Rajasthan Encounter: ಎನ್‌ಕೌಂಟರ್‌ನಲ್ಲಿ ಮೃತಪಟ್ಟಿದ್ದ ಎಂದು ನಂಬಲಾಗಿದ್ದ ಆರೋಪಿ ಜೀವಂತವಾಗಿ ಪತ್ತೆ!
ಪೊಲೀಸ್ ಎನ್‌ಕೌಂಟರ್ ವೇಳೆ ತಾನೇ ಗುಂಡು ಹಾರಿಸಿಕೊಂಡು ಮೃತಪಟ್ಟಿದ್ದ ಆರೋಪಿ ಬದುಕುಳಿದಿದ್ದಾನೆ ಎಂಬ ವಿಷಯ ತಿಳಿದು ಬಂದಿದೆ. ಮನೆಯೊಂದರಲ್ಲಿ ಅಡಗಿಕೊಂಡಿದ್ದ ರುದ್ರೇಶ್ ಅಲಿಯಾಸ್ ಆರ್‌ಡಿಎಕ್ಸ್ ಮತ್ತು ಆತನ ಸಹಚರನನ್ನು ಪೊಲೀಸರು ಬಂಧಿಸಲು ತೆರಳಿದ್ದರು. ಮುಖಕ್ಕೆ ಗುಂಡು ಹಾರಿಸಿಕೊಂಡು ಮೃತಪಟ್ಟಿದ್ದ ಎಂದು ಹೇಳಲಾಗಿತ್ತು. ಆದರೆ ಅಲ್ಲಿ ಅಸಲಿಗೆ ಆದದ್ದೇ ಬೇರೆ.
ಜೈಪುರ: ಪೊಲೀಸ್ ದಾಳಿ ವೇಳೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ ಎಂದು ನಂಬಲಾಗಿದ್ದ ಆರೋಪಿ ಬದುಕುಳಿದಿದ್ದಾನೆ ಎಂಬ ವಿಷಯ ತಿಳಿದು ಬಂದಿದೆ. ಈ ಘಟನೆ ರಾಜಸ್ಥಾನದಲ್ಲಿ (Rajasthan Encounter) ನಡೆದಿದ್ದು, ಭಾನುವಾರ ನಯಾ ನೊಹರಾದಲ್ಲಿರುವ ಮನೆಯೊಂದರಲ್ಲಿ ಅಡಗಿಕೊಂಡಿದ್ದ ರುದ್ರೇಶ್ ಅಲಿಯಾಸ್ ಆರ್‌ಡಿಎಕ್ಸ್ ಮತ್ತು ಆತನ ಸಹಚರನನ್ನು ಪೊಲೀಸರು ಬಂಧಿಸಲು ತೆರಳಿದ್ದರು. ಮುಖಕ್ಕೆ ಗುಂಡು ಹಾರಿಸಿಕೊಂಡು ಮೃತಪಟ್ಟಿದ್ದ ಎಂದು ಹೇಳಲಾಗಿತ್ತು.
ಮನೆ ಒಳಗೆ ತೆರಳಿದ್ದ ಪೊಲೀಸರು ಮುಖ ಛಿದ್ರಗೊಂಡಿರುವ ದೇಹವನ್ನು ಪತ್ತೆ ಮಾಡಿದ್ದರು. ಆತನೇ ರುದ್ರೇಶ್ ಎಂದು ಪೊಲೀಸರು ತಪ್ಪಾಗಿ ಗುರುತಿಸಿದ್ದರು. ನಂತರ ಮೃತ ದೇಹವನ್ನು ಶವಾಗಾರಕ್ಕೆ ಕೊಂಡೊಯ್ಯಲಾಗಿತ್ತು. ಸೋಮವಾರ ಅವರ ಕುಟುಂಬ ಸದಸ್ಯರು ಶವವನ್ನು ರುದ್ರೇಶ್ ಅಲ್ಲ ಮತ್ತೊಬ್ಬ ಅಪರಾಧಿ ಪ್ರೀತಮ್ ಗೋಸ್ವಾಮಿ ಅಲಿಯಾಸ್ ಟಿಟಿ ಎಂದು ಗುರುತಿಸಿದ್ದಾರೆ. ನಂತರ ಸುತ್ತಲಿನ ಸಿಸಿಟಿವಿಯನ್ನು ಪರಿಶೀಲಿಸಿದಾಗ ಪೊಲೀಸರು ಅಲ್ಲಿಗೆ ಬರುವ ಕೆಲವೇ ಕ್ಷಣಗಳ ಮೊದಲು ರುದ್ರೇಶ್ ಮನೆಯಿಂದ ಪರಾರಿಯಾಗಿರುವುದು ತಿಳಿದು ಬಂದಿದೆ. ಸದ್ಯ ರುದ್ರೇಶ್ ಬದುಕಿದ್ದು, ತಲೆಮೆರೆಸಿಕೊಂಡಿದ್ದಾನೆ.
