ವಿದೇಶ ಫ್ಯಾಷನ್‌ ಲೋಕ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್‌ ಹೌಸ್‌ ಸಂಪಾದಕೀಯ

ಸಹಸ್ರಾರು ಭಕ್ತರ ಸಾಕ್ಷಿಯಲ್ಲಿ ವೈಭವದಿಂದ ನಡೆದ ಭೋಗನಂದೀಶ್ವರಸ್ವಾಮಿ ಬ್ರಹ್ಮ ರಥೋತ್ಸವ

ತಾಲೂಕಿನ ನಂದಿ ಗ್ರಾಮದಲ್ಲಿ ಗಂಗರಸರ ಕಾಲದಲ್ಲಿ ನಿರ್ಮಾಣವಾಗಿರುವ ಶ್ರೀಭೋಗ ನಂದೀಶ್ವರ ಕ್ಷೇತ್ರವನ್ನು ದಕ್ಷಿಣ ಕಾಶಿಯೆಂದೇ ಭಕ್ತರು ಕರೆದಿದ್ದಾರೆ. ಸಾವಿರಾರು ವರ್ಷ ಗಳಿಂದ ಮಹಾಶಿವರಾತ್ರಿ ಹಬ್ಬದ ಮಾರನೆಯ ದಿನ ಇಲ್ಲಿ ನಡೆಯುವ ಶ್ರೀಭೋಗನಂದೀಶ್ವರ, ಗಿರಿಜಾಂಭ ಗಣಪತಿ ದೇವರ ಜೋಡಿ ಬ್ರಹ್ಮ ರಥೋತ್ಸವಕ್ಕೆ ಐತಿಹಾಸಿಕ ಮಹತ್ವ ಇರುವಂತೆ ಧಾರ್ಮಿಕ ಮಹತ್ವವೂ ಇರುವುದರಿಂದ ಜನಸಾಗರದ ನಡುವೆ ರಥೋತ್ಸವ ನಡೆಯುವುದು ಇಲ್ಲಿನ ವಿಶೇಷ

ಹರನಾಮಸ್ಮರಣೆಯಲ್ಲಿ ಮಿಂದೆದ್ದ ಫಲಪುಷ್ಮಗಿರಿವನಗಳ ಸೀಮೆಯ ಜನತೆ

ಹರ್ಷೋದ್ಗಾರಗಳ ನಡುವೆ ಸಾಗುತ್ತಿರುವ ರಥಗಳ ವಿಹಂಗಮ ನೋಟ..

Profile Ashok Nayak Feb 28, 2025 11:19 AM

ಹರ್ಷೋದ್ಗಾರದ ನಡುವೆ ರಥೋತ್ಸವಕ್ಕೆ ಚಾಲನೆ ನೀಡಿದ ಉಸ್ತುವಾರಿ ಸಚಿವ ಡಾ.ಎಂ.ಸಿ ಸುಧಾಕರ್

ಚಿಕ್ಕಬಳ್ಳಾಪುರ :ಸಹಸ್ರಾರು ಭಕ್ತರ ಹರನಾಮಸ್ಮರಣೆ,ಹರಹರಮಹದೇವ್ ಜಯ ಘೋಷದ ನಡುವೆ ನಂದಿ ಗ್ರಾಮದಲ್ಲಿರುವ ಐತಿಹಾಸಿಕ ಶ್ರೀಭೋಗನಂದೀಶ್ವರ, ಗಿರಿಜಾಂಭ ಗಣಪತಿ ದೇವರ ಜೋಡಿ ಬ್ರಹ್ಮ ರಥೋತ್ಸವ  ಗುರುವಾರ ವೈಭವದಿಂದ ನಡೆಯಿತು.

ತಾಲೂಕಿನ ನಂದಿ ಗ್ರಾಮದಲ್ಲಿ ಗಂಗರಸರ ಕಾಲದಲ್ಲಿ ನಿರ್ಮಾಣವಾಗಿರುವ ಶ್ರೀಭೋಗ ನಂದೀಶ್ವರ ಕ್ಷೇತ್ರವನ್ನು ದಕ್ಷಿಣ ಕಾಶಿಯೆಂದೇ ಭಕ್ತರು ಕರೆದಿದ್ದಾರೆ. ಸಾವಿರಾರು ವರ್ಷ ಗಳಿಂದ ಮಹಾಶಿವರಾತ್ರಿ ಹಬ್ಬದ ಮಾರನೆಯ ದಿನ ಇಲ್ಲಿ ನಡೆಯುವ ಶ್ರೀಭೋಗನಂದೀ ಶ್ವರ, ಗಿರಿಜಾಂಭ ಗಣಪತಿ ದೇವರ ಜೋಡಿ ಬ್ರಹ್ಮ ರಥೋತ್ಸವಕ್ಕೆ ಐತಿಹಾಸಿಕ ಮಹತ್ವ ಇರುವಂತೆ ಧಾರ್ಮಿಕ ಮಹತ್ವವೂ ಇರುವುದರಿಂದ ಜನಸಾಗರದ ನಡುವೆ ರಥೋತ್ಸವ ನಡೆಯುವುದು ಇಲ್ಲಿನ ವಿಶೇಷ.

