Mirai Teaser Released: ಸೂಪರ್ ಯೋಧನಾದ ʼಹನುಮಾನ್ʼ ತೇಜ್ ಸಜ್ಜಾ; ಆ್ಯಕ್ಷನ್ ಪ್ಯಾಕ್ಡ್ ʼಮಿರಾಯ್ʼ ಟೀಸರ್ ರಿಲೀಸ್
Teja Sajja: ಈ ವರ್ಷದ ಬಹು ನಿರೀಕ್ಷಿತ ಚಿತ್ರಗಳಲ್ಲಿ ʼಮಿರಾಯ್ʼ ಕೂಡ ಒಂದು. ಕಳೆದ ವರ್ಷ ತೆರೆಕಂಡ ಪ್ಯಾನ್ ಇಂಡಿಯಾ ಚಿತ್ರ ʼಹನುಮಾನ್ʼ ಮೂಲಕ ಗಮನ ಸೆಳೆದ ತೆಲುಗಿನ ಯುವನಟ ತೇಜ್ ಸಜ್ಜಾ ನಟನೆಯ ಚಿತ್ರ ಇದಾಗಿದ್ದು, ಇದೀಗ ಟೀಸರ್ ರಿಲೀಸ್ ಆಗಿ ಗಮನ ಸೆಳೆಯುತ್ತಿದೆ. ಸೂಪರ್ ಯೋಧನಾಗಿ ಅವರು ಕಾಣಿಸಿಕೊಂಡಿದ್ದಾರೆ.

ʼಮಿರಾಯ್ʼ ಚಿತ್ರದ ಪೋಸ್ಟರ್.

ಹೈದರಾಬಾದ್: ಕಳೆದ ವರ್ಷ ತೆರೆಕಂಡ ಪ್ಯಾನ್ ಇಂಡಿಯಾ ಚಿತ್ರ ʼಹನುಮಾನ್ʼ (Hanu-Man) ಮೂಲಕ ಗಮನ ಸೆಳೆದ ತೆಲುಗಿನ ಯುವನಟ ತೇಜ್ ಸಜ್ಜಾ (Teja Sajja) ಸದ್ಯ ಅದರ ಸೀಕ್ವೆಲ್‌ನಲ್ಲಿ ನಟಿಸುತ್ತಿದ್ದಾರೆ. ಜತೆಗೆ ಮತ್ತೊಂದು ಬಹುನಿರೀಕ್ಷಿತ ಸಿನಿಮಾ ʼಮಿರಾಯ್ʼ (Mirai) ಒಪ್ಪಿಕೊಂಡಿದ್ದಾರೆ. ʼಹನುಮಾನ್ʼನಲ್ಲಿ ಸೂಪರ್ ಹೀರೋ ಆಗಿ ಕಾಣಿಸಿಕೊಂಡಿದ್ದ ತೇಜ್ ʼಮಿರಾಯ್ʼನಲ್ಲಿ ಮತ್ತೊಮ್ಮೆ ಸೂಪರ್ ಹೀರೋ ಆಗಿ ಅಬ್ಬರಿಸಲು ಸಜ್ಜಾಗಿದ್ದಾರೆ. ತೇಜ್ ಸಜ್ಜಾ ನಟನೆಯ ʼಮಿರಾಯ್ʼ ಸಿನಿಮಾದ ಟೀಸರ್ ರಿಲೀಸ್ ಆಗಿದೆ (Mirai Teaser Released). ಈ ಆ್ಯಕ್ಷನ್ ಪ್ಯಾಕ್ಡ್ ಥ್ರಿಲ್ಲಿಂಗ್ ಟೀಸರ್ ಸಿನಿರಸಿಕರಿಗೆ ಕಿಕ್ ಕೊಟ್ಟಿದೆ. ಸೂಪರ್ ಯೋಧನಾಗಿ ತೇಜ್ ಅಭಿನಯಿಸಿದ್ದು, ಖಳನಾಯಕನಾಗಿ ಮನೋಚ್ ಮಂಚು ತೊಡೆ ತಟ್ಟಿದ್ದಾರೆ. ಭಾರತದ ಶ್ರೀಮಂತ ಐತಿಹಾಸಿಕ ಪರಂಪರೆಗೆ ಆಧುನಿಕ ಸಾಹಸದ ಟಚ್ ಕೊಟ್ಟು ಮಿರಾಯ್ ಟೀಸರ್ ಕಟ್ ಮಾಡಲಾಗಿದೆ.
ʼಮಿರಾಯ್ʼ ಚಿತ್ರದಲ್ಲಿ ಭರ್ಜರಿ ಆ್ಯಕ್ಷನ್ ದೃಶ್ಯಗಳಿವೆ. ಈ ಆ್ಯಕ್ಷನ್ ಚಿತ್ರವನ್ನ ಕಾರ್ತಿಕ್ ಘಟ್ಟಮನೇನಿ ನಿರ್ದೇಶಿಸುತ್ತಿದ್ದಾರೆ. ವಿಶೇಷವಾಗಿ ಈ ಚಿತ್ರ 2ಡಿ ಮತ್ತು 3ಡಿ ಫಾರ್‌ಮ್ಯಾಟ್‌ನಲ್ಲಿ ರಿಲೀಸ್ ಆಗುತ್ತಿದೆ. ಸೆ. 5ರಂದು ʼಮಿರಾಯ್ʼ ಕನ್ನಡ ಸಹಿತ 8 ಭಾಷೆಯಲ್ಲಿ ತೆರೆಗೆ ಬರಲಿದೆ. ಈ ಮೂಲಕ ತೇಜ್ ಸಜ್ಜಾ ಮತ್ತೊಮ್ಮೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಮಿಂಚಲು ಸಜ್ಜಾಗಿದ್ದಾರೆ.