ಆ ವ್ಯಕ್ತಿಯ ಮುಖ ವಿರೂಪಗೊಂಡಿದ್ದರಿಂದ ಮತ್ತು ಕೋಣೆಯಲ್ಲಿ ರುದ್ರೇಶ್‌ಗೆ ಸಂಬಂಧಪಟ್ಟ ಕೆಲವು ವಸ್ತುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದರಿಂದ ಶವವನ್ನು ತಪ್ಪಾಗಿ ಗುರುತಿಸಲಾಯಿತು ಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ ಲೋಕೇಂದ್ರ ಪಲಿವಾಲ್ ತಿಳಿಸಿದ್ದಾರೆ.
ರುದ್ರೇಶ್ ಎಂದು ತಪ್ಪಾಗಿ ಭಾವಿಸಲಾದ ವ್ಯಕ್ತಿ ಪ್ರೀತಮ್ ಗೋಸ್ವಾಮಿ, ಬುಂಡಿ ಜಿಲ್ಲೆಯವನಾಗಿದ್ದು, ಕೋಟಾದಲ್ಲಿ ತನ್ನ ಹೆತ್ತವರೊಂದಿಗೆ ವಾಸಿಸುತ್ತಿದ್ದ. ಅವನ ವಿರುದ್ಧ ವಿವಿಧ ಪೊಲೀಸ್ ಠಾಣೆಗಳಲ್ಲಿ 15 ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದವು.
ಈ ಸುದ್ದಿಯನ್ನೂ ಓದಿ: Naxalites encounter: ಮೋಸ್ಟ್ ವಾಂಟೆಡ್ ನಕ್ಸಲನ ಎನ್‌ಕೌಂಟರ್-ಈತನ ಪತ್ತೆಗೆ ಘೋಷಣೆ ಆಗಿತ್ತು ಬರೋಬ್ಬರಿ 1ಕೋಟಿ ರೂ. ರಿವಾರ್ಡ್
ಜನವರಿ 2 ರಂದು ಮಹಾವೀರ್ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪಾನ್ ಅಂಗಡಿ ಮಾಲೀಕರ ಸಹೋದರನ ಮೇಲೆ ಗುಂಡು ಹಾರಿಸಿದ ಪ್ರಕರಣದಲ್ಲಿ ರುದ್ರೇಶ್ ಮತ್ತು ಅವರ ಮೂವರು ಸಹಚರರ ವಿರುದ್ಧ ಪೊಲೀಸರು ಹುಡುಕಾಟ ನಡೆಸುತ್ತಿದ್ದರು. ಕಾರಿನಲ್ಲಿ ಬಂದಿದ್ದ ಆರೋಪಿಗಳು ಸಿಗರೇಟ್ ಕೇಳಿದ್ದರು. ಅಂಗಡಿಯ ಮಾಲೀಕ ಸಿಗರೇಟ್ ಇಲ್ಲ ಎಂದಿದ್ದಕ್ಕೆ ಮಾಲೀಕರನ ಸಹೋದರ ಪವನ್ ಸಿಂಗ್ ಮೇಲೆ ಗುಂಡು ಹಾರಿಸಿ ಆತನನ್ನು ಗಾಯಗೊಳಿಸಿದ್ದರು. ಸದ್ಯ ಪೊಲೀಸರು ರುದ್ರೇಶ್‌ಗಾಗಿ ಹುಡುಕಾಟ ನಡೆಸುತ್ತಿದ್ದಾರೆ.