ಇದನ್ನೂ ಓದಿ: Chikkaballapur Crime: ಹಬ್ಬದ ದಿನವೇ ಆದಿಯೋಗಿ ದರ್ಶನಕ್ಕೆ ಬಂದ ಇಬ್ಬರು ಯುವಕರು ಅಪಘಾತಕ್ಕೆ ಬಲಿ

ಗುರುವಾರ ನಡೆದ ಶ್ರೀಭೋಗನಂದೀಶ್ವರ,ಗಿರಿಜಾAಭ ಗಣಪತಿ ಸಹಿತ ಜೋಡಿ ರಥೋ ತ್ಸವಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್, ಶಾಸಕ ಪ್ರದೀಪ್ ಈಶ್ವರ್, ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ, ಸಿಇಒ ಪ್ರಕಾಶ್ ನಿಟ್ಟಾಲಿ, ಎಸ್ಪಿ ಕುಶಾಲ್ ಚೌಕ್ಸೆ ಸಮ್ಮುಖ ದಲ್ಲಿ ವೈಭವಯುತವಾಗಿ ನಡೆಯಿತು.

ಇದೇ ಮೊದಲ ಬಾರಿಗೆ ದೇವಾಲಯಕ್ಕೆ ಅರ್ಪಣೆ ಆಗಿರುವ ಅಷ್ಟಮಠಗಳ ರಥಗಳ ಮಾದರಿ ದೊಡ್ಡ ರಥದಲ್ಲಿ ಭೋಗನಂದೀಶ್ವರಸ್ವಾಮಿ, ಎರಡನೇ ಕಲ್ಲಿನ ರಥದಲ್ಲಿ ಗಿರಿ ಜಾಂಭ ಗಣಪತಿಯ ಉತ್ಸವಮೂರ್ತಿ ಪ್ರತಿಷ್ಠಾಪಿಸಲಾಗಿತ್ತು. ಎರಡೂ ರಥಗಳನ್ನು ಬಣ್ಣದ ಪತಾಕೆ,ಪಟಗಳು ಮತ್ತು ಹೂವುಗಳಿಂದ ಅಲಂಕರಿಸಲಾಗಿತ್ತು.ಸ್ವರ್ಗವೇ ಧರೆಗಿಳಿ ದಂತೆ ಸಿಂಗಾರಗೊAಡಿದ್ದ ಜೋಡಿ ರಥಗಳನ್ನು ಭಕ್ತರು ಮತ್ತು ಗಣ್ಯರು ದೇವಸ್ಥಾನದ ಆವರಣದ ಸುತ್ತ ಎಳೆದು ಪುನೀತರಾದರು. ಈ ವೇಳೆ ಹರಕೆಹೊತ್ತಿದ್ದ ಸಹಸ್ರಾರು ಭಕ್ತರು ರಥೋ ತ್ಸವಕ್ಕೆ ಸಾಕ್ಷಿಯಾಗಿದ್ದ ಜನತೆ ರಥಗಳ ಮೇಲೆ ಬಾಳೆ ಹಣ್ಣು ಧವನವನ್ನು ಎಸೆದು ಧನ್ಯತಾ ಭಾವ ಮೆರೆದರು.    