ʼಮಿರಾಯ್ʼ ಚಿತ್ರದ ಕನ್ನಡ ಟೀಸರ್:
ಈ ಸುದ್ದಿಯನ್ನೂ ಓದಿ: Rishab Shetty: ಯುಗಾದಿ ಪ್ರಯುಕ್ತ ರಿಷಬ್ ಶೆಟ್ಟಿ ಫ್ಯಾನ್ಸ್‌ಗೆ ಸಿಕ್ತು ಭರ್ಜರಿ ಗಿಫ್ಟ್; ʼಜೈ ಹನುಮಾನ್ʼ ಚಿತ್ರದ ಪೋಸ್ಟರ್ ಔಟ್
ʼಮಿರಾಯ್ʼ ಎಂದರೆ ಭವಿಷ್ಯ ಎಂದರ್ಥ. ಅಶೋಕ ಚಕ್ರವರ್ತಿ ಹಾಗೂ ಆತನ 9 ರಹಸ್ಯದ ಕಥೆಯನ್ನು ಸಿನಿಮಾ ಹೇಳುತ್ತದೆ. ದಕ್ಷಿಣ ಭಾರತದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಪೀಪಲ್ ಮೀಡಿಯಾ ಫ್ಯಾಕ್ಟರಿಯಡಿ ಟಿ.ಜಿ.ವಿಶ್ವಪ್ರಸಾದ್ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ.
ಮನೋಜ್ ಮಂಚು ಖಳನಾಯಕನಾಗಿ ಮತ್ತು ರಿತಿಕಾ ನಾಯಕ್ ನಾಯಕಿಯಾಗಿ ನಟಿಸಿರುವ ಈ ಚಿತ್ರದಲ್ಲಿ ಸೂಪರ್ ಯೋಧ ಪಾತ್ರದಲ್ಲಿ ತೇಜ್ ಸಜ್ಜಾ ಅಭಿನಯಿಸುತ್ತಿದ್ದಾರೆ. ನಿರ್ದೇಶಕ ಕಾರ್ತಿಕ್ ಗಟ್ಟಮ್ನೇನಿ ಅವರದ್ದೇ ಚಿತ್ರಕಥೆ ಇದೆ. ಮಣಿಬಾಬು ಕರಣಂ ಸಂಭಾಷಣೆ ಬರೆದಿದ್ದಾರೆ. ಶ್ರೀ ನಾಗೇಂದ್ರ ತಂಗಳ ಕಲಾ ನಿರ್ದೇಶನವಿದ್ದರೆ, ವಿವೇಕ್ ಕೂಚಿಭೋಟ್ಲ ಸಹ ನಿರ್ಮಾಪಕರು. ಕೃತಿ ಪ್ರಸಾದ್ ಕ್ರಿಯೇಟಿವ್ ನಿರ್ಮಾಪಕರಾಗಿದ್ದು, ಸುಜಿತ್ ಕುಮಾರ್ ಕೊಲ್ಲಿ ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ.
ʼಹನುಮಾನ್ʼ ಸೀಕ್ವೆಲ್
ಇದರ ಜತೆಗೆ ತೇಜ್ ಸಜ್ಜಾ ಅಭಿನಯಿಸುತ್ತಿರುವ ʼಹನುಮಾನ್ʼ ಸಿನಿಮಾದ ಸೀಕ್ವೆಲ್ ʼಜೈ ಹನುಮಾನ್ʼ ಶೂಟಿಂಗ್ ಪ್ರಗತಿಯಲ್ಲಿದೆ. ಪ್ರಶಾಂತ್ ವರ್ಮಾ ಆ್ಯಕ್ಷನ್ ಕಟ್ ಹೇಳುತ್ತಿದ್ದು, ಸ್ಯಾಂಡಲ್‌ವುಡ್‌ನ ರಿಷಬ್ ಶೆಟ್ಟಿ ಹನಿಮಂತದ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇದು ಭಕ್ತ ಮತ್ತು ಹನುಮಂತನ ಮಧ್ಯೆ ನಡೆಯುವ ಕಥೆ. ಈ ಚಿತ್ರದ ಮೂಲಕ ರಿಷಬ್ ಟಾಲಿವುಡ್‌ಗೆ ಕಾಲಿಟ್ಟಿದ್ದಾರೆ. ಇದು ಕೂಡ ಪ್ಯಾನ್ ಇಂಡಿಯಾ ಮಟ್ಟದಲ್ಲೇ ತೆರೆಗೆ ಬರಲಿದ್ದು, ಕುತೂಹಲ ಹುಟ್ಟು ಹಾಕಿದೆ. ಅದಾಗ್ಯೂ ಚಿತ್ರತಂಡ ರಿಲೀಸ್ ಡೇಟ್ ಘೋಷಿಸಿಲ್ಲ. ಮುಂದಿನ ವರ್ಷದಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.