸಾಧ್ಯವಿಲ್ಲ.