Friday, 18th October 2024

ಕಾನೂನು ಕೈಗೆ ತೆಗೆದುಕೊಂಡವರ ಮೇಲೆ ಕ್ರಮ ತೆಗೆದುಕೊಳ್ತೇವೆ: ಡಾ.ಜಿ.ಪರಮೇಶ್ವರ್

ಬೆಂಗಳೂರು: ಅಕ್ರಮ ಗಣಿಗಾರಿಕೆ ಮಾಡ್ತಿದ್ದ ತನ್ನ ಆಪ್ತನನ್ನು ಬಂಧಿಸಿದ ಕಾರಣ ಠಾಣೆಗೆ ನುಗ್ಗಿ ಪೊಲೀಸರಿಗೆ ಬೆದರಿಕೆ ಹಾಕಿರುವ ಬೆಳ್ತಂಗಡಿ ಬಿಜೆಪಿ ಶಾಸಕ ಹರೀಶ್‌ ಪೂಂಜಾ ವಿರುದ್ಧ ಗೃಹ ಸಚಿವ ಡಾ ಜಿ ಪರಮೇಶ್ವರ್ ಕಿಡಿಕಾರಿದ್ದಾರೆ.

ಈಗ ಶಾಸಕರೇ ಹೋಗಿ ಪೊಲೀಸ್‌ ಸ್ಟೇಷನ್ ಒಳಗೆ ಗಲಾಟೆ ಮಾಡ್ತಾರೆ. ಪೊಲೀಸರ ಮೇಲೆ ದಾಂಧಲೆ ಮಾಡ್ತಾರೆ. ಈ ರೀತಿ ಆಗೋದಾದ್ರೆ ಸಮಾಜದಲ್ಲಿ ಶಾಂತಿ ಹೇಗಿರುತ್ತೆ? ಅದಕ್ಕೆ ಕಾನೂನನ್ನ ಯಾರು ಕೈಗೆ ತೆಗೆದುಕೊಳ್ಳಬಾರದು. ಕಾನೂನು ಕೈಗೆ ತೆಗೆದುಕೊಂಡವರ ಮೇಲೆ ಕ್ರಮ ತೆಗೆದುಕೊಳ್ತೇವೆ. ಅವರು ಶಾಸಕರೇ ಆಗಿರಲಿ, ಸಂಸದರೇ ಆಗಿರಲಿ. ಯಾರನ್ನೂ ಕೂಡ ಬಿಡುವುದಿಲ್ಲ. ಗೂಂಡಾಗಿರಿ, ದಾದಾಗಿರಿ, ರೌಡಿಸಂ ಮಾಡಿ ಸರ್ವೈವ್ ಆಗ್ತೀನಿ ಅಂತ ಹೇಳಿದ್ರೆ ಸರಿಯಿರಲ್ಲ. ನಾನು ಅವರಿಗೆ ಎಚ್ಚರಿಕೆ ಕೊಡ್ತಾ ಇದ್ದೇನೆ ಎಂದು ಹೇಳಿದರು.

ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣ ಕೇಸ್ ಬಗ್ಗೆ ವಿದೇಶಾಂಗ ಸಚಿವರು ನೀಡಿರುವ ಹೇಳಿಕೆ ವಿಚಾರವಾಗಿ ಮಾತನಾಡಿದ ಗೃಹ ಸಚಿವ ಡಾ.ಜಿ‌.ಪರಮೇಶ್ವರ್, ನಮಗೆ ಯಾವುದೇ ಪತ್ರ ಆಗಲಿ ಬಂದಿಲ್ಲ. ಮಾಧ್ಯಮಗಳಲ್ಲಿ ನೋಡುತ್ತಾ ಇದ್ದೀನಿ ಅಷ್ಟೇ. ಲಿಖಿತವಾಗಿ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ನಮ್ಮವರು ಪತ್ರ ಬರೆದಿದ್ದಾರೆ, ಸಿಎಂ ಮೇ1 ನೇ ತಾರೀಖಿಗೆ ಪ್ರಧಾನ ಮಂತ್ರಿಗಳಿಗೆ ಪತ್ರ ಬರೆದಿದ್ದಾರೆ. ಮೇ 21 ನೇ ತಾರೀಖು ಎರಡನೇ ಪತ್ರ ಬರೆದಿದ್ದಾರೆ. ಒಂದನೇ ತಾರೀಖು ಪತ್ರ ಎಲ್ಲಿ ಹೋಯ್ತು? ಪ್ರಧಾನಿ ಮಂತ್ರಿಗಳ ಕಚೇರಿಗೆ ಸಿಎಂ ಪತ್ರ ಹೋದ್ರೆ ಅದಕ್ಕೆ ಗೌರವ ಸಿಗಬೇಕಲ್ವಾ? ಎಂದರು.

