ಕರ್ನಾಟಕ ಬಜೆಟ್​ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

SudhaRani: ಭರ್ಜರಿ ಡ್ಯಾನ್ಸ್‌ ಮೂಲಕ ಶಿವಣ್ಣನನ್ನು ಸ್ವಾಗತಿಸಿದ ಸುಧಾರಾಣಿ

ಕರುನಾಡ ಚಕ್ರವರ್ತಿ ಶಿವ ರಾಜ್‌ಕುಮಾರ್‌ ಅಮೆರಿಕದಲ್ಲಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿ ಗುಣಮುಖರಾಗಿ ವಾಪಸಾಗಿದ್ದಾರೆ. ಅವರನ್ನು ಅಭಿಮಾನಿಗಳು ಮತ್ತು ಚಿತ್ರರಂಗದ ಗಣ್ಯರು ಸ್ವಾಗತಿಸಿದ್ದಾರೆ. ಇದೀಗ ಹಿರಿಯ ನಟಿ ಸುಧಾರಾಣಿ ಅವರು ಭರ್ಜರಿ ಡ್ಯಾನ್ಸ್‌ ಮಾಡುವ ಮೂಲಕ ಶಿವಣ್ಣ ಅವರನ್ನು ವೆಲ್‌ಕಂ ಮಾಡಿದ್ದಾರೆ. ʼಆನಂದ್‌ʼ ಚಿತ್ರದ ʼತಿಮ್ಮಾ ತಿಮ್ಮಾʼ ಹಾಡಿಗೆ ಸುಧಾರಾಣಿ ತಮ್ಮ ಮಗಳು ನಿಧಿ ಜತೆಗೆ ಸ್ಟೆಪ್‌ ಹಾಕಿದ್ದಾರೆ.

ಮಗಳ ಜತೆ ಡ್ಯಾನ್ಸ್‌ ಮಾಡುವ ಮೂಲಕ ಶಿವಣ್ಣನನ್ನು ಸ್ವಾಗತಿಸಿದ ಸುಧಾರಾಣಿ

ಸುಧಾರಾಣಿ ಮತ್ತು ಶಿವ ರಾಜ್‌ಕುಮಾರ್‌.

Profile Ramesh B Jan 29, 2025 11:00 AM

ಬೆಂಗಳೂರು: ಅಮೆರಿಕದಲ್ಲಿ ಚಿಕಿತ್ಸೆ ಪಡೆದು ಕರುನಾಡ ಚಕ್ರವರ್ತಿ ಡಾ. ಶಿವ ರಾಜ್‌ಕುಮಾರ್‌ (Shiva Rajkumar) ಬೆಂಗಳೂರಿಗೆ ಆಗಮಿಸಿದ್ದು, ಅಭಿಮಾನಿಗಳು ಮತ್ತು ಚಿತ್ರರಂಗದ ಗಣ್ಯರು ಸ್ವಾಗತಿಸಿದ್ದಾರೆ. ಜ. 26ರಂದು ತಾಯ್ನಾಡಿಗೆ ಮರಳಿರುವ ಹ್ಯಾಟ್ರಿಕ್‌ ಹೀರೋ ಶಿವಣ್ಣ ಅವರಿಗೆ ಏರ್‌ಪೋರ್ಟ್‌ನಲ್ಲೇ ಭವ್ಯ ಸ್ವಾಗತ ದೊರೆತಿತ್ತು. ಕ್ಯಾನ್ಸ್‌ರ್‌ನಿಂದ ಬಳಲುತ್ತಿದ್ದ ಅವರು ಅಮೆರಿಕದಲ್ಲಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು. ಸುಮಾರು 1 ತಿಂಗಳ ನಂತರ ಅವರು ಚೇತರಿಸಿಕೊಂಡಿದ್ದು ಜ. 26ರ ಬೆಳಗ್ಗೆ ಕರುನಾಡಿಗೆ ಮರಳಿದ್ದರು. ಇದೀಗ ಸ್ಯಾಂಡಲ್‌ವುಡ್‌ ಹಿರಿಯ ನಟಿ ಸುಧಾರಾಣಿ (SudhaRani) ಅವರು ತಮ್ಮ ಪುತ್ರಿ ನಿಧಿ ಜತೆ ಡ್ಯಾನ್ಸ್‌ ಮಾಡುವ ಮೂಲಕ ಶಿವಣ್ಣ ಅವರನ್ನು ಸ್ವಾಗತಿಸಿದ್ದಾರೆ.

