Bomb Threat: 10 ದಿನಗಳಲ್ಲಿ ಮುಂಬೈ ವಿಮಾನ ನಿಲ್ದಾಣಕ್ಕೆ ಎರಡನೇ ಬಾಂಬ್ ಬೆದರಿಕೆ ಕರೆ
Bomb Threat: ಭಾರತದ ಆರ್ಥಿಕ ರಾಜಧಾನಿ ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮಂಗಳವಾರ ಬಾಂಬ್ ಸ್ಫೋಟದ ಬೆದರಿಕೆ ಕರೆ ಬಂದ ಹಿನ್ನೆಲೆಯಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ಅಧಿಕಾರಿಗಳು ಕೂಡಲೇ ಭದ್ರತಾ ಕ್ರಮಗಳನ್ನು ಕೈಗೊಂಡಿದ್ದಾರೆ.


ಮುಂಬೈ: ಭಾರತದ ಆರ್ಥಿಕ ರಾಜಧಾನಿ ಮುಂಬೈನ (Mumbai) ಛತ್ರಪತಿ ಶಿವಾಜಿ ಮಹಾರಾಜ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (Chhatrapati Shivaji Maharaj International Airport) ಮಂಗಳವಾರ ಬಾಂಬ್ ಸ್ಫೋಟದ ಬೆದರಿಕೆ (Bomb Threat) ಕರೆ ಬಂದ ಹಿನ್ನೆಲೆಯಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ಅಧಿಕಾರಿಗಳು ಕೂಡಲೇ ಭದ್ರತಾ ಕ್ರಮಗಳನ್ನು ಕೈಗೊಂಡಿದ್ದಾರೆ. ಮುಂಬೈ ಪೊಲೀಸ್ ಕಂಟ್ರೋಲ್ ರೂಮ್‌ಗೆ ಇಂದು ಬೆಳಿಗ್ಗೆ ಬೆದರಿಕೆ ಕರೆ ಬಂದಿತ್ತು. ಕರೆ ಮಾಡಿದ ವ್ಯಕ್ತಿ ವಿಮಾನ ನಿಲ್ದಾಣವನ್ನು ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದ.
ಈ ಕರೆಯನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು, ಬಾಂಬ್ ಸ್ಕ್ವಾಡ್ ಜೊತೆ ವಿಮಾನ ನಿಲ್ದಾಣದ ಸುತ್ತಮುತ್ತ ತೀವ್ರ ತಪಾಸಣೆ ನಡೆಸಿದರು. ಗಂಟೆಗಟ್ಟಲೆ ನಡೆದ ಸಂಪೂರ್ಣ ಶೋಧದ ಬಳಿಕ, ಯಾವುದೇ ಅನುಮಾನಾಸ್ಪದ ವಸ್ತುಗಳು ಅಥವಾ ಸ್ಫೋಟಕಗಳು ಸಿಗದಿರುವುದನ್ನು ಅಧಿಕಾರಿಗಳು ದೃಢಪಡಿಸಿದ್ದಾರೆ. ತನಿಖೆಯ ಸಂದರ್ಭದಲ್ಲಿ, ಪೊಲೀಸರು ಮುಂಬೈನ MIDC ಪ್ರದೇಶದಿಂದ 35 ವರ್ಷದ ಶಂಕಿತನನ್ನು ಸುಳ್ಳು ಬೆದರಿಕೆ ಕರೆ ಮಾಡಿದ ಆರೋಪದ ಮೇಲೆ ಬಂಧಿಸಿದ್ದಾರೆ. ಆತನನ್ನು ವಶಕ್ಕೆ ಪಡೆದು ಈಗ ವಿಚಾರಣೆಗೊಳಪಡಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಘಟನೆ ಕೇವಲ ಒಂದು ವಾರದ ಹಿಂದೆ, ಮೇ 17 ರಂದು ಇದೇ ರೀತಿಯ ಸುಳ್ಳು ಬಾಂಬ್ ಬೆದರಿಕೆ ಬಂದಿತ್ತು. ಆಗ, ಮುಂಬೈ ವಿಮಾನ ನಿಲ್ದಾಣ ಮತ್ತು 26/11 ಭಯೋತ್ಪಾದಕ ದಾಳಿಯ ಗುರಿಯಾಗಿದ್ದ ತಾಜ್ ಮಹಲ್ ಪ್ಯಾಲೇಸ್ ಹೊಟೇಲ್‌ನಲ್ಲಿ ಸ್ಫೋಟವಾಗಲಿದೆ ಎಂದು ಇ-ಮೇಲ್ ಮೂಲಕ ಬೆದರಿಕೆ ಬಂದಿತ್ತು. ಆ ಇ-ಮೇಲ್‌ನಲ್ಲಿ, 2001ರ ಸಂಸತ್ ದಾಳಿಯ ಆರೋಪಿ ಅಫ್ಜಲ್ ಗುರುವಿನ ಗಲ್ಲು ಶಿಕ್ಷೆಯನ್ನು “ಅನ್ಯಾಯ” ಎಂದು ಕರೆಯಲಾಗಿತ್ತು. ಆದರೆ, ಎರಡೂ ಸ್ಥಳಗಳಲ್ಲಿ ತೀವ್ರ ತಪಾಸಣೆ ನಡೆಸಿದ ಬಳಿಕ ಯಾವುದೇ ಅನುಮಾನಾಸ್ಪದ ವಸ್ತುಗಳು ಕಂಡುಬಂದಿರಲಿಲ್ಲ.
ಈ ಸುದ್ದಿಯನ್ನು ಓದಿ: Bomb Threat Call: ಇಂಡಿಗೋ ವಿಮಾನವನ್ನು ಸ್ಫೋಟಿಸುವುದಾಗಿ ಮುಂಬೈ ವಿಮಾನ ನಿಲ್ದಾಣಕ್ಕೆ ಬೆದರಿಕೆ ಕರೆ
ಮುಂಬೈ ಪೊಲೀಸರು ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ, ವಿಮಾನ ನಿಲ್ದಾಣದ ಭದ್ರತೆಯನ್ನು ಇನ್ನಷ್ಟು ಬಿಗಿಗೊಳಿಸಿದ್ದಾರೆ. ಶಂಕಿತನ ವಿಚಾರಣೆಯಿಂದ ಬೆದರಿಕೆ ಕರೆಯ ಉದ್ದೇಶ ಮತ್ತು ಹಿನ್ನೆಲೆಯನ್ನು ಕಂಡುಹಿಡಿಯಲು ತನಿಖೆಯನ್ನು ಚುರುಕುಗೊಳಿಸಲಾಗಿದೆ.