Detained Indian Farmer: ನಾಟಿ ಕೆಲಸ ಮಾಡ್ತಿದ್ದ ವೇಳೆ ಕಿಡ್ನಾಪ್ ಆಗಿದ್ದ ಭಾರತೀಯ ರೈತನನ್ನು ಹಸ್ತಾಂತರಿಸಿದ ಬಾಂಗ್ಲಾದೇಶ!
Detained Indian Farmer: ಏಪ್ರಿಲ್‌ನ ಕೊನೆಯಲ್ಲಿ ಬಾಂಗ್ಲಾದೇಶದ ಅಧಿಕಾರಿಗಳಿಂದ ಬಂಧನಕ್ಕೊಳಗಾಗಿದ್ದ ಪಶ್ಚಿಮ ಬಂಗಾಳದ ರೈತ ಉಕಿಲ್ ಬರ್ಮನ್ ಅವರನ್ನು ಬುಧವಾರ ರಾತ್ರಿ ಬಿಡುಗಡೆಗೊಳಿಸಿ ಭಾರತೀಯ ಅಧಿಕಾರಿಗಳಿಗೆ ಹಸ್ತಾಂತರಿಸಲಾಯಿತು. ಪಶ್ಚಿಮ ಬಂಗಾಳದ ಕೊಚ್ ಬಿಹಾರ ಜಿಲ್ಲೆಯ ಸೀತಲ್ಕುಚಿಯಲ್ಲಿರುವ ಬರ್ಮನ್ ಕುಟುಂಬವು ಸುಮಾರು ಒಂದು ತಿಂಗಳಿಂದ ರೈತನಿಗಾಗಿ ಆತಂಕದಿಂದ ಕಾಯುತ್ತಿತ್ತು.

ಪಶ್ಚಿಮ ಬಂಗಾಳದ ರೈತ ಉಕಿಲ್ ಬರ್ಮನ್

ಕೊಚ್ ಬಿಹಾರ: ಏಪ್ರಿಲ್‌ನ ಕೊನೆಯಲ್ಲಿ ಬಾಂಗ್ಲಾದೇಶದ (Bangladesh) ಅಧಿಕಾರಿಗಳಿಂದ ಬಂಧನಕ್ಕೊಳಗಾಗಿದ್ದ ಪಶ್ಚಿಮ ಬಂಗಾಳದ (West Bengal) ರೈತ ಉಕಿಲ್ ಬರ್ಮನ್ (Ukil Burman) ಅವರನ್ನು ಬುಧವಾರ ರಾತ್ರಿ ಬಿಡುಗಡೆಗೊಳಿಸಿ ಭಾರತೀಯ ಅಧಿಕಾರಿಗಳಿಗೆ ಹಸ್ತಾಂತರಿಸಲಾಯಿತು. ಪಶ್ಚಿಮ ಬಂಗಾಳದ ಕೊಚ್ ಬಿಹಾರ ಜಿಲ್ಲೆಯ ಸೀತಲ್ಕುಚಿಯಲ್ಲಿರುವ ಬರ್ಮನ್ ಕುಟುಂಬವು ಸುಮಾರು ಒಂದು ತಿಂಗಳಿಂದ ರೈತನಿಗಾಗಿ ಆತಂಕದಿಂದ ಕಾಯುತ್ತಿತ್ತು. ಅವರ ಪತ್ನಿ ಸಬ್ಯ ಬಾಲಾ ಬರ್ಮನ್ ಪ್ರಕಾರ, ಭಾರತ-ಬಾಂಗ್ಲಾದೇಶ ಗಡಿಯ (India-Bangladesh Border ) ಸಮೀಪದ ತಮ್ಮ ಭತ್ತದ ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದಾಗ ಅವರನ್ನು ಅಪಹರಿಸಲಾಯಿತು.
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಮುಖ್ಯ ಕಾರ್ಯದರ್ಶಿಗೆ ಈ ವಿಷಯವನ್ನು ಸೂಕ್ತ ರಾಜತಾಂತ್ರಿಕ ಮಾರ್ಗಗಳ ಮೂಲಕ ಪರಿಹರಿಸಲು ಸೂಚಿಸಿದ್ದರು. ಸ್ಥಳೀಯ ಸಂಸದ ಜಗದೀಶ್ ಬಸುನಿಯಾ ಅವರು, ಬರ್ಮನ್ ಅವರನ್ನು ಬಾಂಗ್ಲಾದೇಶದ ಜೈಲಿನಲ್ಲಿ ಇರಿಸಲಾಗಿತ್ತು ಎಂದು ದೃಢಪಡಿಸಿದ್ದರು.