ವಿದೇಶಾಂಗ ಸಚಿವರು ಮೇ 21ನೇ ತಾರೀಖು ಪತ್ರ ಬಂದಿದೆ ಅಂತಾರೆ. ಆದರೆ ಮೊದಲನೇ ಪತ್ರ ಹೋಯ್ತು. ಕ್ರಮ ತೆಗೆದುಕೊಳ್ತಾ ಇದ್ದರೆ ಒಳ್ಳೆಯದು. ಅದರೆ ಈ ರೀತಿ ಹೇಳಿಕೆ ಕೊಡೋದು ಸರಿಯಲ್ಲ ಎಂದು ಗೃಹ ಸಚಿವ ಡಾ ಜಿ ಪರಮೇಶ್ವರ್ ಹೇಳಿದರು.

ಸಿಎಂ ಹಾಗೂ ಗೃಹ ಸಚಿವರು ಹಾಸನ ಸಂತ್ರಸ್ಥೆಯರನ್ನ ಭೇಟಿ ಮಾಡಿ ಸಾಂತ್ವನ ಹೇಳಿಲ್ಲ ಎಂಬ ಪ್ರಗತಿಪರ ಸಾಹಿತಿಗಾರರ ಅಸಮಾಧಾನ ವಿಚಾರವಾಗಿ ಮಾತನಾಡಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್, ನಾವು ಅವರಿಗೆ ಎಲ್ಲಾ ರೀತಿ ಸೆಕ್ಯುರಿಟಿ ಕೊಡ್ತೇವೆಂದು ಹೇಳಿದ್ದೇವೆ. ಯಾರಿಗೂ ಸಂತ್ರಸ್ತರಿಗೆ ತೊಂದರೆ ಆಗದಂತೆ ರಕ್ಷಣೆ ಕೊಡ್ತೇವೆಂದು ನಾನು ಹಾಗೂ ಸಿಎಂ ಈಗಾಗಲೇ ಹೇಳಿದ್ದೇವೆ. ಸಂತ್ರಸ್ಥೆಯರನ್ನ ಯಾರು ಒತ್ತಾಯ ಮಾಡಿ ಬೇರೆ ಬೇರೆ ರೀತಿಯಲ್ಲಿ ನಡೆಸಿಕೊಳ್ಳೋದಿಲ್ಲ. ಹಾಸನ ಜಿಲ್ಲೆ ಎಸ್ಪಿಗೆ ಐಜಿಗೆ ತಿಳಿಸಿದ್ದೇವೆ. ಯಾರಿಗೂ ಕೂಡ ತೊಂದರೆ ಆಗಬಾರದೆಂದು ಸೂಚನೆ ಕೊಟ್ಟಿದ್ದೇವೆ ಎಂದರು.

ಪೆನ್‌ಡ್ರೈವ್ ವಿಚಾರವಾಗಿ ಎಚ್.ಡಿ.ಕುಮಾರಸ್ವಾಮಿ ಆರೋಪ ವಿಚಾರದ ಬಗ್ಗೆ ಮಾತನಾಡಿದ ಸಚಿವ ಡಾ.ಜಿ.ಪರಮೇಶ್ವರ್, ನಾವು ಅದನ್ನೇ ಮಾಡ್ತಾ ಇದ್ದೇವೆ ಅಲ್ವಾ? ಪ್ರಜ್ವಲ್ ರೇವಣ್ಣ ಅವರ ಪಾತ್ರ ಏನಿದೆಯೋ ಅದನ್ನು ತನಿಖೆ ಮಾಡಬೇಕೆಂದೇ ಮಾಡ್ತಿರೋದು. ಸುಮ್ಮನೇ ಗಾಳಿಯಲ್ಲಿ ಗುಂಡು ಹೊಡೆಯೋದು ಅಲ್ಲ. ಯಾರದೋ ಹೆಸರು ಹೇಳೋದು ಅಲ್ಲ. ತನಿಖೆ ಅದ ಮೇಲೆ‌ ನಿರ್ದಿಷ್ಟವಾಗಿ ಹೇಳಬಹುದು ಎಂದರು.