ಗುರುವಾರ ಮಧ್ಯಾಹ್ನ 12.10ಕ್ಕೆ ರಥೋತ್ಸವಕ್ಕೆ ಚಾಲನೆ ನೀಡಿದ ನಂತರ ಮಾದ್ಯಮ ದೊಂದಿಗೆ ಮಾತಾಡಿದ  ಸಚಿವ ಡಾ.ಎಂ.ಸಿ.ಸುಧಾಕರ್ ಮಾತನಾಡಿ ಮಹಾಶಿವರಾತ್ರಿಯ ಸಂದರ್ಭದಲ್ಲಿ ನಡೆಯುವ ಜೋಡಿ ರಥೋತ್ಸವದಲ್ಲಿ ಭಾಗಿಯಾಗಿ ಚಾಲನೆ ನೀಡುವ ಅವಕಾಶ ದೊರೆತಿರುವುದು ಪೂರ್ವಜನ್ಮದ ಪುಣ್ಯ.ಗಿರಿಜಾಂಭ ಸಹಿತ ಭೋಗನಂದೀಶ್ವರ ಸ್ವಾಮಿ ಜನತೆಗೆ ಆಯುರಾರೋಗ್ಯಭಾಗ್ಯ ಕರುಣಿಸಲಿ, ಜನಜಾನುವಾರುಗಳ ದಾಹ ನೀಗಿಸಲು ಈಬಾರಿ ಒಳ್ಳೆಯ ಮಳೆ ಬೆಳೆ ಕರುಣಿಸಲಿ ಎಂದು ಬೇಡಿಕೊಂಡಿದ್ದೇನೆ ಎಂದ ಅವರು ಇಂತಹ ಮಹತ್ಕಾರ್ಯದಲ್ಲಿ ಭಾಗಿಯಾಗಲು ಜಿಲ್ಲೆಯಷ್ಟೇ ಅಲ್ಲದೆ ರಾಜ್ಯದ ನಾನಾ ಪ್ರದೇಶಗಳಿಂದ ಬಂದಿರುವ ಜನತೆ ಸಾವಿರಾರು ಸಂಖ್ಯೆಯಲ್ಲಿ ಬಂದಿದ್ದು ಅವರೆ ಲ್ಲರೂ ಕ್ಷೇಮವಾಗಿ ಅವರ ಕುಟುಂಬವನ್ನು ಸೇರುವಂತಾಗಲಿ ಎಂದು ಕೂಡ ಭಗವಂತನಲ್ಲಿ ಪ್ರಾರ್ಥಿಸಿದ್ದಾಗಿ ತಿಳಿಸಿದರು.

ಮಹಾಶಿವರಾತ್ರಿ ಪ್ರಯುಕ್ತ ಬುಧವಾರದಿಂದಲೇ ದೇವಸ್ಥಾನದಲ್ಲಿ ವಿಶೇಷ ಅಭಿಷೇಕ ಮತ್ತು ಹವನ ಹೋಮ, ಹಂಸ ವಾಹನೋತ್ಸವ, ಮಹಾನ್ಯಾಸ ಪೂರ್ವಕ ಏಕದಶವಾರ ರುದ್ರಾಭಿಷೇಕ, ಕಾಶಿಯಾತ್ರೆ, ಹರಿಕಥೆ, ಭಜನೆ, ಕಲ್ಯಾಣೋತ್ಸವ ಸೇರಿದಂತೆ ಅನೇಕ ಧಾರ್ಮಿಕ ಕೈಂಕರ್ಯಗಳನ್ನು ನಡೆದವು.

ಗುರುವಾರ ಸಹ ಬೆಳಗಿನ ಜಾವ ಮೂರು ಮತ್ತು ನಾಲ್ಕನೇ ಯಾಮದ ಮಹಾನ್ಯಾಸ ಪೂರ್ವಕ ಏಕದಶವಾರ ರುದ್ರಾಭಿಷೇಕಗಳನ್ನು ನೇರವೇರಿಸಲಾಯಿತು. ದೇವಾಲಯ ದಲ್ಲಿಯೇ ಶಿವರಾತ್ರಿ ಉಪವಾಸ ಸಹಿತ ಪಾರಣೆ ಮಾಡಿದ ಭಕ್ತರಿಗೆ ತೀರ್ಥಪ್ರಸಾದ ಸಹಿತ ಊಟೋಪಚಾರದ ವ್ಯವಸ್ಥೆ ಮಾಡಲಾಗಿತ್ತು. ರಥೋತ್ಸವದ ಅಂಗವಾಗಿ ಭಕ್ತರು ಬೆಳಿಗ್ಗೆಯಿಂದಲೇ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸುತ್ತಿದ್ದ ದೃಶ್ಯ ಕಂಡು ಬಂತು.

ಚಿಕ್ಕಬಳ್ಳಾಪುರ ತಾಲೂಕು ಮಾತ್ರವಲ್ಲದೆ ನೆರೆಯ ಆಂಧ್ರಪ್ರದೇಶ, ತೆಲಾಂಗಣ ಮತ್ತು ತಮಿಳುನಾಡಿನಿಂದ ಕೂಡ ನಂದಿ ಜಾತ್ರೆಗೆ ಭಕ್ತರ ದಂಡೇ ಹರಿದು ಬಂದಿತ್ತು. ಹರಕೆ ಹೊತ್ತ ಭಕ್ತರು ದೇವರಿಗೆ ಮುಡಿ ಕೊಟ್ಟು, ಪುಷ್ಕರಣಿಯಲ್ಲಿ ಸ್ನಾನ ಮಾಡಿ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿದರು. ಜಾತ್ರೆಗೆ ಬಂದವರ ಹಸಿವು, ದಣಿವು ದೂರ ಮಾಡಲು ಅನೇಕ ಕಡೆಗಳಲ್ಲಿ ಭಕ್ತರು ವಾಹನಗಳಲ್ಲಿ ಪಾನಕ, ಮಜ್ಜಿಗೆ, ಕೋಸಂಬರಿ ಮತ್ತು ಉಪಾಹಾರ ವಿತರಣೆ ಮಾಡುತ್ತಿದ್ದ ದೃಶ್ಯಗಳು ಕಂಡು ಬಂದವು.