ಶಿವಣ್ಣ ಜತೆಗೆ ತಾವು ನಟಿಸಿದ ಆನಂದ್‌ ಸಿನಿಮಾದ ʼತಿಮ್ಮಾ...ತಿಮ್ಮಾ...ʼ ಹಾಡಿಗೆ ಸುಧಾರಾಣಿ ತಮ್ಮ ಪುತ್ರಿ ನಿಧಿ ಜತೆಗೆ ಭರ್ಜರಿ ಸ್ಟೆಪ್ಸ್ ಹಾಕಿದ್ದಾರೆ. ಶಿವಣ್ಣನಿಗಾಗಿ ಈ ಡಾನ್ಸ್ ಅರ್ಪಣೆ ಎಂದು ಸುಧಾರಾಣಿ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. ʼʼಶಿವಣ್ಣ ಗುಣಮುಖರಾಗಿ ವಾಪಸ್‌ ಬಂದಿದ್ದು, ʼಆನಂದ್‌ʼ ಚಿತ್ರದ ನಮ್ಮ ನೆಚ್ಚಿನ ಹಾಡಿಗೆ ಡ್ಯಾನ್ಸ್‌ ಮಾಡುವ ಮೂಲಕ ಸ್ವಾಗತಿಸುತ್ತಿದ್ದೇವೆʼʼ ಎಂದು ಬರೆದುಕೊಂಡಿದ್ದಾರೆ.

ʼಆನಂದ್‌ʼ ಮೂಲಕ ಸ್ಯಾಂಡಲ್‌ವುಡ್‌ ಪ್ರವೇಶಿಸಿದ್ದ ಶಿವಣ್ಣ-ಸುಧಾರಾಣಿ

1986ರಲ್ಲಿ ತೆರೆಕಂಡ ಆನಂದ್‌ ಚಿತ್ರದ ಮೂಲಕ ಶಿವ ರಾಜ್‌ಕುಮಾರ್‌ ಮತ್ತು ಸುಧಾರಾಣಿ ಸ್ಯಾಂಡಲ್‌ವುಡ್‌ ಪ್ರವೇಶಿಸಿದ್ದರು. ಸಂಗೀತಂ ಶ್ರೀನಿವಾಸ ರಾವ್‌ ನಿರ್ದೇಶನದ ಈ ಚಿತ್ರ ಸೂಪರ್‌ ಹಿಟ್‌ ಆಗಿತ್ತು. ಶಿವಣ್ಣ ಮತ್ತು ಸುಧಾರಾಣಿ ಅದುವರಗೆ ಬಾಲ ಕಲಾವಿದರಾಗಿ ನಟಿಸಿದ್ದರೂ ಇಬ್ಬರು ಮುಖ್ಯ ಪಾತ್ರದಲ್ಲಿ ನಟಿಸಿದ ಮೊದಲ ಚಿತ್ರ ʼಆನಂದ್‌ʼ. ಈ ಸಿನಿಮಾದ ಹಾಡು ಇಂದಿಗೂ ಜನಪ್ರಿಯ. ಹೀಗಾಗಿ ಅದೇ ಚಿತ್ರದ ಹಾಡಿಗೆ ಇದೀಗ ಸುಧಾರಾಣಿ ಹೆಜ್ಜೆ ಹಾಕಿದ್ದಾರೆ.

ಮೂತ್ರ ಕೋಶದ ಕ್ಯಾನ್ಸರ್ ಸಂಬಂಧ ಶಿವ ರಾಜ್‌ಕುಮಾರ್ ಡಿ. 18ರಂದು ಬೆಂಗಳೂರಿನಿಂದ ಅಮೆರಿಕಕ್ಕೆ ಪ್ರಯಾಣಿಸಿದ್ದರು. ಡಿ. 24ರಂದು ಅವರಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಅವರು ಒಟ್ಟು 6 ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಸದ್ಯ ಗುಣಮುಖರಾಗಿ ವಾಪಸ್‌ ಬಂದಿದ್ದಾರೆ.

ಈ ಸುದ್ದಿಯನ್ನೂ ಓದಿ: Shiva Rajkumar: ಕರುನಾಡಿಗೆ ಮರಳಿದ ಶಿವಣ್ಣನಿಗೆ ಅದ್ದೂರಿ ಸ್ವಾಗತ; ಭವ್ಯ ಮೆರವಣಿಗೆ

ಬೆಂಗಳೂರಿನ ದೇವನಹಳ್ಳಿ ಬಳಿ ಇರುವ ಕೆಂಪೇಗೌಡ ಏರ್‌ಪೋರ್ಟ್‌ಗೆ ಶಿವಣ್ಣ ಬಂದಿಳಿಯುತ್ತಿದ್ದಂತೆ ಅವರನ್ನು ಸ್ವಾಗತಿಸಲು ಅಭಿಮಾನಿಗಳ ದಂಡೇ ಆಗಮಿಸಿತ್ತು. ಅಷ್ಟೇ ಅಲ್ಲದೇ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಆಗಮಿಸಿ ಶಿವಣ್ಣನನ್ನು ಬರ ಮಾಡಿಕೊಂಡಿದ್ದರು. ಅಭಿಮಾನಿಗಳು ಕೈಯಲ್ಲಿ ಹಾರಗಳನ್ನು ಹಿಡಿದುಕೊಂಡು ಸ್ವಾಗತಕ್ಕೆ ಜಮಾಯಿಸಿದ್ದರು. ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಶಿವಣ್ಣ ಅವರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದರು.