ICC Champions Trophy: ಭಾರತಕ್ಕೆ ಪಾಕಿಸ್ತಾನ ತಂಡವನ್ನು ಕಳುಹಿಸಬೇಡಿ ಎಂದ ಶಾಹಿದ್ ಅಫ್ರಿದಿ!
ICC Champions Trophy: ಭಾರತಕ್ಕೆ ಪಾಕಿಸ್ತಾನ ತಂಡವನ್ನು ಕಳುಹಿಸಬೇಡಿ ಎಂದ ಶಾಹಿದ್ ಅಫ್ರಿದಿ!

ನವದೆಹಲಿ: ಐಸಿಸಿ ಚಾಂಪಿಯನ್ಸ್ ಟ್ರೋಫಿ (ICC Champions Trophy) ಟೂರ್ನಿಯಲ್ಲಿ ಆಡಲು ಭಾರತ ತಂಡ, ಪಾಕಿಸ್ತಾನಕ್ಕೆ ಬಂದಿಲ್ಲವಾದರೆ, ಪಾಕಿಸ್ತಾನ ಕ್ರಿಕೆಟ್ ಮಂಡಳಿಯು (PCB)ಭಾರತದಲ್ಲಿನ ಐಸಿಸಿ ಟೂರ್ನಿಯಲ್ಲಿನ ಪಾಕಿಸ್ತಾನ ಪಂದ್ಯಗಳನ್ನು ಸಂಪೂರ್ಣ ರದ್ದುಗೊಳಿಸಬೇಕೆಂದು ಎಂದು ಪಾಕ್ ಮಾಜಿ ನಾಯಕ ಶಾಹಿದ್ ಅಫ್ರಿದಿ ಆಗ್ರಹಿಸಿದ್ದಾರೆ.
ಮುಂದಿನ ವರ್ಷ ಪಾಕಿಸ್ತಾನದ ಆತಿಥ್ಯದಲ್ಲಿ2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಭಾರತ ತಂಡ ಟೂರ್ನಿಯಲ್ಲಿ ಆಡಲು ಪಾಕಿಸ್ತಾನಕ್ಕೆ ಕಡ್ಡಾಯವಾಗಿ ಬರಬೇಕೆಂದು ಪಟ್ಟು ಹಿಡಿದಿತ್ತು. ಆದರೆ, ಬಿಸಿಸಿಐ ಮಾತ್ರ ನಮಗೆ ಹೈಬ್ರಿಡ್ ಮಾಡೆಲ್‌ನಲ್ಲಿ ಭಾರತ ತಂಡದ ಪಂದ್ಯಗಳನ್ನು ಆಯೋಜಿಸಬೇಕೆಂದು ಐಸಿಸಿ ಬಳಿ ಮನವಿ ಮಾಡಿತ್ತು. ಇದೀಗ ಹೈಬ್ರಿಡ್ ಮಾದರಿಗೆ ಪಿಸಿಬಿ ಕೆಲ ಷರತ್ತುಗಳೊಂದಿಗೆ ಒಪ್ಪಿದೆ ಎಂದು ವರದಿಯಾಗಿದೆ. ಆದರೂ ಕೂಡ ಪಾಕಿಸ್ತಾನದ ಕೆಲ ಮಾಜಿ ಕ್ರಿಕೆಟಿಗರು ಕೂಡ ಇನ್ನೂ ಬಿಸಿಸಿಐಗೆ ನಡೆಯನ್ನು ಖಂಡಿಸುತ್ತಿದ್ದಾರೆ.
ಕರಾಚಿ ಆರ್ಟ್ಸ್ ಕೌನ್ಸಿಲ್ ಜತೆ ಮಾತನಾಡಿದ, ಶಾಹಿದ್ ಅಫ್ರಿದಿ, "ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ಶಕ್ತಯುತ ನಿರ್ಧಾರ ತೆಗೆದುಕೊಳ್ಳುವ ಜೊತೆಗೆ ತನ್ನ ಸ್ವಾಭಿಮಾನವನ್ನು ಉಳಿಸಿಕೊಳ್ಳಬೇಕು. ಪಾಕಿಸ್ತಾನಕ್ಕೆ ಭಾರತ ತಂಡ ಬಂದಿಲ್ಲವಾದರೆ, ಪಾಕಿಸ್ತಾನ ತಂಡ ಭಾರತಕ್ಕೆ ತೆರಳಿ ಪಂದ್ಯವನ್ನು ಆಡಲು ಯಾವುದೇ ಕಾರಣ ನಮಗಿಲ್ಲ," ಎಂದು ಗುಡುಗಿದ್ದಾರೆ.