ಭರ್ಜರಿ ವ್ಯಾಪಾರ: ದೇಗುಲದ ಸುತ್ತಲು ತಲೆ ಎತ್ತಿದ್ದ ಪೂಜಾ ಸಾಮಗ್ರಿ, ತಿಂಡಿ ತಿನಿಸು, ಆಟಿಕೆ ವಸ್ತುಗಳು, ಗೃಹೋಪಯೋಗಿ ವಸ್ತುಗಳು, ಅಲಂಕಾರಿಕ ವಸ್ತುಗಳು, ಹಣ್ಣು, ತಂಪು ಪಾನೀಯ ಸೇರಿದಂತೆ ವಿವಿಧ ಬಗೆಯ ಮಳಿಗೆಗಳಲ್ಲಿ ವ್ಯಾಪಾರ ಜೋರಾಗಿ ಸಾಗಿತ್ತು.ಬಿಸಿಲ ಧಗೆಯಿಂದ ಹೊಟ್ಟೆ ತಣ್ಣನೆ ಮಾಡಲು ಭಕ್ತರು ಐಸ್‌ಕ್ರೀಂ, ಜ್ಯೂಸ್, ಕಲ್ಲಂಗಡಿ ಹಣ್ಣು ಮತ್ತು ಕಬ್ಬಿನ ಹಾಲಿನ ಮೊರೆ ಹೋಗುತ್ತಿದ್ದರು.

ಭರಪೂರ ಮನರಂಜನೆ: ಜಾತ್ರೆಯ ಪರಿಸರದಲ್ಲಿಯೇ ತಲೆ ಎತ್ತಿದ್ದ ಮನರಂಜನಾ ತಾಣ ಬಹುತೇಕರ ಆಕರ್ಷಣೆಯ ಕೇಂದ್ರಬಿAದುವಾಗಿತ್ತು. ಜಾತ್ರೆಗೆ ಬಂದವರು ಜಾಯಿಂಟ್ ವ್ಹೀಲ್, ರೈಲು ಸವಾರಿ, ತೊಟ್ಟಿಲು, ಜಾರುಬಂಡೆ ಸೇರಿದಂತೆ ವಿವಿಧ ಮನರಂಜನಾ ಆಟಗಳಲ್ಲಿ ಮೈಮರೆತು, ಕೇಕೆ ಹಾಕುತ್ತಿದ್ದ ದೃಶ್ಯಗಳು ಗೋಚರಿಸಿದವು.

ಈ ವೇಳೆ ಶಾಸಕ ಪ್ರದೀಪ್ ಈಶ್ವರ್, ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಕೆ.ಎನ್.ಕೇಶವ ರೆಡ್ಡಿ, ಗ್ಯಾರಂಟಿ ಅನುಷ್ಟಾನಗಳ ಸಮಿತಿ ಜಿಲ್ಲಾಧ್ಯಕ್ಷ ಯಲುವಹಳ್ಳಿರಮೇಶ್,ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ, ಜಿಲ್ಲಾಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಕಾಶ್.ಜಿ.ಟಿ, ನಿಟ್ಟಾಲಿ, ಉಪವಿಭಾಗಾಧಿಕಾರಿ ಡಿ.ಎಚ್,ಅಶ್ವಿನ್, ತಹಸೀಲ್ದಾರ್ ಅನಿಲ್, ಮಾಜಿಶಾಸಕ ಕೆ.ಪಿ.ಬಚ್ಚೇಗೌಡ, ಮುಖಂಡರಾದ ಕೆ.ಎಂ. ಮುನೇಗೌಡ,ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕೆ.ಸಿ.ರಾಜಾಕಾಂತ್, ಆವುಲರೆಡ್ಡಿ,ಹರೀಶ್,ಮುರಳಿ, ಅರವಿಂದ್,ಲಕ್ಷ್ಮೀಪತಿ, ಚೇತನ್,ಅಡ್ಡಗಲ್ ಶ್ರೀಧರ್ ಮತ್ತಿತರರು ಇದ್ದರು.