ಈ ಸುದ್ದಿಯನ್ನು ಓದಿ: Operation Sindoor: ಆಪರೇಷನ್ ಸಿಂದೂರ್ ವೇಳೆ ಪಾಕಿಸ್ತಾನ ಬಳಸುತ್ತಿದ್ದ ಚೀನಾದ ವಾಯು ರಕ್ಷಣಾ ವ್ಯವಸ್ಥೆ ಜಾಮ್
ಈ ಘಟನೆ ಗಡಿ ಭಾಗದ ಪಶ್ಚಿಮ ಸೀತಲ್ಕುಚಿ ಗ್ರಾಮದಲ್ಲಿ ನಡೆದಿದೆ. ಸ್ಥಳೀಯ ಮೂಲಗಳ ಪ್ರಕಾರ, ಉಕಿಲ್ ಬರ್ಮನ್ ಮತ್ತು ಅವರ ಪತ್ನಿ ಸಬ್ಯ ಬಾಲಾ ಬರ್ಮನ್ ಅವರು ತಮ್ಮ ಕೃಷಿಭೂಮಿಗೆ ನೀರುಣಿಸಲು ಬಿಎಸ್‌ಎಫ್‌ನಿಂದ ಅನುಮತಿ ಪಡೆದು ಮುಳ್ಳುತಂತಿಯ ಬೇಲಿಯನ್ನು ದಾಟಿದ್ದರು. ಘಟನೆಯ ಬಗ್ಗೆ ಮಾತನಾಡಿದ ಸಬ್ಯ ಬಾಲಾ, “ಬೆಳಗ್ಗೆ 8 ಗಂಟೆ ಸುಮಾರಿಗೆ ನಾವು ಬೇಲಿಯಾಚೆಗೆ ಬೆಳೆಗಳಿಗೆ ನೀರು ಹಾಯಿಸಲು ಹೋಗಿದ್ದೆವು. ಮಧ್ಯಾಹ್ನದ ವೇಳೆಗೆ, ಅವರು ನೀರಾವರಿ ಪಂಪ್‌ನ್ನು ಬೇಲಿಯ ಬಳಿ ಇರಿಸಿ, ನಾನು ಹಿಂದೆ ಇರಲು ಹೇಳಿ ಗದ್ದೆಯ ಒಳಗೆ ಹೋದರು. ಆಗಲೇ ಅವರ ಕೂಗು ಕೇಳಿತು. ನಾಲ್ಕೈದು ಬಾಂಗ್ಲಾದೇಶದ ಜನರು ಅವರನ್ನು ಅಪಹರಿಸಿದರು” ಎಂದು ತಿಳಿಸಿದರು.
ಬರ್ಮನ್ ಅವರಿಗೆ ಬುಧವಾರ ಜಾಮೀನು ಮಂಜೂರಾಗಿದ್ದು, ನಂತರ ರಾತ್ರಿಯೇ ಅವರನ್ನು ಭಾರತೀಯ ಅಧಿಕಾರಿಗಳಿಗೆ ಹಸ್ತಾಂತರಿಸಲಾಯಿತು. ಅವರ ಬಿಡುಗಡೆಗೆ ಪ್ರತಿಕ್ರಿಯಿಸಿದ ಬಿಜೆಪಿ ನಾಯಕ ಅಮಿತ್ ಮಾಳವಿಯ, “ಪ್ರಧಾನಮಂತ್ರಿ ಮತ್ತು ಗೃಹ ಸಚಿವರ ಅತ್ಯುತ್ತಮ ನಾಯಕತ್ವಕ್ಕೆ ಧನ್ಯವಾದಗಳು” ಎಂದು ಹೇಳಿದರು. “ನೆಹರೂವಾದಿ ವ್ಯವಸ್ಥೆಯು ಬಹಳ ದಿನಗಳಿಂದ ಬಾಂಗ್ಲಾದೇಶವನ್ನು ರಾಷ್ಟ್ರೀಯ ಚರ್ಚೆಯಿಂದ ದೂರ ಇಟ್ಟಿವೆ, ಲಕ್ಷಾಂತರ ಬಂಗಾಳಿ ಹಿಂದೂಗಳ ದುಃಖವನ್ನು ಕಡೆಗಣಿಸಿದೆ. ಆದರೆ ಇದನ್ನು ಬದಲಾಯಿಸಬೇಕು. ಪಶ್ಚಿಮ ಬಂಗಾಳದತ್ತ ಗಮನ ಕೇಂದ್ರೀಕರಿಸಿ ರಾಜ್ಯದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಮರಳಿ ಪಡೆಯುವ ಸಮಯ ಬಂದಿದೆ. ಮೊದಲ ಹೆಜ್ಜೆ 2026ರಲ್ಲಿ ಮಮತಾ ಬ್ಯಾನರ್ಜಿಯವರನ್ನು ಅಧಿಕಾರದಿಂದ ಕೆಳಗಿಳಿಸುವುದರಿಂದ ಆರಂಭವಾಗುತ್ತದೆ” ಎಂದು ಅಮಿತ್ ಮಾಳವಿಯ ಹೇಳಿದರು.