ಐಸಿಸಿಯನ್ನು ಪ್ರಶ್ನಿಸಿದ ಅಫ್ರಿದಿ
ಮುಂದಿನ ವರ್ಷ ನಡೆಯುವ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಭಾರತ ತಂಡಕ್ಕೆ ಹೈಬ್ರಿಡ್ ಮಾಡೆಲ್‌ನಲ್ಲಿ ಪಂದ್ಯಗಳನ್ನು ನೀಡಬೇಕೆಂದು ಬಿಸಿಸಿಐ ಆಗ್ರಹಿಸಿದೆ. ಆ ಮೂಲಕ ಪಾಕಿಸ್ತಾನಕ್ಕೆ ತೆರಳದೆ ಟೀಮ್ ಇಂಡಿಯಾ ತಟಸ್ಥ ಸ್ಥಳದಲ್ಲಿ ಪಂದ್ಯಗಳನ್ನು ಆಡಬೇಕೆಂದು ಬಯಸುತ್ತಿದೆ. ಈ ಕಾರಣದಿಂದಲೇ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ವೇಳಾಪಟ್ಟಿಯನ್ನು ಪ್ರಕಟಿಸಲು ಐಸಿಸಿ ತಡ ಮಾಡುತ್ತಿದೆ.
"ಪ್ರತಿಯೊಂದು ಸದಸ್ಯ ರಾಷ್ಟ್ರ ಕ್ರಿಕೆಟ್ ಆಡಬೇಕಾ ಅಥವಾ ಕೇವಲ ದುಡ್ಡು ಮಾಡಬೇಕಾ? ಎಂಬುದನ್ನು ಮೊದಲಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ನಿರ್ಧಾರ ಮಾಡಬೇಕು," ಎಂದು ಪಾಕಿಸ್ತಾನ ಮಾಜಿ ನಾಯಕ ಆಗ್ರಹಿಸಿದ್ದಾರೆ.
ಪಿಸಿಬಿ ನಿಯಮಗಳನ್ನು ಖಂಡಿಸಿದ ಅಫ್ರಿದಿ
ಪಾಕಿಸ್ತಾನ ಕ್ರಿಕೆಟ್ ಮಂಡಳಿಯಲ್ಲಿನ ಸಮಸ್ಯೆ ಏನೆಂದರೆ ಕೆಲವೊಂದು ಪಾಲಿಸಿಗಳನ್ನು ಬದಲಾವಣೆ ಮಾಡಲಾಗಿದೆ. ಇದರಿಂದಾಗಿ ಒಂದು ಸಮಯದಲ್ಲಿ ಶಾಹೀನ್ ಶಾ ಅಫ್ರಿದಿ ಅವರನ್ನು ನಾಯಕನನ್ನಾಗಿ ನೇಮಿಸಲಾಗಿತ್ತು ಆದರೆ, ನಂತರ ನಾಯಕತ್ವಕ್ಕೆ ವಿದಾಯ ಹೇಳುವಂತೆ ಒತ್ತಡ ಹೇರಲಾಗಿತ್ತು ಎಂದು ಮಾಜಿ ಕ್ರಿಕೆಟಿಗ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
"ಶಾಹೀನ್ ಶಾ ಅಫ್ರಿದಿ ಅವರನ್ನು ಪಾಕಿಸ್ತಾನ ಟಿ20ಐ ತಂಡದ ನಾಯಕತ್ವಕ್ಕೆ ನೇಮಕ ಮಾಡಿದ್ದ ವೇಳೆ ನಾನು ಇದನ್ನು ಖಂಡಿಸಿದ್ದೆ ಹಾಗೂ ಮೊಹಮ್ಮದ್ ರಿಝ್ವಾನ್ ಅವರನ್ನು ನಾಯಕನನ್ನಾಗಿ ಆರಿಸಬೇಕು ಹಾಗೂ ಇವರು ನಾಯಕತ್ವಕ್ಕೆ ಅತ್ಯುತ್ತಮ ಆಯ್ಕೆ ಎಂದು ತಿಳಿಸಿದ್ದೆ. ಶಾಹೀನ್ ಅಫ್ರಿದಿಯನ್ನು ನಾಯಕನ್ನಾಗಿ ನೇಮಿಸಿ, ಕೇವಲ ಒಂದು ಸರಣಿಯ ನಂತರ ಕೆಳಗೆ ಇಳಿಸುವುದು ಪಿಸಿಬಿಯ ತಪ್ಪು ನಿರ್ಧಾರ. ಏಕೆಂದರೆ ಇದು ಅವರಿಗೆ ಪರಿಣಾಮ ಬೀರಿದೆ," ಎಂದು ಶಾಹಿದ್ ಅಫ್ರಿದಿ ತಿಳಿಸಿದ್ದಾರೆ.
ಈ ಸುದ್ದಿಯನ್ನು ಓದಿ: Champions Trophy Schedule: ಇನ್ನೆರಡು ದಿನದಲ್ಲಿ ಚಾಂಪಿಯನ್ಸ್ ಟ್ರೋಫಿ ವೇಳಾಪಟ್ಟಿ ಪ್ರಕಟ